ಮನ್ಮುಲ್ ಹಗರಣ; ಹಾಲಿಗೆ ನೀರು CID ತನಿಖೆ ಸಾಕಾ..!?

ಮಂಡ್ಯ: ಮಂಡ್ಯ ಹಾಲು ಉತ್ಪಾದಕರ ಸಂಘದಲ್ಲಿ ನಡೆದಿದೆ ಎನ್ನಲಾದ ಹಾಲಿಗೆ ನೀರು ಮಿಕ್ಸ್​ ಮಾಡುವ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ರೈತರನ್ನು ಸ್ವಾವಲಂಬಿ ಮಾಡಬೇಕಿದ್ದ ಹಾಲು ಉತ್ಪಾದಕರ ಸಂಘದಲ್ಲಿ ರೈತರಿಗೆ ಅನ್ಯಾಯ ಆಗ್ತಿದೆ ಎನ್ನುವುದು ಕಾಂಗ್ರೆಸ್​ ನಾಯಕ ಚಲುವರಾಯಸ್ವಾಮಿ ಆರೋಪ. ಇದೇ ಕಾರಣಕ್ಕಾಗಿ ಮನ್ಮುಲ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಮಾಡಬೇಕು ಎಂದು ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಹಾಗೂ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದ್ದರು. ಆ ಬಳಿಕ ಕಾಂಗ್ರೆಸ್​ ಹಾಗೂ ಜೆಡಿಎಸ್​ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿತ್ತು. ಇದರಿಂದ ರೈತರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನಗಳು ಮೂಡಿದ್ದವು. ಇದೀಗ ರಾಜ್ಯ ಸರ್ಕಾರ ಅಳೆದು ತೂಗಿ ಸಿಐಡಿ ತನಿಖೆಗೆ ಆದೇಶ ಮಾಡಿದೆ. ಅನ್ನದಾತರಿಗೆ ನ್ಯಾಯ ಸಿಗುತ್ತಾ ಅನ್ನೋದು ಪ್ರಶ್ನೆಯಾಗಿದೆ.

ಸೂಪರ್​ ಸೀಡ್​ಗೂ ಮುನ್ನವೇ ತಡೆಯಾಜ್ಞೆ..!

ಕಾಂಗ್ರೆಸ್​ ನಾಯಕರ ಒತ್ತಡಕ್ಕೆ ಮಣಿದು ಮನ್ಮುಲ್ ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು ಎನ್ನುವ ಆರೋಪವೂ ಇದೆ. ಸಹಕಾರ ಇಲಾಖೆಯ ಅಪರ ನಿಬಂಧಕರು ಕಾರಣ ಕೇಳಿ ಮನ್ಮುಲ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದರು. ಮನ್ಮುಲ್ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡುವ ಉದ್ದೇಶದಿಂದ 30 (2) (iv)ಅನ್ವಯ ನೋಟಿಸ್ ನೀಡಿದ್ದರು. ಜೊತೆಗೆ ಆಡಳಿತ ಮಂಡಳಿ ಮಧ್ಯಂತರ ತಡೆಯಾಜ್ಞೆ ತರಬಾರದು ಎನ್ನುವ ಕಾರಣಕ್ಕೆ ಸರ್ಕಾರ ಕೇವಿಯೆಟ್ ಕೂಡ ಹಾಕಿತ್ತು. ಆದರೂ ಸರ್ಕಾರಕ್ಕೆ ಸಡ್ಡು‌ ಹೊಡೆದು ಮನ್ಮುಲ್ ಆಡಳಿತ ಮಂಡಳಿ ತಡೆಯಾಜ್ಞೆ ತಂದಿತ್ತು. ಹೈಕೋರ್ಟ್ ಆದೇಶದಿಂದ ಆಡಳಿತ ಮಂಡಳಿ‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಇದು ವಿರೋಧಿ ಪಾಳಯದ ಕಣ್ಣು ಕೆಂಪಾಗಿಸಿತ್ತು.

ಚಲುವರಾಯಸ್ವಾಮಿ ಆಡಿಯೋ ಬಳಿಕ ಚುರುಕು..!

