ಬನಶಂಕರಿ ದೇವರ ಭಕ್ತರಿಗೆ ಬಿತ್ತು ಬೆತ್ತದಲ್ಲಿ ಏಟು..? ಉಡುಪಿಯಲ್ಲಿ..?

ಬಾಗಲಕೋಟೆಯ ಬನಶಂಕರಿ ಶಕ್ತಿಪೀಠದಲ್ಲಿ ಐತಿಹಾಸಿಕ ಜಾತ್ರೆ ರದ್ದು ಮಾಡಿ ಬಾಗಲಕೋಟೆ ಜಿಲ್ಲಾಡಳಿತ ರದ್ದು ಮಾಡಿತ್ತು. ಸೋಮವಾರ ಸಂಜೆ 5 ಗಂಟೆಗೆ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೇ ಕಾರಣದಿಂದ 5 ಕಿಲೋ ಮೀಟರ್​ ದೂರದಲ್ಲೇ ಬ್ಯಾರಿಕೇಡ್​ ಹಾಕಿ ಪೊಲೀಸರು ಜನರನ್ನು ತಡೆಯುವ ಕೆಲಸ ಮಾಡಿದ್ದರು. ಆದರೂ ಭಕ್ತರು ಮಾತ್ರ ಕಾಲ್ನಡಿಗೆಯಲ್ಲೇ ದೇವಸ್ಥಾನದ ಕಡೆಗೆ ಹೊರಟಿದ್ದರು. ದೇವಿಯ ಪಲ್ಲಕ್ಕಿ ಉತ್ಸವದ ಬಳಿಕ ರಥೋತ್ಸವ ನಡೆಸಲಾಯ್ತು. ಕಾಲ್ನಡಿಗೆಯಲ್ಲಿ ಬಂದ ಭಕ್ತರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಬೇಕಾಯ್ತು. ಅಂತಿಮವಾಗಿ ಪೊಲೀಸರು ಭಕ್ತಾಧಿಗಳ ಮೇಲೆ ಲಾಠಿಚಾರ್ಜ್​ ನಡೆಸಿ ಸ್ಥಳದಿಂದ ಓಡಿಸುವ ಕೆಲಸ ಮಾಡಿದ್ದರು. ಇನ್ನೂ 10 ರಿಂದ 15 ಸಾವಿರ ಭಕ್ತರ ಸಮ್ಮುಖದಲ್ಲಿ ಬನಶಂಕರಿ ಶಕ್ತಿಪೀಠದ ಶಾಕಾಂಬರಿ ದೇವಿಯ ರಥೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಕೊರೊನಾ ಸೋಂಕಿನ ಮಾರ್ಗಸೂಚಿ ನಡುವೆ ಬನಶಂಕರಿ ಜಾತ್ರೆ ನೆರವೇರಿಸಿದವರ ವಿರುದ್ಧ ಪೊಲೀಸರು 2 ಪ್ರತ್ಯೇಕ FIR ದಾಖಲು ಮಾಡಿಕೊಂಡಿದ್ದೇವೆ ಎಂದು ಬಾಗಲಕೋಟೆ ಎಸ್​ಪಿ ಲೋಕೇಶ್​ ಜಗಲಾಸರ್ ಹೇಳಿದ್ದರು.

ಸರ್ಕಾರದ ಆದೇಶ ಧಿಕ್ಕರಿಸಿ ನಡೆದಿತ್ತು ಅಬ್ಬರದ ಜಾತ್ರೆ..!

