ಕರ್ನಾಟಕದಲ್ಲಿ 3ನೇ ಅಲೆಗೆ ಸ್ವಾಗತ..! ಸೋಮವಾರದಿಂದ ಅನ್​ಲಾಕ್..!

ಕೊರೊನಾ ಸೋಂಕು ಕ್ರಮೇಣ ಕಡಿಮೆ ಆಗುತ್ತಿರುವ ಬೆನ್ನಲ್ಲೇ ಸರ್ಕಾರ ಅನ್​ಲಾಕ್​ ಘೋಷಣೆ ಮಾಡಿದೆ. ಮತ್ತೊಂದು ಕಡೆ ಕೊರೊನಾ 3ನೇ ಅಲೆಗೆ ಸ್ವಾಗತ ಮಾಡುತ್ತಿದೆ. ಕೊರೊನಾ ಲಾಕ್​ಡೌನ್ ಮಾಡಿದ್ದ ಸರ್ಕಾರ ಸೋಮವಾರದಿಂದ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಯನ್ನು ತೆರೆಯುವುದಕ್ಕೆ ರಾಜ್ಯಸರ್ಕಾರ ಅನುಮತಿ ನೀಡಿದೆ. ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಿ ಅನ್​ಲಾಕ್​ ಮಾಡುವ ಬಗ್ಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಅಧಿಕಾರಿಗಳ ಸಭೆ ನಡೆಸಿ ಅನ್​ಲಾಕ್​ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅನ್​ಲಾಕ್​ ಬಗ್ಗೆ ಸಿಎಂ ಹೇಳಿದ್ದೇನು..?

ಕಳೆದ ವಾರ ರಾಜ್ಯದ 16 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ ಆಗಿದೆ. 13 ಜಿಲ್ಲೆಗಳಲ್ಲಿ 5 ರಿಂದ 10 ಪರ್ಸೆಂಟ್ ಇದೆ, ಮೈಸೂರಿನಲ್ಲಿ 10 ಪರ್ಸೆಂಟ್​ಗಿಂತಾ ಹೆಚ್ಚಿದೆ. ಹೀಗಾಗಿ ಸರ್ಕಾರ ಕೆಲವೊಂದ ನಿರ್ಧಾರ ತೆಗೆದುಕೊಂಡಿದೆ. ಶೇಕಡ 5 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ಬಾಗಲಕೋಟೆ, ಗದಗ, ಹಾವೇರಿ, ರಾಮನಗರ, ಬೀದರ್ ಜಿಲ್ಲೆಗೆ ಕೆಲವು ವಿನಾಯ್ತಿ ನೀಡಲಾಗಿದೆ. ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕೊಡಲಾಗಿದೆ. ಬೆಳಗ್ಗೆ 5 ರಿಂದ ಸಂಜೆ 5 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ಏನೆಲ್ಲಾ ಬದಲಾವಣೆ ಮಾಡಲಾಗಿದೆ..?

ಹೋಟೆಲ್​ನಲ್ಲಿ ಕುಳಿತು ತಿನ್ನಲು ಅವಕಾಶ ಕಲ್ಪಿಸಲಾಗಿದೆ. ಆದರೆ ಶೇಕಡ 50 ರಷ್ಟು ಮಂದಿಗೆ ಅವಕಾಶ ಕೊಡಲಾಗಿದೆ. ಸಿನಿಮಾ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶವಿದೆ. ಸೋಂಕು ಪ್ರಸರಣದ ಅಂಕಿಸಂಖ್ಯೆ ಆಧಾರದಲ್ಲಿ ನಿರ್ಬಂಧಗಳ ಸಡಿಲಿಕೆ ಮಾಡಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ಸಂಪುಟ ಸಹೋದ್ಯೋಗಿಗಳ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದಿದ್ದಾರೆ ಸಿಎಂ ಯಡಿಯೂರಪ್ಪ.

ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. ಎಸಿ ಬಳಸದೆ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ ತೆರೆಯಲು ಅವಕಾಶ ಕೊಡಲಾಗಿದೆ. ಆದರೆ ಮದ್ಯಪಾನ ನೀಡುವಂತಿಲ್ಲ. ಕುಳಿತು ತಿನ್ನಲು ಸಂಜೆ 5 ಗಂಟೆ ತನಕ ಶೇಕಡ 50ರ ರಷ್ಟು ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗಿದೆ. ಬಸ್‌ ಮತ್ತು ಮೆಟ್ರೋ ಕೂಡ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಹೊರಾಂಗಣ ಕ್ರೀಡೆಗಳಿಗೆ ವೀಕ್ಷಕರಿಲ್ಲದೇ ಅನುಮತಿ ಕೊಡಲಾಗಿದೆ. ಸರ್ಕಾರಿ/ಖಾಸಗಿ ಕಚೇರಿಗಳಲ್ಲಿ ಶೇಕಡ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ಕೊಡಲಾಗಿದೆ. ಲಾಡ್ಜ್‌ ಮತ್ತು ರೆಸಾರ್ಟ್​ಗಳಲ್ಲಿ ಶೇಕಡ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಜಿಮ್​ಗಳಲ್ಲೂ ಶೇಕಡ 50 ಸಾಮರ್ಥ್ಯದೊಂದಿಗೆ ಅವಕಾಶ ಸಿಕ್ಕಿದೆ.

ಶೇಕಡ 5 ಕ್ಕೂ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆ ತನಕ ಮಾತ್ರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಇನ್ನೂ ಶೇಕಡ 10 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರಿಸಲಾಗಿದೆ.

ರಾಜ್ಯವ್ಯಾಪಿ ಅನ್ವಯವಾಗುವ ಆದೇಶ

ಪ್ರತಿ ದಿನ ನೈಟ್‌ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಬಸ್‌ ಸಂಚಾರವು ಶೇಕಡ 50 ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿ ಕೊಡಲಾಗಿದೆ. ಬಸ್,ಟ್ರೋ ಪ್ರಯಾಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಪೂಜಾಸ್ಥಳ, ಶಿಕ್ಷಣ ಸಂಸ್ಥೆ, ಶಾಪಿಂಗ್ ಮಾಲ್, ಪಬ್ ಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.

3ನೇ ಅಲೆಗೆ ಸರ್ಕಾರದ ಸ್ವಾಗತವೋ..?

ಸಿಎಂ ಯಡಿಯೂರಪ್ಪ ಕೊರೊನಾ ತಡೆಯಲು ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ಆದರೆ ಬಸ್​ ಸಂಚಾರ, ಬಾರ್​ ಅಂಡ್ ರೆಸ್ಟೋರೆಂಟ್ ಎಲ್ಲವೂ ತೆರೆಯುತ್ತಿದೆ. ಲಾಡ್ಜ್​, ಜಿಮ್​ ಕೂಡ ಓಪನ್​ ಆಗ್ತಿದೆ. ಶೇಕಡ 50ರಷ್ಟು ಸಾಮಾರ್ಥ್ಯ ಎಂದು ಸರ್ಕಾರದ ಆದೇಶದಲ್ಲಿ ಜಾರಿಯಾಗಿದೆ. ಮೊದಲ ಒಂದೆರಡು ದಿನ ಸರ್ಕಾರದ ನಿಗಾ, ಮಾಧ್ಯಮಗಳ ಕ್ಯಾಮರಾ ಭಯದಿಂದಲಾದರೂ ಇರುತ್ತದೆ. ಆದರೆ ನಾಲ್ಕು ದಿನ ಕಳೆದರೆ ಬಸ್​ಗಳು ಕಿಕ್ಕಿರುದು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

6 ರಿಂದ 8 ವಾರದಲ್ಲಿ ಮತ್ತೆ ಲಾಕ್​..!?

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಮೂರನೇ ಅಲೆ ಬಗ್ಗೆ ಮಾತನಾಡಿದ್ದಾರೆ. 6 ರಿಂದ 8 ವಾರದಲ್ಲಿ ಕೊರೋನಾ 3ನೇ ಅಲೆ ಬರುವುದು ಗ್ಯಾರಂಟಿ, ಕೊರೊನಾ 3ನೇ ಅಲೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೂರನೇ ಅಲೆ ತೀವ್ರ ಸ್ವರೂಪದಲ್ಲಿ ಬರಬಾರದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಡಾ. ದೇವಿಪ್ರಸಾದ್ ಶೆಟ್ಟಿ ರಿಪೋರ್ಟ್ ಕೊಟ್ಟಿದ್ದಾರೆ. ಅದನ್ನ ಸಿಎಂ ಮುಂದೆ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರದ ಕೆಲಸ ಮಗು ಚಿವುಟುವುದು ತೊಟ್ಟಿಲು ತೂಗುವುದು ಎನ್ನುವಂತಿದೆ ಎನ್ನುವುದು ಜನಾಭಿಪ್ರಾಯ.

Related Posts

Don't Miss it !