ತನ್ನ ತಪ್ಪನ್ನ ತಡವಾಗಿ ತಿದ್ದಿಕೊಂಡ ಕಿಚ್ಚ ಸುದೀಪ..!

ನಟ ಸಾರ್ವಭೌಮ ಕಿಚ್ಚ ಸುದೀಪ ಕಳೆದ 8 ಸೀಸನ್​ನಿಂದಲೂ ಬಿಗ್​ಬಾಸ್​ ಹೋಸ್ಟ್​ ಮಾಡ್ತಿದ್ದಾರೆ. ಈ ಎಲ್ಲಾ ಸೀಸನ್​ಗಳಲ್ಲೂ ಕಿಚ್ಚ ಸೂದೀಪ ವಾರಾಂತ್ಯದಲ್ಲಿ ಬಂದು ಕಾರ್ಯಕ್ರಮ ನಡೆಸಿಕೊಡೋದನ್ನು ಕನ್ನಡಿಗರು ನೋಡಿಕೊಂಡೇ ಬಂದಿದ್ದಾರೆ. ಬಿಗ್​ಬಾಸ್​ನ ಯಾವುದೇ ಸ್ಪರ್ಧಿ ಏನೇ ತಪ್ಪು ಮಾಡಿದ್ರೂ ವಾರಾಂತ್ಯದ ಕಾರ್ಯಕ್ರಮದಲ್ಲಿ ಮುಖಕ್ಕೆ ಹೊಡೆಂತೆ ಹೇಳುವ ಮೂಲಕ ತಿದ್ದುವುದು ಕಿಚ್ಚನ ಸ್ಪೆಷಾಲಿಟಿ. ಹಾಗೆ ಸ್ಪರ್ಧಿಗಳನ್ನು ಹುರಿದುಂಬಿಸುವ ಉದ್ದೇಶದಿಂದಲೇ ಕಿಚ್ಚನ ಚಪ್ಪಾಳೆ ಎನ್ನುವ ಹೊಸ ತಂತ್ರವನ್ನು ಮಾಡಿದ್ದಾರೆ. ನೇರವಾಗಿ ನೋವಾಗದಂತೆ ಸ್ಪರ್ಧಿಗಳನ್ನು ತಿದ್ದುವ ಕಾಯಕ ನೋಡಲು ಸಾಕಷ್ಟು ಅಭಿಮಾನಿಗಳು ಬಿಗ್​ಬಾಸ್​ ನೋಡದಿದ್ರೂ ವಾರಾಂತ್ಯದ ಕಾರ್ಯಕ್ರಮ ನೋಡುವುದು ಉಂಟು. ಆದರೆ ಕಳೆದ ವಾರ ಕಿಚ್ಚನ ಭಾಗಿಯಾಗುವಿಕೆ ಕೆಲವರಿಗೆ ನೋವುಂಟು ಮಾಡಿತ್ತು.

ಬಿಗ್​​ಬಾಸ್​ ಸ್ಪರ್ಧಿಗಳು 43 ದಿನಗಳ ಕಾಲ ಬಿಗ್​ಬಾಸ್​ ಮನೆಯಿಂದ ಹೊರಬಂದು ತಾವು ಆಡಿರುವ ಎಲ್ಲಾ ಎಪಿಸೋಡ್​ಗಳನ್ನು ನೋಡಿಕೊಂಡು ಮತ್ತೆ ಬಿಗ್​ಬಾಸ್​ ಮನೆಗೆ ಹೋಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೆಲವೊಂದು ಸ್ಪರ್ಧಿಗಳ ಮೇಲೆ ಕೆಲವು ಸ್ಪರ್ಧಿಗಳಿಗೆ ಮನಸ್ಸಲ್ಲೇ ಕಿಚ್ಚು ಹೊತ್ತಿರುವುದು ಸಾಮಾನ್ಯ. ಆದರೆ ಬಿಗ್​ಬಾಸ್​ ವೇದಿಕೆಯಲ್ಲಿ ಮನಸೋಇಚ್ಛೆ ಮಾತನಾಡಿದ್ದು, ನಿರಂತರವಾಗಿ ಭಾಷಣ ಬಿಗಿಯಲು ಅವಕಾಶ ಮಾಡಿಕೊಟ್ಟಿದ್ದು, ಕನ್ನಡಿಗರಿಗೆ ಇರುಸುಮುರುಸು ಉಂಟಾಗುವಂತೆ ಮಾಡಿತ್ತು. ಅದರಲ್ಲೂ ಚಕ್ರವರ್ತಿ ಚಂದ್ರಚೂಡ್​ ಅವರನ್ನು ನಿಯಂತ್ರಣ ಮಾಡದೆ ಇದ್ದ ನಡಾವಳಿಕೆ ಕನ್ನಡಿಗರಿಗೆ ಬೇಸರ ಹುಟ್ಟಿಸಿತ್ತು. ಕಿಚ್ಚ ಸುದೀಪ ಕಳೆದುಹೋಗಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

ಅರ್ಥವಿಲ್ಲದ ಪದಕ್ಕೆ ಕಥೆ ಕಟ್ಟಿದ್ದೇ ತಪ್ಪು..!

