ಮೈಸೂರಿನ ಮದುವೆ ಮಂಟಪದಲ್ಲಿ ಆಗಿದ್ದೇನು..! ನಾ ಒಲ್ಲೆ ಎಂದಿದ್ಯಾಕೆ ನಲ್ಲೆ..!!?

ಮೈಸೂರಿನಲ್ಲಿ ನಡೆಯುತ್ತಿದ್ದ ಮದುವೆ ಕೊನೇ ಕ್ಷಣದಲ್ಲಿ ಮುರಿದು ಬಿದ್ದಿದೆ. ಅಪ್ಪ ಅಮ್ಮ ಧಾರೆ ಎರೆದು ಇನ್ನೇನು ಹುಡುಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹುಡುಗಿ ಕುಸಿದು ಬಿದ್ದಿದ್ದಾಳೆ. ಯುವತಿಗೆ ಏನೋ ಆಯ್ತು ಎಂದು ಜನರೆಲ್ಲಾ ಗಾಬರಿಯಿಂದ ಬಂದು ಗಾಳಿ ಬೀಸಿದಾಗ ಆಕೆ ಹೇಳಿದ್ದನ್ನು ಕೇಳಿ ಉಳಿದವರೆಲ್ಲಾ ಮೂರ್ಚೆ ಹೋದಂತೆ ಆಗಿದ್ದಾರೆ. ನಾನು ಈತನನ್ನು ಮದುವೆ ಆಗಲಾರೆ, ನಾನು ನನ್ನ ಪ್ರಿಯಕರನನ್ನೇ ಮದುವೆ ಆಗುತ್ತೇನೆ ಎಂದಿದ್ದಾಳೆ. ಈಕೆಯ ಮಾತನ್ನು ಕೇಳಿದ ಗಂಡಿನ ಮನೆಯವರು ಹಾಗೂ ಸಂಬಂಧಿಕರು ವಧುವಿನ ಕುಟುಂಬಸ್ಥರ ವಿರುದ್ಧ ಕೆಂಡಾಕ್ರೋಶ ವ್ತಕ್ತಪಡಿಸಿದ್ದಾರೆ. ಈಕೆ ಕುಸಿದು ಬಿದ್ದು ಮದುವೆ ಮುರಿದು ಬೀಳುವುದಕ್ಕೆ ಪ್ರಮುಖ ಕಾರಣ ಆಕೆಯ ಪ್ರಿಯತಮ. ಆತ ಮದುವೆ ನಿಲ್ಲಿಸಲು ಮಾಡಿದ್ದ ಯೋಜನೆ ಯಶಸ್ಸು ಆಗಿರಲಿಲ್ಲ. ಅಂತಿಮವಾಗಿ ಈ ಪ್ರಯೋಗ ಮಾಡಲಾಯ್ತು.

ಹುಡುಗಿ‌ ಕ್ಯಾರಕ್ಟರ್ ಸರಿ ಇಲ್ಲ ಎಂದು ಬಂದಿತ್ತು ಮೆಸೇಜ್..!

