ಶ್ರೀರಾಮುಲು ಆಪ್ತನ ‘ಒಂದು ರಾತ್ರಿಯ ಬಂಧನ’ ರಹಸ್ಯ..!

ಸಮಗ್ರವಾಗಿ ತನಿಖೆ ಮಾಡುತ್ತ ಹೋದಾಗ ಸಚಿವ ಶ್ರೀರಾಮುಲುಗೆ ಉರುಳಾಗಬಹುದು..!?

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಚಿವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿರುವ ಆರೋಪದ ಮೇಲೆ ಶ್ರೀರಾಮುಲು ಆಪ್ತ ರಾಜಣ್ಣನ ಬಂಧನ ಮಾಡಿ ಆಡುಗೋಡಿಯ ಟೆಕ್ನಿಕಲ್​ ಸೆಲ್​ನಲ್ಲಿ ಇಡೀ ರಾತ್ರಿ ವಿಚಾರಣೆ ಮಾಡಲಾಯ್ತು. ಬಂಧನದ ವೇಳೆ ಸಚಿವ ಶ್ರೀರಾಮುಲು ಅವರ ಸೆವೆನ್​ ಮಿನಿಸ್ಟರ್​ ಕ್ವಾಟ್ರಸ್​ ನಿವಾಸದಲ್ಲೇ ಇದ್ದ ರಾಜಣ್ಣ, ಸಿಸಿಬಿ ಪೊಲೀಸರ ವಿರುದ್ಧ ವಾಗ್ದಾಳಿ ಮಾಡಿದ್ದ. ಆದರೂ ಬಂಧನ ಮಾಡಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ರಾತ್ರಿ ವಿಚಾರಣೆ ಮಾಡಿದ ಬಳಿಕ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣೆ ಮಾಡುವ ಉದ್ದೇಶದಿಂದ ಕೋರ್ಟ್​ ಎದುರು ಹಾಜರು ಮಾಡಿ ಕಸ್ಟಡಿಗೆ ಪಡೆಯುವ ನಿರ್ಧಾರವನ್ನು ಸಿಸಿಬಿ ಪೊಲೀಸರು ಮಾಡಿದ್ದರು ಎನ್ನುವುದು ಸಿಸಿಬಿ ಮೂಲಗಳಿಂದಲೇ ಮಾಹಿತಿ ಹೊರಬಿದ್ದಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆ ವಿಚಾರಣೆ ಮುಗಿಸಿ ಹಿಂಬದಿ ಬಾಗಿಲಲ್ಲಿ ರಾಜಣ್ಣನನ್ನು ಬಿಡುಗಡೆ ಮಾಡಲಾಯ್ತು.

ದೂರು ಕೊಟ್ಟಿದ್ದು ಜನಸಾಮಾನ್ಯರಲ್ಲ, ಸಿಎಂ ಪುತ್ರ..!!

ಶ್ರೀರಾಮುಲು ಅವರ ಆಪ್ತ ಸಹಾಯಕನ ಬಂಧನಕ್ಕೆ ಯಾರೋ ಸಾಮಾನ್ಯ ವ್ಯಕ್ತಿ ಕೊಟ್ಟ ದೂರಿನ ಮೇಲೆ ಕ್ರಮ ತೆಗೆದುಕೊಂಡಿರಲಿಲ್ಲ. ಕರ್ನಾಟಕ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಪುತ್ರ, ರಾಜ್ಯದ ಛಾಯ ಸಿಎಂ ಎನ್ನುವ ಪಟ್ಟ ಹೊತ್ತಿರುವ ಬಿ.ವೈ ವಿಜಯೇಂದ್ರ ಕೊಟ್ಟಿದ್ದ ದೂರಿನನ್ವಯ ಬಂಧನ ಆಗಿತ್ತು. ಬೆಂಗಳೂರು ನಗರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಕೂಡಲೇ ಅಖಾಡಕ್ಕೆ ಇಳಿದ ಸಿಸಿಬಿ ಪೊಲೀಸರು ಹಿಂದೆ ಮುಂದೆ ನೋಡದೆ ಸಚಿವರ ಮನೆಯಿಂದಲೇ ಬಂಧನ ಮಾಡಿ ಕರೆದುಕೊಂಡು ಬಂದರು. ವಿಜಯೇಂದ್ರ ಸಲ್ಲಿಸಿದ್ದ ದೂರಿನಲ್ಲೇ ಮೂವರಿಗೆ ವಂಚನೆ ಮಾಡಿರುವ ಆಡಿಯೋ ಕ್ಲಿಪ್ಪಿಂಗ್​ ಹಾಗೂ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದರು ಎನ್ನಲಾಗಿತ್ತು. ಆದರೆ ಬೆಳಗ್ಗೆ ನಡೆದ ವಿದ್ಯಮಾನಗಳ ಬಳಿಕ ಬಿಟ್ಟು ಕಳುಹಿಸಿದರು.

