ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ.. ಬದುಕಬೇಕಿದ್ದರೆ ನೀವು ಹೀಗಿರಬೇಕು..

ರಾಜ್ಯದಲ್ಲಿ ಧರ್ಮ ಸಂಘರ್ಷ ಶುರುವಾಗಿದೆ. ಹಿಂದೂಗಳು ಹಾಗು ಮುಸಲ್ಮಾನ ಸಮುದಾಯದ ನಡುವೆ ಪರೋಕ್ಷವಾಗಿ ಬೆಂಕಿ ಹಚ್ಚುವ ಕೆಲಸವನ್ನು ಪಟಭದ್ರ ಹಿತಾಸಕ್ತಿ ಸೂಕ್ತ ರೀತಿಯಲ್ಲಿ ಮಾಡುತ್ತಿದೆ. ರಾಜ್ಯ ಸರ್ಕಾರ ಹಿಂದೂಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತದೆ ಪರಿಹಾರದ ಮೊತ್ತವನ್ನೂ ಕೊಡುತ್ತದೆ. ಆದರೆ ಮುಸಲ್ಮಾನ ಸಮುದಾಯದ ಯುವಕರು ಕೊಲೆಯಾದರೆ ತಿರುಗಿಯೂ ನೋಡದ ವಾತಾವರಣ ಸೃಷ್ಟಿಯಾಗಿದೆ. ಒಂದು ಸಮುದಾಯಕ್ಕೆ ಮಾತ್ರ ಸರ್ಕಾರ ಸೀಮಿತವಾಗಿದ್ಯಾ..? ಎನ್ನುವ ಪ್ರಶ್ನೆಯನ್ನು ಜನರೇ ಕೇಳುವಂತಾಗಿದೆ. ಆದರೆ ಹಿಂದೂಗಳು, ಅದರಲ್ಲೂ ಬಿಜೆಪಿ ಪಕ್ಷವನ್ನೇ ಆರಾಧಿಸುವ ಕಟ್ಟರ್​ ಹಿಂದುತ್ವವಾದಿಗಳ ರಕ್ಷಣೆಯಲ್ಲೂ ಸರ್ಕಾರ ವಿಫಲವಾಗಿದೆ ಎನ್ನುವುದು ಪ್ರವೀಣ್​ ನೆಟ್ಟಾರು ಕೊಲೆಯಾದ ಬಳಿಕ ಎಲ್ಲರಿಗೂ ಮನವರಿಕೆ ಆಗಿದೆ. ಆದರೆ ಕೊಲೆಗಳನ್ನು ಮಾಡುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ನಡುವೆ ನಮ್ಮ ಮಕ್ಕಳನ್ನ ನಾನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಯಾವುದೇ ಸಮುದಾಯದ ಯುವಕನ ಕೊಲೆ ನಡೆದಾಗಲೂ ಆ ಕುಟುಂಬಸ್ಥರ ಕಣ್ಣೀರಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ, ದುಃಖ ಎಲ್ಲರಿಗೂ ನೋವನ್ನೇ ತರಿಸುತ್ತದೆ.

ಧರ್ಮದ ಅಂಧಕಾರದಲ್ಲಿ ಮುಳುಗಿದವರಿಂದ ಮಾತ್ರ ದುಷ್ಕೃತ್ಯ..!

