ಲಿಂಗಾಯತರಿಗಿಲ್ಲ ಸಿಎಂ ಸ್ಥಾನ..! ಬ್ರಾಹ್ಮಣ ಸಮುದಾಯಕ್ಕೆ ಬಹುತೇಕ ಫಿಕ್ಸ್​..

`ರಾಜ್ಯ ಸರ್ಕಾರದ ಮುಖ್ಯಸ್ಥ ಸಿಎಂ ಸ್ಥಾನವನ್ನು ಬದಲಾವಣೆ ಮಾಡಲಾಗಿದೆ. ಸಿಎಂ ಸ್ಥಾನಕ್ಕೆ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿ ಹಂಗಾಮಿ ಸಿಎಂ ಆಗಿ ಮುಂದುವರಿದಿದ್ದಾರೆ. ಇಂದು ಸಂಜೆ ಬಿಜೆಪಿ ಶಾಸಕಾಂಗದ ಸಭೆ ನಿಗದಿಯಾಗಿದೆ. 7.30ಕ್ಕೆ ಕ್ಯಾಪಿಟಲ್​ ಹೋಟೆಲ್​ನಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಆದರೆ ಈಗಾಗಲೇ ದೆಹಲಿಯ ಹೈಕಮಾಂಡ್​ ನಾಯಕರು ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಬಗ್ಗೆ ಅಂತಿಮ ನಿರ್ಧಾರ ಮಾಡಿ ಆಗಿದೆ ಎನ್ನಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಸಂಸದ ಬಿ.ವೈ ರಾಘವೇಂದ್ರ ಈ ಬಗ್ಗೆ ಸುಳಿವು ನೀಡಿದ್ದು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ರೀತಿಯಲ್ಲೇ ಅಚ್ಚರಿಯ ಆಯ್ಕೆ ಆಗಲಿದೆ ಎಂದಿದ್ದಾರೆ.

ಮುರುಗೇಶ್​ ನಿರಾಣಿಗೆ ಇಲ್ಲ ಸಿಎಂ ಪದವಿ..!

ಮುರುಗೇಶ್​ ನಿರಾಣಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಹಲವಾರು ಬಾರಿ ದೆಹಲಿ ದಂಡಯಾತ್ರೆಯನ್ನೂ ಮಾಡಿದ್ದರು. ಆದರೆ ಇದೀಗ ಅಂತಿಮವಾಗಿ ಸಿಎಂ ಸ್ಥಾನ ಸಿಗುವುದು ಬಹುತೇಕ ಕಷ್ಟಸಾಧ್ಯ ಎನ್ನುವ ಮಾತುಗಳು ಹೈಕಮಾಂಡ್​ ನಾಯಕರಿಂದ ಕೇಳಿ ಬಂದಿದೆ. ಇದಕ್ಕೆ ಕಾರಣ ಬಿ.ಎಸ್​ ಯಡಿಯೂರಪ್ಪ ಎನ್ನಲಾಗಿದೆ. ಇದೇ ಕಾರಣದಿಂದ ದೆಹಲಿಯಲ್ಲಿ ಬೀಡಿ ಬಿಟ್ಟಿದ್ದ ಮುರುಗೇಶ್​ ನಿರಾಣಿ, ದೆಹಲಿಯಿಂದ ವಾಪಸ್​ ಆದ ಬಳಿಕ ಇಂದು ಬೆಳಗ್ಗೆ ಯಡಿಯೂರಪ್ಪ ಅವರನನು ಭೇಟಿ ಮಾಡಿ, ಆಶೀರ್ವಾದ ಕೋರಿದ್ದಾರೆ. ನಾನು ನಿಮ್ಮವನೇ ನನ್ನನ್ನು ಬೆಂಬಲಿಸಿ. ನೀವು ಹೇಳಿದಂತೆ ನಡೆಯುತ್ತೇನೆ ಎನ್ನುವ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ.

ಲಿಂಗಾಯತರಾದರೆ ಬೊಮ್ಮಾಯಿ ಮಾಡಿ – ಬಿಎಸ್​ವೈ..!

ಲಿಂಗಾಯತ ಸಮುದಾಯ ಬಿಜೆಪಿ ಪಕ್ಷದಿಂದ ದೂರವಾಗಲಿದೆ ಎನ್ನುವ ಭೀತಿ ನಿಮಗಿದ್ದರೆ, ಹಾಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರಿಗೆ ಸಿಎಂ ಪದವಿ ದೊರೆಯಬೇಕು ಎನ್ನುವ ಲೆಕ್ಕಾಚಾರಗಳು ಆ ಭಾಗದ ನಾಯಕರನ್ನು ನಡೆಯುತ್ತಿದೆ. ಇದೇ ಕಾರಣದಿಂದ ಲಿಂಗಾಯತ ನಾಯಕರಾಗಿರುವ ಉಮೇಶ್​ ಕತ್ತಿ ಮುರುಗೇಶ್​ ನಿರಾಣಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ ಅಂತಿಮವಾಗಿ ಲಿಂಗಾಯತ ನಾಯರಿಗೆ ಸಿಎಂ ಸ್ಥಾನ ಕೊಡಲ್ಲ, ಅದು ಬ್ರಾಹ್ಮಣರಿಗೆ ಮೀಸಲಾಗಿದೆ ಎನ್ನುವ ಮಾತುಗಳು ದಟ್ಟವಾಗಿವೆ.

ಆಪರೇಷನ್​ ಕಮಲದಿಂದಲೂ ನಡೆದಿತ್ತು ಕಸರತ್ತು..!

ಆಪರೇಷನ್​ ಕಮಲ ಮಾಡಿದ ವೇಳೆಯಲ್ಲೇ ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗದಂತೆ ತಡೆಯುವ ಲೆಕ್ಕಾಚಾರಗಳು ಆಗಿದ್ದವು. ಆದರೂ ಪಟ್ಟು ಬಿಡದ ಯಡಿಯೂರಪ್ಪ ಬಂಡಾಯ ನಾಯಕನಂತೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಅಂದಿನಿಂದಲೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು.ಇದೀಗ ಅಂತಿಮವಾಗಿ ಬಿ.ಎಲ್​ ಸಂತೋಷ್​ ರಾಜ್ಯ ಕಾರಣಕ್ಕೆ ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದೆ. ಹೈಕಮಾಂಡ್​ ನಾಯಕರು ಈಗಾಗಲೇ ಒಮ್ಮತದ ನಿರ್ಧಾರ ಮಾಡಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ನಿನ್ನೆ ದೆಹಲಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಬಿಜೆಪಿ ಪಕ್ಷದ ಶಾಸಕರೇ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಬದಲಿಗೆ ಕರ್ನಾಟಕದವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದರು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಿ.ಎಲ್​ ಸಂತೋಷ್​ ಮುಂದಿನ ಮುಖ್ಯಮಂತ್ರಿ ಎಂಬುದಂತು ಖಚಿತ ಮೂಲಗಳ ಮಾಹಿತಿ

Related Posts

Don't Miss it !