ಮನ್ಮುಲ್‌ಗೆ ನೀರು ಮಿಶ್ರಣ ಮಾಡಿ ಹಾಲು ಪೂರೈಕೆ ಹಗರಣದ ತನಿಖೆಗೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅಡ್ಡಿಯಾಗಿದ್ದಾರೆ ಎನ್ನುವ ಆಡಿಯೋ ಬಹಿರಂಗ ಆಗಿತ್ತು. ಆ ಆಡಿಯೋದಲ್ಲಿ ಮಾತನಾಡಿರೋದು ನಾನೇ ಎಂದು ಸ್ವತಃ ಮಾಜಿ ಸಚಿವ ಚಲುವರಾಯಸ್ವಾಮಿ ಒಪ್ಪಿಕೊಂಡಿದ್ದರು. ‘ಜವರೇಗೌಡರು ಫೋನ್​ ಮಾಡಿ ತನಿಖೆಗೆ HDK ಅಡ್ಡಿಯಾಗಿದ್ದಾರೆ ಎಂದಾಗ ನಿನಗೂ ಗೊತ್ತಾಯ್ತ’ ಎಂದು ಕೇಳಿದ್ದೇನೆ ಅಷ್ಟೇ. ತನಿಖೆಗೆ ದೇವೇಗೌಡರ ಕುಟುಂಬವೇ ಅಡ್ಡಿ ಎಂದು ಹಲವರು ಮಾತನಾಡುತ್ತಿದ್ದಾರೆ. ಸಿಎಂ ಯಾವುದೇ ಹಗರಣವನ್ನು ಸಿಓಡಿ ನೀಡಲಾಗಿದೆ ಎಂದರೆ ತಕ್ಷಣವೇ ಆದೇಶವಾಗುತ್ತದೆ. ಆದರೆ ಮನ್ಮುಲ್ ಹಗರಣ ಸಿಓಡಿಗೆ ಕೊಡ್ತೀವಿ ಎಂದು ಸಿಎಂ ಹೇಳಿ ಹಲವು ದಿನಗಳೇ ಕಳೆದರೂ ಇನ್ನು ಆದೇಶ ಆಗಿಲ್ಲ ಯಾಕೆ..? ಇದರ ಅರ್ಥ ಏನು..? ಯಾರು ಇದನ್ನ ತಡೆ ಹಿಡಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಜಿಲ್ಲೆಯಲ್ಲಿ 7 ಕ್ಕೆ 7 ಜೆಡಿಎಸ್ ಗೆದ್ದಿದ್ದಾರೆ. ಯಾಕೆ ಜೆಡಿಎಸ್ ನಾಯಕರು ಈ ಹಗರಣ ಕುರಿತು ಮಾತನಾಡುತ್ತಿಲ್ಲ ಎನ್ನುವ ಮೂಲಕ ದಳಪತಿಗಳ ವಿರುದ್ಧ ಚಲುವರಾಯಸ್ವಾಮಿ ಕಿಡಿ ಕಾರಿದ್ದರು. ಆ ಬಳಿಕ ಮನ್ಮುಲ್​ ಹಗರಣ ಚುರುಕು ಪಡೆದುಕೊಂಡಿತು.

ಸ್ವಂತ ಲಾಭಕ್ಕಾಗಿ ಸೂಪರ್​ ಸೀಡ್​ ಪ್ಲ್ಯಾನ್​..!

ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದರು. ತಮಗೆ ಲಾಭ ಆಗ್ತಿಲ್ಲ ಅನ್ನೋ ಕಾರಣಕ್ಕೆ ಮನ್ಮುಲ್ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿಸಲು ಚಲುವರಾಯಸ್ವಾಮಿ ಹೊರಟಿದ್ದಾರೆ‌. ಮಾಜಿ ಪ್ರಧಾನಿ ದೇವೇಗೌಡರ ಹೆಸರಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಹೋದ ಮೇಲೆ ಮಂಡ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ, ಕಾಂಗ್ರೆಸ್ ಅವರದ್ದೆ ಅಬ್ಬರ ನಡೆಯುತ್ತಿದೆ ಎಂದಿದ್ದರು. ಮನ್ಮುಲ್​ ಸಂಸ್ಥೆಯನ್ನ ಲೂಟಿ ಮಾಡುವ ಸಲುವಾಗಿ ಚಲುವರಾಯಸ್ವಾಮಿ ಈ ರೀತಿ ಕುತಂತ್ರ ಮಾಡ್ತಿದ್ದಾರೆ. ಚಲುವರಾಯಸ್ವಾಮಿಯದ್ದು ಒಳಗೊಂದು ಹೊರಗೊಂದು ಮುಖ. ಒಂದು ವೇಳೆ ತನಿಖೆ ನಿಲ್ಲಿಸಿ ಅಂತ ದೇವೇಗೌಡರು ಹೇಳಿದ್ದರೆ ನಾವು ಪಕ್ಷವನ್ನೇ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದ್ದರು.

