ಮತಾಂತರ ನಿಷೇಧ ವಿಚಾರದಲ್ಲಿ ಕಾಂಗ್ರೆಸ್​​ ಬೆಂಬಲ..! ಪರಿಷತ್​ನಲ್ಲೂ ಬಿಲ್​ ಪಾಸ್​..!?

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ವಿಧೇಯಕ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಕಾಂಗ್ರೆಸ್​​ ಮತ್ತು ಜೆಡಿಎಸ್​ ವಿರೋಧದ ನಡುವೆಯೂ ಬಿಜೆಪಿ ತಾನು ಕೊಟ್ಟಿದ್ದ ಮಾತಿನಂತೆ ಮತಾಂತರ ನಿಷೇಧ ಕಾನೂನು ಜಾರಿ ಮಾಡುವಲ್ಲಿ ಯಶಸ್ವಿಯಾಗಿದೆ. ಮತಾಂತರ ನಿಷೇಧ ಕಾಯ್ದೆಗೆ ತೀವ್ರ ವಿರೋಧ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ವೇಳೆ ಬಿಜೆಪಿಯನ್ನು ಬೆತ್ತಲು ಮಾಡುತ್ತೇನೆ ಎಂದು ಗುಡುಗಿದ್ದರು. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಸದನದಲ್ಲಿ ಮೆತ್ತಗಾಗಿದ್ದರು. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿ ಸರ್ಕಾರ ಬಳಸಿದ ಏಕೈಕ ಅಸ್ತ್ರ ಸಿದ್ದರಾಮುಯ್ಯ ಮಾಡಿದ್ದ ಒಂದೇ ಒಂದು ಎಡವಟ್ಟು. ಸಿದ್ದರಾಮಯ್ಯ ಅವರು ಜಾರಿಗೆ ತರುವುದಕ್ಕೆ ಮುಂದಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ಈಗ ಜಾರಿಗೆ ತಂದಿದೆ ಎಂದು ಕಾಂಗ್ರೆಸ್​​ ವಿರುದ್ಧವೇ ಬಿಜೆಪಿ ನಾಯಕರು ಪ್ರತ್ಯಾಸ್ತ್ರ ಬಳಸಿದ್ರು. ಸಿದ್ದರಾಮಯ್ಯ ಸರ್ಕಾರದಲ್ಲಿ ಬೇಕಾಗಿದ್ದ ಈ ಕಾನೂನು ಬಿಜೆಪಿ ಸರ್ಕಾರದಲ್ಲಿ ಯಾಕೆ ಬೇಡ..? ಇದು ಕಾಂಗ್ರೆಸ್​ ಪಕ್ಷದ ಇಬ್ಬಗೆ ನೀತಿ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.

ಮತಾಂತರ ಕಾಯ್ದೆಯಲ್ಲಿ ಕಾಂಗ್ರೆಸ್​ ಮಾಡಿದ್ದ ಎಡವಟ್ಟೇನು..?

ಬಿಜೆಪಿ ಸರ್ಕಾರ ಹಿಂದೂಗಳನ್ನು ಓಲೈಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ ಎನ್ನುವುದು ಕಾಂಗ್ರೆಸ್​ ಪಕ್ಷದ ಆರೋಪ. ಆದರೆ ಇದೇ ಕಾಂಗ್ರೆಸ್​​ ಪಕ್ಷ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಬಿಲ್​ ಜಾರಿ ಮಾಡೋದಕ್ಕೆ ಸಿದ್ಧತೆ ಮಾಡಿತ್ತು ಎನ್ನುವುದು ಬಿಜೆಪಿ ಆರೋಪ. ಈ ಆರೋಪಕ್ಕೆ ವಿಧಾನಸಭೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಸಿದ್ದರಾಮಯ್ಯ ಸರ್ಕಾರ ಸಹಿ ಮಾಡಿರುವ ಪ್ರತಿಯನ್ನು ಪ್ರದರ್ಶನ ಮಾಡಿರು. ಸಚಿವ ಮಾಧುಸ್ವಾಮಿ ಬಿಡುಗಡೆ ಮಾಡಿದ ಪ್ರತಿಯನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ, ನಾನು ಸಹಿ ಮಾಡಿಲ್ಲ. ಅಂದಿನ ಕಾನೂನು ಸಚಿವ ಜಯಚಂದ್ರ ನನ್ನ ಗಮನಕ್ಕೆ ತಂದಿದ್ದರು. ನಾನು ಕಡತ ಪರಿಶೀಲನೆ (ಸ್ಕ್ರೂಟನಿ) ಮಾಡಿಕೊಂಡು ಸಂಪುಟ ಸಭೆ ಮುಂದೆ ತರಲು ಹೇಳಿದ್ದೆ ಎಂಬುದನ್ನು ಒಪ್ಪಿಕೊಂಡರು. ಇದು ಬಿಜೆಪಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಯ್ತು. ಆ ಬಳಿಕ ಸದನದಿಂದ ಹೊರಬಂದ ಸಿದ್ದರಾಮಯ್ಯ, 2009ರಲ್ಲಿ ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಆರ್​ಎಸ್​ಎಸ್​ ಮುಖಂಡರು ಕರ್ನಾಟಕ ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾನೂನು ಜಾರಿಗೆ ಮನವಿ ಮಾಡಿದ್ದರು. ಆದರೆ ನಾವು ಜಾರಿ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

