ಸಿಎಂ ಬದಲಾದರೂ ಕರ್ನಾಟಕಕ್ಕೆ ತಪ್ಪಲ್ಲ ಆಪತ್ತು..! ಈಗಾಗಲೇ ಸಿಕ್ಕಿದೆ ಮುನ್ಸೂಚನೆ..!

ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಸೃಷ್ಟಿಯಾಗಿತ್ತು. ಸಂಪುಟ ವಿಸ್ತರಣೆಯನ್ನೂ ಮಾಡಲಾಗದ ಬಿ.ಎಸ್​ ಯಡಿಯೂರಪ್ಪ ಒಂಬಂಟಿ ನಾಯಕನ ಹಾಗೆ ಇಡೀ ರಾಜ್ಯವನ್ನು ಸುತ್ತಾಡಿದ್ರು. ಇದೀಗ ಅಧಿಕಾರ ಹಸ್ತಾಂತರದ ಮಾತುಗಳು ಕೇಳಿ ಬರುತ್ತಿವೆ. ಆದರೂ ರಾಜ್ಯದ ಜನರಿಗೆ ಪ್ರವಾಹದ ಆಪತ್ತು ಎದುರಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ನೂತನವಾಗಿ ಯಾರೇ ಮುಖ್ಯಮಂತ್ರಿ ಆದರೂ ಪ್ರವಾಹದ ಹೊಳೆಯಲ್ಲಿ ಒದ್ದೆಯಾಗಬೇಕು ಎನ್ನುವುದು ವಿಧಿಲಿಖಿತ.

ಉತ್ತರ ಕರ್ನಾಟಕಕ್ಕೆ ಪ್ರವಾಹ ಭೀತಿ..!

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ನದಿ ನೀರು ನುಗ್ಗಿದೆ. ಇಲ್ಲಿನ ಹಿರಣ್ಯಕೇಶಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸಂಕೇಶ್ವರ ಪಟ್ಟಣದ ತಗ್ಗು ಪ್ರದೇಶಗಳಿಗೆ ಹಿರಣ್ಯಕೇಶಿ ನದಿಯ ನೀರು ನುಗ್ಗಿದೆ. ಸಂಕೇಶ್ವರ ಪಟ್ಟಣದಲ್ಲಿರುವ ಲಕ್ಷ್ಮೀ ದೇವಸ್ಥಾನ ಹಾಗೂ ಹಾಗೂ ಶಂಕರಲಿಂಗ ದೇವಸ್ಥಾನಕ್ಕೂ ನದಿ ನೀರು ನುಗ್ಗಿದೆ. ಶಂಕರಲಿಂಗ ದೇವಸ್ಥಾನದ ಬಳಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಕಾವೇರಿಯಲ್ಲೂ ಆಕ್ರೋಶ ಹರಿವು..!

ಕೊಡಗು ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಾವೇರಿಯ ಹರಿವು ರೌದ್ರನರ್ತನವಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ವಿರಾಜಪೇಟೆ ತಾಲೂಕಿನ ಭೇತ್ರಿ ಮತ್ತು ಹೆಮ್ಮಾಡುವಿನಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. 100 ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹದ ಆತಂಕದಲ್ಲಿಯೇ ಬದುಕುವಂತಾಗಿದೆ. ಅಪಾಯದ ಮುನ್ಸೂಚನೆ ಅರಿತಿರುವ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮನೆ ಖಾಲಿ ಮಾಡಲು ಸೂಚನೆ ನೀಡಿದ್ದಾರೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೊಟೀಸ್ ಜಾರಿ ಮಾಡಲಾಗಿದೆ. ಹೆಮ್ಮಡು ಗ್ರಾಮವನ್ನು ಕಾವೇರಿ ನದಿ ಸುತ್ತುವರಿದಿದ್ದು, ಚೆಲಾವರ ಜಲಪಾತದ ಹೊಳೆ ಭೇತ್ರಿ ಮತ್ತು ಹೆಮ್ಮಾಡು ಗ್ರಾಮವನ್ನೂ ಸುತ್ತುವರಿದಿದೆ. ಮಡಿಕೇರಿಯ ಕಣ್ವ ಬಲಮುರಿಯಲ್ಲಿ ಪಾರಾಣೆ ಸೇತುವೆ ಮುಳುಗಡೆ ಆಗಿದೆ. ಸೇತುವೆಯ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ.

