ಸಿನಿಮಾ ಶೂಟಿಂಗ್​ ವೇಳೆ ಅವಘಡ ಹೇಗಾಯ್ತು..? ನಟ ಅಜೆಯ್​ ಏನ್ಮಾಡಿದ್ರು..?

ರಾಮನಗರ ಜಿಲ್ಲೆ ಬಿಡದಿ ಬಳಿಯ ಜೋಗರಪಾಳ್ಯದಲ್ಲಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ನಟ ಅಜಯ್ ರಾವ್, ನಟಿ ರಚಿತಾ ರಾಮ್ ನಟನೆಯ ಚಿತ್ರ  ಇದಾಗಿದ್ದು, 28 ವರ್ಷದ ಸಾಹಸ ಕಲಾವಿದ  ವಿವೇಕ್ ವಿದ್ಯುತ್​ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ವಿವೇಕ್ ಜೊತೆಗಿದ್ದ ಮತ್ತೋರ್ವ ಕಲಾವಿದನನ್ನು ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ. ಕ್ರೇನ್​ ಮೂಲಕ ಮೇಲಕ್ಕೆ ಎತ್ತುವ ವೇಳೆ 11 ಕೆವಿ ವಿದ್ಯುತ್ ಲೈನ್ ತಗುಲಿ ಸಾವು ಸಂಭವಿಸಿದೆ. ಮೂಲತಃ ತಮಿಳುನಾಡು ರಾಜ್ಯದ ವಿವೇಕ್ ಬೆಂಗಳೂರಿನಲ್ಲಿ ಪಾರ್ಟ್​ ಟೈಂ ಕೆಲಸ ಮಾಡುತ್ತಿದ್ದ. ಅವಕಾಶ ಸಿಕ್ಕಾಗ ಸಾಹಸ ದೃಶ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಮೃತದೇಹ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್, ಡಿವೈಎಎಸ್​ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ನಿರ್ದೇಶಕ ಶಂಕರ್ ರಾಜ್​​, ಸ್ಟಂಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮುನಿಯಪ್ಪ, ಜಮೀನು ಮಾಲೀಕ ಪುಟ್ಟರಾಜು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಮೃತ ಯುವಕ ವಿವೇಕ್

ಜ್ವರ ಇದ್ದರೂ ಶೂಟಿಂಗ್​ಗೆ ಒತ್ತಾಯ..!

ಫೈಟರ್ ವಿವೇಕ್​ ಕುಟುಂಬಸ್ಥರು ಹಾಗೂ ಸ್ನೇಹಿತರು ಲವ್ ಯೂ ರಚ್ಚು ಚಿತ್ರತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಚಿತ್ರದ ಶೂಟಿಂಗ್ ವೇಳೆಯೇ ದುರ್ಘಟನೆ ನಡೆದಿದ್ದರೂ ಕನಿಷ್ಟ ಪಕ್ಷ ಆಸ್ಪತ್ರೆ ಬಳಿ ಯಾರೊಬ್ಬರು ಬಂದು ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ರು. ವಿವೇಕ್​ ತಾಯಿ ಸೆಲ್ವಿ ಮಾಹಿತಿ ನೀಡಿದ್ದು, ಕಳೆದ ನಾಲ್ಕೈದು ದಿನಗಳಿಂದ ಜ್ವರ ಇತ್ತು. ನಾನು ಶೂಟಿಂಗ್​ಗೆ ಬರಲ್ಲ‌ ಎಂದರೂ ಬಲವಂತವಾಗಿ ಕರೆಸಿಕೊಂಡಿದ್ದಾರೆ. ನಮ್ಮ ಜೀವನಕ್ಕೆ ಅವನೇ ಆಧಾರವಾಗಿದ್ದ. ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಕಾರಣಕ್ಕೆ ಶೂಟಿಂಗ್​ಗೆ ಹೋಗ್ತಿದ್ದ ಎಂದು ಕಣ್ಣೀರು ಸುರಿಸಿದ್ದಾರೆ. ವಿವೇಕ್ ಸಾವಿಗೆ ಚಿತ್ರತಂಡವೇ ಕಾರಣ ಆಗಿದೆ ಎಂದು ಸ್ನೇಹಿತರು ದೂರಿದ್ರು.

ಕುಟುಂಬದೊಂದಿದೆ ಮೃತ ವಿವೇಕ್

ಕ್ರೇನ್​ ಮಣ್ಣಲ್ಲಿ ಸಿಲುಕಿ ಘಟನೆ ನಡೀತು..!