Read this;

ಕಾಂಗ್ರೆಸ್​, ಬಿಜೆಪಿ ಹೊಂದಾಣಿಕೆಯಲ್ಲಿ ಮತಾಂತರ ಕಾನೂನು..!

ಮತಾಂತರ ನಿಷೇಧ ಕಾನೂನು ಜಾರಿ ಮಾಡುವಲ್ಲಿ ಕೇವಲ ಬಿಜೆಪಿ ಸರ್ಕಾರದ ಪಾತ್ರವಿಲ್ಲ. ಕಾಂಗ್ರೆಸ್​ ಪಕ್ಷದ ಸಹಕಾರ ಕೂಡ ಇದೆ ಎಂದು ಜೆಡಿಎಸ್​ ಆರೋಪ ಮಾಡಿದೆ. ಕಿವುಟಿದಂತೆ ಮಾಡು ನಾನು ಅತ್ತಂತೆ ಮಾಡ್ತೇನೆ ಎನ್ನುವ ನಾಣ್ಣುಡಿಯಂತೆ ಕಾಂಗ್ರೆಸ್​ ಹಾಗೂ ಬಿಜೆಪಿ ಇಬ್ಬರೂ ಜೊತೆಯಾಗಿಯೇ ಮತಾಂತರ ನಿಷೇಧ ಕಾನೂನು ಜಾರಿ ಮಾಡುತ್ತಿದ್ದಾರೆ ಎನ್ನುವುದು ಜೆಡಿಎಸ್​ ಆರೋಪ. ಇನ್ನೂ ಸದನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸುವ ಮಾತನಾಡುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮತಾಂತರ ನಿಷೇಧ ಕಾನೂನು ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ ಪಕ್ಷಕ್ಕೆ ಇಲ್ಲ ಎಂದಿದ್ದಾರೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಿದ್ದರಾಮಯ್ಯ ಅವರೇ ಸಚಿವ ಸಂಪುಟದ ಎದುರು ತರುವುದಕ್ಕೆ ಮುಂದಾಗಿದ್ದರು. ಆದರೆ ಇದೀಗ ನಾನು ವಿಧೇಯಕ ತಂದಿರುವುದಕ್ಕೆ ವಿರೋಧ ಮಾಡ್ತಿದ್ದಾರೆ. ರಾಜಕಾರಣ ಮತ್ತು ಮತಬ್ಯಾಂಕ್​ ಕಾರಣದಿಂದ ವಿರೋಧಿಸುತ್ತಿದೆ ಎಂದು ಟೀಕಿಸಿದ್ರು.