ಹತ್ತಾರು ವರ್ಷಗಳಿಂದ‌ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಕುಟುಂಬದ ಜೊತೆ ಗುರುತಿಸಿಕೊಂಡಿದ್ದ ರಾಜಣ್ಣನನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಮೊಬೈಲ್​ ಸೀಜ್​ ಮಾಡಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಬೆಳಗಿನ ಜಾವ 5 ಗಂಟೆಯವರೆಗೆ ವಂಚನೆ ಬಗ್ಗೆ ಮಾಹಿತಿ ಕಲೆಹಾಕಿದ ಬಳಿಕ ರಾಜಣ್ಣನ ವಾಯ್ಸ್ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಪೋನ್ ಸಂಭಾಷಣೆ ತುಣುಕು ಹಾಗೂ ಈಗಿನ ವಾಯ್ಸ್ ಸ್ಯಾಂಪಲ್ ತಾಳೆಯಾಗುತ್ತಾ ಎಂದು ಪರೀಕ್ಷಿಸಲು ಎಫ್ಎಸ್ಎಲ್‌ಗೆ ರವಾನಿಸಲು ಸಿಸಿಬಿ ಪೊಲೀಸರು ತಯಾರಿ ಮಾಡಿಕೊಂಡಿದ್ದರು. ಮೂವರ ಜೊತೆ ಪೋನ್‌ನಲ್ಲಿ‌ ಮಾತಾಡಿರುವ ಕುರಿತು ಸಾಕ್ಷ್ಯ ಸಂಗ್ರಹ ಸಿಕ್ಕಿತ್ತು. ಟೆಂಡರ್ ಬಿಲ್ ಸ್ಯಾಂಕ್ಷನ್ ಬಗ್ಗೆ ಮಾತಾಡಿರುವ ಅಡಿಯೋ ಕ್ಲಿಪ್ ಕೂಡ ಸಿಕ್ಕಿತ್ತು ಎನ್ನಲಾಗಿದೆ. ಆದ್ರೆ ಏಕಾಏಕಿ ಬಿಟ್ಟು ಕಳುಹಿಸುವ ನಿರ್ಧಾರ ಆಗಿದ್ದು ಯಾಕೆ ಅನ್ನೋ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

ರಾತ್ರಿ ಬಂಧನ, ಬೆಳಗ್ಗೆ ಸಚಿವ ಶ್ರೀರಾಮುಲು ಸ್ಪಷ್ಟನೆ..!

ರಾಜು ನನಗೆ ಗೊತ್ತಿರುವ ಹುಡುಗ. ತನಿಖೆ ನಡೆಯುವ ಸಮಯದಲ್ಲಿ ನಾನು ಮಾತಾಡುವುದು ಸರಿಯಲ್ಲ ಅಂತಾ ಅಂದುಕೊಂಡಿದ್ದೇನೆ. ಯಾರೂ ಕೂಡಾ ಯಾರದ್ದೇ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ವಿಜಯೇಂದ್ರ ಅವರ ಜೊತೆ ಕೂಡಾ ಮಾತಾಡ್ತೀನಿ. ಸಿಎಂ ಜೊತೆ ಕೂಡ ಮಾತಾಡುತ್ತೇನೆ. ತನಿಖೆ ಆಗಿ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ವಿಜಯೇಂದ್ರ ನನ್ನ ಗಮನಕ್ಕೆ ತಂದಿಲ್ಲ. ಮೊದಲೇ ನನ್ನ ಗಮನಕ್ಕೆ ತಂದಿರುತ್ತಿದ್ದರೆ ಕೂರಿಸಿ ವಿಚಾರಿಸಿ ಮಾತಾಡುತ್ತಿದ್ದೆ. ನನಗೆ ತಿಳಿಸದೇ ಅರೆಸ್ಟ್ ಮಾಡಿದರು ಎಂಬ ವಿಚಾರಕ್ಕೆ ಬೇಸರವಿದೆ. ರಾಜು ಅಧಿಕೃತವಾಗಿ ನನ್ನ ಬಳಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ನಾನು ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿಯಲ್ಲ. ನನಗೆ ನೋವಾಗಿದೆ ಎಂಬ ಮಾತು ಸಮಂಜಸ ಇದೆ ಎಂದಿದ್ದರು.

