ರಾಜೀನಾಮೆ ನೀಡೋಕೆ ಸಿದ್ಧನಿದ್ದೇನೆ, ಕೊಟ್ಟುಬಿಡಿ ಎಂದ ಮಿನಿಸ್ಟರ್ಸ್​..!!

ಕರ್ನಾಟಕ ಸರ್ಕಾರದ ನೇರ ನುಡಿಯ ಮಿನಿಸ್ಟರ್​ ಅಂದ್ರೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅನ್ನೋದ್ರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನ ಜೆ.ಸಿ ಮಾಧುಸ್ವಾಮಿ ಅವರದ್ದು. ಆದರೆ ಆ ನೇರವಂತಿಕೆಯೇ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದೊಡ್ಡಿದ್ದು, ಸರ್ಕಾರ ತಿಣುಕಾಡುತ್ತಿದೆ ಎಂದಿರುವುದು ನುಂಗಲಾರದ ಬಿಸಿ ತುಪ್ಪವಾಗಿದೆ. ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದಿರುವ ಎಸ್​.ಟಿ ಸೋಮಶೇಖರ್​ ವಿರುದ್ಧ ಗಂಭೀರ ಆರೋಪ ಮಾಡಿರುವ ಜೆ.ಸಿ ಮಾಧುಸ್ವಾಮಿ ವಿರುದ್ಧ ವಲಸೆ ಸಚಿವರ ತಂಡವೇ ತಿರುಗಿಬಿದ್ದಿದೆ. ಸಚಿವ ಮುನಿರತ್ನ ಸಚಿವರಾಗಿ ಈ ರೀತಿ ಮಾತನಾಡಿರುವುದು ಅಕ್ಷಮ್ಯ ಅಪರಾಧ, ಒಂದು ವೇಳೆ ಮಾತನಾಡಬೇಕಿದ್ದರೆ ರಾಜೀನಾಮೆ ನೀಡಿ ಮಾತನಾಡುವುದು ಒಳಿತು ಎಂದಿದ್ದಾರೆ. ಕೃಷಿ ಸಚಿವ ಬಿ.ಸಿ ಪಾಟೀಲ್​ ಕೂಡ, ನಮ್ಮ ಸರ್ಕಾರ ಸದೃಢವಾಗಿ, ಉತ್ತಮವಾಗಿ ನಡೆಯುತ್ತಿದೆ ಮಾಧುಸ್ವಾಮಿ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಇನ್ನೂ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಕೂಡ ಮಾಧುಸ್ವಾಮಿ ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಆ ರೀತಿ ಹೇಳಿರುವುದು ಸರಿಯಲ್ಲ ಎಂದಿದ್ದಾರೆ.

ಸಹಕಾರ ಇಲಾಖೆಯಲ್ಲಿ ಅಕ್ರಮ ಪ್ರಶ್ನಿಸಿದ್ದ ರೈತ..!

ರಾಮನಗರ ಜಿಲ್ಲೆ ಚನ್ನಪಟ್ಟಣ ಮೂಲದ ರೈತ ಭಾಸ್ಕರ್​ ಎಂಬಾತ, ಸಚಿವ ಮಾಧುಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿದ್ದು, 50 ಸಾವಿರ ಸಾಲ ತೆಗೆದುಕೊಂಡ ರೈತನ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ,. 1 ಸಾವಿರ ರೂಪಾಯಿ ಹಣ ಪಡೆದು ಮರು ಸಾಲ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಇದು ಸರಿಯಲ್ಲ ಎಂದಿದ್ದಕ್ಕೆ ಮಾಧುಸ್ವಾಮಿ, ಹೌದು, ಇದು ನಡೆಯುತ್ತಿರುವುದು ಸತ್ಯ. ನಾನು ಈ ಬಗ್ಗೆ ಸಚಿವ ಎಸ್​.ಟಿ ಸೋಮಶೇಖರ್​ ಅವರ ಗಮನಕ್ಕೂ ತೆಗೆದುಕೊಂಡು ಹೋಗಿದ್ದೇನೆ. ಆದರೆ ಸನ್ಮಾನ್ಯ ಸಚಿವರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನಾನು ಏನು ಮಾಡಲು ಸಾಧ್ಯ..?, ಇಲ್ಲಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೆಜ್ಮೆಂಟ್​​ ಮಾಡುವ ಕೆಲಸ ಆಗುತ್ತಿದೆ ಅಷ್ಟೆ. ಈ ರೀತಿ ಕೇವಲ ರೈತರಿಂದ ಮಾತ್ರ ಹಣ ಸಂಗ್ರಹ ಮಾಡುತ್ತಿಲ್ಲ, ನನ್ನಿಂದಲೂ ಹಣ ಕಟ್ಟಿಸಿಕೊಂಡಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಆಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸಚಿವರು, ಈ ಆಡಿಯೋದಲ್ಲಿ ಇರುವುದು ನನ್ನದೇ ಧ್ವನಿ. ಆದರೆ ಕೆಲವು ತಿಂಗಳ ಹಿಂದೆ ಮಾತನಾಡಿರುವುದು ಎಂದು ಸತ್ಯವನ್ನೇ ಒಪ್ಪಿಕೊಂಡಿದ್ದಾರೆ.

ಸುಳ್ಳು ಎಂದು ಸಾಬೀತು ಮಾಡಲು ಹೋದಾಗ ಮಿನಿಸ್ಟರ್​ ರಿವರ್ಸ್​..!