ಹಿಂದೂ, ಕ್ರೈಸ್ತ, ಮುಸಲ್ಮಾನ ಯಾವುದೇ ಧರ್ಮಕ್ಕೆ ಸೇರಿದ್ದರೂ ತನ್ನ ಧರ್ಮವನ್ನು ಆಚರಣೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಆ ಧಾರ್ಮಿಕ ಸ್ವಾತಂತ್ರ್ಯ ಬೇರೊಬ್ಬರ ಧಾರ್ಮಿಕ ಭಾವನೆಗೆ ಅಡ್ಡಿಯನ್ನು ಉಂಟು ಮಾಡಬಾರದು ಎನ್ನುತ್ತದೆ ಸಂವಿಧಾನ. ಆದರೆ ಆದರೆ ಧರ್ಮಗಳ ಆಧಾರದಲ್ಲಿ ಜನರನ್ನು ಇಬ್ಭಾಗ ಮಾಡುವ ಪ್ರವೃತ್ತಿ ಶುರುವಾಗಿದೆ. ಇದು ರಾಜಕಾರಣಿಗಳಿಗೆ ಅನುಕೂಲ ಆಗಬಹುದು. ಆದರೆ ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಪರಿಪಾಠ ರಾಜಕಾರಣಿಗಳದ್ದು. ಇದನ್ನು ಜನ ಅರ್ಥ ಮಾಡಿಕೊಂಡು ಜನರು ತಮ್ಮ ತಮ್ಮಲ್ಲೇ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕಿದೆ. ಹಿಂದೂ ಯುವಕರು ಮಸೂದ್​ನನ್ನು ಕೊಲೆ ಮಾಡಿದ್ದರು ಎನ್ನುವ ಆರೋಪ ಇದೆ. ಅದು ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಘಟನೆ ಎನ್ನುವುದು ಸ್ಥಳೀಯರು ಹೇಳುವ ಮಾತು. ಅದಕ್ಕೆ ಪ್ರತೀಕಾರವಾಗಿ ಪ್ರವೀಣ್​ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಈ ಎರಡೂ ಕುಟುಂಬಗಳಲ್ಲೂ ನೋವಿನ ಸಾಮ್ಯತೆ ಇದೆ. ಈಗ ಫಾಜಿಲ್​ನನ್ನು ಕೊಲೆ ಮಾಡಲಾಗಿದೆ. ಈ ಮೂರು ಕುಟುಂಬಗಳ ಒಂದೇ ಮಾತು, ನಮಗೆ ಆದ ನೋವು ಇನ್ಯಾರಿಗೂ ಬಾರದಿರಲಿ ಎನ್ನುವುದು. ಹಾಗಿದ್ದ ಮೇಲೆ ಕೊಲೆಗೆ ಪ್ರಚೋದನೆ ಕೊಡುತ್ತಿರುವವರು ಯಾರು..? ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಕೊಲೆಗಳ ಸರಣಿ ಮುಂದುವರಿಯುತ್ತಾ..? ಇಷ್ಟಕ್ಕೆ ನಿಲ್ಲುತ್ತಾ..?

ಯಾವುದೇ ಧರ್ಮದ ಯುವಕರ ಕೊಲೆ ನಡೆದರೂ ಯಾವುದೇ ರಾಜಕಾರಣಿಗಳಿಗೆ ಆಗಬೇಕಿರುವುದು ಏನೂ ಇಲ್ಲ. ಕೊಲೆಗಳು ನಡೆದಷ್ಟೂ ಸಮುದಾಯಗಳ ನಡುವೆ ದ್ವೇಷ ಭಾವನೆ ಹೆಚ್ಚಾಗುತ್ತದೆ. ಮತಗಳು ಇಬ್ಭಾಗ ಆಗುತ್ತವೆ. ಒಂದು ರಾಜ್ಯದ ಸಿಎಂ ಭೇಟಿ ಕೊಟ್ಟ ದಿನವೇ ಅದೇ ನಗರದಲ್ಲಿ ಕೊಲೆ ಮಾಡುವುದು ಎಂದರೆ ಹುಡುಗಾಟದ ಮಾತಲ್ಲ. ಒಂದು ಸಮುದಾಯ ಓಲೈಕೆ ಮಾಡುವುದಕ್ಕೆ ಇನ್ನೊಂದು ಧರ್ಮದ ಯುವಕನ ಬಲಿ ಪಡೆಯುವುದು ಸೂಕ್ತವೂ ಇಲ್ಲ. ತಮ್ಮ ಮಕ್ಕಳನ್ನು ಕಳೆದುಕೊಂಡ ನೋವು ಆ ಕುಟುಂಬಗಳಿಗೆ ಮಾತ್ರವೇ ಗೊತ್ತಿರುತ್ತದೆ. ಇಂದು ಶುಕ್ರವಾರ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆಗೆ ಸೇರುವುದು ಸಾಮಾನ್ಯ. ಯಾವುದೇ ಧರ್ಮ ಮಾನವನನ್ನು ಕೊಲ್ಲುವುದು ಸರಿ ಎಂದು ಹೇಳುವುದಿಲ್ಲ. ಆದರೂ ಕೆಲವು ಮತಾಂಧರು ತಮ್ಮ ಪ್ರತಿಷ್ಟೆಗಾಗಿ ಕೊಲೆಗೆ ಪ್ರಚೋದನೆ ನೀಡಬಹುದು. ಇಂದು ಈತ, ನಾಳೆ ಇನ್ನೊಬ್ಬ, ಸತ್ತವನ ಮನೆಯ ನೋವನ್ನು ಮತ್ತೊಂದು ಮನೆಗೆ ವರ್ಗಾಯಿಸುವ ಪರಿಪಾಠ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾರದು. ಕೊಲೆಗಳ ಸರಣಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದ್ದು, ಎಲ್ಲಾ ಮಂದಿರ, ಮಸೀದಿಗಳ ಸುತ್ತಮುತ್ತ ಬಿಗಿ ಬಂದೋಬಸ್ತ್​ ಕೈಗೊಳ್ಳಲು ಪೊಲೀಸ್​ ಇಲಾಖೆ ಸೂಚನೆ ರವಾನಿಸಿದೆ ಎನ್ನಲಾಗ್ತಿದೆ.