ಶ್ರೀರಾಮುಲು ಮಾತಿಗೆ ಟ್ವಿಟರ್​ನಲ್ಲಿ ಉತ್ತರ..!

ಶ್ರೀರಾಮುಲು ಬೇಸವಾಗಿದೆ. ನೋವಾಗಿದೆ ಎಂದು ಹೇಳಿದ ಬಳಿಕ ವಿಜಯೇಂದ್ರ ಟ್ವೀಟ್​ ಮಾಡಿ ಸಮಜಾಯಿಸಿ ನೀಡುವ ಕೆಲಸ ಮಾಡಿದರು. ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ. ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ ಎಂದು ವಿಜಯೇಂದ್ರ ಟ್ವೀಟ್​ ಮಾಡಿದ್ದರು.

ಶ್ರೀರಾಮುಲು ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ಶ್ರೀರಾಮುಲು ಆಪ್ತ ಸಹಾಯಕನ ಬಂಧನದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಮುಲು ಲಂಚ ತೆಗೆದುಕೊಳ್ಳೋನಿಗೆ ಸಪೋರ್ಟ್ ಮಾಡಿದ್ರೆ, ಸಚಿವರ ಕಣ್ಗಾವಲಿನಲ್ಲೇ ವಸೂಲಿ ಮಾಡ್ತಿದ್ದಾನೆ ಅಂತ ಅರ್ಥ. ಲಂಚ ತೆಗೆದುಕೊಂಡು ಕೆಲಸ ಮಾಡ್ತಾನೆ ಅಂದ್ರೆ ಹೇಗೆ..? ಲಂಚ ಯಾರೇ ತೆಗೆದುಕೊಳ್ಳಲಿ ಕ್ರಮ ತೆಗೆದುಕೊಳ್ಳಬೇಕಲ್ಲ..!? ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಬಿಡುಗಡೆ ಮಾಡಿದ್ದು ಹೇಗೆ..? ಯಾಕೆ..?

ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಶ್ರೀರಾಮುಲು ಸ್ವಲ್ಪ ಗರಂ ಆಗಿಯೇ ಇದ್ದರು. ಬಳಿಕ ಸಿಎಂ ಕಚೇರಿಗೆ ತೆರಳಿ ನಂತರ ಸಭೆಗೆ ತೆರಳಿದ್ರು. ಅಷ್ಟರಲ್ಲಿ ಈ ಕಡೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಭೆ ನಡೆಸಿದ್ರು. ಡಿಸಿಪಿ ರವಿಕುಮಾರ್, ಡಿಸಿಪಿ ಬಸಪ್ಪ ಅಂಗಡಿ ಹಾಗೂ ಎಸಿಪಿ ನಾಗರಾಜ್ ಜೊತೆ ಸಭೆ ಮಾಡಿ ತನಿಖೆ ವೇಳೆ ಇದುವರೆಗೆ ಕಂಡುಬಂದ ಅಂಶಗಳ ಬಗ್ಗೆ ಚರ್ಚೆ ಮಾಡಿದ್ರು. ಮಧ್ಯಾಹ್ನದ ವೇಳೆಗೆ ಹಿಂಬದಿ ಬಾಗಿಲಿನಿಂದ ರಾಜಣ್ಣನನ್ನು ಬಿಟ್ಟು ಕಳುಹಿಸುವ ಕೆಲಸ ಮಾಡಲಾಯ್ತು. ಸಿಎಂ ಹಾಗೂ ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ಕೈಗೆ ಸಿಕ್ಕಾಗ ಸಿಎಂ ಏನನ್ನೂ ಮಾತನಾಡದೆ ಕೈ ಮುಗಿದು ಸುದ್ದಿಗೋಷ್ಠಿಯಿಂದ ಹೊರಟರು. ಶ್ರೀರಾಮುಲು ಅವರನ್ನು ಕೇಳಿದಾಗ ಶ್ರೀರಾಮುಲು ಅವರ ತೋಳು ತಿವಿದು, ಮಾತಾಡದಂತೆ ಸ್ವತಃ ಸಿಎಂ ಕರೆದುಕೊಂಡು ಹೋದರು.

