ಹಿಜಾಬ್ ನಿಷೇಧವಾಗಿಲ್ಲ, ಹೈಕೋರ್ಟ್​ ಅದೇಶದಲ್ಲಿ ಹೇಳಿರುವುದು ಉಡುಪಿ ಕಾಲೇಜಿಗೆ ಮಾತ್ರ ಸೀಮಿತ

ಉಡುಪಿ ಕಾಲೇಜಿನಲ್ಲಿ ಸೃಷ್ಟಿಯಾಗಿದ್ದ ಹಿಜಬ್​ ವಿವಾದ ಇಂದು ಹೈಕೋರ್ಟ್​ನಲ್ಲಿ ಬಗೆಹರಿದಿದೆ. ಹಿಜಬ್​ ಎಂಬುದು ಇಸ್ಲಾಂ ಧರ್ಮದ ಆಚರಣೆಯ ಭಾಗವಲ್ಲ ಎಂಬುದನ್ನು ಕರ್ನಾಟಕ ಹೈಕೋರ್ಟ್​ ಎತ್ತಿಹಿಡಿದಿದೆ. ಇನ್ನೂ ಶಾಲಾ – ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಯಲ್ಲಿ ಇದ್ದಾಗ, ಅದನ್ನು ವಿದ್ಯಾರ್ಥಿಗಳು ನಿರಾಕರಿಸಲು ಬರುವುದಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕು. ಸರ್ಕಾರವೇ ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ರಚನೆ ಮಾಡಿದ ಬಳಿಕ ಅವರ ನಿರ್ಧಾರವನ್ನು ಪ್ರಶ್ನೆ ಮಾಡಲು ಬರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಹೈಕೋರ್ಟ್​ ವ್ಯಕ್ತಪಡಿಸಿದೆ. 4 ಮೂಲಭೂತ ಪ್ರಶ್ನೆಗಳ ಆಧಾರದ ಮೇಲೆ ಹಿಜಾಬ್ ತೀರ್ಪು ಪ್ರಕಟವಾಗಿದ್ದು, ಹಿಜಾಬ್ ಧರಿಸುವುದು ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯೇ..? ಎನ್ನುವ ಪ್ರಶ್ನೆಗೆ ಹೈಕೋರ್ಟ್​ ಉತ್ತರ ಕೊಟ್ಟಿದ್ದು, ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ಹಿಜಾಬ್ ಧರಿಸಬೇಕು ಎಂದು ಎಲ್ಲೂ ಉಲ್ಲೇಖವಿಲ್ಲ ಎಂದಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿರುವ ಹೈಕೋರ್ಟ್​, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಮಾಡಿದ ಮೇಲೆ ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ ಎಂಬ ನಿಲುವು ವ್ಯಕ್ತಪಡಿಸಿದೆ. ಅದೇ ರೀತಿ ರಾಜ್ಯ ಸರ್ಕಾರದ ಆದೇಶಕ್ಕೆ ಬೆಲೆ ಇದೆಯಾ..? ಕಾನೂನು ಬಾಹಿರ ಅಲ್ಲವೇ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟಿರುವ ಹೈಕೋರ್ಟ್​ ಸರ್ಕಾರಕ್ಕೆ ಆದೇಶ ಹೊರಡಿಸಲು ಸಂಪೂರ್ಣ ಹಕ್ಕಿದೆ ಎಂದಿದೆ. ಇನ್ನೂ ಉಡುಪಿ ಕಾಲೇಜಿನಿಂದ ಕಾನೂನು ಉಲ್ಲಂಘನೆಯಾಗಿದೆಯೇ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದು, ಕಾಲೇಜು ಆಡಳಿತ ಮಂಡಳಿಗೆ ಸಮವಸ್ತ್ರ ನಿಗದಿ ಮಾಡುವ ಹಕ್ಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಶಿಕ್ಷಣ ಮುಖ್ಯವೋ ಅಲ್ಲವೋ..?