ರಾಜ್ಯದ ನಾನಾ ಕಡೆಗಳಲ್ಲಿ ಸೋಮವಾರ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಅದ್ಧೂರಿ ಜಾತ್ರೆ ನಡೆಸಲಾಗಿತ್ತು. ಅದರಲ್ಲಿ ಪ್ರಮುಖವಾದ ಕೆಲವು ಜಾತ್ರೆಗಳ ಮಾಹಿತಿಯನ್ನು ನೋಡೋದಾದ್ರೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶ್ರೀ ಶಕುನ ರಂಗನಾಥ ಸ್ವಾಮಿ ಜಾತ್ರೆ ಡಿಸಿ ಆದೇಶ ಪಕ್ಕಕ್ಕಿಟ್ಟು ನಡೆಸಲಾಯ್ತು. ಸಾವಿರಾರು ಭಕ್ತರು ಕೊರೊನಾ ರೂಲ್ಸ್​ ಬದಿಗೊತ್ತಿ ಭಾಗಿಯಾಗಿದ್ದರು. ಜಾತ್ರೆ ನಡೆದ ಬಳಿಕ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು FIR ದಾಖಲು ಮಾಡಿಕೊಂಡಿದ್ದಾರೆ. ಇನ್ನೂ ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಮೂಗೂರಿನಲ್ಲಿ ತ್ರಿಪುರ ಸುಂದರ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಜಿಲ್ಲಾಡಳಿತದ ನಿರ್ಬಂಧದ ನಡುವೆ ನಡೆದ ಸಂಭ್ರಮಕ್ಕೆ ಪೊಲೀಸರು ದೂರು ದಾಖಲು ಮಾಡಿಕೊಂಡು ಸುಮ್ಮನಾದರು. ಅತ್ತ ಕೊಪ್ಪಳದಲ್ಲಿ ಹುಲಿಗೆಮ್ಮ ದೇವಸ್ಥಾ‌ನವನ್ನು ಜನವರಿ 31ರ ತನಕ ಬಂದ್​ ಮಾಡಿದ್ದರೂ ಬನದ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಬಂದಿದ್ದರು. ಇನ್ನೂ ರಾಯಚೂರಿನ ಮಾಟಮಾರಿ ಗ್ರಾಮದಲ್ಲೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೀರಭದ್ರೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗಿತ್ತು. ಅಲ್ಲಲ್ಲಿ ಪೊಲೀಸರ ಲಾಠಿ, ಪ್ರಕರಣ ಸಾಮಾನ್ಯ ಎನ್ನುವಂತಾಯ್ತು.

Read This: ಆನ್​ಲೈನ್​ ಶಾಪಿಂಗ್​, ಕೈ ತುಂಬಾ ಕ್ಯಾಶ್​​ ಬ್ಯಾಕ್​..!! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಸೋಮವಾರ ರಾತ್ರಿ ಉಡುಪಿಯಲ್ಲಿ ಅದ್ಧೂರಿ ಪರ್ಯಾಯ..!

ಜನವರಿ 18 ರ ಮಂಗಳವಾರ ಮುಂಜಾನೆ 2.15 ರಿಂದ ಆರಂಭವಾದ ಪರ್ಯಾಯ ಪೂಜಾ ವಿಧಾನ ಬೆಳಗ್ಗೆ ಮುಕ್ತಾಯವಾಗಿದೆ. ಕಾಪು ದಂಡ ತೀರ್ಥದಲ್ಲಿ ವಿದ್ಯಾಸಾಗರ ತೀರ್ಥ ಯತಿಗಳು ಪವಿತ್ರ ಸ್ನಾನ ಮಾಡಿದ ಬಳಿಕ ರಾತ್ರಿ 2.30ಕ್ಕೆ ನಗರದ ಜೋಡುಕಟ್ಟೆಗೆ ತೆರಳಿದ್ದ ವಿದ್ಯಾಸಾಗರ ಯತಿಗಳು ಪಟ್ಟದ ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಶುರುವಾಯ್ತು. ಪರ್ಯಾಯ ಶ್ರೀಗಳ ಸಹಿತ ಅಷ್ಟಮಠಗಳ ಯತಿಗಳು ಪಲ್ಲಕ್ಕಿ ಹೊತ್ತ ವಾಹನದಲ್ಲಿ ಮೆರವಣಿಗೆ ಮಾಡಲಾಯ್ತು. ಬೆಳಗ್ಗೆ 4.30ಕ್ಕೆ ರಥಬೀದಿಯಲ್ಲಿ ಕನಕನ ಕಿಂಡಿಯಿಂದ ಕೃಷ್ಣನ ದರ್ಶನ ಮಾಡಿದ ಪರ್ಯಾಯ ಪೀಠಾಧಿಪತಿ ಯತಿ ವಿದ್ಯಾಸಾಗರ ಶ್ರೀಗಳು, ಬೆಳಗ್ಗೆ 5.30 ರ ಸುಮಾರಿಗೆ ಕೃಷ್ಣಮಠ ಪ್ರವೇಶ ಮಾಡಿ, ಶ್ರೀ ಕೃಷ್ಣನ ದರ್ಶನ ಪಡೆದು ಪೂಜೆ ಸಲ್ಲಿಸಿದ್ರು. 6 ಗಂಟೆ ಸುಮಾರಿಗೆ ಮಧ್ವಾಚಾರ್ಯರು‌ ನೀಡಿರುವ ಅಕ್ಷಯಪಾತ್ರೆ ಹಾಗೂ ಬೆಳ್ಳಿ ಸೊಟ್ಟುಗ ಸ್ವೀಕಾರ ಮಾಡಿದರು. ನಂತರ ಸರ್ವಜ್ಞ ಪೀಠಾರೋಹಣದ ಬಳಿಕ ಪರ್ಯಾಯ ದರ್ಬಾರ್ ನಡೆಯಿತು. ಇಷ್ಟೂ ಆಚರಣೆಗಳು ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಸಂಭ್ರಮಾಚರಣೆ ಮಾಡಿದರು.

