ಕಾಂಗ್ರೆಸ್​ ಅಧ್ಯಕ್ಷರಿಗೆ ಸುಮಲತಾ ಕೌಂಟರ್​..! ಇವತ್ತು ಬೇಬಿ ಬೆಟ್ಟಕ್ಕೆ ಭೇಟಿ

ಮಂಡ್ಯ ಸಂಸದೆ ಸುಮಲತಾ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಗಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ದಿನದಿಂದ ದಿನಕ್ಕೆ ಹೋರಾಟದ ರೂಪುರೇಷೆಗಳನ್ನು ಬದಲು ಮಾಡುತ್ತಾ ಹೋಗುತ್ತಿರುವ ಸುಮಲತಾ ಕೆಆರ್​ಎಸ್​ ಡ್ಯಾಂ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ಬಳಿಕ ಮನ್ಮುಲ್​ ಕಡೆಗೆ ತಿರುಗಿಸಿದ್ದಾರೆ. ಮಂಡ್ಯದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದೆ ಸುಮಲತಾ, ರೈತರ ಜೊತೆಗೆ ನಾನಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅಕ್ರಮ ಗಣಿಗಾರಿಕೆ ಹೋರಾಟದಲ್ಲಿ ನಾವು ಸುಮಲತಾರನ್ನು ಬೆಂಬಲಿಸುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.

ಮನ್ಮುಲ್ ಹಗರಣದ ವಿರುದ್ಧ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತ ಎಂಬ ಭಯ ನನಗೂ ಇದೆ. ಕೆಲವರು ಮಂಡ್ಯದ ಜನರನ್ನು ಮುಗ್ಧರು ಎನ್ನುತ್ತಾರೆ. ಮಂಡ್ಯದ ಜನರನ್ನು ಸುಲಭವಾಗಿ ಮೋಸ ಮಾಡಬಹುದು ಎನ್ನುವುದು ನಿಮ್ಮ ಅಭಿಪ್ರಾಯವೋ ಎಂದು ಪ್ರಶ್ನಿಸಿದ್ರು. ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ ಹತ್ಯೆ ಎಂದು ಕಿಡಿಕಾರಿದ್ರು. ಇನ್ನೂ ಮಂಡ್ಯದ ಗುರುತೇ ಸ್ವಾಭಿಮಾನ ಎಂದು ಅಬ್ಬರಿಸಿದ್ರು.

ಕಾವೇರಿ ನದಿ ನೀರಿನ ಸಮಸ್ಯೆ, ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಂಸತ್​ನಲ್ಲಿ ಮಾತನಾಡಿದ್ದೇನೆ. ಸಕ್ಕರೆ ಕಾರ್ಖಾನೆಗಳನ್ನ ಪುನರಾರಂಭ ಮಾಡಿಸುವಂತೆ ರೈತರು ಮನವಿ ನೀಡಿದ್ದರು. ಮೈಷುಗರ್ ಕಾರ್ಖಾನೆ ಆರಂಭಿಸುವಂತೆ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಬಳಿ ಹಲವಾರು ಬಾರಿ ಮನವಿ ಮಾಡಿದ್ದೇನೆ. ಮೈಷುಗರ್ ಕಾರ್ಖಾನೆ ಖಾಸಗೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಲ್ಲ. ಸರ್ಕಾರ ಸಾಕಷ್ಟು ಬಾರಿ ಅನುದಾನ ನೀಡಿದರೂ ನಷ್ಟದಿಂದ ಹೊರಕ್ಕೆ ತರಲು ಸಾಧ್ಯವಾಗ್ತಿಲ್ಲ. ಹೇಗಾದರೂ ಮಾಡಿ ಸಕ್ಕರೆ ಕಾರ್ಖಾನೆ ಓಪನ್​ ಮಾಡಿ ಎನ್ನುವುದು ನನ್ನ ಒತ್ತಾಯಾ ಎಂದಿದ್ದಾರೆ.

ಡಿ.ಕೆ ಶಿವಕುಮಾರ್​ಗೆ ಸುಮಲತಾ ಠಕ್ಕರ್..!

ಗಣಿ ಅಕ್ರಮದ ಬಗ್ಗೆ ನಾನು ಧ್ವನಿ ಎತ್ತಿದರೆ ಸಾಕಷ್ಟು ಪಕ್ಷದವರು ನನ್ನ ಮೇಲೆ ವಾಗ್ದಾಳಿ ಮಾಡಿದ್ರು. ನಾನು ಇಲ್ಲಿ ಜಿಲ್ಲಾ ಉಸ್ತುವಾರಿಯಾಗಿದ್ದೆ ನನಗೆ ಯಾರು ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಲಿಲ್ಲ ಎಂದು ಕೆಲವರು ಹೇಳ್ತಾರೆ. ಅವರಿಗೆ ಅಕ್ರಮದ ಬಗ್ಗೆ ನೀವು ಯಾಕೆ ಹೇಳಲಿಲ್ಲಾ.? ಎಂದು ಜನರನ್ನು ಪರೋಕ್ಷವಾಗಿ ಪ್ರಶ್ನಿಸುವ ಮೂಲಕ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೌಂಟರ್​ ಕೊಟ್ಟಿದ್ದಾರೆ. ಇಂದು ಕೆಆರ್​ಎಸ್ ಡ್ಯಾಂ ಹಾಗೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹಾಟ್​ಸ್ಪಾಟ್​ ಆಗಿರುವ ಬೇಬಿ ಬೆಟ್ಟಕ್ಕೆ ಭೇಟಿ ಕೊಡ್ತೇನೆ ಎಂದಿದ್ದಾರೆ. ಜೊತೆಗೆ ಯಾವುದೇ ಅಡಚಣೆ ಆಗದಂತೆ ಪೊಲೀಸರು ಭದ್ರತೆ ಕೈಗೊಳ್ಳಬೇಕು. ಇವತ್ತಿನ ಸ್ವಾಗತ ಹೇಗಿರುತ್ತದೆ ನೋಡೋಣ ಎಂದಿದ್ದಾರೆ.

Related Posts

Don't Miss it !