ಕರ್ನಾಟಕ ಹೈಕೋರ್ಟ್​ ಹಿಜಾಬ್​ ಧರಿಸುವುದು ಧಾರ್ಮಿಕ ಹಕ್ಕು ಅಲ್ಲ ಹಾಗೂ ಇಸ್ಲಾಂ ಧರ್ಮದ ಪ್ರಕಾರವೂ ಹಿಜಾಬ್​​ ಧರಿಸಬೇಕು ಎನ್ನುವ ಬಗ್ಗೆ ಉಲ್ಲೇಖವಿಲ್ಲ ಎನ್ನುವುದನ್ನು ಹೈಕೋರ್ಟ್​ ಹೇಳಿದೆ. ಆದರೆ ಹೈಕೋಟ್​ ಆದೇಶದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅರ್ಜಿದಾರ ವಿದ್ಯಾರ್ಥಿನಿಯರು ನಾವು ಹಿಜಾಬ್​ ಧರಿಸದೆ ಯಾವುದೇ ಕಾರಣಕ್ಕೂ ತರಗತಿಗಳಿಗೆ ಹಾಜರಾಗುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ನಮಗೆ ಖುರಾನ್​​ನಲ್ಲಿ ಹೇಳಿರುವುದನ್ನು ಪಾಲಿಸವುದು ನಮ್ಮ ಹಕ್ಕು, ಹೈಕೋರ್ಟ್​ ಆದೇಶವನ್ನು ನಾವು ಪಾಲಿಸುವುದಿಲ್ಲ ಎನ್ನುವ ನಿಲುವು ವ್ಯಕ್ತಪಡಿಸಿದ್ದಾರೆ. ಅಂದರೆ ಹೈಕೋಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ತೀರ್ಪು ಈ ಕೂಡಲೇ ಬರುತ್ತದೆ ಎಂದು ಭಾವಿಸುವುದು ಸರಿಯಲ್ಲ. ಹಾಗಾಗಿ ಈಗ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇ ಕತ್ತಲಾಗುವಂತೆ ಭಾಸವಾಗ್ತಿದೆ. ಕಾನೂನು ಹೋರಾಟದ ಜೊತೆ ಜೊತೆಗೆ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದೆ ಕಾನೂನು ಪಾಲಿಸಿಕೊಮಡು ಪರೀಕ್ಷೆ ಎದುರಿಸುವುದು ಉತ್ತಮ. ಈ ವಿಚಾರದಲ್ಲಿ ಪರವಾಗಿ ಅತವಾ ವಿರುದ್ಧವಾಗಿ ಬೆಂಬಲ ನೀಡುವ ಯಾವುದೇ ರಾಜಕೀಯ ಪಕ್ಷಗಳಿಗೆ ತನ್ನ ಪಕ್ಷದ ಹಿತದೃಷ್ಟಿ ಮಾತ್ರವೇ ಅವಲಂಭಿಸಿರುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವೂ ರಾಜಕೀಯ ನಾಯಕರಲ್ಲಿ ಇರುವುದಿಲ್ಲ ಎನ್ನುವ ಅಂಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ.

ಸುಪ್ರೀಂಕೋರ್ಟ್​ ಅಂಗಳದಲ್ಲಿ ಚಿಗುರಲಿದೆ ‘ಹಿಜಾಬ್​ ವಿವಾದ’

ಕರ್ನಾಟಕ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಲಾಗಿದೆ. ವಿದ್ಯಾರ್ಥಿನಿಯರ ಪರವಾಗಿ ವಕೀಲರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಹಿಂದೂ ಸಂಘಟನೆಯೊಂದು ಸುಪ್ರೀಂಕೋರ್ಟ್​ಗೆ ಕೇವಿಯಟ್​ ಅರ್ಜಿ ಹಾಕಿಕೊಂಡಿದ್ದು, ತಮ್ಮ ವಾದವನ್ನು ಆಲಿಸದೆ ಯಾವುದೇ ತೀರ್ಪು ನೀಡಬಾರದು ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿಕೊಂಡಿದೆ. ಇಷ್ಟು ದಿನ ಕರ್ನಾಟಕಕ್ಕೆ ಸೀಮಿತವಾಗಿದ್ದ ಹಿಜಾಬ್​ ವಿಚಾರ ಇದೀಗ ರಾಷ್ಟ್ರಮಟ್ಟದ ವಿಚಾರವಾಗಿ ಬದಲಾವಣೆ ಆಗಿದೆ. ಆದರೆ ಸುಪ್ರೀಂಕೋರ್ಟ್​ನಲ್ಲಿ ಹಿಜಾಬ್​ಗೆ ಮಾನ್ಯತೆ ಸಿಗುತ್ತಾ..? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುವುದು ಸಹಜ. ಆದರೆ ಒಮ್ಮೆ ಕೆಳಮಟ್ಟದ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಸುಪ್ರೀಂಕೋರ್ಟ್​ ಬದಲಾವಣೆ ಮಾಡುವುದು ತೀರ ಕಡಿಮೆ. ಒಂದು ವೇಳೆ ಹೈಕೋರ್ಟ್​ ನೀಡಿರುವ ತೀರ್ಪಿನಲ್ಲಿ ಕೆಲವೊಂದು ಅಂಶಗಳು ಲೋಪವಾಗಿದೆ ಎನ್ನುವುದನ್ನು ಸುಪ್ರೀಂಕೋರ್ಟ್​ಗೆ ಅರ್ಜಿದಾರರ ಪರ ವಕೀಲರು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರೆ, ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಹೈಕೋರ್ಟ್​ಗೆ ತಿಳಿಸಬಹುದು ಅಥವಾ ಆಗಿರುವ ತಪ್ಪು ತೀರ್ಪನ್ನೇ ಬದಲಾಯಿಸುವಂತಿದ್ದರೆ ತೀರ್ಪನ್ನೂ ಬದಲಾವಣೆ ಮಾಡಬಹುದು. ಆದರೆ ಹೈಕೋರ್ಟ್​ನಲ್ಲಿ ತ್ರಿಸದಸ್ಯ ಪೀಠದ ಆದೇಶವಾಗಿದ್ದು, ಮೂವರಲ್ಲಿ ಯಾರೊಬ್ಬರೂ ತೀರ್ಪನ್ನು ವಿರೋಧಿಸಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

