ಹೊತ್ತಿ ಉರಿಯುವ ಹಂತದಲ್ಲಿದೆ ಮುಂಬೈ.. ಠಾಕ್ರೆ ಜಮಾನ ನೆನಪಿಸುತ್ತಾ..?

ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಮಹಾ ಅಘಾಡಿ ಸರ್ಕಾರದ ಲೆಕ್ಕಾಚಾರ ಬುಡಮೇಲು ಆಗಿದೆ. ಬಿಜೆಪಿಯ ಆಪರೇಷನ್​ಗೆ ಒಳಗಾಗಿರುವ ಶಿವಸೇನೆಯ ಬಹುತೇಕ ಶಾಸಕರು ಸೂರತ್​ ಬಳಿಕ ಅಸ್ಸಾಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಮುಂಬೈ ಹೊತ್ತಿ ಉರಿಯುವ ಹಂತ ತಲುಪಿದ್ದು, ಮುಂಬೈನಲ್ಲಿ ಸಾವಿರಾರು ಶಿವ ಸೈನಿಕರು ಬಂಡಾಯವೆದ್ದು ಅಸ್ಸಾಂಗೆ ತೆರಳಿರುವ ಶಾಸಕರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ವಿಶೇಷ ಅಂದರೆ ಇಂಟೆಲಿಜೆನ್ಸ್​ ಮೂಲಗಳ ಮಾಹಿತಿ ಪ್ರಕಾರ, ಮುಂಬೈ ಹೊತ್ತಿ ಉರಿಯುವ ಸಾಧ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್​ ಠಾಣೆಗಳಲ್ಲಿ ಹೈ ಅಲರ್ಟ್​ ಇರುವಂತೆ ಸಂದೇಶ ರವಾನೆ ಮಾಡಲಾಗಿದೆ. ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡು ಕೂರುವುದಿಲ್ಲ ಎನ್ನುವ ಸಂದೇಶ ರವಾನೆ ನೀಡಿರುವ ಸಿಎಂ ಉದ್ಧವ್​ ಠಾಕ್ರೆ, ರಾಜೀನಾಮೆಯನ್ನೂ ನೀಡಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ರಾತ್ರೋರಾತ್ರಿ ನಡೆದ ಘಟನೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ ಠಾಕ್ರೆ..!

ಮಹಾರಾಷ್ಟ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಬದ್ಧ ವೈರಿಗಳ ಸಮಾಗಮದಿಂದ. ಕಾಂಗ್ರೆಸ್​ ಹಾಗು ಎನ್​ಸಿಪಿ ಶಿವಸೇನೆಗೆ ಬದ್ಧ ವೈರಿಗಳು. ಆದರೆ ಅಧಿಕಾರ ಹಿಡಿಯುವ ಉದ್ದೇಶದಿಂದ ವೈರತ್ವ ಮರೆತು ಸ್ನೇಹ ಹಸ್ತ ಚಾಚಿದ್ದಾರೆ. 46 ಶಿವಸೇನೆ ಶಾಸಕರು, ಬಿಜೆಪಿ ಜೊತೆ ಸೇರಲು ಉತ್ಸುಕರಾಗಿದ್ದು, ಬಂಡಾಯ ಶಾಸಕರಿಗೆ ಉದ್ಧವ್​ ಠಾಕ್ರೆ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡು ಕೂರುವುದಿಲ್ಲ. ನನಗೆ ಸಿಎಂ ಸ್ಥಾ ನದ ಆಸೆಯೂ ಇಲ್ಲ. ನಿಮ್ಮಲ್ಲೇ ಯಾರಾದರೂ ಒಬ್ಬರು ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿ, ಪಕ್ಷದಲ್ಲಿ ಬಂಡಾಯ ಸರಿಯಲ್ಲ. ಹಿಂದೂ ಹಾಗೂ ಶಿವಸೇನೆ ಬೇರೆ ಬೇರೆ ಆಗಲು ಸಾಧ್ಯವೇ ಇಲ್ಲ. ನಾನು ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ ಖಾಲಿ ಮಾಡ್ತೇನೆ. ನೀವೇ ವಾಪಸ್​ ಬಂದು ಅಧಿಕಾರ ವಹಿಸಿಕೊಳ್ಳಿ ಎಂದಿದ್ದಾರೆ. ಮಾತಿನಂತೆ ಸರ್ಕಾರಿ ನಿವಾಸ ಖಾಲಿ ಮಾಡಿ ಮಾತೋಶ್ರೀ ನಿವಾಸಕ್ಕೆ ತೆರಳಿದ್ದಾರೆ. ಆದರೆ ಸಿಎಂ ಉದ್ಧವ್​ ಠಾಕ್ರೆ ಮಾತಿಗೆ ನಕಾರ ವ್ಯಕ್ತಪಡಿಸಿರುವ ಬಂಡಾಯ ಶಾಸಕರ ನಾಯಕ ಏಕನಾಥ್​ ಶಿಂಧೆ, ಮುಖ್ಯಮಂತ್ರಿ ರಾಜೀನಾಮೆ ನೀಡುವ ತನಕ ವಾಪಸ್​ ಬರುವುದಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್​​ಗೆ ಹಿನ್ನಡೆ ಸಾಧ್ಯತೆ..!