ಮೈಸೂರಿನ ಸಿಂಚನಾ ಮದುವೆ ಹೆಚ್.ಡಿ ಕೋಟೆ ತಾಲೂಕಿನ ಹುಡುಗನ ಜೊತೆಗೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಮದುವೆ ಯುವತಿಗೆ ಇಷ್ಟ ಇರಲಿಲ್ಲ. ಆಕೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದನ್ನು ಮನೆಯವರ ಬಳಿ ಹೇಳುವ ಧೈರ್ಯ ಮಾಡಿರಲಿಲ್ಲ. ಆದರೆ ಮದುವೆ ಸಂಬಂಧವನ್ನು ಕಿತ್ತು ಹಾಕುವುದು ಹೇಗೆಂದು ಯೋಚಿಸಿದಾಗ. ಪ್ರಿಯತಮನೇ ಒಂದು ಉಪಾಯ ಹೇಳಿದ್ದ. ಹುಡುಗ ಹಾಗೂ‌ ಆತನ‌ ತಂಗಿಯ ಫೋನ್ ನಂಬರ್‌ಗೆ ಅನಾಮಿಕ ನಂಬರ್‌ನಿಂದ ಹುಡುಗಿಯ ನಡೆತೆ ಸರಿಯಿಲ್ಲ. ಆಕೆಯ ತಾಯಿಯೂ ಅದೇ ರೀತಿ ಎಂದು ಕೆಟ್ಟದಾಗಿ‌ ಬಿಂಬಿಸಿ‌ ಮೆಸೇಜ್ ಮಾಡಲಾಗಿತ್ತು. ಈ ಬಗ್ಗೆ ಯುವತಿ ಹಾಗೂ ಆಕೆಯ ಕುಟುಂಬಸ್ಥರನ್ನು ಕೂರಿಸಿ ಮಾತುಕತೆ ನಡೆಸಿದ್ದರು. ಆ ವೇಳೆ ಮತ್ತೆ ಕುಟುಂಬಸ್ಥರ ಎದುರು ಪ್ರೀತಿ ವಿಚಾರ ಹೇಳಿಕೊಳ್ಳಲು ಹಿಂಜರಿದಿದ್ದ ಸಿಂಚನಾ ಕುಟುಂಬಸ್ಥರ ಮೇಲೆ ಆಣೆ ಪ್ರಮಾಣ ಮಾಡಿದ್ದಳು. ಆ ಹುಡುಗ ಯಾರು ಅನ್ನೋದೆ ಗೊತ್ತಿಲ್ಲ ಎಂದು ನಂಬಿಸಿದ್ದಳು. ಆದರೂ ಒಳಗೊಳಗೆ ಯೋಜನೆ ಚಾಲ್ತಿಯಲ್ಲಿತ್ತು.

ಮದುವೆ ಮಂಟಪದಲ್ಲಿ ತಲೆ ಸುತ್ತಿ ಬಿದ್ದರೆ ಮದುವೆ ನಿಲ್ಲುತ್ತಾ..?

ಹುಡುಗ ಹಾಗೂ ಆತನ ಸಹೋದರಿಗೆ ಮೆಸೇಜ್ ಮಾಡಿದರೂ ಮದುವೆ ಮುರಿದು ಬೀಳಲಿಲ್ಲ. ಅಂತಿಮವಾಗಿ  ಮದುವೆ ನಿಲ್ಲಿಸೋದು ಹೇಗೆ ಎನ್ನುವ ಬಗ್ಗೆ ಭಾರೀ ಚರ್ಚೆ ಮಾಡಿ, ಮದುವೆ ಮಂಟಪದಲ್ಲಿ ತಲೆ ಸುತ್ತಿ ಬಿದ್ದರೆ ಮದುವೆ ನಿಲ್ಲುತ್ತದೆ ಎನ್ನುವ ಉಪಾಯ ಹುಡಿಕಿದ್ದರು. ಅದರಂತೆಯೇ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಹುಡುಗಿ ತಲೆ ಸುತ್ತಿದ ಹಾಗೆ ಮಾಡಿ ಕೆಳಕ್ಕೆ ಬಿದ್ದಿದ್ದಳು.‌ ಮದುವೆ ಬಂದಿದ್ದ ಜನರು ಆಕೆಯ ಮುಖಕ್ಕೆ ನೀರು ಹಾಕಿ ಎಬ್ಬಿಸಿದ್ದರು. ತಾಳಿ ಕಟ್ಟಲು ಮತ್ತೆ ಅಣಿಯಾಗ್ತಿದ್ದ ಹಾಗೆ ನಾನು ಒಲ್ಲೆ ಈ ಮದುವೆ ಎಂದಿದ್ದಳು ಸಿಂಚನಾ. ಹುಡುಗನ ಮನೆಯವರು ಮರ್ಯಾದೆ ಹಾಳಾಯ್ತು ಎಂದು ಬೊಬ್ಬೆ ಹಾಕುತ್ತಿದ್ದಂತೆ ಎಂಟ್ರಿ ಕೊಟ್ಟ ಪೊಲೀಸರು, ಯುವತಿಯನ್ನು ಕೆ.ಆರ್ ಠಾಣೆ ಪೊಲೀಸರು ಕರೆದೊಯ್ದರು.