ಇದನ್ನು ಓದಿ:ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಕೊಲೆ, ರಾಜ್ಯದಲ್ಲಿ ಆತಂಕದ ಪರಿಸ್ಥಿತಿ..

ಮನುಷ್ಯರಾಗಿ ಬದುಕೋಣ.. ಮುಂದಿನ ದಿನಗಳಲ್ಲಿ ಹೀಗೆ ಮಾಡೋಣ..!

ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗಿದ್ದು, ಎಲ್ಲಿ ಏನಾಗುತ್ತದೋ ಎನ್ನುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ವಲ್ಪ ದಿನಗಳ ಮಟ್ಟಿದೆ ಒಂದು ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಕ್ಕೆ ಮತ್ತೊಂದು ಸಮುದಾಯದ ಜನರು ತಡರಾತ್ರಿ ಓಡಾಡುವುದನ್ನು ಮೊದಲು ನಿಲ್ಲಿಸಬೇಕು. ಒಂದು ವೇಳೆ ರಸ್ತೆಯಲ್ಲಿ ಮುಖಾಮುಖಿ ಆದರೂ ತಪ್ಪು ಯಾರದ್ದೇ ಆಗಿರಲಿ ಸಂಘರ್ಷ ತಡೆಯಲು ಕ್ಷಮೆ ಕೇಳುವುದು ಉತ್ತಮ. ಕಾರಣವೇನೆಂದರೆ ಎದುರಾಳಿ ಯಾವ ಗಾಂಜಾ ಮತ್ತಿನಲ್ಲಿ ತೇಲುತ್ತಿರುತ್ತಾನೋ..? ಧರ್ಮದ ಅಂಧಕಾರದಲ್ಲಿ ಮುಳುಗಿರುತ್ತಾನೋ..? ಯಾರಿಗೆ ಗೊತ್ತು..? ಇನ್ನು ಸಾಮಾಜಿಕ ಜಾಲತಾಣದಿಂದ ಕೆಲವು ದಿನಗಳ ಮಟ್ಟಿಗೆ ದೂರು ಉಳಿಯುವುದು ಉತ್ತಮ. ಯಾವುದೇ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಅಥವಾ ಕಮೆಂಟ್​ಗಳನ್ನು ಮಾಡದಿದ್ದರೆ ಸಮಾಜಕ್ಕೆ ನೀವು ಕೊಡುವ ಆಗಿರುತ್ತದೆ. ಯಾವ ವಾಕ್ಯ ಯಾರನ್ನು ಪ್ರಚೋದನೆಗೆ ಗುರಿ ಮಾಡುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇನ್ನೂ ಬಾರ್, ರೆಸ್ಟೋರೆಂಟ್‌ನಲ್ಲಿ ಕುಳಿತು ಬೇಡವಾದ ಚರ್ಚೆಗೆ ಬ್ರೇಕ್ ಹಾಕುವುದು ಉತ್ತಮ. ಬಡವರ ಮಕ್ಕಳನ್ನು ಬಲಿ ಕೊಲಿ ಕೊಟ್ಟು ರಾಜಕಾರಣ ಮಾಡುವ ರಾಜಕಾರಣಿಗಳು ಮೇಲ್ನೋಟಕ್ಕೆ ಮಾತ್ರ ದ್ವೇಷ ಕಾರುತ್ತಾರೆ. ಆ ಬಳಿಕ ಎದುರಾಳಿ ಪಕ್ಷವೇ ಇರಲಿ, ತತ್ವ ಸಿದ್ಧಾಂತ ಬೇರೆಯೇ ಆಗಿರಲಿ ಸಂಬಂಧ ಮಾಡಿಕೊಂಡು ಕೈಕುಲುಕುತ್ತಾ ತಾಂಬೂಲ ಸವಿಯುತ್ತಾರೆ. ಸಾಯುವುದು ಧರ್ಮಾಂಧರಾಗಿರುವ ಬಡವರ ಮಕ್ಕಳು ಎನ್ನುವುದನ್ನು ಯಾರೂ ಮರೆಯಬಾರದು. ಬದಲಾಗೋಣ, ಮನುಷತ್ವದ ಆಧಾರದಲ್ಲಿ ಬದುಕೋಣ. ಜೀವ ಕಳೆದುಕೊಂಡ ಕುಟುಂಬಕ್ಕೆ ಯಾವುದೇ ಧರ್ಮ ಮರು ಜೀವ ನೀಡಲಾರದು.

Related Posts

Don't Miss it !