ಕರ್ನಾಟಕದಲ್ಲಿ ಸಾವಿನ ಮಳೆಯ ಆರ್ಭಟ..!! ಎಲ್ಲೆಲ್ಲಿ ಏನಾಗಿದೆ..!?

ರಾಜ್ಯದಲ್ಲಿ ವರುಣನ ಆರ್ಭಟ ನಿನ್ನೆ ರಾತ್ರಿಯಿಂದಲೇ ಜೋರಾಗಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೆರೆ, ಕಟ್ಟೆ, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಭಟ್ಕಳದಲ್ಲಿ ರಾತ್ರಿಪೂರ್ತಿ ಸುರಿದ ಭಾರೀ ಮಳೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನೂರಾರು ಮನೆಗಳು ಜಲಾವೃತ ಆಗಿವೆ. ಮಣ್ಣಕುಳ್ಳಿ, ಚೌಥನಿ ಮೂಡಳ್ಳಿ ಮೂಡಭಡ್ಕಳ, ಮುಟ್ಟಹಳ್ಳಿ, ಗ್ರಾಮ ಸಂಪೂರ್ಣ ಜಲಾವೃತ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಆಗಿದೆ. ಭಟ್ಕಳದಲ್ಲಿ ಮನೆಯ ಮೇಲೆ ಗುಡ್ಡ ಕುಸಿತದ ಪರಿಣಾಮ, ಮನೆಯಲ್ಲಿ ಮಲಗಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. 60 ವರ್ಷದ ನಾರಾಯಣ ನಾಯ್ಕ, 45 ವರ್ಷದ ಮಗಳು ಲಕ್ಷ್ಮೀ ನಾರಾಯಣ ನಾಯ್ಕ, 38 ವರ್ಷದ ಮಗ ಅನಂತ ನಾರಾಯಣ ನಾಯ್ಕ, ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ 16 ವರ್ಷದ ಪ್ರವೀಣ್ ರಾಮಕೃಷ್ಣ ನಾಯ್ಕ ಸಾವನ್ನಪ್ಪಿದ್ದಾರೆ.


ಪ್ರವಾಹದಲ್ಲಿ ಸಾಗರ ಸೇರಿದ ಮೀನುಗಾರರ ಬದುಕಿನ ನಾವೆ..!

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬೈಂದೂರು ತಾಲೂಕಿನ ಶಿರೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ತಡರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ ಆಗಿವೆ. ಬೈಂದೂರು, ಕೊಲ್ಲೂರು ಹೆದ್ದಾರಿಯಲ್ಲಿ  ನೀರು ತುಂಬಿದ್ದು ಸಂಚಾರ ಸ್ಥಗಿತವಾಗಿದೆ. ಮುಂದಿನ ಎರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಡಲ ಕಿಮಾರೆಯಲ್ಲಿ ಸಾಗರದ ಅಲೆಗಳು ಆಳೆತ್ತರಕ್ಕೆ ಅಪ್ಪಳಿಸುತ್ತಿದ್ದು, ಕಡಲ ತಡಿಯಲ್ಲಿ ಲಂಗಾರು ಹಾಕಿದ್ದು ಸಾಕಷ್ಟು ದೋಣಿಗಳು ಸಮುದ್ರ ಪಾಲಾಗಿರುವ ಘಟನೆ ನಡೆದಿದ್ದು, ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೊಡಗಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಕೊಯನಾಡು ವ್ಯಾಪ್ತಿಯಲ್ಲಿ ಪಯಸ್ವಿನಿ ಉಕ್ಕಿ ಹರಿದಿದೆ. ಕಿಂಡಿ ಅಣೆಕಟ್ಟು ಬಳಿ ನಾಲ್ಕೈದು ಮನೆಗಳು ಜಲಾವೃತ ಆಗಿದ್ದು, ಸಂತ್ರಸ್ತ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕಿಂಡಿ ಅಣೆಕಟ್ಟನ್ನು ಅವೈಜ್ಞಾನಿಕ ನಿರ್ಮಾಣ ಮಾಡಿದ್ರಿಂ ಮನೆಗಳು ಜಲಾವೃತ ಆಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಯಲು ನಾಡಲ್ಲೂ ವರುಣನ ಆರ್ಭಟ, ಅನ್ನದಾತ ಕಂಗಾಲು..!!