ಪ್ರತಿ ವರ್ಷದ ವಿಶೇಷ ಹೆಬ್ಬಾಲೆ ಮುಳುಗಡೆ..!

ಪ್ರವಾಸಿ ಕೇಂದ್ರವಾಗಿರುವ ಚಿಕ್ಕಮಗಳೂರಿನ ಹೆಬ್ಬಾಲೆ ಸೇತುವ ಪ್ರತಿ ವರ್ಷದ ಹಾಟ್​ ಟಾಕ್​. ಇಲ್ಲಿ ಕಳಸದಿಂದ ಹೊರನಾಡು ಕಡೆಗೆ ತೆರಳುವಾಗ ಸಿಗುವ ಹೆಬ್ಬಾಲೆ ಸೇತುವೆ ಭಾರೀ ಮಳೆಯಿಂದ ಮುಳುಗಡೆ ಆಗಿದೆ. ಕುದುರೆಮುಖ ಅರಣ್ಯವ್ಯಾಪ್ತಿಯಲ್ಲಿ ಅಬ್ಬರಿಸುತ್ತಿರುವ ವರುಣ, ಕಲ್ಲತ್ತಗಿರಿ ಜಲಪಾತ ದೃಶ್ಯವನ್ನು ರಮಣೀಯಗೊಳಿಸಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಸುರಿಯುತ್ತಿರುವ ಭಾರೀ ಮಳೆ, ಹಳ್ಳ ಕೊಳ್ಳ ನದಿ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಬಿಡಲಾಗ್ತಿದೆ. ಕೃಷ್ಣಾ ನದಿಗೂ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ರಾಜ್ಯದ ಜನರಿಗೆ ಮತ್ತೆ ಸಂಕಷ್ಟ.!

ಇದೀಗ ನೂತನ ಮುಖ್ಯಮಂತ್ರಿ ಪದಗ್ರಹಣ ಆಗುವುದು ಬಹುತೇಕ ಖಚಿತ. ಆದರೂ ಸಚಿವಸಂಪುಟ ಪುನಾರಚನೆ ಆಗುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ವಿಸ್ತರಣೆ ಆಗದಿದ್ದರೆ ಮುಖ್ಯಮಂತ್ರಿ ಒಬ್ಬರೇ ಕಾರ್ಯನಿರ್ವಹಿಸಬೇಕಾಗಿದೆ. ಈಗಾಗಿ ಕಳೆದ 2 ವರ್ಷದಿಂದ ಎದುರಾಗಿರುವ ಸಮಸ್ಯೆಯನ್ನು ಜನರು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು ಮತ್ತೊಮ್ಮೆ ಉತ್ತರ ಕರ್ನಾಟಕ ಪ್ರವಾಹದ ಹೊಳೆಯಲ್ಲಿ ಸಂಕಷ್ಟಕ್ಕೀಡಾಗುವ ಸಾಧ್ಯತೆ ದಟ್ಟವಾಗಿದೆ. ಈ ಪ್ರವಾಹ ಸಿಎಂ ಸ್ಥಾನವನ್ನು ಮತ್ತಷ್ಟು ದಿನಗಳ ಕಾಲ ಉಳಿಸುತ್ತಾ ಎನ್ನುವ ಅನುಮಾನವನ್ನೂ ಮೂಡಿಸುತ್ತಿದೆ.

Related Posts

Don't Miss it !