ಸರ್ಕಾರಕ್ಕೆ ಅನುಭವದ ಕೊರತೆಯೋ..? ಬೇಜವಾಬ್ದಾರಿಯ ಪರಮಾವಧಿಯೋ..?

ಮೈಸೂರಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಎಷ್ಟೊಂದು ಗಂಭೀರವಾಗಿ ಪರಿಗಣಿಸಿದೆ ಎನ್ನುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ. ಮೈಸೂರಿನಲ್ಲಿ ಅತ್ಯಾಚಾರ ನಡೆದಿದ್ದು, ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ. ಆದರೆ ಗೃಹ ಸಚಿವ ಅರಗ ಜ್ಞಾನೇಂದ್ರ ಮೈಸೂರಿಗೆ ಭೇಟಿ ಕೊಟ್ಟಿದ್ದು, ಗುರುವಾರ ರಾತ್ರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಮಾತ್ರ ಅವರ ಜೊತೆಗೆ ಕಾಣಿಸಿಕೊಳ್ಳಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಕೊಟ್ಟ ಬಳಿಕ ಸಚಿವರು ಮೈಸೂರಿಗೆ ಹೋಗುವ ಬಗ್ಗೆ ಹೇಳಿದ್ದರು. ಬೆಳಗ್ಗೆ ಮೈಸೂರಿಗೆ ದೌಡಾಯಿಸಿದ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​, ಗೃಹ ಸಚಿವರನ್ನು ಭೇಟಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್​ ಕೂಡ ಮೈಸೂರಿಗೆ ತೆರಳಿದರು.

ಗೃಹ ಸಚಿವರ ಮೈಸೂರು ಟ್ರಿಪ್​ ಹೇಗಿದೆ ಗೊತ್ತಾ..?

ರಾತ್ರಿ ಮೈಸೂರಿಗೆ ತೆರಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ತಡರಾತ್ರಿ ಯಾವುದೇ ಸಭೆ ನಡೆಸಲಿಲ್ಲ. ವಿಶ್ರಾಂತಿ ಮೊರೆ ಹೋಗಿದ್ದ ಸಚಿವರು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಪೊಲೀಸ್​ ಅಕಾಡೆಮಿಗೆ ಭೇಟಿ ನೀಡಿದ್ದರು. ಕರ್ನಾಟಕ ಪೊಲೀಸ್ ಅಕಾಡೆಮಿಯ 45ನೇ ಬ್ಯಾಚ್​ನ 228 ಜನ ಪಿಎಸ್‌ಐ ಟ್ರೈನಿಗಳ ಜೊತೆ ಸಂವಾದ ನಡೆಸಿದ್ರು. ಗನ್ ಹಿಡಿದು ಶೂಟ್ ಮಾಡಿದ್ರು. ಆ ಬಳಿಕ ಪೊಲೀಸ್​ ಆಯುಕ್ತರ ಜೊತೆ ಸಭೆ ನಡೆಸಿದ್ರು. ಪೊಲೀಸ್ ಮಹಾನಿರೀಕ್ಷಕರ ಕಚೇರಿಯಲ್ಲಿ ನಡೆದ ಸಭೆ ಬಳಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ 5 ನಿಮಿಷದಲ್ಲಿ ಪರಿಶೀಲನೆ ಮುಗಿಸಿದ್ರು. ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಬಳಿಕ ಸಂಜೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಯೋಜನೆ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ;

ಸಿಎಂ ಬುದ್ಧಿವಾದ ಹೇಳಿದ್ರೂ ನೋ ಯೂಸ್​..!

ಅತ್ಯಾಚಾರ ಪ್ರಕರಣ ನಡೆದಾಗ ವಿರೋಧ ಪಕ್ಷಗಳು ಟೀಕೆ ಮಾಡುವುದು ಸಹಜ. ಈ ವೇಳೆ ಮನಸೋ ಇಚ್ಛೆ ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಕೂಡಲೇ ಮೈಸೂರಿಗೆ ತೆರಳಿ ಅಧಿಕಾರಿಗಳ ಸಭೆ ನಡೆಸಿ, ಮುಂದೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಎಂದು ಸೂಚಿಸಿದ್ದರು. ಸಚಿವರು ಅಷ್ಟು ಮಾತ್ರವಲ್ಲದೆ ಡಿಜಿಪಿ ಪ್ರವೀಣ್ ಸೂದ್​ ಅವರಿಗೂ ಮೈಸೂರಿಗೆ ತೆರಳಿ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದ್ರು. ಆದರೆ ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳಿದ್ದಾರೆ. ಗೃಹ ಸಚಿವರು ಹಿರಿಯರಿದ್ದಾರೆ, ಅವರೇ ಕ್ರಮ ತೆಗೆದುಕೊಳ್ತಾರೆ ಎಂದಿದ್ದಾರೆ. ಇನ್ನೂ ಮೈಸೂರು, ಕೊಡಗು ಸಂಸದ ಪ್ರತಾಪ್​ ಸಿಂಹ ಇಲ್ಲೀವರೆಗೂ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಬಿಜೆಪಿಯಲ್ಲಿ ಪ್ರಕರಣ ಮುಚ್ಚಿ ಹಾಕುವ ಯತ್ನ ಆಗ್ತಿದ್ಯಾ..?

