ನೈಟ್​ ಕರ್ಫ್ಯೂ, ವೀಕೆಂಡ್​ ಲಾಕ್​ಡೌನ್​ ಜಾರಿ, ಶಾಲಾ ಕಾಲೇಜು ವಿಚಾರದಲ್ಲಿ ಗೊಂದಲ..!

ಕೊರೊನಾ ಮೂರನೇ ಅಲೆ ಬರುತ್ತಿದೆ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಎರಡನೇ ಅಲೆಯಲ್ಲಿ ತಜ್ಞರ ವರದಿಯನ್ನು ಜಾರಿ ಮಾಡಲು ಹಿಂದೇಟು ಹಾಕಿದ ಪರಿಣಾಮ ಕೊರೊನಾ ಸೋಂಕು ಅಬ್ಬರಿಸಿತ್ತು. ಇದೇ ಕಾರಣದಿಂದ ಈ ಬಾರಿ ಮೂರನೇ ಅಲೆ ರಾಜ್ಯದಲ್ಲಿ ರೌದ್ರನರ್ತನ ಮಾಡುವ ಮುನ್ನವೇ ರಾಜ್ಯ ಸರ್ಕಾರ ರಾಜ್ಯದ 8 ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವೀಕೆಂಡ್​ ಲಾಕ್​ಡೌನ್​ ಜೊತೆಗೆ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶ ಆಗಸ್ಟ್​ 7, 2021 ರಿಂದ ಆಗಸ್ಟ್​ 16ರ ತನಕ ಜಾರಿಯಲ್ಲಿರಲಿದೆ.

ಬೆಂಗಳೂರಿನಲ್ಲೂ ಕಟ್ಟುನಿಟ್ಟಿನ ನೈಟ್​ ಕರ್ಫ್ಯೂ ಜಾರಿ..!

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಬೆಂಗಳೂರಿನಲ್ಲೂ ಹೆಚ್ಚಳ ಆಗುತ್ತಿರುವ ಕಾರಣ ಈಗಾಗಲೇ ಜಾರಿಯಲ್ಲಿದ್ದ ನೈಟ್​ ಕರ್ಫ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸೂಚಿಸಲಾಗಿದೆ. ಬೆಂಗಳೂರು ಪೊಲೀಸರು ರಾತ್ರಿ 9 ಗಂಟೆಯೊಳಗೆ ಅಂಗಡಿ ಮುಂಗಟ್ಟು ಮುಚ್ಚಲು ವ್ಯಾಪಾರಸ್ಥರಿಗೆ ಸೂಚನೆ ಕೊಡುತ್ತಿದ್ದಾರೆ. ಮಹಾರಾಷ್ಟ್ರ, ಹಾಗೂ ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಯಾವುದೇ ಕಾರಣಕ್ಕೂ ತಜ್ಞರ ಸಲಹೆಗಳನ್ನು ನಿರ್ಲಕ್ಷ್ಯ ಮಾಡದೆ ಇರಲು ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತಪಾಸಣೆ ಮಿಸ್​ ಮಾಡಿದ್ರೆ ಸಸ್ಪೆಂಡ್​ ಮಾಡ್ತೇವೆ..!

ಅಂತರಾಜ್ಯ ಗಡಿಯಲ್ಲಿ ತಪಾಸಣೆ ಸರಿಯಾಗಿಲ್ಲ ಎನ್ನುವ ಆರೋಪ ಸದಾ ಕೇಳಿ ಬರುವ ಆರೋಪ. ಶನಿವಾರದಿಂದ 8 ಜಿಲ್ಲೆಗಳಲ್ಲಿ ವೀಕೆಂಡ್​ ಲಾಕ್​ಡೌನ್​ ಹಾಗೂ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿ ಬೆನ್ನಲ್ಲೇ ಕರ್ನಾಟಕ ತಮಿಳುನಾಡು ಗಡಿಭಾಗದ ಕೆಕ್ಕನಹಳ್ಳ ಚೆಕ್ ಪೋಸ್ಟ್​ಗೆ ಭೇಟಿ ನೀಡಿದ್ದ ಸಚಿವ ಎಸ್​ ಟಿ ಸೋಮಶೇಖರ್​, ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಂದೇ ಒಂದು ವೆಹಿಕಲ್ ರಾಜ್ಯದ ಒಳಕ್ಕೆ ಬಂದರೂ ಸಸ್ಪೆಂಡ್ ಮಾಡಬೇಕಾಗತ್ತೆ ಎಂದು ಎಚ್ಚರಿಸಿದ್ದಾರೆ. ನೆಗೆಟಿವ್ ವರದಿ ಇಲ್ಲದಿದ್ದರೆ ರಾಜ್ಯದ ಗಡಿಯಿಂದ ವಾಪಸ್ ಕಳುಹಿಸಿ ಎಂದಿರುವ ಎಸ್​.ಟಿ ಸೋಮಶೇಖರ್​, ನಾನು ಯಾವ ಟೈಮ್​ನಲ್ಲಿ ಬಂದು ಚೆಕ್ ಮಾಡ್ತೀನಿ ಗೊತ್ತಿಲ್ಲ. ಚೆಕ್ ಪೋಸ್ಟ್ ದಾಟಿ ಬಂದ ವಾಹನ ಮತ್ತೆ ಚೆಕ್ ಮಾಡಿ ನೆಗೆಟಿವ್ ವರದಿ ಇಲ್ಲದಿದ್ದರೆ ನೀವೇ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.