B ಅಂದ್ರೆ ಬಿಜೆಪಿ, C ಅಂದ್ರೆ ಕಾಂಗ್ರೆಸ್​..! B+C = ಮತಾಂತರ ಬಿಲ್​

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತು ಮಾತಿಗೂ ನಮ್ಮನ್ನು ಬಿಜೆಪಿ ಬಿ ಟೀಮ್ ಎಂದು ಕರೆಯುತ್ತಾರೆ. ದೇವೇಗೌಡರು ಯಾವ್ಯಾವ ಸಮುದಾಯಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ 50 ವರ್ಷ ಅಧಿಕಾರದಲ್ಲಿ ಇದ್ದರೂ ಮೀಸಲಾತಿ ನೀಡಿರಲಿಲ್ಲ. ದೇವೇಗೌಡರು ಕೊಟ್ಟರು. ನಮ್ಮನ್ನು ಎ ಟೀಮ್, ಬಿ ಟೀಮ್ ಎಂದು ಕರೆಯುತ್ತಾರೆ. ಆದರೆ ಕಾಂಗ್ರೆಸ್‌ನವರು 2016ರಲ್ಲಿ ಈ ಬಿಲ್ ಯಾಕೆ ತಂದ್ರು..? ಯಾವ ಉದ್ದೇಶಕ್ಕೆ ತಂದರು..? 2016ರಲ್ಲೇ ನೀವಿಬ್ಬರು ಮಾತಾಡಿಕೊಂಡಿದ್ರಾ..? ನಮ್ಮನ್ನು ನಾವು ಎ ಟೀಮ್​ ಎಂದುಕೊಳ್ಳೋಣ, ಬಿ ಮತ್ತು ಸಿ ಟೀಮ್ ಸೇರಿಕೊಂಡು ಮತಾಂತರ ಕಾಯ್ದೆ ಜಾರಿ ಮಾಡುತ್ತಿದ್ದಾರೆ. ಬಿ ಅಂದ್ರೆ ಬಿಜೆಪಿ, ಸಿ ಅಂದ್ರೆ ಕಾಂಗ್ರೆಸ್. ಇದನ್ನು ರಾಜ್ಯದ ಜನತೆ ನೋಡಬೇಕಾಗುತ್ತದೆ. ಪ್ರಾದೇಶಿಕ ಪಕ್ಷ ಕೊಲೆ ಮಾಡಬೇಡಿ. ಎಲ್ಲಾ ಸಮುದಾಯವನ್ನು ಕಾಪಾಡಿದ್ದು ಪ್ರಾದೇಶಿಕ ಪಕ್ಷ ಎಂದು ಎದೆ ತಟ್ಟಿ ಹೇಳುತ್ತೇನೆ ಎಂದಿದ್ದಾರೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ.

ಪರಿಷತ್​ನಲ್ಲೂ ಬಿಜೆಪಿಗೆ ಸಪೋರ್ಟ್​ ಮಾಡುತ್ತಾ ಕಾಂಗ್ರೆಸ್​..?

ಕಾಂಗ್ರೆಸ್ ಅವಧಿಯಲ್ಲಿ ಈ ಕುರಿತಾದ ಕಾನೂನು ರಚನೆಯ ಕಡತ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಬರೆದಿಲ್ಲ. ಹಾಗೆ ಬರೆದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ. ಆ ಕಡತ ತರಿಸಿ ಸದನದ ಮುಂದೆ ಇಡಿ. ಆ ಕಡತವನ್ನು ಮಂಡಿಸಿ ಎಂದು ಹೇಳಿದ್ದಾರೆ, ವಾಪಸ್ ಪಡೆಯಿರಿ ಎಂದಲ್ಲ . ಕಾಂಗ್ರೆಸ್ ಬಿಜೆಪಿ ಇಬ್ಬರು ಸೇರಿ ಈಗ ವಿಧೇಯಕ ಮುಂದುವರಿಸಿದ್ದೀರಿ. ನಮ್ಮನ್ನು ಇಲ್ಲಿ ಮಾತಾಡಿ ಅಂತಾ ಬಿಟ್ಟಿದ್ದೀರಾ..? ಆದರೆ ನಮ್ಮನ್ನು ಎ ಟೀಂ, ಬಿ ಟೀಂ ಎನ್ನುತ್ತೀರಿ ಎಂದು ಜೆಡಿಎಸ್​ ಟೀಕಿಸಿದೆ. ಇನ್ನೂ ಸಿದ್ದರಾಮಯ್ಯ ಮಾತ್ರ ಮತಾಂತರ ಕಾಯ್ದೆಯನ್ನು ಬಿಜೆಪಿಯವರು ಅಂಗೀಕಾರ ಮಾಡಿಕೊಳ್ಳುತ್ತಾರೆ. ನಾವು ಬೀದಿಗಳಿದು ಹೋರಾಟ ಮಾಡ್ತೇವೆ. ಮುಂದೆ ನಾವು ಅಧಿಕಾರಕ್ಕೆ ಬರ್ತೇವೆ. 2023ಕ್ಕೆ ಅಧಿಕಾರಕ್ಕೆ ಬಂದ ಬಳಿಕ ಈ ಬಿಲ್ ಅನ್ನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ. ಈ ನಡುವೆ ಪರಿಷತ್​ನಲ್ಲೂ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆಯಾಗಿದ್ದು, ಜೆಡಿಎಸ್​ ವಿರೋಧಿಸುವ ಮಾತನಾಡಿದೆ. ಆದ್ರೆ ಕಾಂಗ್ರೆಸ್​ ಸಭಾತ್ಯಾಗ ಮಾಡಿ ಬಿಜೆಪಿಗೆ ಸಹಾಯ ಮಾಡುತ್ತಾ..? ಎನ್ನುವುದರ ಮೇಲೆ ಕುತೂಹಲ ಮೂಡಿದೆ.

Related Posts

Don't Miss it !