ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ, ಬಿಜೆಪಿ ನಾಯಕರ ಖಂಡನೆ..! ಪ್ಲ್ಯಾನ್​ ಯಾರದ್ದು..?

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಹಿಂದೂ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಬಳಿಕ ಮೊಟ್ಟೆ ಎಸೆದಿದ್ದಾರೆ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದು, ಒಂದು ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಇದೇ ರೀತಿ ತಿರುಗಿ ಬಿದ್ದರೆ ನೀವು ಮನೆಯಿಂದ ಹೊರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಗೊತ್ತಿರಲಿ ಎಂದು ಗುಡುಗಿದ್ದಾರೆ. ಇನ್ನು ಮುಂದಿನ ಆರೇಳು ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ನಾವು ನಿಮ್ಮನ್ನು ಏನು ಮಾಡಬೇಕು ಅನ್ನೋದು ಗೊತ್ತಿದೆ ಎಂದು ರಾಜ್ಯ ಪೊಲೀಸ್​ ಇಲಾಖೆಗೂ ಚಾಟಿ ಬೀಸಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಬಿಜೆಪಿಯವರನ್ನ ಬೀದಿಯಲ್ಲಿ ಆಟವಾಡಲು ಬಿಟ್ಟು ನಾಟಕವಾಡ್ತೀರಾ..? ಆರ್‌ಎಸ್ಎಸ್ ಜೊತೆಗೆ ಶಾಮಿಲಾಗಿ ಆಟವಾಡ್ತೀರಾ..? ನಾನೊಬ್ಬ ವಿರೋಧ ಪಕ್ಷದ ನಾಯಕ, ನನಗೆ ರಕ್ಷಣೆ ಕೊಡೋಕಾಗಲ್ವಾ ? ಎಂದು ಉಗ್ರರೂಪ ತೋರಿಸಿದ್ದಾರೆ.

ಸಿಎಂ ಸೇರಿ ಮಾಜಿ ಸಿಎಂ ಬಿಎಸ್​ವೈ ಕೂಡ ಖಂಡನೆ..!

ತಿರುಪತಿ ಪ್ರವಾಸದಲ್ಲಿ ಇರುವ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಟ್ಟೆ ಎಸೆತ ಪ್ರಕರಣವನ್ನು ಖಂಡಿಸಿದ್ದಾರೆ. ಟ್ವೀಟ್​ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾನ್ಯ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಭದ್ರತಾ ವೈಫಲ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಕಾರ ಎತ್ತಿಲ್ಲ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಖಂಡನೆ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಇರಬಹುದು, ಯಡಿಯೂರಪ್ಪ ಇರಬಹುದು ಈ ರೀತಿಯ ಕೃತ್ಯ ಸಹಿಸೋದಿಲ್ಲ. ಈ ರೀತಿ ಯಾರೂ ಮಾಡಬಾರದು ಎಂದಿದ್ದಾರೆ. ಕಂದಾಯ ಸಚಿವ ಆರ್​ ಅಶೋಕ್​ ಕೂಡ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆಯುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಸಂಪ್ರದಾಯದವಲ್ಲ. ವಿರೋಧವನ್ನು ವೈಚಾರಿಕತೆಯಿಂದಲೇ ತೋರಿಸಬೇಕು, ವಿನಃ ಇಂತಹ ಸಂಪ್ರದಾಯದಿಂದಲ್ಲ ಎಂದಿದ್ದಾರೆ. ಯಾರೊಬ್ಬರೂ ಕ್ರಮದ ಬಗ್ಗೆ ಮಾತ್ರ ಮಾತನಾಡಿಲ್ಲ.

ಮನಸಿನಿಂದ ಖಂಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ..!

