CM ಯಡಿಯೂರಪ್ಪಗೆ ವರ್ಕೌಟ್ ಆಯ್ತಾ ಕಾವಿ ಬೆಂಬಲ..!?

ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ದೆಹಲಿಯಿಂದ ವಾಪಸ್ ಆದ ಬಳಿಕ ಯತ್ನಾಳ್ ಒಂದು ಬಾಂಬ್ ಸಿಡಿಸಿದ್ದರು. ಆ ಬಾಂಬ್ ಈಗ ಸ್ಫೋಟವಾಗಿದೆ. ದೆಹಲಿಯ ಹೈಕಮಾಂಡ್ ನಾಯಕರು ಕುರ್ಚಿ ಬಿಟ್ಟು ಇಳಿಯಲು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅದೇ ಕಾರಣಕ್ಕಾಗಿ ಬಿ.ವೈ ವಿಜಯೇಂದ್ರ ಮಠಗಳ ಬಾಗಿಲು ತಟ್ಟುತ್ತಿದ್ದಾರೆ. ಮಠದ ಸ್ವಾಮೀಜಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಆ ಸುದ್ದಿ ಈಗ ಸತ್ಯವಾಗಿದೆ. ಬಿಜೆಪಿ‌ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ಕೊಟ್ಟ ಬಳಿಕ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ನೇರವಾಗಿ ವಾಗ್ದಾಳಿ ಶುರುವಾಗಿದೆ. ಇದರ ಬೆನ್ನಲ್ಲೇ ಹಲವಾರು ಸ್ವಾಮೀಜಿಗಳು ಬಿ.ಎಸ್ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಮಠಾಧೀಶರ ಧರ್ಮ ಪರಿಷತ್ ವತಿಯಿಂದ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಲಾಗಿದೆ. ಬಳ್ಳಾರಿ, ಹೊಸಪೇಟೆ, ದಾವಣಗೆರೆ ಜಿಲ್ಲೆಗಳ ವಿವಿಧ ಮಠಗಳಿಗೆ ಸೇರಿದ ಹತ್ತಕ್ಕೂ ಹೆಚ್ಚು ಸ್ವಾಮಿಗಳಿಂದ ಬೆಂಬಲ ಸೂಚಿಸಿದ್ದಾರೆ. ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ಅನ್ನೋದು ಹಲವರ ಪ್ರಶ್ನೆಗಳಿವೆ. ಆದ್ರೆ ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ದಾರಿಗೆ ಕರೆದುಕೊಂಡು ಬರೋದು ಸ್ವಾಮೀಜಿಗಳು. ರಾಜಕೀಯ ದಾರಿ ತಪ್ಪಿದಾಗ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗೋದು ಸ್ವಾಮೀಜಿಗಳು. ಹೀಗಾಗಿ ನಾವೀಗ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಲೇಬೇಕಿದೆ ಎಂದು ಕಲ್ಯಾಣ ಸ್ವಾಮೀಜಿ ಹೇಳಿದರು.

ಕೊರೊನಾ ಸೋಂಕಿನ ಸಂದರ್ಭದಲ್ಲಿ
ನಾಯಕತ್ವ ಬದಲಾವಣೆ ಬೇಕಿತ್ತಾ..? ಕೊರೊನಾ ನಿರ್ವಹಣೆಯನ್ನು ಯಡಿಯೂರಪ್ಪ ಯಶಸ್ವಿಯಾಗಿ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಕೆಲವರ ಕೂಗಿಗೆ ಅರುಣ್‌ ಸಿಂಗ್ ಸ್ಪಂದಿಸಬಾರದು, ನಾಯಕತ್ವ ಬದಲಾವಣೆ ಕೈಬಿಡಬೇಕು. ಎರಡು ವರ್ಷ ಯಡಿಯೂರಪ್ಪ ಅವರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವೀರಶೈವ ನಾಯಕರ ಆಳ್ವಿಕೆಯಲ್ಲಿ ಪ್ರತಿ ಬಾರಿ ಈ ರೀತಿಯ ತೊಂದರೆ ನೀಡುತ್ತ ಬಂದಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ವೀರಶೈವ ಸಮಾಜದ ಈವರೆಗೂ ಅಗಿರೋ ಮುಖ್ಯಮಂತ್ರಿಗಳಿಗೆ ತೊಂದರೆ ನೀಡಿದ್ದಾರೆ. ವೀರಶೈವರಿಗೆ ತೊಂದರೆ ಕೊಟ್ಟಾಗ ಬೇರೆ ಪಕ್ಷ ಅಧಿಕಾರಕ್ಕೆ ಬಂದಿರೋ ಉದಾಹರಣೆ ಇದೆ. ಎಲ್ಲರೂ ಮುಖ್ಯಮಂತ್ರಿ ಅಭ್ಯರ್ಥಿಗಳೇ ಆದರೆ ಯಡಿಯೂರಪ್ಪ ಯಾರು ಆಗಲ್ಲ. ಯಡಿಯೂರಪ್ಪ ಜೊತೆ ಸ್ವಾಮೀಜಿಗಳಷ್ಟೇ ಅಲ್ಲ ರಾಜ್ಯದ ಎಲ್ಲ ಸಮುದಾಯದ ನಾಯಕರು ಯಡಿಯೂರಪ್ಪ ಜೊತೆಗೆ ಇದ್ದಾರೆ ಎಂದಿದ್ದಾರೆ.