ಮದುವೆ, ತಿಥಿಗೂ ಸರ್ಕಾರದಿಂದ ಗೈಡ್​ಲೈನ್ಸ್​

ಮದುವೆ ಕಾರ್ಯಕ್ರಮದಲ್ಲಿ ನೂರಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಅಂತ್ಯಸಂಸ್ಕಾರದಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ವೀಕೆಂಡ್​ ಕರ್ಫ್ಯೂ ವೇಳೆ ಮಧ್ಯಾಹ್ನ 2 ಗಂಟೆ ತನಕ ಮದ್ಯ, ದಿನಸಿ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಬಸ್, ವಿಮಾನ, ರೈಲು ಪ್ರಯಾಣಕ್ಕೂ ಅವಕಾಶ ಕೊಡಲಾಗಿದೆ. ವೀಕೆಂಡ್​ ಕರ್ಫ್ಯೂ ವೇಳೆಯಲ್ಲೂ ಬಸ್​ ಸಂಚಾರ ಯಥಾಸ್ಥಿತಿಯಲ್ಲಿ ಇರಲಿದೆ. ಹೋಟೆಲ್​ಗಳಲ್ಲೂ ಪಾರ್ಸೆಲ್​ಗೆ ಅವಕಾಶವಿದೆ. ಜಾತ್ರೆ, ಉತ್ಸವ, ಮೆರವಣಿಗೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಬರುತ್ತೆ ಎನ್ನುವ ಕಾರಣಕ್ಕೆ ವೀಕೆಂಡ್​ ಲಾಕ್​ಡೌನ್​ ಹಾಗೂ ನೈಟ್​ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಕರ್ನಾಟಕ ಸರ್ಕಾರ ಮತ್ತೊಂದು ಎಡವಟ್ಟು ನಿರ್ಧಾರ ಮಾಡಿದ್ದಾರೆ.

ಶಾಲಾ & ಕಾಲೇಜು ಆರಂಭಕ್ಕೂ ಗ್ರೀನ್​ ಸಿಗ್ನಲ್​..!

ಆಗಸ್ಟ್ 23 ರಿಂದ ರಾಜ್ಯಾದ್ಯಂತ 9 ರಿಂದ‌ 12ನೇ ತರಗತಿ ತನಕ ಶಾಲಾ ಕಾಲೇಜು ಆರಂಭಕ್ಕೆ ಗ್ರೀನ್​ ಸಿಗ್ನಲ್​ ಕೊಡಲಾಗಿದೆ. ಈಗಾಗಲೇ ಮೂರನೆ ಅಲೆಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ. ಮಕ್ಕಳಿಗೆ ವಿಶೇಷ ಬೆಡ್, ವೆಂಟಿಲೇಟರ್, ಐಸಿಯು ವ್ಯವಸ್ಥೆ ಮಾಡಲು ಸೂಚನೆ ಕೊಡಲಾಗಿದೆ. ಯಾವುದೇ ರೀತಿಯ ಸಮಸ್ಯೆ ಆಗದ ರೀತಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕೊರೊನಾ ತೀವ್ರತೆ ನೋಡಿಕೊಂಡು ಮತ್ತಷ್ಟು ಬಿಗಿ ಕ್ರಮಕ್ಕೂ ಸರ್ಕಾರ ತೀರ್ಮಾನ ಮಾಡಿದೆ. ಆದರೆ ರಾಜ್ಯದ ಗಡಿ ಜಿಲ್ಲೆಗಳೂ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭಕ್ಕೂ ಒಪ್ಪಿಗೆ ನೀಡಲಾಗಿದೆ. ಕೊರೊನಾ ಭೀತಿ ನಡುವೆ ಮಕ್ಕಳು ಶಾಲಾ ಕಾಲೇಜಿಗೆ ಹೋಗಿ ಬರುವುದು ಸೂಕ್ತವೇ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಸಂಕಷ್ಟ ತರಲಿದೆ ಎನ್ನುವ ವರದಿಗಳ ನಡುವೆ ಕೊರೊನಾ ಟಫ್​ ರೂಲ್ಸ್​ ಜಾರಿ ಮಾಡಿರುವ ಸರ್ಕಾರ ಶಾಲಾ ಕಾಲೇಜಿಗೂ ಒಪ್ಪಿಗೆ ಕೊಟ್ಟಿರುವುದು ಬೊಮ್ಮಾಯಿ ಸರ್ಕಾರದ ಗೊಂದಲದ ನಿರ್ಧಾರಕ್ಕೆ ಸಾಕ್ಷಿಯಾಗಿದೆ.

Related Posts

Don't Miss it !