ಕೊನೆಗೆ ಯುವಕನ ಮನೆಯವರು ಸುಮ್ಮನಾಗಿದ್ದು ಹೇಗೆ..?

ಯುವಕನ ಮನೆಯವರಿಗೆ ಯುವತಿಯ ಪ್ರೇಮ ಕಳ್ಳಾಟ ಮೊದಲೇ ಗೊತ್ತಿತ್ತು. ಆದರೂ ಆಕೆಯ ಮಾತು ಕೇಳಿ ಯಾಮಾರಿದ್ದರು. ಆದರೆ ತಲೆ‌ಸುತ್ತಿದ ಹಾಗೆ ಬಿದ್ದು, ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದು ಬೊಬ್ಬೆ ಹಾಕಿದ ಬಳಿಕ ವರ ಹಾಗೂ ಕುಟುಂಬಸ್ಥರಿಗೆ ಕೊಂಚ ಅಸಮಾಧಾನ ಹಾಗೂ ಕೊಂಚ ಸಮಾಧಾನ ಆಗಿತ್ತು. ಮದುವೆ ಖರ್ಚು ಅಂತಾ ಮಾಡಿದ್ದು ಹಣ ವ್ಯರ್ಥ ಆಗ್ತಿದೆ ಎನ್ನುವ ಕಾರಣಕ್ಕೆ ನಷ್ಟ ತುಂಬಿಕೊಡಬೇಕು ಎಂದು ಆಗ್ರಹ ಮಾಡಿದ್ದರು. ಇನ್ನು ಮದುವೆ ಆದ ಬಳಿಕ ಓಡಿ ಹೋಗದೆ ತಾಳಿ ಕಟ್ಟುವ ಮುನ್ನ ಆಕೆ ಮಾಡಿದ ಡ್ರಾಮಾ ಯುವಕನ ಬದುಕಿನ ಭವಿಷ್ಯದ ಕಹಿ ಘಟನೆಗಳನ್ನು ತಪ್ಪಿಸಿತು ಎನ್ನುವ ಸಮಾಧಾನದ ನಿಟ್ಟುಸಿರು‌ ಹರಡಿತ್ತು. ಯುವತಿ ತನ್ನ ಪ್ರೀತಿಗಾಗಿ ಮದುವೆ ಆಗುವ ಮುನ್ನವೇ ಪ್ರಿಯಕರನನ್ನು ಮದುವೆ ಆಗುವುದಾಗಿ ಹೇಳಿದ್ದು ಒಳ್ಳೆಯದೇ ಆದರೂ ಆಕೆ ಹೇಳುವುದಕ್ಕೆ ತೆಗೆದುಕೊಂಡ ಸಮಯ ಸುದೀರ್ಘವಾಗಿತ್ತು ಎನ್ನುವುದಷ್ಟೇ ಆಕ್ಷೇಪ. ಮೊದಲೇ ಹೇಳಿದ್ದರೆ‌ವರನ ಮನೆಯವರಿಗೆ ಮುಜುಗರ ಆಗುತ್ತಿರಲಿಲ್ಲ.

ನೀತಿ: ಅವಸರವೇ ಅಪಘಾತಕ್ಕೆ ಕಾರಣ, ನಿಧಾನವೂ ಅನಾಹುತಕ್ಕೆ ಕಾರಣ..

Related Posts

Don't Miss it !