ಸರ್ಕಾರದಿಂದ ಅಧಿಕಾರಿಗಳ ಬಂಧನ ಆದರೂ ಕಡಿಮೆ ಆಗಿಲ್ಲ ಹೈಕೋರ್ಟ್​ ಕೋಪ..!

ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಅನ್ನೋ ಮಾತು ಸಾಕಷ್ಟು ದಿನಗಳಿಂದಲೂ ಕೇಳುತ್ತಲೇ ಇತ್ತು. ಅಧಿಕಾರಿಗಳ ವರ್ಗಾವಣೆಗೂ ಲಕ್ಷ ಲಕ್ಷ ಡೀಲ್​ ನಡೆಯುತ್ತೆ ಅನ್ನೋದು ವಿಧಾನಸೌದದ ಗೋಡೆಗಳಲ್ಲಿ ಕೇಳಿ ಬರುವ ಗುಸುಗುಸು. ಅಧಿಕಾರಿಗಳು ಲಕ್ಷ ಲಕ್ಷ ಕೊಟ್ಟು ವರ್ಗಾವಣೆ ಆದ ಬಳಿಕ ಕೋಟಿ ಕೋಟಿ ಸಂಪಾದನೆ ಮಾಡುವುದು ಧರ್ಮ ಎಂದುಕೊಂಡಿದ್ದರು. ರಾಜಕಾರಣಿಗಳೂ ಸಹ ಕಂಡು ಕಾಣದಂತೆ ತಮಗೂ ಭ್ರಷ್ಟಾಚಾರಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮಾತನಾಡುತ್ತಿದ್ದರು. ಆದರೆ ಸಾಮಾನ್ಯ ನಾಗರಿಕರು ಎಲ್ಲಾ ಕಡೆಯಲ್ಲೂ ಲಂಚಬಾಕ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಇದರ ನಡುವೆ ಬೆಳಕಿಗೆ ಬಂದಿದ್ದು ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​ ನೇಮಕಾತಿ ಹಗರಣ. ಸಣ್ಣ ಕಿಡಿಯಿಂದ ದೊಡ್ಡ ಜ್ವಾಲೆಯಾಗಿ ಸರ್ಕಾರಕ್ಕೆ ಹಾಗು ಅಧಿಕಾರಿಗಳ ಲಂಚಬಾಕತನವನ್ನು ಸುಟ್ಟು ಹಾಕುತ್ತಿದೆ. ಐಪಿಎಸ್​, ಐಎಎಸ್​ ಲಾಬಿಗೆ ಮಣಿಯುತ್ತಿದ್ದ ಸರ್ಕಾರ ಇಂಗು ತಿಂದ ಮಂಗನಂತಾಗಿದೆ.

50 ಸಾವಿರ ಆಕಾಂಕ್ಷಿಗಳ ಕನಸಿಗೆ ಕಲ್ಲು..!

