ಇಬ್ಬರು ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆ.. ರಾಜ್ಯ ಸರ್ಕಾರವೇ ಕಾರಣ ಹೇಗೆ ಗೊತ್ತಾ..!?

ಬೆಂಗಳೂರು ಹೊರ ಹೊಲಯದ ಮಾದನಾಯಕನಹಳ್ಳಿಯಲ್ಲಿ ಇಬ್ಬರು ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಗೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. BMTCಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡ್ತಿದ್ದ ಪ್ರಸನ್ನಕುಮಾರ್ 2020ರ ಆಗಸ್ಟ್​ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಗಂಡನ ಸಾವಿನ ಬಳಿಕ ಕುಟುಂಬ ನಿರ್ವಹಣೆ ಬಗ್ಗೆ ದಿಕ್ಕು ತೋಚದಂತಾಗಿದ್ದ 40 ವರ್ಷದ ಮಹಿಳೆ ವಸಂತ ಇಬ್ಬರು ಮಕ್ಕಳ ಸಹಿತ ಆತ್ಮಹತ್ಯೆಗೆ ಶರಣಾಗಿದ್ದರು. ಈ ಆತ್ಮಹತ್ಯೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪಗಳು ಕೇಳಿಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜೀವನದಲ್ಲಿ ಎದುರಾದ ಸಂಕಷ್ಟಗಳ ಸರಮಾಲೆಯನ್ನು ಸವಿವರವಾಗಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಈ ಆತ್ಮಹತ್ಯೆಗೆ ರಾಜ್ಯ ಸರ್ಕಾರವೇ ಕಾರಣ..!

ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯ ಪ್ರಕೃತಿ ಬಡಾವಣೆಯಲ್ಲಿ ಆತ್ಮಹತ್ಯೆಗೆ ಶರಣಾದ ಕುಟುಂಬದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಗಂಡ ಸಾವನ್ನಪ್ಪಿದ ಬಳಿಕ ಕುಟುಂಬವೇ ಸಾವನ್ನಪ್ಪುವುದಕ್ಕೆ ಸರ್ಕಾರದ ಧೋರಣೆಯೇ ಕಾರಣ. ಅನುಕಂಪದ ಆಧಾರದ ಮೇಲೆ ಕೆಲಸ ಕೊಟ್ಟಿದ್ದರೆ ಇಂದಿನ ದುರ್ಘನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಇನ್ನೂ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ವೇತನ ಸರಿಯಾಗಿ ಬಿಡುಗಡೆ ಆಗಿರಲಿಲ್ಲ. ಜೀವನ ನಡೆಸುವುದು ಹೇಗೆ ಎನ್ನುವ ಆತಂಕದಲ್ಲೇ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಡುವ ಆಶ್ವಾಸನೆ ಹೊರಡಿಸಿದ್ದ ರಾಜ್ಯ ಸರ್ಕಾರ ಪರಿಹಾರ ಕೊಡುವುದರಲ್ಲೂ ಎಡವಟ್ಟು ಮಾಡಿದೆ. ಮನೆ ಸಾಲ ಸೇರಿದಂತೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದಿದ್ದಾರೆ.

Read this also;

5 ಲಕ್ಷ ಕೊಟ್ಟವರಿಗೆ 30 ಲಕ್ಷ ರೂಪಾಯಿ ಪರಿಹಾರ..!

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವಾರಿಯರ್ಸ್​ಗೆ ರಾಜ್ಯ ಸರ್ಕಾರ 30 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಆದರೆ ಬಿಎಂಟಿಸಿಯಲ್ಲಿ ಡ್ರೈವರ್​ ಕಂ ಕಂಡೆಕ್ಟರ್​ ಕೆಲಸ ಮಾಡ್ತಿದ್ದ ಪ್ರಸನ್ನ ಕುಮಾರ್​​ ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿದ್ದರೂ ದಾಖಲೆಗಳ ಪರಿಶೀಲನೆ ನೆಪದಲ್ಲಿ ಪರಿಹಾರ ವಿತರಣೆ ಮಾಡಿರಲಿಲ್ಲ ಎನ್ನಲಾಗಿದೆ. ಒಂದು ವೇಳೆ 30 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದ್ದರೆ, ಸಾಲ ತೀರಿಸಿ ಉಳಿದ ಅಲ್ಪಸ್ವಲ್ಪ ಹಣದಲ್ಲಿ ಜೀವನ ನೆಡೆಸುವ ಧೈರ್ಯ ಮಾಡುತ್ತಿದ್ದರು ಎನಿಸುತ್ತದೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 30 ಲಕ್ಷ ರೂಪಾಯಿ ಪರಿಹಾರ ನೇರವಾಗಿ ಕುಟುಂಬಸ್ಥರ ಖಾತೆಗೆ ಬರಬೇಕು ಎನ್ನುವುದಾದರೆ 5 ಲಕ್ಷ ರೂಪಾಯಿ ಲಂಚ ಕೊಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೀವನ ನಡೆಸುವುದು ಹೇಗಪ್ಪ ಎನ್ನುತ್ತಿದ್ದ ವಸಂತ 5 ಲಕ್ಷ ರೂಪಾಯಿ ಲಂಚ ಕೊಡುವುದಾದರು ಹೇಗೆ ಸಾಧ್ಯ..? ಲಂಚಕೋರ ಆಡಳಿತ ವ್ಯವಸ್ಥೆ ಇಡೀ ಕುಟುಂಬವನ್ನೇ ಸ್ವಾಹಃ ಮಾಡಿದೆ.

