ರಾಜ್ಯದಲ್ಲಿ ACB ರದ್ದು, ಲೋಕಾಯುಕ್ತಕ್ಕೆ ಅಧಿಕಾರ.. ಸಿದ್ದು ಸರ್ಕಾರದ ನಿರ್ಧಾರಕ್ಕೆ ಭಾರೀ ಮುಖಭಂಗ..!

ACB (Anti Corruption Bureau)ಯಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಬಹುತೇಕ ಕೇಸ್​ಗಳಲ್ಲಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಲಾಗ್ತಿದೆ ಎಂದು ಇತ್ತಿಚಿಗೆ ಭಾರೀ ಗದ್ದಲ ಶುರುವಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್​ Anti Corruption Bureau ರದ್ದು ಮಾಡಿ ಆದೇಶ ಹೊರಡಿಸಿದೆ. ಲೋಕಾಯುಕ್ತ ಅಡಿಯಲ್ಲಿ ಎಸಿಬಿ ಅಧಿಕಾರಿಗಳು ಕೆಲಸ ಮಾಡುವಂತೆ ಕರ್ನಾಟಕ ಹೈಕೋರ್ಟ್​ ನಿರ್ದೇಶನ ನೀಡಿದೆ. ಇನ್ನು ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆಯೂ ಹೈಕೋರ್ಟ್​ ಸೂಚನೆ ನೀಡಿದೆ. ACBಗೆ ಸ್ವತಂತ್ರ ಪೊಲೀಸ್​ ಠಾಣೆ ಸ್ಥಾನಮಾನವನ್ನು ರದ್ದು ಮಾಡಿರುವ ಹೈಕೋರ್ಟ್​, ಸಿದ್ದರಾಮಯ್ಯ ಸರ್ಕಾರ ಎಸಿಬಿ ರಚನೆ ಮಾಡಿದ್ದ ಆದೇಶವನ್ನೇ ರದ್ದು ಮಾಡಿದೆ. 2016ರಿಂದ ಇಲ್ಲೀವರೆಗೂ ಎಸಿಬಿ ಅಧಿಕಾರಿಗಳು ನಡೆಸಿರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆಯೂ ಹೈಕೋರ್ಟ್​ ಆದೇಶದಲ್ಲಿ ಉಲ್ಲೇಖಿಸಿದೆ. ಲೋಕಾಯುಕ್ತಕ್ಕೆ 3 ವರ್ಷದ ಅವಧಿಗೆ ಅಧಿಕಾರಿಗಳನ್ನು ನೇಮಕ ಮಾಡಬೇಕು, ಜಾತಿ ಧರ್ಮ ಆಧರಿಸಿ ನೇಮಕ ಮಾಡಬಾರದು, ಪಾರದರ್ಶಕ ನೇಮಕಾತಿ ಮೂಲಕ ಮಾದರಿ ಆಗಬೇಕು ಎಂದು ಕಟ್ಟಪ್ಪಣೆ ವಿಧಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ಗೆ ಎದುರಾಯ್ತು ಮುಖಭಂಗ..!

ಲೋಕಾಯುಕ್ತವನ್ನು ಬದಿಗೆ ಸರಿಸಿ ಭ್ರಷ್ಟಾಚಾರ ನಿಗ್ರಹ ದಳ (ACB) ಜಾರಿ ಮಾಡಿದ್ದು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಕೂಸು ಎನ್ನುವುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. 2016ರ ಮಾರ್ಚ್ 14ರಂದು ರಚನೆ ಆಗಿದ್ದ ಎಸಿಬಿಗೆ ಪ್ರತ್ಯೇಕ ಸ್ಥಾನಮಾನ ಬೇಡ, ಲೋಕಾಯುಕ್ತರ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿರುವುದು ಕಾಂಗ್ರೆಸ್​ ಪಕ್ಷಕ್ಕೆ ಭಾರೀ ಮುಜುಗರವನ್ನು ಉಂಟು ಮಾಡಿದೆ ಎನ್ನಬಹುದು. ಇದೀಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ನಾಯಕರು ಎಸಿಬಿಯನ್ನು ರದ್ದು ಮಾಡಿದ ಹೈಕೋರ್ಟ್​ ಆದೇಶವನ್ನು ಸ್ವಾಗತ ಮಾಡುತ್ತ, ಬಿಜೆಪಿ ಸರ್ಕಾರ ಸಮರ್ಥವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಬಳಸಿಕೊಳ್ಳಲಿಲ್ಲ ಎಂದು ದೂರುವ ಕೆಲಸವನ್ನು ಮಾಡುತ್ತಿದೆ. ಆದರೆ ಲೋಕಾಯುಕ್ತವನ್ನು ಮರು ಸ್ಥಾಪನೆ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲೇ ಆಶ್ವಾಸನೆ ಕೊಟ್ಟಿದ್ದರು. ಆದರೆ ಇದೀಗ ರಾಜ್ಯ ಸರ್ಕಾರದ ನಿಲುವು ಮಾತ್ರ ಅಸ್ಪಷ್ಟವಾಗಿದ್ದು, ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡುತ್ತಿಲ್ಲ. ಅಡ್ವೊಕೇಟ್​ ಜನರಲ್​ ಜೊತೆಗೆ ಮಾತನಾಡಿ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.

