ಹೈಕೋರ್ಟ್​ ಮಾತಿಗೆ ಸೊಪ್ಪು ಹಾಕದ ಕರ್ನಾಟಕ ಸರ್ಕಾರ..! ಕಾಲೇಜು ಓಪನ್​ ಸದ್ಯಕ್ಕಿಲ್ಲ..!!

ಕರ್ನಾಟಕದಲ್ಲಿ ಹಿಜಬ್​ ಕಿಚ್ಚು ಹೊತ್ತಿ ಉರಿಯುತ್ತಿದೆ. ಕರ್ನಾಟಕ ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದ ಬಳಿಕ ಇದೀಗ ತ್ರಿ ಸದಸ್ಯರ ಪೀಠಕ್ಕೆ ವರ್ಗಾವಣೆ ಆಗಿದೆ. ಗುರುವಾರ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಆವಸ್ತಿ ನೇತೃತ್ವದಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ಆ ಬಳಿಕ ಅರ್ಜಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡುವ ನಿರ್ಧಾರ ಕೈಗೊಂಡಿತು. ಇದರ ನಡುವೆ ಮೌಕಿಕ ಸೂಚನೆ ನೀಡಿದ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ, ಶಾಲಾ ಕಾಲೇಜುಗಳನ್ನು ಬಂದ್​ ಮಾಡುವುದು ಸರಿಯಲ್ಲ. ಶೈಕ್ಷಣಿಕ ವರ್ಷದ ಅಧ್ಯಯನಕ್ಕೆ ತೊಡಕಾಗುತ್ತದೆ. ಹಾಗಾಗಿ ಈಗಲೇ ಶಾಲಾ ಕಾಲೇಜುಗಳನ್ನು ಆರಂಭ ಮಾಡಲು ಕ್ರಮಕೈಗೊಳ್ಳಿ ಎನ್ನುವ ಸೂಚನೆ ನೀಡಿದ್ದರು. ಆದರೆ ಸರ್ಕಾರ ಮಾತ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಧರ್ಮ ಸೂಚಕ ವಸ್ತ್ರ ಧರಿಸುವಂತಿಲ್ಲ – ಹೈಕೋರ್ಟ್​

ಕರ್ನಾಟಕ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಮಧ್ಯಂತರ ಆದೇಶ ಹೊರಡಿಸದಿದ್ದರೂ ಶಾಲಾ ಕಾಲೇಜು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಕೂಡಲೇ ಶಾಲಾ ಕಾಲೇಜು ತೆರೆಯುವುದಕ್ಕೆ ಕ್ರಮಕೈಗೊಳ್ಳಿ. ಆದರೆ ನಮ್ಮ ವಿಚಾರಣೆ ಮುಗಿದು ಒಂದು ತೀರ್ಮಾನಕ್ಕೆ ಬರುವ ತನಕ ಮುಸಲ್ಮಾನ ಮಕ್ಕಳು ಹಿಜಬ್​ ಧರಿಸುವುದೂ ಸೇರಿದಂತೆ ಯಾವುದೇ ಧರ್ಮಸೂಚಕ ವಸ್ತ್ರವನ್ನು ಧರಿಸುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದ್ದರು. ಅದರ ಜೊತೆಗೆ ಧಾರ್ಮಿಕ ಮುಖಂಡರೂ ಸಹ ವಸ್ತ್ರ ಧರಿಸುವಂತೆ ಯಾವುದೆ ಸೂಚನೆಗಳನ್ನು ನೀಡಬಾರದು ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಸರ್ಕಾರ ಮಾತ್ರ ಎಡವಟ್ಟು ಮಾಡಿಕೊಂಡಿದೆ. ಹೈಕೋರ್ಟ್​ ಹೇಳಿದ್ದು ಒಂದಾದರೆ ರಾಜ್ಯ ಸರ್ಕಾರ ಮಾಡಿದ್ದು ಒಂದು ಎನ್ನುವಂತಾಗಿದೆ.

ಇದನ್ನೂ ಓದಿ: ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಮಾಡಿದ ಗಂಡ.!

SSLC ತನಕ ಮಾತ್ರ ಶಾಲೆ, ಉಳಿದವರಿಗೆ ರಜೆ..!

