ದೆಹಲಿಯಲ್ಲಿ ಭೀಕರ ಅಗ್ನಿ ದುರಂತ..! 27 ಜನರ ಸಜೀವ ದಹನ..! ಕಾರಣ ಗೊತ್ತಾ.‌?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಅಗ್ನಿ ಅವಘಡ ಸಂಭವಿಸಿದೆ. ಮೆಟ್ರೋ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಬರೋಬ್ಬರಿ 27 ಮಂದಿ ಸಜೀವ ದಹನವಾಗಿದ್ದಾರೆ. ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದ್ದು, NDRF ತಂಡ ಸ್ಥಳಕ್ಕೆ ದೌಡಾಯಿಸಿ ಜನರನ್ನು ರಕ್ಷಣೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೂ ಬೆಂಕಿಯ ಕೆನ್ನಾಲಿಗೆ ಸಿಲುಕಿ ಜನರು ಸಾವನ್ನಪ್ಪಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಜನರು ದಿಕ್ಕಾಪಾಲಾಗಿ ಕಡ್ಡದ ಕಿಟಕಿಯಿಂದ ಕೆಳಕ್ಕೆ ಹಾರುವ ಪ್ರಯತ್ನ ಮಾಡಿದ್ದರು. ಇದರಿಂದಲೂ ಸಾವು ನೋವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯ್ತು. ಸುಮಾರು 15ಕ್ಕೂ ಹೆಚ್ಚು ಅಗ್ನಿ ಶಾಮಕ ದಳ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು. 50ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ..!

ದೆಹಲಿಯ ಮಹಾ ಅಗ್ನಿ ದುರಂತದಲ್ಲಿ ಸಿಲುಕಿ ಸಾವನ್ನಪ್ಪಿದ ಜನರ ಕುಟುಂಬಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಸಂತಾಪ ಸಲ್ಲಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡ ಜನರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಸಹ ಅಧಿಕಾರಿಗಳ ಜೊತೆಗೆ ಸಂವಹನದಲ್ಲಿ ಇದ್ದುಕೊಂಡು ಸಂಪೂರ್ಣ ಕಾರ್ಯಾಚರಣೆ ಮೇಲುಸ್ತುವಾರಿ ನಡೆಸಿದ್ದಾರೆ. 12 ಜನರ ಸ್ಥಿತಿ ಗಂಭೀರವಾಗಿದ್ದು, ಸಂಜಯ್​ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟು 70 ಜನರು ಕಟ್ಟಡದಲ್ಲಿದ್ದರು, ಮೊದಲ ಮಹಡಿಗೆ ಬೆಂಕಿ ಬಿದ್ದಿದ್ದು, 2ನೇ ಮಹಡಿಯಲ್ಲಿ ಅತಿ ಹೆಚ್ಚು ಶವಗಳು ಸಿಕ್ಕಿವೆ. ದೆಹಲಿ ಉಪಮುಖ್ಯಮಂತ್ರಿ ಸ್ಥಳದಲ್ಲೇ ಬೀಡುಬಿಟ್ಟು ಎಲ್ಲಾ ಉಸ್ತುವಾರಿ ನೋಡಿಕೊಂಡರು.

ರಾಷ್ಟ್ರ ರಾಜಧಾನಿಯ ಅಗ್ನಿ ದುರಂತಕ್ಕೆ ಕಾರಣ ಏನು..!?

ಭಾರತದ ಬಹುತೇಕ ನಗರಗಳಲ್ಲಿ ಬಹುಮಹಡಿ ಕಟ್ಟಡ ಕಟ್ಟುವ ಮೊದಲೇ ಅಗ್ನಿ ಅನಾಹುತಗಳು ಸಂಭವಿಸಿದರೆ ಜನರನ್ನು ರಕ್ಷಣೆ ಮಾಡುವುದಕ್ಕೆ ಪ್ರತ್ಯೇಕ ಮಾರ್ಗ ಹಾಗೂ ಅಗ್ನಿ ಶಾಮಕ ದಳದ ಕಾರ್ಯಾಚರಣೆ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವುದು ಕಡ್ಡಾಯ. ಅಗ್ನಿ ಶಾಮಕ ದಳದಿಂದ ಒಪ್ಪಿಗೆ ಸಿಕ್ಕ ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದರೂ ಈ ಕಟ್ಟಡಕ್ಕೆ ಅಗ್ನಿ ಶಾಮಕ ದಳದಿಂದ ಕ್ಲಿಯರೆನ್ಸ್​ ಸಿಕ್ಕಿರಲಿಲ್ಲ ಎನ್ನುವುದು ಗೊತ್ತಾಗಿದೆ. ಆದರೂ ವಾಣಿಜ್ಯ ಕಟ್ಟಡವಾಗಿ ಬಳಕೆಯಾಗ್ತಿತ್ತು. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತುಕೊಂಡಿದ್ದು, 24 ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಬರೋಬ್ಬರಿ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯ್ತು. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ‌ ಪೊಲೀಸರು‌ ತನಿಖೆ ನಡೆಸುತ್ತಿದ್ದಾರೆ.

Related Posts

Don't Miss it !