ಹೈಕೋರ್ಟ್​ಗೆ ಪಿಐಎಲ್​ ಅರ್ಜಿ ಹಾಕಿದ್ದು ಯಾರು..? ಪ್ರಕರಣ ಏನು..?

2016ರಲ್ಲಿ ಲೋಕಾಯುಕ್ತವನ್ನು ಜಾರಿ ಮಾಡಿದಾಗಲೇ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಆದರೆ ಅಂದಿನ ಕಾಂಗ್ರೆಸ್​ ಸರ್ಕಾರ ಮಾತ್ರ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದನ್ನು ಒಪ್ಪಿಕೊಳ್ಳಲು ತಯಾರಿ ಇರಲಿಲ್ಲ. ಆ ಬಳಿಕ ಎದುರಾದ ಚುನಾವಣೆಯಲ್ಲಿ ಕಾಂಗ್ರೆಸ್​ ಸೋತು ಸುಣ್ಣವಾಗಿತ್ತು. ಬಿಜೆಪಿ ಪಕ್ಷ ಲೋಕಾಯುಕ್ತ ಮುಚ್ಚಿದ್ದನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿತ್ತು. ಈ ನಡುವೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದು ಸರಿಯಲ್ಲ, ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರದ ಅಧೀನದಲ್ಲಿ ಸ್ಥಾಪನೆ ಮಾಡಿದ್ದು, ಆ ಸಂಸ್ಥೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯುವುದಕ್ಕೆ ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಹೈಕೋರ್ಟ್​ಗೆ ಚಿದಾನಂದ ಅರಸ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್​ ಲೋಕಾಯುಕ್ತ ಸಂಸ್ಥೆ ಅಧೀನದಲ್ಲಿ ಭ್ರಷ್ಟಚಾರ ನಿಗ್ರಹ ದಳ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯಕ್ಕೆ ಬಂದು ಎಸಿಬಿ ರಚನೆ ಆದೇಶವನ್ನು ರದ್ದು ಮಾಡಿದ್ದಾರೆ.

ಸರ್ಕಾರ ಹಾಗು ರಾಜಕಾರಣಿಗಳಿಗೆ ಲೋಕಾಯುಕ್ತ ಮಗ್ಗುಲ ಮುಳ್ಳು..!

ACB ರಚನೆಯನ್ನು ವಿರೋಧಿಸಿದ್ದ ಬಿಜೆಪಿ‌ಅಧಿಕಾರ ಹಿಡಿದ ಬಳಿಕ ಆ ಬಗ್ಗೆ ಮೌನವಹಿಸಿತ್ತು. ಈಗಲೂ ಹೈಕೋರ್ಟ್ ವಿಚಾರಣೆ ವೇಳೆ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡಿತ್ತು. ಇದಕ್ಕೆ ಕಾರಣ ಎಸಿಬಿ ಅಧಿಕಾರಿಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ, ಅಷ್ಟೇ ಅಲ್ಲದೆ ಗೃಹ ಇಲಾಖೆ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವ ಕಾರಣ, ಯಾವ ಕೇಸ್ ಹೇಗೆ‌ ನಡೆಸಬೇಕು ಎನ್ನುವ ಬಗ್ಗೆ ಸರ್ಕಾರವೇ ಸಲಹೆ ಸೂಚನೆಗಳನ್ನು ನೀಡುವುದರಿಂದ ರಾಜಕಾರಣಿಗಳಿಗೆ ಯಾವುದೇ ಸಮಸ್ಯೆ ಆಗಲಾರದು ಎನ್ನುವುದು ಪ್ರಮುಖ ಉದ್ದೇಶ. ಆದರೆ ಬಹುತೇಕ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತಿರುವ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಗರಂ ಆಗಿದ್ದರು. ಬೆಂಗಳೂರು ಜಿಲ್ಲಾಧಿಕಾರಿ‌ ಕಚೇರಿಯಲ್ಲೇ ಲಂಚ ಸ್ವೀಕಾರ ಮಾಡಿದ ಕೇಸ್‌ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾ. ಸಂದೇಶ್, ACB ರಚನೆ ಮಾಡಿರೋದಾದ್ರೂ ಏಕೆ..? ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸ್ಥಾಪಿಸಲಾಗಿದೆಯೇ..? ಅಥವಾ ಭ್ರಷ್ಟರ ರಕ್ಷಣೆಗೆ ACB ಸ್ಥಾಪನೆ ಮಾಡಲಾಗಿದ್ಯಾ..? ಎಂದು ಪ್ರಶ್ನಿಸಿದ್ರು. ಇಲ್ಲೀವರೆಗೂ ಎಸಿಬಿ ತನಿಖೆ ಮಾಡಿರುವ ಹಾಗು ಬಿ ರಿಪೋರ್ಟ್ ಸಲ್ಲಿಕೆ ಮಾಡಿರುವ ಪ್ರಕರಣಗಳ ಬಗ್ಗೆ ವರದಿ ಕೇಳಿದ್ದರು. ಇದೇ ಪ್ರಕರಣದಲ್ಲಿ‌ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ರೀತಿ ನಡೆದುಕೊಂಡಿದ್ದ ವಿಚಾರ ಕೂಡ ಬಹಿರಂಗ ಆಗಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬಹುದು.

Related Posts

Don't Miss it !