ಮಹಾರಾಷ್ಟ್ರದಲ್ಲಿ ಸರ್ಕಾರ ಬಿದ್ದು ಹೋಯ್ತು..! ಮುಂದೇನು ಆಗುತ್ತೆ..?

ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮಹಾ ಅಘಾಡಿ ಸರ್ಕಾರ ಉರುಳಿದೆ. ಶಿವಸೇನೆಯ 40 ಶಾಸಕರು ಬಂಡಾಯ ಎದ್ದು ಅಸ್ಸಾಂನ ಗುವಹಾಟಿಯಲ್ಲಿ ವಾಸ್ತವ್ಯ ಹೂಡಿದ್ದರಿಂದ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​​ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ರಾಜ್ಯಪಾಲರು ವಿಶ್ವಾಸಮತ ಯಾಚನೆ ಮಾಡುವಂತೆ ಉದ್ಧವ್​ ಠಾಕ್ರೆಗೆ ಸೂಚನೆ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಸತತ ಮೂರೂವರೆ ಗಂಟೆಗಳ ವಿಚಾರಣೆಯಲ್ಲಿ ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ರಾತ್ರಿ 9 ಗಂಟೆ ಸುಮಾರಿಗೆ ತೀರ್ಪು ನೀಡಿದ್ದರು. ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಬಂದ ಸುಪ್ರೀಂಕೋರ್ಟ್​ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚಿಸಲು ತಿಳಿಸಿದ್ರು. ಅದಾದ ಕೆಲವೇ ಕ್ಷಣಗಳಲ್ಲಿ ಉದ್ಧವ್​​ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ರು.

ಫೇಸ್​ಬುಕ್​ನಲ್ಲಿ ರಾಜೀನಾಮೆ ಕೊಟ್ಟ ಮೊದಲ ಸಿಎಂ..!

ಸುಪ್ರೀಂಕೋರ್ಟ್​ನಲ್ಲಿ ತೀರ್ಪು ಹೊರ ಬೀಳುತ್ತಿದ್ದ ಹಾಗೆ ರಾತ್ರಿ 9.30ಕ್ಕೆ ಉದ್ಧವ್​​ ಠಾಕ್ರೆ ಸುದ್ದಿಗೋಷ್ಠಿ ನಡೆಸಿದ್ರು. ಫೇಸ್​ಬುಕ್​ ಮೂಲಕ ನೇರಪ್ರಸಾರಕ್ಕೆ ಬಂದಿದ್ದ ಉದ್ಧವ್​​ ಠಾಕ್ರೆ, ಶರದ್​​ ಪವಾರ್​ ಹಾಗೂ ಸೋನಿಯಾ ಗಾಂಧಿಗೆ ಧನ್ಯವಾದ ತಿಳಿಸಿದ್ರು. ಇನ್ನು ರಾಜೀನಾಮೆ ನೀಡುತ್ತಿರುವುದಕ್ಕೆ ಯಾವುದೇ ಬೇಸರ ಇಲ್ಲ ಎಂದು ತಿಳಿಸಿದ ಉದ್ಧವ್​ ಠಾಕ್ರೆ ಮಹಾರಾಷ್ಟ್ರ ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ಅದಾದ ಕೆಲವೇ ಗಂಟೆಗಳಲ್ಲಿ ಸ್ವತಃ ತಮ್ಮದೇ ಖಾಸಗಿ ಕಾರಿನಲ್ಲಿ ರಾಜಭವನಕ್ಕೆ ಭೇಟಿ ನೀಡಿದ ಉದ್ಧವ್​ ಠಾಕ್ರೆ ಸ್ವತಃ ತಾವೇ ಕಾರನ್ನು ಚಾಲನೆ ಮಾಡಿಕೊಂಡು ಬಂದಿದ್ದು ವಿಶೇಷ ಆಗಿತ್ತು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಧನ್ಯವಾದ ಹೇಳಿ ತೆರಳಿದರು. ಇದೀಗ ಹೊರ ಸರ್ಕಾರ ರಚನೆ ಕಸರತ್ತು ಶುರುವಾಗಿದೆ.

ರಾಜೀನಾಮೆ ಸುದ್ದಿ ಬೆನ್ನಲ್ಲೇ ಬಿಜೆಪಿ ಸಂಭ್ರಮಾಚರಣೆ..!