Also Read: ಕೇಂದ್ರದ BJP ಸರ್ಕಾರಕ್ಕೆ ಯಾಕೆ ಬೇಡ ನಾರಾಯಣ ಗುರು, ಸುಭಾಷ್​ ಚಂದ್ರ ಬೋಸ್​..?

ಶಕ್ತಿಪೀಠಗಳಲ್ಲಿ ಬೆತ್ತದ ಏಟು.. ಕೃಷ್ಣಮಠದಲ್ಲಿ ಎಲ್ಲವೂ ಸಲೀಸು..!!

ಸೋಮವಾರ ಮಧ್ಯಾಹ್ನ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಮಾಡಿ ಜಾತ್ರೆ ಮಾಡಿದ್ದಾರೆ. ಜಿಲ್ಲಾಡಳಿತ ಆದೇಶವನ್ನು ಧಿಕ್ಕರಿಸಿದ್ದಾರೆ ಎನ್ನುವ ಕಾರಣಕ್ಕೆ ಲಾಠಿ ಚಾರ್ಜ್​ ಮಾಡಿದ್ದರು. ಆದರೆ ಉಡುಪಿಯಲ್ಲಿ ಬೆತ್ತದ ಏಟೂ ಇಲ್ಲ, ಎಫ್​ಐಆರ್​ ಕೂಡ ದಾಖಲಾಗಿಲ್ಲ. ಇಲ್ಲಿ ನೈರ್ಟ್​ ಕರ್ಫ್ಯೂ ನಿಯಮ ಕೂಡ ಉಲ್ಲಂಘನೆ ಆಗಿದೆ. ಉಡುಪಿಯ ಪರ್ಯಾಯದ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ ಸುಧಾಕರ್​ ಟ್ವೀಟ್​ ಮಾಡಿ ನಾಲ್ಕನೇ ಬಾರಿಗೆ ಪರ್ಯಾಯ ಸ್ವೀಕರಿಸಿ ಸರ್ವಜ್ಞ ಪೀಠವನ್ನು ಅಲಂಕರಿಸುತ್ತಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಅನಂತಾನಂತ ಪ್ರಣಾಮಗಳು ಎಂದು ನಮನ ಸಲ್ಲಿಸಿದ್ದಾರೆ. ಇನ್ನೂ ಹಲವಾರು ಬಿಜೆಪಿ ನಾಯಕರು ಟ್ವಿಟರ್​ನಲ್ಲಿ ಕಾರ್ಯಕ್ರಮದ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ ಇಲ್ಲಿ ಜನಸಾಮಾನ್ಯರಿಗೆ ಸೃಷ್ಟಿ ಆಗುತ್ತಿರುವ ಗೊಂದಲ ಎಂದರೆ ಉಡುಪಿಯಲ್ಲಿ ಭಾಗಿಯಾಗಿದ್ದ ಸಾವಿರಾರು ಜನರು ಭಕ್ತರು. ಇನ್ನು ಬೇರೆ ಬೇರೆ ಕಡೆಗಳಲ್ಲಿ ಭಾಗಿಯಾಗಿದ್ದ ಜನರು ನಾಸ್ತಿಕರೇ..? ಅಥವಾ ಸರ್ಕಾರ ಪ್ರತಿ ಜಿಲ್ಲೆಗೆ ಪ್ರತ್ಯೇಕವಾದ ಮಾರ್ಗಸೂಚಿ ಬಿಡುಗಡೆ ಮಾಡಿದ್ಯಾ..? ಎಲ್ಲರಿಗೂ ಒಂದೇ ಮಾರ್ಗಸೂಚಿ ಎಂದ ಮೇಲೆ ಉಡುಪಿಯಲ್ಲಿ ಲಾಠಿ ಯಾಕೆ ಬೀಸಲಿಲ್ಲ..? ಅಥವಾ ಜಾತಿ ಆಧಾರದಲ್ಲಿ ನಿಯಮಗಳು ಬದಲಾಗುತ್ತವೆಯೋ..? ಎನ್ನುವ ಅನುಮಾನವೂ ಕಾಡದೆ ಇರದು.

ವೀಡಿಯೋ:

Related Posts

Don't Miss it !