ಶಾಲಾ ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಸೂಚನೆ..! ವಯೋಮಿತಿ ಹೆಚ್ಚಳ..

ರಾಜ್ಯ ಸರ್ಕಾರ ರಾಜ್ಯದ 6ರಿಂದ 8ನೇ ತರಗತಿ ವಿಭಾಗಕ್ಕೆ ಶಿಕ್ಷಕರ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, 15 ಸಾವಿರ ಪದವೀಧರ ಶಿಕ್ಷಕರನ್ನು ನೇಮಕ ಮಾಡಲು ಆದೇಶ ಹೊರಡಿಸಿದೆ. ಇದೇ ಮೊದಲ ಬಾರಿಗೆ ಶಿಕ್ಷಕ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳಿಗೂ ಶೇಕಡ 1ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ ನೇಮಕಾತಿ ನಿಯಮಗಳು – 2022 ಪ್ರಕಟವಾದ ಕರಡು ಅಧಿಸೂಚನೆಗೆ ಆಕ್ಷೇಪಣೆ ವ್ಯಕ್ತವಾದ ಬಳಿಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್.ಎಸ್. ಶಿವಕುಮಾರ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾಾರೆ.

ವಯೋಮಿತಿ ಹೆಚ್ಚಳ ಮಾಡಿ ಶಿಕ್ಷಕರ ನೇಮಕಾತಿ..!

ಶಿಕ್ಷಕರ ನೇಮಕಾತಿ ಮಾಡುವ ಜೊತೆಗೆ ವಯೋಮಿತಿ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರ ಭಾರೀ ಪ್ರಶಂಸೆಗೆ ಒಳಗಾಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸೋಂಕು ಹಾಗೂ ಪರಿಣಾಮಗಳಿಂದ ನೇಮಕಾತಿ ವಿಳಂಬವಾಗಿದ್ದು, ಹಲವಾರು ಶಿಕ್ಷಕ ಆಕಾಂಕ್ಷಿಗಳು ವಯೋಮಿತಿ ಮುಕ್ತಾಯದ ಭೀತಿಯಲ್ಲಿದ್ದರು. ಆದರೆ ಸರ್ಕಾರ ವಯೋಮಿತಿ ಏರಿಕೆ ಮಾಡುವ ಮೂಲಕ ಆಕಾಂಕ್ಷಿಗಳ ಆತಂಕಕ್ಕೆ ಸ್ಪಂದಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-01 ಮತ್ತು ಇತರೆ ಹಿಂದುಳಿದ ವರ್ಗದ ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷ, ಹಿಂದುಳಿದ ವರ್ಗದ ಪ್ರವರ್ಗ-2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 45 ವರ್ಷ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪ್ರವರ್ಗದಲ್ಲಿ ಶೇಕಡ 1ರಷ್ಟು ಹುದ್ದೆೆಗಳನ್ನು ತೃತೀಯ ಲಿಂಗಿಗಳ ಭರ್ತಿಗೆ ಅವಕಾಶ ನೀಡಿದೆ.

ಆಯ್ಕೆಗೆ ಅಂಕಗಳ ಮಾನದಂಡ ಈ ರೀತಿ ಇರಲಿದೆ..!

ಶಿಕ್ಷಕರ ನೇಮಕಾತಿಗೆ ಮಾನದಂಡಗಳನ್ನು ಪ್ರಕಟಿಸಿದ್ದು, ಶಿಕ್ಷಕರ ಆಯ್ಕೆ ವಿಚಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ (CET) ಯಲ್ಲಿ ಶೇಕಡ 50ರಷ್ಟು ಅಂಕ, ಟಿಇಟಿಯಲ್ಲಿ ಶೇಕಡ 20 ರಷ್ಟು ಅಂಕ, ಪದವಿಯಲ್ಲಿ ಶೇಕಡ 20ರಷ್ಟು ಅಂಕ ಮತ್ತು ಬಿ.ಇಡಿಯಲ್ಲಿ ಶೇಕಡ 10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. 4 ವರ್ಷಗಳ ಬಿ.ಇಡಿ ಆಗದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆ (CET) ಯಲ್ಲಿ ಶೇಕಡ 50ರಷ್ಟು ಅಂಕ, ಟಿಇಟಿಯಲ್ಲಿ ಶೇಕಡ 20 ಮತ್ತು ಬಿ.ಇಡಿಯಲ್ಲಿ ಶೇಕಡ 30ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಮುಂದಿನ ಒಂದು ವಾರದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆದೇಶ ಹೊರಬೀಳಲಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

Related Posts

Don't Miss it !