2015ರಿಂದ ಈಚೆಗೆ ಇಡೀ ದೇಶದಲ್ಲಿ 9 ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್​ ಕಮಲ ಮಾಡಿ ಅಧಿಕಾರ ಹಿಡಿದಿದೆ. ಅದರಲ್ಲಿ ಕರ್ನಾಟಕವೂ ಸೇರಿಕೊಂಡಿದೆ. ಆದರೆ ಮಹಾರಾಷ್ಟ್ರದಲ್ಲಿ ಬೇರೆ ರಾಜ್ಯಗಳಂತೆ ಶಿವಸೇನೆ ಕಾರ್ಯಕರ್ತರು ಶಾಸಕರ ಬಂಡಾವನ್ನು ಸಹಿಸಲಾರರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಆಪರೇಷನ್​ ಕಮಲ ಮಾಡಿ ಮಹಾ ಅಘಾಡಿ ಸರ್ಕಾರ ಅಸ್ತಿತ್ವ ಕಳೆದುಕೊಂಡರೆ, ಮುಂಬೈನಲ್ಲಿ ಬೆಂಕಿಯ ಜ್ವಾಲೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಶಿವಸೇನೆ ಮುಂಬೈನಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದು, ಠಾಕ್ರೆ ಕುಟುಂಬಸ್ಥರು ಒಂದು ಮಾತನ್ನು ಹೇಳಿದರೆ ಮುಗೀತು ಎನ್ನುವ ಕಾಲವೂ ಒಂದಿತ್ತು. ಬಾಳಾ ಸಾಹೇಬ್​ ಠಾಕ್ರೆಯನ್ನು ದೇವರು ಎಂದು ಪೂಜಿಸುವ, ಠಾಕ್ರೆ ಹೇಳಿದ್ದನ್ನು ಚಾಚೂ ತಪ್ಪದೆ ಪಾಲನೆ ಮಾಡುವ ಅದೆಷ್ಟೋ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಇದೀಗ ಶಿವಸೇನೆ ಸರ್ಕಾರವನ್ನು ಉರುಳಿಸಿದರೆ ಸುಮ್ಮನಿರುತ್ತಾರಾ..? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಸರ್ಕಾರ ಬೀಳುವ ಮೊದಲೇ ಭಾವನಾತ್ಮ ಆಟ ಪ್ರದರ್ಶನ ಮಾಡಿರುವ ಸಿಎಂ ಗಂಟು ಮೂಟೆ ಸಮೇತ ಸರ್ಕಾರಿ ಬಂಗಲೆ ಖಾಲಿ ಮಾಡಿರುವುದು ಮರಾಠಿಗರನ್ನು ಮತ್ತಷ್ಟು ಕುಪಿತರನ್ನಾಗಿ ಮಾಡಿದೆ.

ವಿಧಾನಸಭೆ ಬಲಾಬಲಕ್ಕೆ ತಯಾರಿ ಮಾಡ್ತಿದೆ ಶಿವಸೇನೆ..!

ಶಿವಸೇನೆಯ 45ಕ್ಕೂ ಹೆಚ್ಚು ಶಾಸಕರು ಈಗಾಗಲೇ ಏಕನಾಥ್​ ಶಿಂಧೆ ಟೀಂ ಸೇರಿಕೊಂಡಿದ್ದಾರೆ. ಈ ನಡುವೆ ಸಿಎಂ ಸರ್ಕಾರಿ ಬಂಗಲೆ ಖಾಲಿ ಮಾಡಿ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿ ಹುದ್ದೆ ಆಫರ್ ಕೊಟ್ಟಿದ್ದಾರೆ. ಆದರೆ ಶಿವಸೇನೆ ಶಾಸಕರು ವಾಪಸ್​ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೇ ಕಾರಣದಿಂದ ಎಲ್ಲಾ ಶಾಸಕರನ್ನು ವಾಪಸ್​ ವಿಧಾನಸೌಧಕ್ಕೆ ವಾಪಸ್​ ಕರೆಸಲು ರಣತಂತ್ರ ಮಾಡುತ್ತಿದ್ದು, ಸದನದಲ್ಲಿ ವಿಶ್ವಾಸ ಮತ ಯಾಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಇದೀಗ ವಿಪ್​ ಜಾರಿಯಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವ ಬೆದರಿಕೆ ಹಾಗು ಮನವೊಲಿಕೆ ಮಾಡಲು ತಯಾರಿ ನಡೆದಿದೆ. ಆದರೆ ಮೂರನೇ ಒಂದು ಭಾಗ ಸಂಪೂರ್ಣವಾಗಿ ಬಿಜೆಪಿ ಸೇರ್ಪಡೆ ಆದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ ಎನ್ನುತ್ತಿದ್ದಾರೆ ಕಾನೂನು ಪಂಡಿತರು. ಇನ್ನೂ ಆಪರೇಷನ್​ ಕಮಲ ಬಣ್ಣ ಬಯಲಾದರೂ ರಾಜ್ಯದ ಜನ ಸರ್ಕಾರದ ಪರವಾಗಿ ನಿಲ್ತಾರೆ ಎನ್ನುವ ಕಾರಣಕ್ಕೆ ಉದ್ಧವ್​​ ಠಾಕ್ರೆ ರಾಜಕೀಯ ಬಲೆ ಹೆಣೆಯುತ್ತಿದ್ದಾರೆ.

Related Posts

Don't Miss it !