ಬಳ್ಳಾರಿಯಲ್ಲಿ ಶ್ರೀಶೈಲ ಜಗದ್ಗುರುಗಳು ಮಾತನಾಡಿ, ಪ್ರಸ್ತುತ ರಾಜಕೀಯ ವಿದ್ಯಮಾನ ಮಠಾಧಿಶರು ಮಾತನಾಡಬೇಕೋ ಬೇಡ್ವೋ
ಅನ್ನೋ ಗೊಂದಲ ಇದೆ. ಅದರೆ ಜನರ ಭಾವನೆಯನ್ನು ಮಾತ್ರ ನಾವು ಹೇಳೋದು ಅನಿವಾರ್ಯವಾಗಿದೆ. ಕೊರೊನಾದಿಂದ ಜನರು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ. ಇಂತಹ ವೇಳೆಯಲ್ಲಿ ಅಧಿಕಾರಕ್ಕಾಗಿ ಕಿತ್ತಾಡೋದು ಜಗಳವಾಡೋದು ಸರಿಯಲ್ಲ. ಜನರ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಕೆಟ್ಟ ಭಾವನೆ ಬರುತ್ತಿದೆ. ನಾಯಕತ್ವ ಬದಲಾವಣೆ ಈಗ ಸೂಕ್ತವಲ್ಲ ಕೊರೊನಾ ನಿವಾರಣೆಗೆ ಯಡಿಯೂರಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ. ಯಾವ ಸರ್ಕಾರ ಮಾಡದ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ. ರಾಜಕಾರಣಿಗಳು ಕೇಂದ್ರದಿಂದ ಹಣ ಪಡೆಯಲು ಹೋರಾಟ ಮಾಡಬೇಕು. ಅದನ್ನು ಬಿಟ್ಟು ಅಧಿಕಾರಕ್ಕಾಗಿ ಕಿತ್ತಾಡಬಾರದು ಎಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟಚ್ ಮಾಡಿದ್ರೆ ಕರ್ನಾಟಕಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕಲಬುರಗಿಯಲ್ಲಿ ಶ್ರೀಶೈಲಂನ ಸಾರಾಂಗ ಪೀಠಾಧಿಪತಿ ಶ್ರೀ ಸಾರಂಗಧರೇಶ್ವರ ಮಹಾಸ್ವಾಮಿ ಎಚ್ಚರಿಸಿದ್ದಾರೆ. ಯಡಿಯೂರಪ್ಪ ಅವರು ಸರ್ವ ಜನಾಂಗದ ನಾಯಕರು 40 ವರ್ಷಗಳ ಕಾಲ ಸತತ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಸಿಎಂ ಸೀಟ್‌ನಿಂದ ಕೆಳಗೆ ಇಳಿದರೆ ಬಿಜೆಪಿ ಸರ್ವನಾಶವಾಗೋದು ಗ್ಯಾರಂಟಿ ಎಂದಿದ್ದಾರೆ.

ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಮಾಡೋ ಚಿಂತನೆ ಇಲ್ವಂತೆ..!?

ಅರುಣ್ ಸಿಂಗ್ ಅವರು ಸಭೆ ಬಳಿಕ ಬಹಿರಂಗವಾಗಿ ಸಿಎಂ ಬದಲಾವಣೆ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಎಂದಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಮುಗಿಸಿ ಹೊರಬಂದ ಸಿಎಂ ಬಿ.ಎಸ್ ಯಡಿಯೂರಪ್ಪ ವಿಕ್ಟರಿ‌ ಸಿಂಬಲ್ ತೋರಿಸುತ್ತ ನಗುಮೊಗದಲ್ಲಿ ಹೊರಗೆ ಬಂದಿದ್ದಾರೆ. ಅಂದರೆ ಬಿಜೆಪಿ‌ ಹೈಕಮಾಂಡ್ ಮನವೊಲಿಕೆ ಮಾಡುವಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಕಾವಿ ಪ್ರಭಾವ ಕೆಲಸ ಮಾಡಿತೇ ಎನ್ನುವ ಅನುಮಾನ ಮೂಡಿಸುತ್ತಿದೆ.

Related Posts

Don't Miss it !