ಆಡಿಯೋ ರಿಲೀಸ್​ ಆಗ್ತಿದ್ದ ಹಾಗೆ ಬಿಜೆಪಿ ನಾಯಕರು ದಿಗಿಲು ಬಡಿದಂತೆ ಆಗಿದ್ರು. ಸಚಿವ ಅಶ್ವತ್ಥ ನಾರಾಯಣ ಇದು ವೈರಲ್​ ಆಡಿಯೋ, ಮಾಧುಸ್ವಾಮಿ ಅವರದ್ದು ಅಲ್ಲ ಎಂದಿದ್ದರು. ಇನ್ನುಳಿದ ಕೆಲವರು ಸುಳ್ಳು ಆಡಿಯೋ ಕ್ರಿಯೇಟ್​ ಎಂದಿದ್ದರು. ಆದರೆ ವಿರೋಧ ಪಕ್ಷಗಳಾದ ಕಾಂಗ್ರೆಸ್​ ಹಾಗು ಜೆಡಿಎಸ್​ಗೆ ಒಳ್ಳೆ ಆಹಾರ ಸಿಕ್ಕಂತಾಯ್ತು. ಮಾಧುಸ್ವಾಮಿ ಆಡಿಯೋದಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ. ನೇರವಾಗಿ ಒಪ್ಪಿಕೊಳ್ಳುವ ಧೈರ್ಯ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. ಇನ್ನು ಕುಮಾರಸ್ವಾಮಿ ಮಾತನಾಡಿ ಮಾಧುಸ್ವಾಮಿ ಸತ್ಯವನ್ನೇ ಹೇಳಿದ್ದಾರೆ. ಇದರಲ್ಲಿ ಮುಚ್ಚು ಮರೆ ಏನಿಲ್ಲ ಎಂದರು. ಸಚಿವರಾದ ಎಸ್​.ಟಿ ಸೋಮಶೇಖರ್​, ಮುನಿರತ್ನ ನೇರವಾಗಿಯೇ ರಾಜೀನಾಮೆಗೆ ಆಗ್ರಹ ಮಾಡಿದ ಬಳಿಕ ನಾನು ಹೇಳಿದ್ದು ತಪ್ಪು ಎಂದು ಸ್ಪಷ್ಟನೆ ಕೊಡಿಸುವಂತೆ ಸಿಎಂ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿದರು. ಸಿಎಂ ಒತ್ತಡಕ್ಕೆ ಮಣಿಯದ ಸಚಿವ ಮಾಧುಸ್ವಾಮಿ, ಆಡಿಯೋದಲ್ಲಿ ಇರುವುದು ನನ್ನದೇ ಧ್ವನಿ, ನೀವು ರಾಜೀನಾಮೆ ಕೇಳಿದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಪಕ್ಷಕ್ಕೆ ಡ್ಯಾಮೇಜ್​, ತೇಪೆ ಹಚ್ಚುವ ಕೆಲಸ ಆರಂಭ..!

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ನಾನು ಪಕ್ಷ ಹಾಗು ಸರ್ಕಾರದ ಇಮೇಜ್​ ಇನ್ನಷ್ಟು ಉತ್ತಮ ಆಗುವಂತೆ ಮಾಡುವುದು ನನ್ನ ಕೆಲಸ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದಿದ್ದಾರೆ. ಇನ್ನು ಎಸ್​.ಟಿ ಸೋಮಶೇಖರ್​, ಬುಧವಾರ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಜೊತೆಗೆ ರಿಜಿಸ್ಟಾರ್​ ನೇತೃತ್ವದಲ್ಲಿ ತುಮಕೂರು ಡಿಸಿಸಿ ಬ್ಯಾಂಕ್​ನಲ್ಲಿ ಈ ರೀತಿಯ ವ್ಯವಹಾರ ನಡೆದಿದ್ಯಾ..? ಎನ್ನುವುದನ್ನು ತನಿಖೆ ಮಾಡಲು ಆದೇಶ ಮಾಡಿದ್ದಾರೆ. ಇದು ರಾಜ್ಯಾದ್ಯಂತ ಪ್ರತಿಯೊಂದ ಸಹಕಾರ ಬ್ಯಾಂಕ್​ನಲ್ಲೂ ಇದೇ ರೀತಿ ವ್ಯವಹಾರ ನಡೆದಿರುವುದು ಎನ್ನುವುದನ್ನು ರೈತರು ಬೀದಿಗೆ ಬಂದು ಹೇಳಬೇಕಿದೆ. ಆದರೆ 50 ಸಾವಿರ ಸಾಲ ತೆಗೆದುಕೊಂಡ ರೈತ, ಒಂದು ವರ್ಷದ ಒಳಗೆ ಪಾವತಿ ಮಾಡಬೇಕು. ಆ ಬಳಿಕ ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಸಾಲ ಪಡೆದುಕೊಳ್ಳಬೇಕು. ಈ ರೀತಿ ಆದಾಗ ಯಾವುದೇ ಬಡ್ಡಿ ಇರುವುದಿಲ್ಲ. ಇಲ್ಲದಿದ್ದರೆ ಸಹಕಾರ ಸಂಘಕ್ಕೆ 1 ಸಾವಿರ ರೂಪಾಯಿ ಪಾವತಿ ಮಾಡಿದರೆ ಮತ್ತೆ ದಾಖಲೆಗಳನ್ನು ಮರುಸೃಷ್ಟಿ ಮಾಡಿಕೊಂಡು ಅದೇ ಸಾಲವನ್ನು ನವೀಕರಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ರೈತರಿಗೆ ಅನುಕೂಲ ಆದರೂ ಸಾವಿರಾರು ಕೋಟಿ ರೂಪಾಯಿ ಸಹಕಾರಿ ಸಚಿವರ ಅಂಗಳಕ್ಕೆ ಬಂದು ಬೀಳುತ್ತದೆ. ಇದೊಂದು ರೀತಿಯ ಅಧಿಕೃತ ಭ್ರಷ್ಟಾಚಾರ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಿದೆ.

Related Posts

Don't Miss it !