ಉದ್ಧವ್​ ಠಾಕ್ರೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡುವ ಮೊದಲೇ ಬಿಜೆಪಿ ಶಾಸಕಾಂಗ ಸಭೆ ನಿಶ್ಚಯವಾಗಿತ್ತು. ತಾಜ್​ ಹೋಟೆಲ್​ನಲ್ಲಿದ್ದ ಎಲ್ಲಾ ಬಿಜೆಪಿ ಶಾಸಕರು ಸಿಹಿ ಹಂಚಿ ಸಂಭ್ರಮಿಸಿದ್ರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ್ದರೂ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಗದೆ ಕಂಗಾಲಾಗಿದ್ದ ಕೇಸರಿ ಪಾಳಯ, ಅಘಾಡಿ ಸರ್ಕಾರ ಬೀಳುತ್ತಿದ್ದ ಹಾಗೆ ಸಂಭ್ರಮಾಚರಣೆ ಮಾಡಿದ್ರು. ಆ ಬಳಿಕ ಕೇಂದ್ರ ನಾಯಕರ ಜೊತೆಗೆ ಚರ್ಚೆ ನಡೆಸಿದ ದೇವೇಂದ್ರ ಫಡ್ನಾವಿಸ್​, ಶಿವಸೇನೆ ಬಂಡಾಯ ನಾಯಕ ಏಕನಾಥ್​ ಶಿಂಧೆ ಜೊತೆಗೂ ಚರ್ಚೆ ನಡೆಸಿದ್ರು. ಮೂಲಗಳ ಮಾಹಿತಿ ಪ್ರಕಾರ ಜುಲೈ 1 ರಂದು ದೇವೇಂದ್ರ ಫಡ್ನಾವಿಸ್​ ಪ್ರಮಾಣ ಸ್ವೀಕರಿಸಲಿದ್ದಾರೆ. ಆ ಬಳಿಕ ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಇದರ ನಡುವೆ ಶಿವಸೇನೆ ಪಕ್ಷ ಯಾರಿಗೆ ಸೇರಿದ್ದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕೊಲೆಯಾದ ಕನ್ಹಯ್ಯ ಲಾಲ್​ ಕುಟುಂಬಸ್ಥರ ಕೊನೆ ಆಸೆ ಏನು..?

ಶಿವಸೇನೆ ಮೇಲೆ ಬಂಡಾಯ ಶಾಸಕರಿಗೆ ಸಿಗುತ್ತಾ ಹಕ್ಕು..!

ಶಿವಸೇನೆಯಿಂದ ಗೆಲುವು ಸಾಧಿಸಿ ಅಘಾಡಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರೂ ಬಂಡಾಯ ಎದ್ದಿರುವ ಏಕನಾಥ್​ ಶಿಂಧೆ, ಇದೀಗ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಇನ್ನೂ ಶಿಂಧೆ ಟೀಂನಲ್ಲಿರುವ ಶಾಸರಲ್ಲಿ ಸುಮಾರು 10 ಮಂದಿಗೆ ಸಚಿವ ಸ್ಥಾನ ಫಿಕ್ಸ್​ ಎನ್ನಲಾಗಿದೆ. ಈಗಾಗಲೇ ಹುವಹಾಟಿಯಿಂದ ಗೋವಾ ತಲುಪಿರುವ ಬಂಡಾಯ ಶಾಸಕರ ಟೀಂ, ಇಂದು ಮುಂಬೈ ಪ್ರವೇಶ ಮಾಡಲಿದೆ. ಇದರ ಜೊತೆಗೆ ಮೂರನೇ ಎರಡರಷ್ಟು ಶಿವಸೇನೆ ಶಾಸಕರು ಒಗ್ಗಟ್ಟಾಗಿರುವ ಕಾರಣ ಶಿವಸೇನೆ ಪಕ್ಷದ ಚಿಹ್ನೆ ಹಾಗೂ ಹೆಸರು ಏಕನಾಥ್​ ಶಿಂಧೆ ಬಣದ ಪಾಲಾಗುವ ಎಲ್ಲಾ ಸಾಧ್ಯಗಳು ಇವೆ. ಮೂರನೇ ಎರಡರಷ್ಟು ಶಾಸಕರು ಒಟ್ಟಾಗಿ ಪಕ್ಷ ತೊರೆದಿರುವ ಕಾರಣಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸುವ ಪ್ರಮೆಯವೂ ಇರುವುದಿಲ್ಲ. ಒಟ್ಟಾರೆ ಬಾಳಾ ಠಾಕ್ರೆ ಜತನದಿಂದ ನಿರ್ಮಾಣ ಮಾಡಿದ್ದ ಕೋಟೆ ಕುಸಿದು ಬಿದ್ದಿದೆ. ಉದ್ಧವ್​ ಠಾಕ್ರೆ ಅಧಿಕಾರದ ಲಾಲಸೆಯಿಂದ ಶಿವಸೇನೆಯಿಂದಲೇ ಹೊರಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

Related Posts

Don't Miss it !