ಬಂಧನ, ವಿಚಾರಣೆ, ಬಿಡುಗಡೆ ಸುತ್ತ ಅನುಮಾನದ ಹುತ್ತ..!

ಸಿಸಿಬಿ ಪೊಲೀಸರು ಬಂಧನವಲ್ಲ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ ಎಂದು ಸಮಜಾಯಿಸಿ ಕೊಟ್ಟಿರಬಹುದು. ಆದರೂ ಕೆಲವೊಂದು ಅನುಮಾನಗಳಿಗೆ ಈ ಪ್ರಕರಣ ಸಾಕ್ಷಿಯಾಗಿದೆ. ಪ್ರಕರಣದ ಹಿಂದೆ ಯಾವೆಲ್ಲಾ ವಿಚಾರಗಳು ಕೆಲಸ ಮಾಡಿರಬಹುದು ಎನ್ನುವುದನ್ನು ನೋಡೋದಾದ್ರೆ

  • ಸಚಿವರು ಸಿಎಂ ಜೊತೆಗೆ ಮಾತನಾಡಿದ ಬಳಿಕ ಬಿಟ್ಟು ಕಳುಹಿಸಿರಬಹುದು.
  • ವಿಜಯೇಂದ್ರರ ಯಾವುದೋ ಕೆಲಸಕ್ಕೆ ಅಡ್ಡಿಯಾಗಿದ್ದಕ್ಕೆ ಶ್ರೀರಾಮುಲು ಬೆದರಿಸಲು ಈ ದಾಳ ಇರಬಹುದು.
  • ಈಗಾಗಲೇ ತಿರುಗಿ ಬಿದ್ದಿರುವ ರಮೇಶ್​ ಜಾರಕಿಹೊಳಿ ಬೆಂಬಲಿಸದಂತೆ ಮೊದಲೇ ವಾರ್ನ್​ ಇರಬಹುದು.
  • ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಉದ್ಯಮಿಗಳ ಸಂಭಾಷಣೆ ಹಾಗೂ ಸಂದೇಶಗಳು ಇದ್ದವು ಎನ್ನಲಾಗಿದ್ದು, ಲಾಬಿಗೆ ಮಣಿದಿರಬಹುದು.
  • ಸಮಗ್ರವಾಗಿ ತನಿಖೆ ಮಾಡುತ್ತ ಹೋದಾಗ ಸಚಿವ ಶ್ರೀರಾಮುಲುಗೆ ಉರುಳಾಗಬಹುದು ಎನ್ನುವ ಕಾರಣವೂ ಇರಬಹುದು.

ಏನೂ ಆಗಿಲ್ಲ, ಸಚಿವರ, ಸಿಎಂ ಹಾಗೂ ಸಿಎಂ ಪುತ್ರನ ಹೆಸರೇಳಿ ಹಣ ವಸೂಲಿ ಮಾಡಿಲ್ಲ ಎಂದಾದರೆ ವಿಜಯೇಂದ್ರ ದೂರು ದಾಖಲಿಸಿದ್ದು ಸುಳ್ಳು ಎಂದೇ ಅರ್ಥವಲ್ಲವೇ..? ವಿಜಯೇಂದ್ರ ದೂರು ನಿಜ ಎನ್ನುವುದಾದರೆ ಆರೋಪಿಯನ್ನು ಬಿಟ್ಟು ಕಳುಹಿಸಿದ್ದು ರಾಜಕೀಯ ಒತ್ತಡವಲ್ಲದೆ ಇನ್ನೇನು..? ಆರೋಪಿ ರಕ್ಷಣೆ ಬಿಜೆಪಿಯ ಹೊಸ ಅವತಾರ.

Related Posts

Don't Miss it !