ನಮ್ಮೂರ ರಸ್ತೆ ದೇವರಿಗೇ ಪ್ರೀತಿ..! ಜಸ್ಟ್ ಮಿಸ್ ಆಯ್ತು ಅನಾಹುತ..

ಮಂಡ್ಯ: ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯಲ್ಲಿ KSRTC ಬಸ್ ರಸ್ತೆಯಿಂದ ಜಾರಿ ನಿಂತಿರುವ ಘಟನೆ ನಡೆದಿದೆ. ಹೊನ್ನಾವರದ ಹಿರಿಕೆರೆ ಹಿಂಭಾಗದಲ್ಲಿ ರಸ್ತೆ ಕೆಸರಿನಿಂದ ತುಂಬಿದ್ದು, ಶ್ರವಣಬೆಳಗೊಳದಿಂದ ನಾಗಮಂಗಲಕ್ಕೆ ತೆರಳುತ್ತಿದ್ದ ಬಸ್ ಚಾಲಕನ ಜಾಣ್ಮೆಯಿಂದ ಪಲ್ಟಿಯಾಗುವುದು ತಪ್ಪಿದೆ. ವಿದ್ಯಾರ್ಥಿಗಳೂ ಸೇರಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಜರುಗಿದೆ. ಎದುರಾಗಿ ಬರುತ್ತಿದ್ದ ಕಾರಿಗೆ ರಸ್ತೆ ಬಿಡಲು ಪಕ್ಕಕ್ಕೆ ಸರಿದಾಗ ಹಿಂಬದಿಯ ಚಕ್ರಗಳು ಜಾರಿಕೊಂಡು ಹಳ್ಳಕ್ಕೆ ಹೋಗಿವೆ. ಕೂಡಲೇ ಬಸ್ ನಿಲ್ಲಿಸಿದ ಚಾಲಕ ಬಸ್ ಪಲ್ಟಿಯಾಗುವುದನ್ನು ತಡೆದಿದ್ದಾರೆ. ಮಂಡ್ಯ ವಿಭಾಗ ನಾಗಮಂಗಲ ಡಿಪೋಗೆ ಸೇರಿದ ಬಸ್ ಇದಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಕಾಲೇಜಿನಿಂದ ಬರುತ್ತಿದ್ದರು. ಜೊತೆಗೆ ಸಾಕಷ್ಟು ಪ್ರಯಾಣಿಕರೂ ಇದ್ದರು ಎನ್ನಲಾಗಿದೆ.

ಬಸ್ ಜಾರಿದ ಘಟನೆಗೆ ಕಾರಣ ತುಂಬಾ ಸರಳ..!

ನಾಗಮಂಗಲ – ಶ್ರವಣಬೆಳಗೊಳ ರಸ್ತೆಯಲ್ಲಿ ಹಾಸನ ಭಾಗದ ರಸ್ತೆ ತುಂಬಾ ಚೆನ್ನಾಗಿದೆ. ಆದರೆ ಮಂಡ್ಯ ಗಡಿಯಿಂದ ನಾಗಮಂಗಲದ ತನಕ ರಸ್ತೆ ತೀರ ಹದಗೆಟ್ಟಿತ್ತು. 2018ರಲ್ಲೇ ರಸ್ತೆ ವಿಸ್ತರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಆದರೆ ಕಾಮಗಾರಿ ಆರಂಭಕ್ಕೆ ವಿಳಂಬ ಮಾಡಿದ ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಕೆಲಸ ಮುಗಿಸುವ ಕೆಲಸ ಮಾಡಲೇ ಇಲ್ಲ. ಅಂತಿಮವಾಗಿ ಕುಮಾರಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೆಂಚಗೋನಹಳ್ಳಿಯಿಂದ ಬೆಟ್ಟದಹಳ್ಳಿ ತನಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಯ್ತು. ಆದರೆ ಅದ್ದಿಹಳ್ಳಿ ತನಕ ರಸ್ತೆಗೆ ಡಾಂಬಾರ್ ಹಾಕಿದ ಗುತ್ತಿಗೆದಾರ, ಉಳಿದ ರಸ್ತೆಯನ್ನು ಹಾಸನದ ಗಡಿ ಗ್ರಾಮ ಬೆಟ್ಟದಹಳ್ಳಿ ತನಕ ಅಗೆದು ಸುಮ್ಮನಾದ. ಕಳೆದ ಆರು ತಿಂಗಳಿಂದ ರಸ್ತೆ ಕಾಮಗಾರಿ ನಡೆಸದೆ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆ ತಿರುಗಿಯೂ ನೋಡಲಿಲ್ಲ.

ಇದನ್ನೂ ಓದಿ

Sumalatha, Madya MP

ಪ್ರತಿಭಟನೆ ಮಾಡಿದರು ಯಾರಿಗೂ ಮುಟ್ಟೋದಿಲ್ಲ..!