ಹಿಜಾಬ್​ ಆದೇಶ ಉಡುಪಿ ಸರ್ಕಾರಿ ಕಾಲೇಜಿಗೆ ಮಾತ್ರ ಸೀಮಿತ..!

ಹೌದು, ಇದೀಗ ಹಿಜಾಬ್​ ಬ್ಯಾನ್​ ಎನ್ನುವ ಸುದ್ದಿ ಎಲ್ಲಾ ಮಾಧ್ಯಮಗಳಲ್ಲೂ ಬರುತ್ತಿದೆ. ಆದರೆ ಸದ್ಯಕ್ಕೆ ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪು ಕೇವಲ ಉಡುಪಿಯ ಸರ್ಕಾರಿ ಕಾಲೇಜಿಗೆ ಮಾತ್ರ ಸೀಮಿತ. ಉಡುಪಿ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿತ್ತು. ವಿದ್ಯಾರ್ಥಿನಿಯರು ಹೈಕೋರ್ಟ್​ ಮೊರೆ ಹೋಗಿದ್ದರು, ಇದೀಗ ತೀರ್ಪು ಬಂದಿದೆ. ಆದರೆ ಉಳಿದ ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶ ಕೊಡುತ್ತೇವೆ ಎಂದು ಸ್ಥಳೀಯ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರ ಮಾಡಿದರೆ, ಆ ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶ ಸಿಗಲಿದೆ. ಇದೇ ಕಾರಣಕ್ಕೆ ಕರ್ನಾಟಕ ಹೈಕೋರ್ಟ್​ ಹಿಜಾಬ್​ ಕಡ್ಡಾಯವಾಗಿ ಹೆಣ್ಣು ಮಕ್ಕಳ ಮೇಲೆ ಹೇರಿಕೆ ಮಾಡುವ ಕೆಲಸ ಮಾಡಿಲ್ಲ. ಒಂದು ವೇಳೆ ಹಾಕಿಕೊಂಡು ತರಗತಿಗೆ ಹೋಗಲು ಅವಕಾಶ ಇದ್ದರೆ ಖಂಡಿತ ಅದನ್ನೂ ಮುಂದುವರಿಸಬಹುದು. ಆದರೆ ಕರ್ನಾಟಕ ಸರ್ಕಾರ ಮುಂದಿನ ವರ್ಷದಿಂದ ಅನ್ವಯವಾಗುವಂತೆ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸದರೆ ರಾಜ್ಯಾದ್ಯಂತ ಸಮವಸ್ತ್ರ ಕಡ್ಡಾಯ ಆದರೂ ಆಗಬಹುದು. ಆಗ ಅನಿವಾರ್ಯವಾಗಿ ಎಲ್ಲರೂ ಸಮವಸ್ತ್ರ ಮಾತ್ರ ಧರಿಸಬೇಕಾಗುತ್ತದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಮುಸ್ಲಿಂ ಮೂಲಭೂತವಾದಿಗಳು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡದಂತೆ ತಡೆಯುವ ಯತ್ನ ಮಾಡಬಹುದು. ಈಗಲೂ ಕೆಲವರು ಹೆಣ್ಣು ಮಕ್ಕಳ ಶಿಕ್ಷಣ ಎಂದಾಗ ಮೂಗು ಮುರಿಯುವ ಜನರು ಇದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.

Related Posts

Don't Miss it !