ಅತ್ಯಾಚಾರ ಪ್ರಕರಣದ ಬಗ್ಗೆ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದು ಅವರ ನಡಾವಳಿಯಿಂದಲೇ ಗೊತ್ತಾಗುತ್ತಿದೆ. ಕಠಿಣ ಕ್ರಮದ ಬಗ್ಗೆ ಮಾತನಾಡಬೇಕಿದ್ದ ಗೃಹ ಸಚಿವರು ಪ್ರಮುಖ ವಿಚಾರದ ಬಗ್ಗೆ ಗಮನ ನೀಡದೆ ಸಾಮಾನ್ಯ ಪ್ರವಾಸದಂತೆ ಮೈಸೂರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮೈಸೂರು ಕೋವಿಡ್​ ಉಸ್ತುವಾರಿ ಎಸ್​.ಟಿ ಸೋಮಶೇಖರ್​ ಚಾಮರಾಜನಗರದಲ್ಲಿ ಮಾತನಾಡಿದ್ದು, ಯುವತಿ ತನಿಖೆಗೆ ಸಹಕಾರ ನೀಡ್ತಿಲ್ಲ. ಆಕೆಯ ಪೋಷಕರೂ ಕೂಡ ನಾನು ತನಿಖೆಗೆ ಸಹಕಾರ ನೀಡಿಲ್ಲ. ನಾವು ಯಾರ ಎದುರು ಹಾಜರಾಗುವುದಿಲ್ಲ ಎಂದಿದ್ದಾರೆ ಎಂದು ಸಹಕಾರ ಸಚಿವ ಎಸ್‌ಟಿ.ಸೋಮಶೇಖರ್ ಹೇಳಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಏನೂ ಮಾಡಕ್ಕಾಗಲ್ಲ. ಸಮಾಜದಲ್ಲಿ‌ ಇಂತಹ ಘಟನೆ ನಡೆಯುತ್ತಿರುತ್ತವೆ ಎಂದು ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ;

ಅತ್ಯಾಚಾರ ಸಂತ್ರಸ್ತೆ ಸಾಥ್​ ಕೊಡ್ತಿಲ್ಲ ಎಂದ ಸಚಿವರು..!

ಅತ್ಯಾಚಾರ ಘಟನೆ ಬಗ್ಗೆ ತನಿಖೆ ನಡೆಸಲು ಆರೋಪಿಗಳ ಪತ್ತೆಗೆ ಅತ್ಯಾಚಾರ ಸಂತ್ರಸ್ತರು ಸಹಕರಿಸಬೇಕಾಗುತ್ತದೆ ಎಂದು ಸಚಿವ ಎಸ್​.ಟಿ ಸೋಮಶೇಖರ್​ ತಿಳಿಸಿದ್ದಾರೆ. ಆದರೆ ಸಂತ್ರಸ್ತೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಇದೆ ಎಂದು ಬಹಿರಂಗ ಮಾಡಿದ್ದಾರೆ. ಆದರೆ ಪೊಲೀಸರು ಘಟನೆ ಬಗ್ಗೆ ಸಂತ್ರಸ್ತೆಯ ಸಹಕಾರ ಬಯಸಬೇಕಿಲ್ಲ. ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡು ಅತ್ಯಾಚಾರ ಮಾಡಿದವರ ಪತ್ತೆಗೆ ಬಲೆ ಬೀಸಬಹುದು ಎನ್ನುವುದನ್ನು ಮರೆತಂತಿದೆ. ಸಂತ್ರಸ್ತೆಯೇ ಸಹಕರಿಸುತ್ತಿಲ್ಲ ಎಂದು ಹೇಳುವ ಮೂಲಕ ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ಬೇರೆ ಅಭಿಪ್ರಾಯ ಮೂಡುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನಿಸುವಂತಿದೆ.

Related Posts

Don't Miss it !