ಸೂಪರ್​ ಸೀಡ್​ ತಡೆದಿದ್ದು ನಾನೇ – HDK

ಚಲುವರಾಯಸ್ವಾಮಿ ಆರೋಪದ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಮನ್ಮುಲ್ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡದಂತೆ ಸಿಎಂಗೆ ಮಾತನಾಡಿದ್ದು ನಿಜ. ಯಾವ ಕಾರಣಕ್ಕೆ ಮನ್ಮುಲ್ ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಬೇಕು..? ಹಗರಣವನ್ನ ಆಡಳಿತ ಮಂಡಳಿ ಬಯಲಿಗೆ ಎಳೆದಿದ್ದಕ್ಕಾ..? ಎಂದು ಪ್ರಶ್ನಿಸಿದರು. ನೀವು ಯಾವುದೇ ರೀತಿಯ ತನಿಖೆಯನ್ನ ಬೇಕಾದರೂ ಮಾಡಿ ಎಂದು ಸಚಿವ ಸೋಮಶೇಖರ್ ಅವರಿಗೆ ಹೇಳಿದ್ದೇನೆ. ಹಾಲಿಗೆ ನೀರು ಹಾಕುವುದು ಕಾಂಗ್ರೆಸ್​ನವರ ಕಾಲದಲ್ಲಿ ಆರಂಭವಾಗಿರೋದು. ಈ ಮಹಾನುಭಾವ ಮಂಡ್ಯಕ್ಕೆ ಮಾಡಿರೋದನ್ನ ನಾನು ನೋಡಿದ್ದೇನೆ. ಈತ ನನಗೆ ಮಂಡ್ಯಕ್ಕೆ ಬರಬಾರದು ಅಂತಾನೆ ಎಂದು ಹೆಸರು ಹೇಳದೆ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರಿ ದುಡ್ಡು ಲೂಟಿ ಮಾಡೋರಿಗೆ ಎಂದು ನಾವು ಬೆಂಬಲ ಕೊಟ್ಟವರಲ್ಲ. ನನಗೆ ಬಡ್ಡಿ ಮಗ ಅಂದಿದ್ದಾರಲ್ಲಾ. ಬಡ್ಡಿ ಇರಲಿ ಇವರೆಲ್ಲ ನನ್ನ ಬಳಿ ತೆಗೆದುಕೊಂಡಿರೋ ಅಸಲೆ ಕೊಟ್ಟಿಲ್ಲ ಎಂದು ಕುಟುಕಿದ್ರು. ಮನ್ಮುಲ್ ಹಗರಣವನ್ನ ಯಾವ ತನಿಖೆ ಬೇಕಾದರು ಮಾಡಲಿ. ಸಿಬಿಐ ತನಿಖೆಯನ್ನೆ ಮಾಡಲಿ ಎಂದು ತಿರುಗೇಟು ನೀಡಿದ್ರು.

ಏನಿದು ಮನ್ಮುಲ್​ ಗೋಲ್ಮಾಲ್​ ಪ್ರಕರಣ..?

ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಬೆರೆಸುವುದು ಮೇ 28ಕ್ಕೂ ಮೊದಲೇ ಬೆಳಕಿಗೆ ಬಂದಿತ್ತು. ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಎರಡು ಟ್ಯಾಂಕರ್ ಸೀಜ್ ಮಾಡಲಾಗಿತ್ತು. ಮನ್ಮುಲ್ ಆಡಳಿತ ಮಂಡಳಿ ಪ್ರಕರಣದ ಕುರಿತು ಮತ್ತಷ್ಟು ಶೋಧ ಕಾರ್ಯ ನಡೆಸಿದ್ರು. ನಂತರ ಎರಡನೇ ಬಾರಿಗೆ ಹಾಲಿಗೆ ನೀರು ಕಲಬೆರಕೆ ಮಾಡ್ತಿದ್ದ 3 ವಾಹನ ಸೀಜ್ ಮಾಡಲಾಯ್ತು. ಬಳಿಕ ಪ್ರಕರಣವನ್ನ ಮಂಡ್ಯ ಜಿಲ್ಲೆ ನಾಗಮಂಗಲದ DySP ನವೀನ್ ನೇತೃತ್ವದ ತಂಡದಿಂದ ತನಿಖೆ ಆರಂಭವಾಯ್ತು. ಬಳಿಕ ಮನ್ಮುಲ್ MD ಬದಲಾವಣೆ ಮಾಡಲಾಯ್ತು. 5 ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಯ್ತು. ಕೆಲವು ಸಂಘಟನೆಗಳು ಒತ್ತಡದಿಂದ ಪ್ರಕರಣವನ್ನ ಸರ್ಕಾರ ಸಿಐಡಿಗೆ ವಹಿಸುವ ನಿರ್ಧಾರ ಮಾಡಿತ್ತು.

ರಾಜಕೀಯ ಆಗಿರಲಿ, ರೈತರಿಗೆ ನ್ಯಾಯ ಸಿಗಲಿ..!

ಮಂಡ್ಯದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ಸಮಾನ ಎದುರಾಳಿಗಳು ಎನ್ನುವುದು ಇಡೀ ರಾಜ್ಯಕ್ಕೇ ಗೊತ್ತಿರುವ ಸಂಗತಿ. ಈ ಬಾರಿ ಜೆಡಿಎಸ್​ ಬೆಂಬಲಿತರು ಮನ್ಮುಲ್​ನಲ್ಲಿ ಅಧಿಕಾರ ಹಿಡಿದಿದ್ದಾರೆ. ಆದರೆ ಹಗರಣಕ್ಕೂ ಆಡಳಿತ ಮಂಡಳಿಗೂ ಯಾವುದೇ ಸಂಬಂಧ ಇಲ್ಲ, ಆಡಳಿತ ಮಂಡಳಿಯೇ ತನಿಖೆ ಮಾಡಿ ಅಧಿಕಾರಿಗಳನ್ನು ಸಸ್ಪೆಂಡ್​ ಮಾಡಿಸಿದೆ ಎನ್ನುವ ವಾದವಿದೆ. ಕಾಂಗ್ರೆಸ್​ ನಾಯಕ ಚಲುವರಾಯಸ್ವಾಮಿ ಕೂಡ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಮಾಡಬೇಕಾದ ಅಗತ್ಯ ಇದ್ದರೆ ಸೂಪರ್​ ಸೀಡ್​ ಮಾಡಿ ಇಲ್ಲದಿದ್ದರೆ ಸಿಬಿಐನಿಂದ ತನಿಖೆ ಮಾಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಇದೇ ಮಾತನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅನುಮೋದನೆ ಮಾಡಿದ್ದಾರೆ. ಸಿಐಡಿ ಬೇಡದಿದ್ದರೆ ಸಿಬಿಐನಿಂದಲೇ ತನಿಖೆ ಮಾಡಿಸಿ ಎಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಳೆದೂ ತೂಗಿ ಕಾಲಹರಣ ಮಾಡಿ ಸಿಐಡಿ ತನಿಖೆಗೆ ಆದೇಶ ನೀಡಿದೆ. ರೈತರಿಗೆ ನ್ಯಾಯ ಸಿಗುತ್ತಾ..? ಅಥವಾ ರಾಜಕಾರಣಿಗಳಿಗೆ ಮುಂದಿನ ಚುನಾವಣಾ ಪ್ರಚಾರದ ವಸ್ತು ಆಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

Related Posts

Don't Miss it !