ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದ ಝಿಕಾ ವೈರಸ್..

ಕೇರಳದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ  ಝಿಕಾ ವೈರಸ್ ಪತ್ತೆ ಆಗಿರುವುದು ಆತಂಕ ಎದುರಾಗುವಂತೆ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಮಾರಕ ಝಿಕಾ ವೈರಾಣು ಪತ್ತೆ ಆಗಿದ್ದು, ರಾಜ್ಯದ 68 ಕಡೆಗಳಿಂದ ಸೊಳ್ಳೆಗಳನ್ನು ಪರೀಕ್ಷೆ ಮಾಡಿದಾಗ ಝಿಕಾ ವೈರಸ್‌ ಇದೆ ಎಂಬುದು ಪರೀಕ್ಷೆಯಿಂದ ದೃಢವಾಗಿದೆ. ಚಿಕ್ಕಬಳ್ಳಾಪುರದ 6 ಪ್ರದೇಶಗಳಲ್ಲಿ ಸೊಳ್ಳೆಗಳ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ಪತ್ತೆ ಆಗಿದೆ.

ರಾಜ್ಯಾದ್ಯಂತ ನಡೆಯಲಿದೆ ‘ಝಿಕಾ’ ರಕ್ತ ಪರೀಕ್ಷೆ

ಶಿಡ್ಲಘಟ್ಟದ ತಲಕಾಯಲಬೆಟ್ಟ ಗ್ರಾಮದಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ. ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ಆಶಾ ಕಾರ್ಯಕರ್ತೆ ಹಾಗು ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. 30 ಗರ್ಭಿಣಿಯರು ಹಾಗು ಜ್ವರಪೀಡಿತರ ರಕ್ತ ಪರೀಕ್ಷೆಗಾಗಿ  ಬೆಂಗಳೂರಿಗೆ ರವಾನೆ ಮಾಡಲಾಗಿದೆ.

ಝಿಕಾ ವೈರಾಣು ಬಂದ್ರೆ ರೋಗ ಲಕ್ಷಣ ಏನೇನು..?

ಮಾರಣಾಂತಿಕ ಝಿಕಾ ವೈರಸ್ ಪ್ರಮುಖವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆ. ಆರಂಭದಲ್ಲಿ ಸೋಂಕಿತರಿಗೆ ರೋಗ ಲಕ್ಷಣ ಇರಲ್ಲ. ನಂತರ ಡೆಂಘಿ ಮತ್ತು ಚಿಕೂನ್‌ ಗುನ್ಯಾದಂಥಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ದದ್ದು, ತಲೆನೋವು, ಕೀಲುನೊವು, ಆಯಾಸ ಶುರುವಾಗುತ್ತದೆ. ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುವುದು, ವಾಂತಿ, ಕೆಂಪಾದ ಕಣ್ಣುಗಳು  ಪ್ರಮುಖ ರೋಗ ಲಕ್ಷಣಗಳು. ಆರಂಭದಲ್ಲಿ ಸೌಮ್ಯಲಕ್ಷಣವನ್ನೇ ತೋರಲಿರುವ ಈ ಝಿಕಾ ವೈರಸ್ ನಂತರ ಜೀವ ತೆಗೆಯುವ ಮಾರಣಾಂತಿಕ ರೋಗವಾಗುತ್ತೆ ಎನ್ನಲಾಗ್ತಿದೆ. ರೋಗದ ಲಕ್ಷಣಗಳು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಸಂಕಷ್ಟ ಎದುರಾಗುವ ಸಂಭವ ಇರುತ್ತದೆ. ಹುಟ್ಟಲಿರುವ ಮಗುವಿನ ಮೇಲೂ ವಿನಾಶಕಾರಿ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

Related Posts

Don't Miss it !