ರಾಜ್ಯ ಸರ್ಕಾರ ಈ ಮೊದಲು ಘೋಷಣೆ ಮಾಡಿದ್ದ ರಜೆ ಅವಧಿ ಇಂದಿಗೆ ಮುಕ್ತಾಯ ಆಗುತ್ತದೆ. ಆದರೆ ಮಕ್ಕಳ ಹಿತ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಕರ್ನಾಟಕ ಹೈಕೋರ್ಟ್​ ಸೂಚನೆ ನೀಡದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕಾಲೇಜುಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಹೈಕೋರ್ಟ್​ ಸೂಚನೆ ಬೆನ್ನಲ್ಲೇ ತುರ್ತು ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರದಿಂದ ಶಾಲೆಗಳು ಆರಂಭವಾಗುತ್ತವೆ. 1 ರಿಂದ 10ನೇ ತರಗತಿ ಮಕ್ಕಳು ಹೈಕೋರ್ಟ್​ ಸೂಚನೆ ಆಧರಿಸಿ ಶಾಲೆಗಳಿಗೆ ಹಾಜರಾಗಬೇಕು. ಇನ್ನೂ ಪಿಯುಸಿ ಹಾಗೂ ಪದವಿ ತರಗತಿಗಳನ್ನು 2ನೇ ಹಂತದಲ್ಲಿ ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಹೈಕೋರ್ಟ್​ ಹೇಳಿದ್ದ ಉದ್ದೇಶ ಮಾತ್ರ ಪೂರ್ಣವಾಗಿಲ್ಲ ಎನ್ನುವುದು ಸತ್ಯ.

ಇದನ್ನೂ ಓದಿ: ಈ ಮುಗ್ದ ಕಂದಮ್ಮನ ಸಾವಿಗೆ ಹೊಣೆ ಯಾರು..? ಉತ್ತರ ಕೊಡಿ ಸಿಎಂ ಸಾರ್​..!!

ಕಾಲೇಜು ಆರಂಭಕ್ಕೆ ಹೆದರಿದ್ಯಾಕೆ ಸರ್ಕಾರ..?

ಹೈಕೋರ್ಟ್​ ಹೇಳಿದ್ದು ಶಾಲಾ ಕಾಲೇಜುಗಳನ್ನು ಆರಂಭ ಮಾಡಿ ಎಂದು. ಆದರೆ ಶನಿವಾರವೂ ರಜೆ ಕೊಟ್ಟಿರುವ ರಾಜ್ಯ ಸರ್ಕಾರ ಸೋಮವಾರದಿಂದ 10ನೇ ತರಗತಿ ತನಕ ಶಾಲೆ ಆರಂಭ ಎಂದಿದ್ದಾರೆ. ಕಾಲೇಜುಗಳ ಬಗ್ಗೆ ಮಾತಿಲ್ಲ. ಸೋಮವಾರವೂ ರಜೆ ಮುಂದುವರಿಯಲಿದೆ. ಸೋಮವಾರದ ವಿಚಾರಣೆ ಅಥವಾ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ಮಾಡೋಣ ಎನ್ನುವುದು ಸರ್ಕಾರದ ಲೆಕ್ಕಾಚಾರ. ಹಾಗಿದ್ದ ಮೇಲೆ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರ ವಿರೋಧ ಕಟ್ಟಿಕೊಂಡು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಮೌಖಿಕ ಆದೇಶ ನೀಡುವ ಅವಶ್ಯಕತೆ ಇರಲಿಲ್ಲ ಎನ್ನಬಹುದು. ಆದರೂ ಸರ್ಕಾರ ಈ ಬಗ್ಗೆ ಹೈಕೋರ್ಟ್​ ಗಮನಕ್ಕೆ ತರಬೇಕಿದೆ. ಒಂದು ವೇಳೆ ಪದವಿ ತರಗತಿಗಳನ್ನು ತೆರೆದರೆ ಮತ್ತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎನ್ನುವ ಕಾರಣಕ್ಕೆ ಕಾಲೇಜುಗಳನ್ನು ನಿಧಾನವಾಗಿ ತೆರೆಯುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೂ ಕೋರ್ಟ್​ ಮಾತನ್ನು ಸರ್ಕಾರ ನಿರಾಕರಿಸಿದ್ದು ಮಾತ್ರ ಸುಳ್ಳಲ್ಲ.

Related Posts

Don't Miss it !