‘ಇದು ಸರ್ಕಾರಿ ಗರ್ಭಗುಡಿ’ ಲಂಚ ಕೊಡಿ.. ಫೋಟೋ ವೀಡಿಯೋ ನಿಷೇಧ..!

ರಾಜ್ಯದಲ್ಲಿ ಭಷ್ಟಾಚಾರ ತಾಂಡವಾಡ್ತಿದೆ ಎನ್ನುವುದನ್ನ ಇತ್ತೀಚಿಗೆ ನಡೆದ ಒಂದೆರಡು ಬೆಳವಣಿಗೆಗಳ ಮೂಲಕ ಕಂಡುಕೊಳ್ಳಬಹುದು. ಗುತ್ತಿಗೆದಾರರು ಶೇಕಡ 40 ರಷ್ಟು ಕಮಿಷನ್​​ ಪಡೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇನ್ನೂ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಡಿಜಿಪಿ ಅಮೃತ್​ ಪೌಲ್​ ಬಂಧನ ಆಗಿದೆ. ಇನ್ನೂ ಬೆಂಗಳೂರಿನ ಡಿಸಿ ಕಚೇರಿಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಕೆಲಸ ಮಾಡಲು 5 ಲಕ್ಷ ರೂಪಾಯಿ ಹಣ ಪಡೆಯುವಾಗ ತಹಶೀಲ್ದಾರ್​ ಬಂಧನ ಆಗಿತ್ತು. ಆ ಬಳಿಕ ಬೆಂಗಳೂರು ಡಿಸಿ ಆಗಿದ್ದ ಮಂಜುನಾಥ್​ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈ ಇಬ್ಬರು ಅಧಿಕಾರಿಗಳ ಬಂಧನದ ಹಿಂದೆ ಕರ್ನಾಟಕ ಹೈಕೋರ್ಟ್​ ಕೊಟ್ಟ ಖಡಕ್​ ಸೂಚನೆ ಇತ್ತು ಎನ್ನುವುದು ಗಮನಾರ್ಹ. ರಾಜ್ಯದಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದರ ನಡುವೆ ರಾಜ್ಯ ಸರ್ಕಾರ ಒಂದು ಆದೇಶ ಹೊರಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು, ವೀಡಿಯೋ ಮಾಡುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ಕ್ರಮಕ್ಕೆ ಸಿದ್ದರಾಮಯ್ಯ ಚಾಟಿ ಏಟು..!

ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಫೋಟೋ, ವಿಡಿಯೋ ತೆಗೆಯುವಂತಿಲ್ಲ, ಒಂದು ವೇಳೆ ಫೋಟೋ, ವಿಡಿಯೋ ತೆಗೆದ್ರೆ ಕಠಿಣ ಕ್ರಮ ಎನ್ನುವ ಸರ್ಕಾದ ಆದೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಈ ನಿರ್ಧಾರ ಸರ್ಕಾರದ ಹೊಣೆಗೇಡಿ ಕ್ರಮ ಎಂದಿರುವ ಸಿದ್ದರಾಮಯ್ಯ, ಶೇಕಡ 40 ಪರ್ಸೆಂಟ್​ ಲಂಚಾವತಾರ, ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ನೂರಕ್ಕೂ ಹೆಚ್ಚು ದೊಡ್ಡ ದೊಡ್ಡ ಲಂಚಗುಳಿತನ ಪ್ರಕರಣಗಳು ಬೆಳಕಿಗೆ ಬಂದಿವೆ. ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗ ಆಗುತ್ತಿರುವಾಗ ಸರ್ಕಾರ ಈ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಮಾಡಿದ್ದ ಮನವಿಯನ್ನು ನೆಪ ಮಾಡಿಕೊಂಡಿದೆ ಎಂದು ಟೀಕಿಸಿದ್ದಾರೆ. ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಈ ಮೂಲಕ ಮುಂದಾಗಿದೆ. ಸರ್ಕಾರದ ಆದೇಶ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವ ಉದ್ದೇಶ ಇಲ್ಲ. ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಉದ್ದೇಶ ಹೊಂದಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅದನ್ನು ವೆಬ್ ಕಾಸ್ಟಿಂಗ್ ಮಾಡಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

ಇದನ್ನು ಓದಿ: NEWS18 ಪತ್ರಕರ್ತ ಸತೀಶ್​. A ಕಾರಿಗೆ ನಡುರಸ್ತೆಯಲ್ಲೇ ಬೆಂಕಿ..! ಕಾರಣ ಏನು ಗೊತ್ತಾ..?

KRS ಪಕ್ಷದ ಹೋರಾಟಕ್ಕೆ ಬೆಚ್ಚಿ ಬಿದ್ದಿದ್ಯಾ ಸರ್ಕಾರ..!?