ಸದಾ ಕಾಲ ಸಿದ್ದರಾಮಯ್ಯ ವಿರುದ್ಧ ರಾಜಕೀಯವಾಗಿ ಕೆಂಡ ಕಾರುವ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಸಿದ್ದರಾಮಯ್ಯ ಮೇಲಿನ ಮೊಟ್ಟೆ ಎಸೆತ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿಮ್ಮ ಕೊಡಗಿನ ಪರಿಸ್ಥಿತಿ ಕಳೆದ 3 ವರ್ಷದಲ್ಲಿ ಏನಾಗಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಿ. ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕಾಮಗಾರಿ ಪರಿಶೀಲನೆ ಮಾಡಲು ಬಂದರೆ ನೀವು ಮೊ0ಟ್ಟೆ ಹೊಡೆಯುತ್ತೀರಾ..? ನಿಮ್ಮ ಸಂಕಷ್ಟಗಳಿಗೆ ಈಗಿನ ಸರ್ಕಾರ ಎಷ್ಟರ ಮಟ್ಟಿದೆ ಸ್ಪಂದಿಸುವ ಕೆಲಸ ಮಾಡಿದೆ..? ನೀವು ನಿಮ್ಮ ಸಂಕಷ್ಟಗಳ ವಿಚಾರಕ್ಕೆ ಹೋರಾಟ ಮಾಡಬೇಕೇ ಹೊರತು, ಈ ರೀತಿಯ ವಿಚಾರಗಳಿಗೆ ಹೋರಾಟ ಮಾಡುವುದಲ್ಲ ಎಂದಿದ್ದಾರೆ. ಆದರೆ ಕೊಡಗು ಹಾಗು ಮೈಸೂರು ಸಂಸದ ಪ್ರತಾಪ್​ ಸಿಂಹ ಮಾತ್ರ ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ಸಮರ್ಥಿಸಿಕೊಂಡು ಸಮಜಾಯಿಸಿ ನೀಡಿದ್ದಾರೆ. ಕೊಡಗಿನ ಜನರಿಗೆ ಸಿದ್ದರಾಮಯ್ಯ ಮೇಲೆ ಆಕ್ರೋಶವಿದೆ. ಟಿಪ್ಪು ಜಯಂತಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಮೇಲೆ ಕೋಪ ಇದೆ. ಟಿಪ್ಪು ಮೇಲಿನ ಕೋಪಕ್ಕೆ ಕೊಡಗಿನ ಜನ ಟಿಪ್ಪು ಹೆಸರನ್ನು ನಾಯಿಗೆ ಇಡ್ತಾರೆ. ಅಂತಹ ಟಿಪ್ಪುವಿನ ಆಚರಣೆ ಮಾಡಿದ್ದು ಸಿದ್ದರಾಮಯ್ಯ, ಕುಟ್ಟಪ್ಪ ಸತ್ತಾಗ, ಕಾಲು ಜಾರಿ ಬಿದ್ದಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ಸಿದ್ದರಾಮಯ್ಯ ಮೇಲೆ ಕೊಡಗಿನ ಜನಕ್ಕೆ ಆಕ್ರೋಶ ಇದೆ ಎಂದಿದ್ದಾರೆ.

ರಾಜ್ಯಾದ್ಯಂತ ಸಿದ್ದರಾಮಯ್ಯ ತಡೆಯಲು ಬಿಜೆಪಿ ಪ್ಲ್ಯಾನ್​..!

ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗು ಕಾಂಗ್ರೆಸ್​ ಪರವಾಗಿ ಸಾಕಷ್ಟು ಅಲೆ ಎದ್ದಿರುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ದಾವಣಗೆರೆಯ ಸಿದ್ದರಾಮೋತ್ಸವ ಹಾಗು ಬೆಂಗಳೂರಿನಲ್ಲಿ ನಡೆದ ಸ್ವತಂತ್ರ ನಡಿಗೆಯಲ್ಲಿ ಜನ ಸೇರಿದ್ದನ್ನು ಕಂಡು ಕಂಗಾಲಾಗಿರುವ ಕೇಸರಿ ಪಡೆ, ಸಿದ್ದರಾಮಯ್ಯ ವೇಗಕ್ಕೆ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ರಾಜ್ಯಾದ್ಯಂತ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಇದೆ ಎನ್ನುವ ರೀತಿ ತೋರಿಸುವ ಕೆಲಸ ಮಾಡುವ ನಿರ್ಧಾರ ಮಾಡಲಾಗಿದೆ. ಇದೇ ಕಾರಣದಿಂದ ಮಡಿಕೇರಿಯಿಂದ ಹೊರಟಿದ್ದ ಸಿದ್ದರಾಮಯ್ಯ ಅವರ ಕಾರನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿ ಅಡ್ಡಗಟ್ಟಿ ಪ್ರತಿಭಟನೆಗೆ ಮಾಡಿದ್ದಾರೆ. ಸಾವರ್ಕರ್ ಫೋಟೋ ಹಿಡಿದ ಹಿಂದುಪರ ಸಂಘಟನೆ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚಿಕ್ಕಮಗಳೂರಿನ ಪ್ರವಾಸ ಕೈಗೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಗೋ ಬ್ಯಾಕ್​ ಸಿದ್ದರಾಮಯ್ಯ ಎಂದು ಅಭಿಯಾನ ಶುರುಮಾಡಲಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಮುಖ್ಯಮಂತ್ರಿಗೆ ಸರಿಸಮಾನವಾದ್ದದ್ದು. ಆದರೆ ಸಿದ್ದರಾಮಯ್ಯ ಅವರಿಗೆ ಭದ್ರತೆ ಕೊಡಲು ಮುಂದಾಗದ ಬಿಜೆಪಿ ಸರ್ಕಾರ, ಖಂಡನೆ ಮಾಡುತ್ತಾ ಕಣ್ಣೊರೆಸುವ ತಂತ್ರಗಾರಿಕೆ ಮಾಡಿದೆ.

ಇದನ್ನು ಓದಿ: ಹೂಮಾಲೆ ಹಾಕಿ B.S​​ ಯಡಿಯೂರಪ್ಪ ಅವರನ್ನು ಬಂಧಿಸಿತೇ ಬಿಜೆಪಿ ಹೈಕಮಾಂಡ್​..?

Related Posts

Don't Miss it !