ಪ್ರವಾಹ ಪೀಡಿತ ಕರ್ನಾಟಕಕ್ಕೆ ಪರಿಹಾರ ಕೊಡ್ತಾರಾ ಪ್ರಧಾನಿ ಮೋದಿ..?

ಕರ್ನಾಟಕದಲ್ಲಿ ಮಳೆಯಬ್ಬರ ಕಂಡು ಕೇಳರಿಯದಂತಹ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಅದರಲ್ಲೂ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆ ಉತ್ತರ ಕರ್ನಾಟಕವನ್ನು ಮತ್ತೊಮ್ಮೆ ಮುಳುಗಿಸುವ ಸಾಧ್ಯತೆ ಹೆಚ್ಚಾಗಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಇಂದು ಬೆಳಗಾವಿ ಪ್ರವಾಸ ಕೈಗೊಂಡಿದ್ದು, ಸಂಸದರ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಲಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ.

ರಾಜ್ಯದಲ್ಲಿ ಮಳೆಯ ಅನಾಹುತ ಏನೇನಾಗಿದೆ..?

ರಾಜ್ಯದಲ್ಲಿ ಮಳೆಯಿಂದ ಇದುವರೆಗೆ 9 ಜನರ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಸುಮಾರು 283 ಗ್ರಾಮಗಳಿಗೆ ಮಳೆಯಿಂದ ಭಾರೀ ಹಾನಿಯಾಗಿದೆ. ರಾಜ್ಯದ 36,498 ಜನರಿಗೆ ಪ್ರವಾಹದಿಂದಾಗಿ ತೊಂದರೆಯಾಗಿದೆ. 3 ಜನರು ಪ್ರವಾಹದಿಂದ ಕಾಣೆಯಾಗಿರುವ ಬಗ್ಗೆ ಮಾಹಿತಿ ಇದೆ. ಒಟ್ಟು 134 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 2480 ಮನೆಗಳಿಗೆ ಭಾಗಶ: ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 54 ದೊಡ್ಡ ಜಾನುವಾರುಗಳ ಸಾವನ್ನಪ್ಪಿದ್ದು, 24 ಸಣ್ಣ ಜಾನುವಾರುಗಳು ಸಾವಾಗಿರುವ ಕುರಿತು ಮಾಹಿತಿ ಸಿಕ್ಕಿದೆ. ರಾಜ್ಯದ 237 ಕಡೆಗಳಲ್ಲಿ ಕಾಳಜಿ ಕೇಂದ್ರಗಳ ಇದುವರೆಗೆ ಸ್ಥಾಪನೆ ಮಾಡಲಾಗಿದೆ. ಇದುವರೆಗೂ ಕಾಳಜಿ ಕೇಂದ್ರಕ್ಕೆ 31,360 ಜನರ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ 22,417 ಜನರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 58,960 ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. 1,962 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಸಹ ನಷ್ಟವಾಗಿದೆ. ಪ್ರವಾಹದಿಂದಾಗಿ ಸುಮಾರು 555 ಕಿ.ಮೀ. ರಸ್ತೆ ಹಾನಿಯಾಗಿದೆ. ರಾಜ್ಯದ ವಿವಿಧೆಡೆ 123 ಸೇತುವೆಗಳಿಗೆ ಹಾನಿಯಾಗಿದೆ. 213 ಶಾಲೆಗಳಿಗೆ ಪ್ರವಾಹದಿಂದಾಗಿ ಭಾರೀ ಹಾನಿಯಾಗಿದೆ. 33 ಆರೋಗ್ಯ ಕೇಂದ್ರಗಳಿಗೂ ಹಾನಿಯಾಗಿದೆ. ಮಳೆಯಿಂದಾಗಿ 3,502 ವಿದ್ಯುತ್ ಕಂಬಗಳು ನೆಲಕಚ್ಚಿವೆ. 341 ವಿದ್ಯುತ್ ಟ್ರಾನ್ಸ್​ಫಾರ್ಮರ್​ಗಳಿಗೆ ಭಾರೀ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡುತ್ತಾ..?

ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿರುವ ಬಗ್ಗೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕಿದೆ. ತಕ್ಷಣಕ್ಕೆ ಬೇಕಾದ ಪರಿಹಾರ ಕೇಂದ್ರ ಸರ್ಕಾರ ಕೊಡಲಿದೆ. ಹಿಂದೆಯೂ ಸಹ ಭಾರತ ಸರ್ಕಾರ ನೆರವಿಗೆ ಬಂದಿತ್ತು. ಈ ಸಲವೂ ಪರಿಹಾರ ಕೊಡುತ್ತೇವೆ. ನಾನು ಭಾನುವಾರ ದೆಹಲಿಗೆ ಹೊರಟಿದ್ದೇನೆ. ಕೇಂದ್ರದ ಗೃಹ ಮಂತ್ರಿಗಳಿಗೂ ಮಾತನಾಡುತ್ತೇನೆ. NDRF ನಿಯಮದಡಿ ಸಹಕಾರ ಕೊಡುತ್ತದೆ. ಹಿಂದಿನ ಯಾವುದೇ ಪರಿಹಾರ ಬಾಕಿ‌ ಇಲ್ಲ. ಹಣಕಾಸು ಆಯೋಗದಡಿ ಪರಹಾರ ಬಿಡುಗಡೆಗೆ ಸೂತ್ರ ಇದೆ. ಆ ಸೂತ್ರದ ಅಡಿಯಲ್ಲಿ ಪರಿಹಾರ ನೀಡುತ್ತಾರೆ. ಅದಕ್ಕೆ ನಾವು ಕೇಂದ್ರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಒಂದು ರಾಜ್ಯಕ್ಕೆ ಹೆಚ್ಚು, ಕಡಿಮೆ ಕೊಡಲು ಬರೋದಿಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಸ್ಥನ ಸ್ಥಾನವೇ ಬದಲಾವಣೆ ಆಗುವ ಸಾಧ್ಯತೆಗಳು ಇರುವ ಕಾರಣ ರಾಜ್ಯ ಸರ್ಕಾರ ಪ್ರವಾಹದ ಬಗ್ಗೆ ಇಲ್ಲೀವರೆಗೂ ಕೇಂದ್ರಕ್ಕೆ ವರದಿ ಕಳುಹಿಸಿಲ್ಲ. ಇನ್ನೂ ಪ್ರವಾಹ ಪೀಡಿತ ರಾಜ್ಯ ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿಲ್ಲ. ತುರ್ತು ಪರಿಹಾರ ಕೊಡಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಕಾರ್ಯರೂಪಕ್ಕೆ ಬರುತ್ತಾ ಕಾದು ನೋಡಬೇಕು.

Related Posts

Don't Miss it !