ರಾಜ್ಯದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಕಹಳೆ ಮೊಳಗಿಸಿದೆ. ಇನ್ನು ಸಾಕಷ್ಟು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಲವಾರು ಪ್ರಕರಣಗಳಲ್ಲಿ ಹಲವರು ಜೈಲಿಗೂ ಹೋಗಿ ಬಂದಿದ್ದಾರೆ. ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಟೀಕಿಸಿದ್ದಾರೆ. ನಮ್ಮ ಪಕ್ಷ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡಿ ಅಧಿಕಾರಿಗಳ ಲಂಚಗೂಳಿತನ ಬಯಲಿಗೆ ಎಳೆಯುವ ಕೆಲಸ ಮಾಡುತ್ತಿತ್ತು. ನಮ್ಮ ಪಕ್ಷದ ಹೋರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಕೂಡಲೇ ನಿರ್ಧಾರ ವಾಪಸ್​ ಪಡೆಯಬೇಕು. ಇಲ್ಲದಿದ್ದರೆ ಎಲ್ಲಾ ಕಡೆಯೂ ಹೋಗಿ ವೀಡಿಯೋ ಮಾಡುತ್ತೇವೆ. ಕಾನೂನಿನಲ್ಲಿ ಈ ರೀತಿಯ ಹೋರಾಟಕ್ಕೆ ಶಿಕ್ಷೆ ಇಲ್ಲ. ಅದ್ಯಾವ ಸೆಕ್ಷನ್​​ ಆಧಾರದಲ್ಲಿ ನಮ್ಮನ್ನು ಬಂಧಿಸ್ತಾರೆ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಆಕ್ರೋಶ ಬೇಡ, ಚುನಾವಣಾ ಪ್ರಣಾಳಿಕೆಯಲ್ಲಿ ಹಾಕಿಬಿಡಿ..!

ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಆಧಾರದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸರ್ಕಾರಿ ಅಧಿಕಾರಿಗಳುನ್ನು ಲಕ್ಷ ಲಕ್ಷ ಪಡೆದು ಪೋಸ್ಟಿಂಗ್​ ಹಾಕುವ, ಹಾಕಿಸಿಕೊಡುವ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಹಿತ ಕಾಯಬೇಕಾದ್ದದ್ದು ಧರ್ಮ ಎನ್ನುತ್ತಾರೆ ಹಿರಿಯ ಪತ್ರಕರ್ತರು. ಯಾವುದೇ ಒಂದು ಹುದ್ದೆಗೆ ವರ್ಗಾವಣೆ ಕೇಳಿದರೆ ವಿಧಾನಸೌಧದಲ್ಲಿ ಸೂಟ್​​ಕೇಸ್​ ಜೊತೆಗೆ ಕಾಣಿಸಿಕೊಳ್ಳಬೇಕು. ಇಂತಿಷ್ಟು ಲಕ್ಷ ಕೊಟ್ಟರೆ ಮಾತ್ರ ಕೇಳಿದ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಕೊಡಲಾಗುತ್ತದೆ ಎನ್ನುವುದು ಸರ್ಕಾರಿ ಅಧಿಕಾರಿಗಳಿಂದಲೇ The Public Spotge ಸಿಕ್ಕಿರುವ ಮಾಹಿತಿ. ಒಂದು ವೇಳೆ ಸರ್ಕಾರಿ ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಅವಕಾಶವೇ ಇಲ್ಲದಿದ್ದರೆ ಯಾವುದೇ ಹುದ್ದೆಗೆ ಹಣ ಕೊಟ್ಟು ಬರುವುದಕ್ಕೆ ಸಾಧ್ಯವಿಲ್ಲ. ಈಗ ರಾಜಕಾರಣಿಗಳ ಸರ್ಕಾರದ ನಿರ್ಧಾರ ಪ್ರಶ್ನಿಸುವ ಜೊತೆಗೆ ಮುಂದೆ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಕಡೆಯಲ್ಲೂ ಸಿಸಿಟಿವಿ ಹಾಕಿಸಿ ಸರ್ಕಾರಿ ವೆಬ್​ ಪೋರ್ಟಲ್​ನಲ್ಲಿ ಲೈವ್​ ಸಿಗುವಂತೆ ಮಾಡುತ್ತೇವೆ ಎನ್ನುವ ಭರವಸೆ ಕೊಟ್ಟಾಗ ಮಿಕ್ಕವರನ್ನು ನಂಬಬಹುದು. ಇಲ್ಲದಿದ್ದರೆ ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದೆ ಇದ್ದಾಗ ಇನ್ನೊಂದು ರೀತಿ ಎನ್ನಬೇಕಾಗುತ್ತದೆ.

Related Posts

Don't Miss it !