ಆರ್ ಆರ್ ನಗರ ಶವಾಗಾರಕ್ಕೆ ಭೇಟಿ ನೀಡಿ ರಾಮನಗರ DySP ಮೋಹನ್ ಕುಮಾರ್ ಹಾಗೂ ಬಿಡದಿ  ಇನ್ಸ್​ಪೆಕ್ಟರ್​ ಪ್ರಕಾಶ್‌ ಪರಿಶೀಲನೆ ನಡೆಸಿದ್ರು. ಲವ್​ ಯೂ ರಚ್ಚು ಸಿನಿಮಾ ಚಿತ್ರೀಕರಣಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಸಾವಿನ ಬಗ್ಗೆ ಸ್ಥಳದಲ್ಲೇ ಇದ್ದ ಮೃತ ವಿವೇಕ್ ಚಿಕ್ಕಪ್ಪ ಸುಬ್ರಮಣಿ ಮಾಹಿತಿ ನೀಡಿದ್ದು, ಕ್ರೇನ್ ಮಣ್ಣಲ್ಲಿ ಸಿಲುಕಿದ್ದರಿಂದ ಅನಾಹುತ ಆಗಿದೆ. ಕ್ರೇನ್ ಮಣ್ಣಲ್ಲಿ ಸಿಲುಕಿದ್ದರಿಂದ ವಿವೇಕ್ ಹಾಗೂ ರಂಜಿತ್​ಗೆ ಹೈಟೆನ್ಷನ್ ವೈರ್ ಟಚ್​ ಆಯ್ತು ಎಂದಿದ್ದಾರೆ. ಶೂಟಿಂಗ್ ಸ್ಪಾಟ್​ನಲ್ಲಿ  ಹೀರೋ ಅಜಯ್ ರಾವ್, ಸ್ಟಂಟ್ ಮಾಸ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಇದ್ರು. ಕಳೆದ 4 ದಿನಗಳಿಂದ ಶೂಟಿಂಗ್ ಮಾಡ್ತಿದ್ವಿ. 10 ಜನ ಸ್ಟಂಟ್ ಫೈಟರ್ಸ್ ಕೆಲಸ ಮಾಡ್ತಿದ್ವಿ, ವಿವೇಕ್ ನನ್ನ ಅಣ್ಣನ ಮಗನಾಗಿದ್ದು, ನನ್ನ ಜೊತೆ ಶೂಟಿಂಗ್​ಗೆ ಬರ್ತಿದ್ದ ಎಂದಿದ್ದಾರೆ.

ಸ್ಥಳದಲ್ಲೇ ಇದ್ದರೂ ಸಹಾಯಕ್ಕೆ ಬರಲಿಲ್ಲ ನಟ..!

ಮೃತ ಯುವಕ ವಿವೇಕ್​ ಜೊತೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಫೈಟರ್ ರಂಜಿತ್ ರಾತ್ರಿ ಮಾತನಾಡಿದ್ದು, ಬೆಳಗ್ಗೆ ಒಮ್ಮೆ ಕ್ರೈನ್ ಆಪರೇಟರ್ ಮರಕ್ಕೆ ಟಚ್ ಮಾಡಿದ್ದ, ಆಗಲೇ ಅವನನ್ನು ಎಚ್ಚರಿಸಿದ್ವಿ. ಫೈಟ್ ಮಾನಿಟರ್ ಎಲ್ಲಾ ಚೆನ್ನಾಗೆ ನಡಿತಿತ್ತು. ಕ್ರೈನ್ ಆಪರೇಟರ್ ಮಿಸ್ಟೇಕ್​​ನಿಂದ ಹೈಟೆನ್ಷನ್ ವೈರ್ ಟಚ್ ಆಯ್ತು. ಫೈಟ್ ಮಾಸ್ಟರ್ ತಪ್ಪೇನು ಇಲ್ಲ  ಎಂದಿದ್ದಾರೆ. ಈ ಘಟನೆ ನಡೆದಾಗ ನಟ ಅಜಯ್ ರಾವ್ ಸ್ಥಳದಲ್ಲೇ ಇದ್ದರು. ಕೇವಲ 10 ರಿಂದ 15 ಮೀಟರ್ ದೂರದಲ್ಲಿ ಇದ್ದರು. ನಾನು ಒದ್ದಾಡುವಾಗ ಕೊನೆ ಪಕ್ಷ ಸಹಾಯಕ್ಕೂ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅನುಮತಿ ಪಡೆಯದೇ ಚಿತ್ರೀಕರಣ..!

ರಾಮನಗರ ಎಸ್​ಪಿ ಎಸ್ ಗಿರೀಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ. ಕ್ರೇನ್ ಚಾಲಕ ಮುನಿಯಪ್ಪ ಜಮೀನು ಮಾಲೀಕ ಪುಟ್ಟರಾಜು, ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್​ನನ್ನು ಬಿಡದಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.  ನಿರ್ಮಾಪಕ ಗುರುದೇಶ್ ಪಾಂಡೆ ಅವರನ್ನು ಹುಡುಕಲಾಗ್ತಿದೆ ಎಂದಿದ್ದಾರೆ. ಮೃತ ವಿವೇಕ್ ಕುಟುಂಬದವರು ದೂರು ಕೊಡಲು ನಿರ್ಧರಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುವುದು ಎಂದಿದ್ದಾರೆ.

Related Posts

Don't Miss it !