ಯಾವಾಗ 40 ಪರ್ಸೆಂಟ್​ ಸರ್ಕಾರ ಅನ್ನೋ ಹಣೆ ಪಟ್ಟಿ ಬಿಜೆಪಿ ಸರ್ಕಾರಕ್ಕೆ ಬಂದಿತ್ತೋ ಆ ಬಳಿಕ ಒಂದೊಂದೇ ಅಸ್ತ್ರಗಳು ಹೊರಕ್ಕೆ ಬಂದವು. ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಣ್ಣಪುಟ್ಟವನ್ನು ಬಂಧಿಸಿ, ಆ ಬಳಿಕ ಖುಲಾಸೆ ಮಾಡುವ ಇಂಗಿತದಲ್ಲಿದ್ದ ಸಿಐಡಿ ಅಧಿಕಾರಿಗಳು ಕಳೆದ ಬಾರಿಯ ವಿಚಾರಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕರ್ನಾಟಕ ಹೈಕೋರ್ಟ್​, ಇದೀಗ ಮತ್ತೊಮ್ಮೆ ಬಂಧನದ ಬಳಿಕವೂ ಅಧಿಕಾರಿಗಳನ್ನು ಜಾಡಿಸಿದೆ. ಜುಲೈ 14ರಂದು ಮತ್ತೆ ವಿಚಾರಣೆಗೆ ಸಮಯ ನಿಗದಿ ಮಾಡಿದ್ದು, ಅಷ್ಟರಲ್ಲಿ ಎಲ್ಲಾ ಒಎಂಆರ್​ ಶೀಟ್​ ಸಲ್ಲಿಸುವಂತೆ ಕೋರ್ಟ್​ ತಾಕೀತು ಮಾಡಿದೆ. ಇನ್ನು ಯಾರದ್ದೋ ಹಿತಾಸಕ್ತಿಗಾಗಿ ಕೆಲಸ ಮಾಡಬೇಡಿ, ಸುಮಾರು 50 ಸಾವಿರ ಆಕಾಂಕ್ಷಿಗಳು ಪರೀಕ್ಷೆ ಬರೆದು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ ಎಂದು ಸಿಐಡಿ ಡಿಜಿಪಿಗೆ ಎಚ್ಚರಿಸಿದ್ದಾರೆ. ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದ್ದು, ಎಲ್ಲವನ್ನೂ ಪರಿಶೀಲಿಸ್ತೇನೆ ಎಂದು ನ್ಯಾಯಮೂರ್ತಿಗಳು ಗುಡುಗಿದ್ದಾರೆ. ಆತ್ಮಸಾಕ್ಷಿ ಇದೆಯಾ ನಿಮ್ಮ ಅಧಿಕಾರಿಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಮುಖ್ಯಮಂತ್ರಿಯಾಗಿ ನಾನ್ಯಾಕೆ 2ನೇ ಮದುವೆ ಆದೆ..!? ಇದು ಅಸಲಿ ಕಥೆ..!

ಎಸಿಬಿ ಬಿ ರಿಪೋರ್ಟ್​ಗಳಿಗೆ ಹೈಕೋರ್ಟ್​ ಚಾಟಿ..!

ಭ್ರಷ್ಟಚಾರ ನಿಗ್ರಹ ದಳ (ACB) ಸ್ಥಾಪನೆ ಆದ ಬಳಿಕ ಸಾಕಷ್ಟು ಕಡೆಗಳಲ್ಲಿ ಭ್ರಷ್ಟಾಚಾರ ವಿಚಾರದಲ್ಲಿ ದಾಳಿಗಳು ನಡೆಯುತ್ತವೆ. ಸಾಕಷ್ಟು ಕೋಟಿ ಕೋಟಿ ಹಣದ ವ್ಯವಹಾರವೂ ಪತ್ತೆ ಆಗುತ್ತದೆ. ಆದರೆ ಆ ಬಳಿಕ ಪ್ರಕರಣ ಏನಾಯ್ತು ಅನ್ನೋ ಮಾಹಿತಿ ಮಾತ್ರ ಯಾರಿಗೂ ತಿಳಿಯೋದೇ ಇಲ್ಲ. ಅದೇ ಕಾರಣಕ್ಕೆ ಹೈಕೋರ್ಟ್​ ನ್ಯಾಯಮೂರ್ತಿಗಳು ಪ್ರತಿಯೊಂದ ಮಾಹಿತಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದರು. ಎಸಿಬಿಯಲ್ಲಿ‌ ವಿವಾರಣೆ ಪ್ರಗತಿ ಹೇಗಿದೆ..? ಎಲ್ಲೆಲ್ಲಿ ರೇಡ್ ಮಾಡಿದ್ದೀರಿ..? ಎಷ್ಟು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದೀರಿ ಎನ್ನುವ ಮಾಹಿತಿ ಕೇಳಿದ್ರು. ಮಾಹಿತಿ ಸಲ್ಲಿಕೆ ಮಾಡಿರುವ ಎಸಿಬಿ ಪರ ವಕೀಲರು, 891 ಕೇಸ್ ವಿಚಾರಣೆ ಮುಗಿದಿದ್ದು, 99 ಕೇಸ್​ಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ ಎಂದು ತಿಳಿಸಿದ್ದಾರೆ. ಸಹಿ ಮಾಡದೆ ವರದಿ ನೀಡಿದ್ದಕ್ಕೆ ಕುಪಿತರಾದ ನ್ಯಾಯಮೂರ್ತಿಗಳು, ಇದನ್ನು ರಿಪೋರ್ಟ್​ ಎನ್ನಬೇಕಾ..? ಯಾರು ಕೊಟ್ಟರು ಎಂದುಕೊಳ್ಳಬೇಕು ಎಂದು ಕಟುವಾಗಿ ಚಾಟಿ ಬೀಸಿದ್ದಾರೆ.

