ತಪ್ಪು ಸಹಜ ಸಮರ್ಥನೆ ಸರೀನಾ..? ಅರಗ ಜ್ಞಾನೇಂದ್ರ ಅಜ್ಞಾನಕ್ಕೆ ಸಚಿವರ ಸಾಥ್​..

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಗ್ಯಾಂಗ್​ ರೇಪ್​ ಪ್ರಕರಣವನ್ನು ನಿರ್ವಹಿಸಲು ಬಾರದ ಗೃಹ ಸಚಿವರು ಮಾತಿನಲ್ಲಿ ಎಡವಿದ್ದಾರೆ. ನಡೆಯುವ ಕಾಲು ಎಡುವುತ್ತದೆ ಎನ್ನುವ ಮಾತಿನಂತೆ ಯಾವುದೇ ಒಂದು ಸರ್ಕಾರದಲ್ಲಿ ಅಪರಾಧಗಳು ನಡೆಯುವುದು ಸಹಜ. ಆದರೆ ಪ್ರಕರಣ ನಡೆದ ಬಳಿಕ ಸರ್ಕಾರ ನಡೆದುಕೊಳ್ಳುವ ರೀತಿ ಆ ಸರ್ಕಾರದ ಬಗ್ಗೆ ಜನರಲ್ಲಿ ಅಭಿಪ್ರಾಯ ಸೃಷ್ಟಿ ಮಾಡುತ್ತದೆ. ಇದೀಗ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಮೈಸೂರಿನ ಅತ್ಯಾಚಾರ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್​ ನನ್ನ ಮೇಲೆ ರೇಪ್​ ಮಾಡುತ್ತಿದೆ ಎಂದಿದ್ದಾರೆ. ಜೊತೆಗೆ ಮೈಸೂರಿನಲ್ಲಿ ಆ ಯುವತಿ ಅಷ್ಟು ಹೊತ್ತಿನಲ್ಲಿ ಆ ಸ್ಥಳಕ್ಕೆ ಹೋಗಬಾರದಿತ್ತು ಎಂದಿದ್ದಾರೆ. ಮಹಿಳೆಗೆ ರಕ್ಷಣೆ ನೀಡಲು ಸಾಧ್ಯವಾಗದ ಸರ್ಕಾರ ಮಹಿಳೆಯನ್ನೇ ದೂಷಣೆ ಮಾಡೋದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದೆ.

ಗೃಹ ಸಚಿವರ ಎಡವಟ್ಟಿಗೆ ಸಚಿವರ ಸಾಥ್, ಸಿಎಂ ಪೆಟ್ಟು​..!

ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಯೇ ತಪ್ಪು ಎನ್ನುವ ಬಗ್ಗೆ ಟೀಕೆಗಳು ವ್ಯಕ್ತವಾಗುವ ಸಮಯದಲ್ಲಿ ಸಂಪುಟದ ಮತ್ತೋರ್ವ ಸಚಿವ ಆರಗ ಜ್ಞಾನೇಂದ್ರರನ್ನು ಬೆಂಬಲಿಸಿದ್ದಾರೆ. ನಿಮ್ಮ ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ನಡೆದಿದೆ. ಅತ್ಯಾಚಾರ ಕೇಸ್​ ಹೆಸರಲ್ಲಿ ರಾಜಕೀಯ ಮಾಡ್ಬೇಡಿ ಎಂದು ಕಾಂಗ್ರೆಸ್​ಗೆ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ. ಜೊತೆಗೆ ಮೈಸೂರು ಘಟನೆ ಅಘಾತಕಾರಿಯಾಗಿದ್ದ ಯಾರನ್ನೂ ಬಿಡಲ್ಲ ಎಂದಿದ್ದಾರೆ. ಸಚಿವ ಆನಂದ್​ ಸಿಂಗ್​ ಮಾತನಾಡಿ ರಿಮೋಟ್ ಏರಿಯಾಗೆ ಕಪಲ್ಸ್ ಬರ್ತಾರೆ, ಕಪಲ್ಸ್ ಇಂತಹ ಸ್ಥಳಕ್ಕೆ‌ ಹೋಗಬಾರದು, ಪೊಲೀಸರನ್ನ ಇಟ್ಟು ಕಾವಲು ಕಾಯಿಸೋಕೆ ಆಗಲ್ಲ ಎಂದು ಬೇಜವಾಬ್ದಾರಿ ಮಾತನಾಡಿದ್ದಾರೆ. ಆದರೆ ನವದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರ ಮಾತನ್ನು ನಾನು ಸಮರ್ಥನೆ ಮಾಡೋದಿಲ್ಲ, ಕೂಡಲೇ ಈ ಬಗ್ಗೆ ಸ್ಪಷ್ಟನೆ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಸಂಜೆ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಆದ್ರೆ ಕಾಂಗ್ರೆಸ್​ ರೇಪ್​ ಮಾಡುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಸಚಿವರು ಚಕಾರ ಎತ್ತಿಲ್ಲ.