ಮಾನಸಿಕ ಚಿಕಿತ್ಸೆಯ ಅಗತ್ಯದ ಬಗ್ಗೆ ಯೋಚಿಸಬೇಕಿದೆ..!

ಮನೆಯಲ್ಲಿ ದುಡಿಯುತ್ತ ಇಡೀ ಕುಟುಂಬಕ್ಕೆ ಆಧಾರಸ್ತಂಭದ ರೀತಿ ಇರುವ ವ್ಯಕ್ತಿ ಏಕಾಏಕಿ ಈ ರೀತಿ ಕೊರೊನಾ ಸೋಂಕಿನಿಂದ ತೀರಿ ಹೋಗಿಬಿಟ್ಟರೆ ಸಾಕಷ್ಟು ಕುಟುಂಬಗಳು ಶಾಕ್​ಗೆ ಒಳಗಾಗುವುದು ಸಹಜ. ಸಂಬಂಧಿಕರು, ಪರಮಾಪ್ತರು ಎನಿಸಿಕೊಂಡವರು ಧೈರ್ಯ ಹೇಳಬೇಕು. ನಿನ್ನ ಮುಂದಿನ ಜೀವನದ ಜೊತೆಗೆ ನಾವು ಕೈ ಜೋಡಿಸುತ್ತೇವೆ ಎನ್ನುವ ಸಮಾಧಾನ ಮಾತುಗಳನ್ನಾದರೂ ಹೇಳಬೇಕು. ಆದರೆ ಆ ರೀತಿಯ ಯಾವುದೇ ಬೆಂಬಲ ನನಗೆ ಸಿಗಲಿಲ್ಲ ಎನ್ನುವುದೇ ವಸಂತ ಅವರ ಪ್ರಮುಖ ಆರೋಪವಾಗಿತ್ತು. ಹೀಗೆ ಖಿನ್ನತೆ ಸಮಸ್ಯೆಯಿಂದ ಬಳಲುವ ಕುಟುಂಬಸ್ಥರಿಗೆ ಮಾನಸಿಕ ತಜ್ಞರಿಂದ ಸಲಹೆ ಸೂಚನೆಗಳನ್ನು ಕೊಡಿಸಬೇಕು. ಮಾನಸಿಕ ತಜ್ಞರು ಕೌನ್ಸೆಲಿಂಗ್​ ಮಾಡಿದ ಬಳಿಕ ಬದುಕುವ ಚೈತನ್ಯ ಸಿಗಲಿದೆ ಎನ್ನುತ್ತಾರೆ ತಜ್ಞರು. ಸರ್ಕಾರ ಪರಿಹಾರ ಕೊಡುವ ಕೆಲಸ ಶುರು ಮಾಡಿದೆ. ಇದರ ಜೊತೆಗೆ ಮಾನಸಿಕ ತಜ್ಞರು ಅಥವಾ ತಜ್ಞರಿಂದ ಕೌನ್ಸೆಲಿಂಗ್​ ಮಾಡಿಸುವುದು ಸೂಕ್ತ.

Read this also;

ಪ್ರಸನ್ನ ಜಮೀನಿನಲ್ಲೇ ಮೂವರ ಅಂತ್ಯಕ್ರಿಯೆ..!

40 ವರ್ಷದ ವಸಂತ, 15 ವರ್ಷದ ಮಗ ಯಶ್ವಂತ್ ಹಾಗೂ 6 ವರ್ಷದ ಮಗಳು ನಿಶ್ಚಿತರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಆ ಬಳಿಕ ಮೃಹದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಯ್ತು. ಶನಿವಾರ ಸಂಜೆ ವೇಳೆಗೆ ಮೈಸೂರಿನ ಸಾಲಿಗ್ರಾಮ ಬಳಿಯ ಬಳ್ಳೂರು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯ್ತು. ಆದರೆ ಪರಿಹಾರವಿಲ್ಲ, ಸಂಬಂಧಿಕರ ಬೆಂಬಲವಿಲ್ಲದೆ ಇಡೀ ಕುಟುಂಬವೇ ಸರ್ವನಾಶವಾಗಿದೆ. ಪರಿಹಾರ ಪಡೆಯಲು ಅಧಿಕಾರಿಗಳು 5 ಲಕ್ಷ ರೂಪಾಯಿ ಲಂಚ ಕೇಳುತ್ತಾರೆ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದಂತೆ ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಬಹುದು.

Related Posts

Don't Miss it !