ಮಂಡ್ಯದಲ್ಲಿ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ 45 ಕುರಿಗಳು ಧಾರುಣವಾಗಿ ಸಾವನ್ನಪ್ಪಿವೆ. ಉಮ್ಮಡಹಳ್ಳಿ ಗ್ರಾಮದ ಯಶೋದಮ್ಮ ಎಂಬುವರ ಮನೆ ಕುಸಿದು ದುರ್ಘಟನೆ ಸಂಭವಿಸಿದೆ. ಮನೆಯ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಕುರಿಗಳು ಮಣ್ಣಿನಡಿಯಲ್ಲಿ ಸಿಲುಕಿ ಸಾವು ಕಂಡಿವೆ. ಇನ್ನು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಮಂಡ್ಯದ ಬೂದನೂರು ಗ್ರಾಮದ ಕೆರೆ ತುಂಬಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಜಲಾವೃತ್ತ ಆಗಿತ್ತು. ಮಂಡ್ಯದ ಹೊಳಲು ಗ್ರಾಮದ ಕೆರೆ ಕೋಡಿ ಬಿದ್ದಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೇಲುಕೋಟೆಯಿಂದ ಮಂಡ್ಯಕ್ಕೆ ಬರುವ ಪ್ರಯಾಣಿಕರು ಪರದಾಡುವಂತಾಯ್ತು. ಅತ್ತ ರಾಮನಗರ ಜಿಲ್ಲೆಯಲ್ಲೂ ಭಾರೀ ಮಳೆ ಸುರಿದಿದ್ದು, ಕಣ್ವ ಜಲಾಶಯ ಭರ್ತಿಯಾಗಿದೆ, 4 ಗೇಟ್ ಓಪನ್ ಮಾಡಿ, 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಂಚನಬೆಲೆ ಜಲಾಶಯವೂ ಸಂಪೂರ್ಣವಾಗಿ ಭರ್ತಿ ಆಗಿದೆ. 3 ಗೇಟ್‌ಗಳ ಮೂಲಕ 6 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ವೆಂಕಟೇಗೌಡ ಮಾಹಿತಿ ನೀಡಿದ್ದಾರೆ.

ಬರದ ನಾಡಿನಲ್ಲಿ ವರುಣಾಕ್ರೋಷ.. ಅಸ್ತವ್ಯಸ್ತಗೊಂಡ ಜೀವನ..!

ಕಲಬುರಗಿಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಗ್ರಾಮಗಳು ಜಲಾವೃತ ಆಗಿದ್ದು ಸಂಪರ್ಕ ಕಡಿತ ಆಗಿತ್ತು. ಕಡಣಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ರಿಂದ ಸಂಕಷ್ಟ ಎದುರಾಗಿತ್ತು. ಕಳೆದ ಒಂದು ವಾರದ ಹಿಂದಷ್ಟೇ ಇದೇ ಹಳ್ಳದಲ್ಲಿ ಒಬ್ಬ ಯುವಕ ಕೊಚ್ಚಿಕೊಂಡು ಹೋಗಿದ್ದ. ಇದೀಗ ಮತ್ತೆ ಮಳೆಗೆ ತುಂಬಿ ಹರಿಯುತ್ತಿದೆ ಕಡಣಿ ಹಳ್ಳ. ಇನ್ನು ಚಿತ್ರದುರ್ಗ ಜಿಲ್ಲೆಯ ಕೆಲವಡೆ ಮಳೆರಾಯ ಅರ್ಭಟಿಸಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿ
ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ಹೂವಿನಹೊಳೆ ಮತ್ತು ಈಶ್ವರಗೆರೆ ನಡುವಿನ ರಸ್ತೆ ಜಲಾವೃತ ಆಗಿ ಸಂಪರ್ಕ ಕಡಿತ ಆಗಿತ್ತು. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಚೆಕ್ ಡ್ಯಾಂನಿಂದ ನೀರು ಜಮೀನುಗಳಿಗೆ ನುಗ್ಗಿ ಶೇಂಗಾ, ಹುರುಳಿ, ತೊಗರಿ ಬೆಳೆ ಜಲಾವೃತ ಆಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಹೊನ್ಮಾಳಿ-ನ್ಯಾಮತಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.


ಬೆಂಗಳೂರಿನಲ್ಲಿ ಭಾರೀ ಮಳೆ ನಿರೀಕ್ಷೆ ಸಿಎಂ ಮಹತ್ವದ ಸಭೆ..!

ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಆಗಿರುವ ಅನಾಹುತದ ಬಗ್ಗೆ ಡಿಸಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಯಿ ನಡೆಸಿದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಎಸಿಎಸ್ ಐಎಸ್ಎನ್ ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಮುಖ್ಯಸ್ಥ ಮನೋಜ ಉಪಸ್ಥಿತರಿದ್ದರು. ಸರ್ಕಾರ ತೆಗಡದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಮುಂದಿಮ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮುನ್ಸೂಚನೆ ಸಿಕ್ಕಿದ್ದು ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

Related Posts

Don't Miss it !