ಇದನ್ನೂ ಓದಿ;

ಗೃಹ ಸಚಿವರ ವಿರುದ್ಧವೇ ದೂರು ದಾಖಲು..!

ಕಾಂಗ್ರೆಸ್​​ನವರು ಗೃಹ ಸಚಿವನಾದ ನನ್ನ ಮೇಲೆ ರೇಪ್ ಮಾಡ್ತಿದ್ದಾರೆ ಎಂದಿದ್ದ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ರೇಪ್ ಮಾಡ್ತಿದೆ ಅಂತ ಹೇಳಿದ್ರೆ ಏನರ್ಥ..? ಎಂದು ಪ್ರಶ್ನಿಸಿದ್ದ ಶಿವಕುಮಾರ್​, ಹೋಮ್​ ಮಿನಿಸ್ಟರ್ ಅವರನ್ನು ರೇಪ್ ಮಾಡಿದ್ರೆ ಬಂಧಿಸಲಿ ಎಂದು ಟಾಂಗ್​ ಕೊಟ್ಟಿದ್ರು. ಬಳಿಕ ರೇಪ್ ಅನ್ನೋ ಪದ ಆರಗ ಜ್ಞಾನೇಂದ್ರ ಅವರಿಗೆ ಪ್ರಿಯವಾದ ಪದ ಇರಬೇಕು. ಅದಕ್ಕಾಗಿಯೇ ಆ ಪದವನ್ನ ಅವರು ಗೌರವದಿಂದ ಕಾಣ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಸಂಜೆ ಬಳಿಕ ನನ್ನ ಮೇಲೆ ಕಾಂಗ್ರೆಸ್ ನಾಯಕರು ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಗೃಹ ಸಚಿವರ ಹೇಳಿಕೆ ವಿರೋಧಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ‌ ಕಾಂಗ್ರೆಸ್​ ದೂರು ಸಲ್ಲಿಸಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಮೇಲೆ ಅತ್ಯಾಚಾರ ಮಾಡಿದ್ದು ಯಾರು..? ಅವರ ಮೇಲೆ ಕ್ರಮ‌ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಬಿಜೆಪಿ ಸಚಿವರನ್ನೇ ಹಿಂಬಾಲಿಸಿದ ಕಾಂಗ್ರೆಸ್​ ನಾಯಕಿ..!