ಕಳೆದ ಎರಡ್ಮೂರು ತಿಂಗಳ ಹಿಂದೆ ಸುತ್ತಮುತ್ತಲಿನ ಗ್ರಾಮದ ಜನರು ಒಟ್ಟಿಗೆ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು. ಮಂಡ್ಯ ಜಿಲ್ಲೆಯ ಗಡಿಭಾಗದ ಹಳ್ಳಿಗಳು ಆಗಿರುವ ಕಾರಣ ಯಾವ ಮಾಧ್ಯಮದವರು ಈ ಕಡೆ ತಿರುಗಿ ನೋಡಲಿಲ್ಲ. ಹೀಗಾಗಿ ಇಲ್ಲಿನ ಯಾವುದೇ ಸಮಸ್ಯೆ ಬಗ್ಗೆ ಜನ ಬಾಯಿ ಬಡಿದುಕೊಂಡರೂ ಕೇಳುವವರು ಇಲ್ಲದಂತಾಗಿದೆ. ಇದೇ ಬೆಟ್ಟದಹಳ್ಳಿ ಗ್ರಾಮದ ಗಡಿಯಂಚಲ್ಲಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸುತ್ತಮುತ್ತಲ ಗ್ರಾಮಗಳ ಮನೆಗಳು ಬಿರುಕು ಬಿಡುತ್ತಿವೆ. ಆದರೂ ನಮ್ಮ ಸಂಸದೆ ಸುಮಲತಾ ಅವರು KRS ಸುತ್ತಮುತ್ತ ಮಾತ್ರವೇ ಗಮನ ಕೊಡುತ್ತಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಶ್ರವಣಬೆಳಗೊಳದಿಂದ ಕೇವಲ 9 ಕಿಲೋ ಮೀಟರ್ ದೂರವಿದ್ದು, ಏಕಶಿಲಾ ಜೈನ ಮೂರ್ತಿ ಬಾಹುಬಲಿಗೆ ತೊಂದರೆ ಆಗುವ ಸಾಧ್ಯತೆ ಇದ್ದರೂ ಯಾರೂ ಕೇರ್ ಮಾಡ್ತಿಲ್ಲ. ಸಂಸದರು ಆಯ್ಕೆಯಾದ ಬಳಿಕ ಒಮ್ಮೆ ಬಂದಿದ್ದು ಬಿಟ್ಟರೆ ಮತ್ತೆ ಈ ಕಡೆ ಬರುವುದು ಮುಂದಿನ ಚುನಾವಣೆಗೆ. ನಾಗಮಂಗಲ ಕ್ಷೇತ್ರದ ಶಾಸಕರಾದ ಸುರೇಶ್​ಗೌಡ ಕೂಡ ಈ ಭಾಗಕ್ಕೆ ಬರುವುದು ತೀರ ಅಪರೂಪ ಎನ್ನುತ್ತಾರೆ ಇಲ್ಲಿನ ಜನ.

ಇದನ್ನೂ ಓದಿ

SureshGowda, Nagamangala MLA

ಕೆರೆ ತುಂಬಿಸಲೂ ಜನಪ್ರತಿನಿಧಿಗಳ ನಿರ್ಲಕ್ಷ್ಯ..!

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ತೀರ ಹಿಂದುಳಿದಿರುವ ಪ್ರದೇಶ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಂಡ್ಯ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶ ಎನ್ನುವ ಕುಖ್ಯಾತಿ ಪಡೆದಿರುವ ನಾಗಮಂಗಲ ಅಭಿವೃದ್ಧಿಯಲ್ಲೂ ಹಿಂದೆ ಉಳಿದಿದೆ. ಜಿಲ್ಲಾ ಕೇಂದ್ರದಿಂದ ದೂರ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು. ನಾಗಮಂಗಲ – ಶ್ರವಣಬೆಳಗೊಳ ರಸ್ತೆ ಕಾಮಗಾರಿ ಆರಂಭವಾಗಿ ಮೂರ್ನಾಲ್ಕು ವರ್ಷಗಳೇ ಕಳೆದಿದೆ. ಬಿಜೆಪಿ ಸರ್ಕಾರದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಪಡೆಯುವುದು ಕಷ್ಟದ ಕೆಲಸವೇನು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ವೇಳೆ ಕುಮಾರಸ್ವಾಮಿ ಅಥವಾ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೂಲಕ ಸರ್ಕಾರವನ್ನು ಸಂಪರ್ಕ ಮಾಡಿದ್ರೆ ಎಲ್ಲಾ ಕೆಲಸವೂ ಸರಾಗವಾಗಿ ನಡೆಯುತ್ತೆ ಎನ್ನುವುದೂ ಕ್ಷೇತ್ರದ ಜನರಿಗೆ ಗೊತ್ತಿದೆ. ಇದೇ ಕ್ಷೇತ್ರದ ಬೇರೆ ಹೋಬಳಿಗಳ ಕೆರೆಗೆ ನೀರು ತುಂಬಿಸಿದ್ದಾರೆ. ಆದರೆ ಹಾಸನ ಗಡಿ ಭಾಗದಲ್ಲಿರುವ ಬಿಂಡಿಗನವಿಲೆ ಹೋಬಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇನ್ನೊಂದು ವಿಶೇಷ ಏನಂದರೆ ಇದೇ ಬಿಂಡಿಗನವಿಲೆ ಗ್ರಾಮದ ಉದಯ್ ಗರುಡಾಚಾರ್ ಬೆಂಗಳೂರಿನ ಚಿಕ್ಕಪೇಟೆ ಶಾಸಕರಾಗಿದ್ದಾರೆ. ಇನ್ನೂ ಇದೇ ಹೋಬಳಿಯ ಎಲ್.​ ಆರ್​ ಶಿವರಾಮೇಗೌಡರು ಶಾಸಕ ಸಂಸದರೂ ಆಗಿ ಅಧಿಕಾರ ನಡೆಸಿದ್ದಾರೆ. ಆದರೂ ಸೂಕ್ತ ರಸ್ತೆ ಇಲ್ಲ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಲ್ಲ. ಕಲ್ಲು ಗಣಿಗಾರಿಕೆಯನ್ನು ತಡೆಯುವ ಮನಸ್ಸೂ ಇಲ್ಲ. ಶಾಸಕರಂತೂ ಇದೇ ಕೊನೆಯ ಚುನಾವಣೆ ಎನ್ನುವಂತೆ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಎನಿಸುವಂತಿದೆ.

Related Posts

Don't Miss it !