‘ಪತ್ರುವಳ್ಳಿ’ ಅನ್ನೋ ಪದಕ್ಕೆ ತನ್ನದೇ ಆದ ಅರ್ಥ ಕೊಟ್ಟಿದ್ದ ಚಕ್ರವರ್ತಿ ‘ಬೇಲಿ ಸಂದಿ ನಡೆಯೋ ಕಾಮ’ ಎಂದಿದ್ದರು. ಕ್ಷಣಕ್ಕೆ ಅದರ ಅರ್ಥ ತಿಳಿದರೆ ಕರುನಾಡ ಚಕ್ರವತಿ ಕಿಚ್ಚ ಸುದೀಪ ಸುಮ್ಮನಾಗಿರಬಹುದು. ಆದರೆ ಹೊಲಸು ಮಾತು ಬಂದಾಗ ಅದನ್ನು ತಡೆಯಬಹುದಿತ್ತು ಅನ್ನೋದು ಸಾಕಷ್ಟು ಜನರ ಅಭಿಪ್ರಾಯವಾಗಿತ್ತು. ಆದರೆ ಕಿಚ್ಚ ಸುದೀಪ ಕನ್ನಡ ನಾಡಿನ ಜನರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಕಳೆದ ವಾರ ನಡೆದಿದ್ದ ಅತಾಚುರ್ಯವನ್ನು ಈ ವಾರ ಸರಿ ಮಾಡಿಕೊಂಡರು. ಆ ವಿಚಾರ ಈ ವಾರ ಚರ್ಚೆಗೆ ಬೇಕಿಲ್ಲದಿದ್ದರೂ ತನ್ನಷ್ಟಕ್ಕೇ ತಾನೇ ಆ ವಿಚಾರವನ್ನು ಮಧ್ಯೆ ಎಳೆದುತಂದು ಚಕ್ರವರ್ತಿಗೆ ಜಾಡಿಸಿದರು. ಯಾವುದೇ ಶಬ್ಧಕೋಶದಲ್ಲಿ ಇಲ್ಲದಿರುವ ಪದವನ್ನು ಬಳಸಿ ಮನಸ್ಸಿಗೆ ಬಂದ ಅರ್ಥವನ್ನು ಹೇಳುವುದು ಸಮಂಜಸವಲ್ಲ ಎನ್ನುವುದನ್ನು ಸಾರಿ ಹೇಳಿದರು.

ಮಂಜು ಪಾವಗಡಗೂ ಚಾಟಿ ಬೀಸಿದ ಕಿಚ್ಚ..!

ಪತ್ರವಳ್ಳಿ ಪದದ ಅರ್ಥ ಕೇಳಿಕೊಂಡಿದ್ದ ಮಂಜು ಪಾವಗಡ, ಈ ಪದಕ್ಕೆ ಇಷ್ಟೊಂದು ಅರ್ಥವಿದೆ ಅನ್ನೋದು ಗೊತ್ತಿರಲಿಲ್ಲ. ಇದನ್ನು ಕಾಮಿಡಿಯಾಗಿ ಬಳಸುತ್ತಿದ್ದೆ ಅಷ್ಟೆ. ಆದರೆ ನೀವು ಎಲ್ಲಿಂದ ಬಂದಿದ್ದೀರಿ..? ನೀವೇನು ಅನ್ನೋದು ಗೊತ್ತು ಎಂದಿದ್ದರು. ಇದು ನೇರವಾಗಿ ಕನ್ನಡದ ಕಣ್ಣೀರ ನಟಿ ಶ್ರುತಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಮದುವೆ ಬಗ್ಗೆ ಹೇಳಿದ್ದು ಎನ್ನುವುದು ಎಲ್ಲರಿಗೂ ಗೊತ್ತಾಗಿತ್ತು. ಇದಕ್ಕೆ ಮತ್ತೆ ಚಕ್ರವರ್ತಿ ಚಂದ್ರಚೂಡ್​ ಮಾರುದ್ದ ಭಾಷಣ ಬಿಗಿದಿದ್ದರು. ಇದಕ್ಕೂ ಕಿಚ್ಚ ಸುದೀಪ ಅವಕಾಶ ಮಾಡಿಕೊಟ್ಟಿದ್ದರು. ಇದೂ ಕೂಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಶನಿವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಎಲ್ಲವನ್ನೂ ತಿದ್ದಿಕೊಂಡು ಸ್ಪರ್ಧಿಗಳನ್ನೂ ತಿದ್ದಿದ್ದು ಉತ್ತಮ ಬೆಳವಣಿಗೆ ಎನ್ನಬಹುದು.

ಒಡೆದು ಹೋಗಿದ್ದ ಮನಸ್ಸುಗಳನ್ನು ಒಟ್ಟು ಮಾಡಲು ಮಾಡಿದ ಕೆಲಸ ಮೆಚ್ಚುವಂತಹದ್ದು. ಚಕ್ರವರ್ತಿ ಹಾಗೂ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ, ಶುಭಾ ಪುಂಜಾ ಅವರ ನಡುವಿನ ಮನಸ್ತಾಪ ಸರಿ ಮಾಡುವ ಮೂಲಕ ಮತ್ತೆ ಬಿಗ್​ಬಾಸ್​ನಲ್ಲಿ ಮನರಂಜನೆ ತರುವ ಕೆಲಸ ಮಾಡಿದ್ದಂತಾಯ್ತು. ಕಿಚ್ಚು ಸುದೀಪ ಎಲ್ಲಾ ಮನಸ್ಸುಗಳನ್ನು ಒಟ್ಟುಗೂಡಿಸಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗ್ತಿರೋ ವಿಚಾರದ ಅಂದ್ರೆ ಎಲ್ಲರನ್ನೂ ಒಂದು ಮಾಡ್ತಿರೀ. ನೀವು ದರ್ಶನ್​ ಮನಸ್ತಾಪ ಬಿಟ್ಟು ಯಾವಾಗ ಒಂದಾಗ್ತೀರಿ..? ಎಂದು ಪ್ರಶ್ನೆ ಮಾಡ್ತಿದ್ದಾರೆ.

Related Posts

Don't Miss it !