ಮೈಸೂರಿನಲ್ಲಿ ಗ್ಯಾಂಗ್​ ರೇಪ್​ಗೆ ಒಳಗಾದ ವಿದ್ಯಾರ್ಥಿನಿ ಅಷ್ಟು ಹೊತ್ತಿನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿಗೆ ಹೋಗಿದ್ದು ತಪ್ಪು ಎಂದು ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್​ ಸೇರಿದಂತೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗಿದೆ. ಈ ನಡುವೆ ಕಾಂಗ್ರೆಸ್​ ನಾಯಕಿ ಜೊತೆಗೆ ಮಹಿಳಾ ಆಯೋಗದ ಮಾಜಿ ರಾಜ್ಯಾಧ್ಯಕ್ಷೆ ಮಂಜುಳಾ ಮಾನಸ ಗೃಹ ಸಚಿವರ ಅಸಂಬದ್ಧ ಹೇಳಿಕೆಗೆ ಸಾಥ್​ ಕೊಟ್ಟಂತೆ ಆಗಿದೆ. ಅತ್ಯಾಚಾರಕ್ಕೆ ಒಳಗಾದ ಆ ಹೆಣ್ಣು ಮಗಳ ಬಗ್ಗೆ ಅಸಯ್ಯ ಎನಿಸುತ್ತೆ ಎಂದಿದ್ದಾರೆ. ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದ ಸ್ಥಳಕ್ಕೆ ತೆರಳಿದ್ದ ವೇಳೆ ಈ ರೀತಿಯ ಹೇಳಿಕೆ ನೀಡಿ ಬಿಜೆಪಿ ಸಚಿವರನ್ನು ಸಮರ್ಥಿಸಿದ್ದಾರೆ. ಅಷ್ಟೊತ್ತಿನ ರಾತ್ರಿಯಲ್ಲಿ ಆ ಹೆಣ್ಣು ಮಗಳು ಅಲ್ಲಿಗೆ ಯಾಕ್ ಬಂದಿದ್ದಳು. ವಿದ್ಯಾರ್ಥಿನಿ ಆಗಿ ಅಷ್ಟೊತ್ತಲ್ಲಿ ಅಲ್ಲಿಗೆ ಹೋಗಿದ್ದು ತಪ್ಪು ಎಂದು ಅತ್ಯಾಚಾರಿಗಳ ಪರವಾಗಿ ಮಾತನಾಡಿದಂತಿದೆ.

ಇದನ್ನೂ ಓದಿ;

ಆ ವಿದ್ಯಾರ್ಥಿನಿ ಮಾಡಿದ ತಪ್ಪಾದರೂ ಏನು..?


ಓರ್ವ ತಂದೆಯಾಗಿ ಆ ರೀತಿ ಹೇಳಿಕೆ ನೀಡಿದ್ದೆ ಎಂದಿದ್ದಾರೆ ಗೃಹ ಸಚಿವರು. ಸ್ಥಳಕ್ಕೆ ಭೇಟಿ ನೀಡಿದ ಮಂಜುಳಾ ಮಾನಸ ಕೂಡ ಸ್ಥಳಕ್ಕೆ ಭೇಟಿ ನೀಡಿ ಇದೇ ರೀತಿ ಹೇಳಿಕೆ ನೀಡಿದ್ದಾರೆ. ಅಂದರೆ ತನ್ನ ಸ್ನೇಹಿತನ ಜೊತೆಯಲ್ಲಿ ಯುವತಿ ವಾಯುವಿಹಾರಕ್ಕೆ ಹೋಗಿದ್ದಾಗ ಘಟನೆ ನಡೆದಿದ್ದರೆ..! ಆ ಯುವತಿ ಮಾಡಿದ ಅಪರಾಧವಾದರೂ ಏನು..? ಆಕೆ ಕೆಟ್ಟ ಉದ್ದೇಶದಿಂದಲೇ ಆ ದುರ್ಗಮ ಪ್ರದೇಶಕ್ಕೆ ಹೋಗಿದ್ದಳು ಎಂದು ಭಾವಿಸಿ ಹೇಳಿಕೆ ನೀಡುವುದನ್ನು ಎಷ್ಟು ಸರಿ..? ರಸ್ತೆಯಲ್ಲಿ ಹೋಗುವಾಗ ಅಪಘಾತ ಆದರೆ ರಸ್ತೆ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕೋ..? ಅಥವಾ ರಸ್ತೆ ಸರಿಯಿಲ್ಲ ಎಂದ ಮೇಲೆ ಸರಿಯಾಗಿ ಹೋಗಬೇಕಿತ್ತು ಎನ್ನುವುದು ಸರಿಯೇ ಎನ್ನುವ ಪ್ರಶ್ನೆ ಉದ್ಭವ ಆಗುತ್ತದೆ. ಕೆಲವೊಂದು ಸೂಕ್ಮ ವಿಚಾರಗಳು ನಡೆದಾಗ ಎರಡೂ ಕಡೆಯಲ್ಲೂ ತಪ್ಪುಗಳಿರಬಹುದು. ಆದರೆ ಅಪರಾಧ ಮಾಡಿದವರ ವಿರುದ್ಧವೇ ಕ್ರಮ ಆಗಬೇಕು ಎನ್ನುವ ಸಣ್ಣ ಜ್ಞಾನ ತಮ್ಮಲ್ಲಿ ಇರಬೇಕು ಅಷ್ಟೆ.

Related Posts

Don't Miss it !