ಐಎಎಸ್​ ಅಧಿಕಾರಿ ಮಂಜುನಾಥ್​ ವಿಚಾರದಲ್ಲಿ ಗರಂ..!

ಬೆಂಗಳೂರು ಡಿಸಿ ಆಗಿದ್ದ ಮಂಜುನಾಥ್​ ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನವಾಗಿದೆ. ಮಹೇಶ್​ ಎಂಬುವ ವ್ಯಕ್ತಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು ಎಂದು ವರದಿಯಲ್ಲಿದೆ. ಆದರೆ ಖಾಸಗಿ ವ್ಯಕ್ತಿಯನ್ನು ಹೇಗೆ ನೇಮಿಸಿಕೊಂಡರು. ಒಂದು ವೇಳೆ ನೇಮಕ ಮಾಡಿಕೊಂಡಿದ್ದರೂ ಎಲ್ಲಿದೆ ನೇಮಕಾತಿ ಆದೇಶ..? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ನಾನು ಇಲ್ಲಿಗೆ ಬರುವ ಮುನ್ನ ನಿಮ್ಮ ಕಂಪ್ಲೀಟ್​ ವರದಿಯನ್ನು ಓದಿಕೊಂಡು ಬಂದಿದ್ದೇನೆ. ಖಾಸಗಿ ವ್ಯಕ್ತಿಯನ್ನು ನಿಮ್ಮ ಡಿಸಿ ಚೇಂಬರ್​ ಒಳಕ್ಕೆ ಬಿಟ್ಟುಕೊಂಡಿದ್ದಾರೆ. ಪರ್ಸನಲ್​ ಅಸಿಸ್ಟೆಂಟ್​ ಮೂಲಕ ಡೀಲ್​ ಮಾಡಿದ್ದಾರೆ. ಸಾಕ್ಷ್ಯ ಸಿಕ್ಕ ಕೂಡಲೇ ಅರೆಸ್ಟ್​ ಮಾಡಬೇಕು ಅಲ್ವಾ..? ನಾವು ಹೇಳಿದ ಬಳಿಕ ಅರೆಸ್ಟ್​ ಮಾಡಿದ್ದೀರಲ್ಲ, ನಾವು ಹೇಳುವ ತನಕ ಏನ್​ ಮಾಡ್ತಿದ್ರಿ..? ನಾನು ನಿಮಗೆ ಸರಿಯಾಗಿ ಕೆಲಸ ಮಾಡಿ ಎಂದು ಹೇಳಬೇಕು ಅಲ್ವಾ ಎಂದು ಎಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆ ಭ್ರಷ್ಟಾಚಾರ ರಣ ಕೇಕೆ ಹಾಕುವುದನ್ನು ಹೈಕೋರ್ಟ್​ ಪೀಠ ತಡೆಯುವ ಕೆಲಸ ಮಾಡ್ತಿದೆ ಅನ್ನೋದೇ ಸಮಾಧಾನದ ಸಂಗತಿ.

Related Posts

Don't Miss it !