22 ವರ್ಷದ ಬಳಿಕ ತಾಯಿಗಾಗಿ ಮಿಡಿದ ಮಲೆನಾಡ ಮಗಳು..! ಕೊನೆಗಾಲಕ್ಕೆ ಬಂದ ಕಳೆದು ಹೋದ ಕಂದ..

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದೆ. 22 ವರ್ಷಗಳ ಬಳಿಕ ತನ್ನ ತಾಯಿಯನ್ನು ಹುಡುಕಿಕೊಂಡು ಬಂದ ಮಗಳು ಅಮ್ಮನನ್ನು ಕಂಡು ಕಣ್ಣೀರಾಗಿದ್ದಾರೆ. ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ ಎಂದರೂ ತಪ್ಪಾಗಲಾರದು. ಸರಿಯಾಗಿ 2000ನೇ ಇಸವಿ, ಅಂಜಲಿ ಇನ್ನೂ 9 ವರ್ಷದ ಪುಟ್ಟ ಹುಡುಗಿ, ಅಮ್ಮನ ಜೊತೆಯಲ್ಲಿ ಕಾಫಿ ಕುಯ್ಲು ಮಾಡಲು ಹೋಗುತ್ತಿದ್ದಳು. ಅಂದು ಅಮ್ಮ ಗದರಿದಳು ಎಂದು ಮನೆ ಬಿಟ್ಟು ಹೋದ ಬಾಲಕಿ ಇಂದು ಮೂರು ಮಕ್ಕಳ ತಾಯಿ ಆದ ಬಳಿಕ ಹೆತ್ತಮ್ಮನನ್ನು ನೋಡಲು ಚಿಕ್ಕಮಗಳೂರಿಗೆ ವಾಪಸ್​ ಆಗಿದ್ದಾಳೆ. 22 ವರ್ಷದ ಬಳಿಕ ಬಂದ ಮಗಳನ್ನು ಆಲಂಗಿಸಿಕೊಂಡ ತಾಯಿ ಮಮ್ಮಲ ಮರುಗಿದ್ದಾಳೆ.

ಏನಿದು 22 ವರ್ಷದ ತಾಯಿ ಮಗಳ ಅನುಬಂಧ..?

ಮೂಲತ ತಮಿಳುನಾಡು ಮೂಲದ ಬಡ ಕುಟುಂಬ ಕಾಫಿ ಎಸ್ಟೇಟ್​ನಲ್ಲಿ ಕೆಲಸ ಮಾಡುವ ಉದ್ದೇಶದಿಂದ 30 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಕಡೆಗೆ ವಲಸೆ ಬಂದಿತ್ತು. ಮೂಡಿಗೆರೆಯ ಮುದ್ರೆಮನೆ ಎಂಬಲ್ಲಿ ನೆಲೆ ಕಂಡುಕೊಂಡ ಕುಟುಂಬ, ಅಲ್ಲೇ ಜೀವನ ನಡೆಸುತ್ತಿತ್ತು. ತಮಿಳುನಾಡಿನ ಚೈತ್ರಾಗೆ 4 ಗಂಡು ಮಕ್ಕಳು, 7 ಮಂದಿ ಹೆಣ್ಣು ಮಕ್ಕಳು, ದೊಡ್ಡ ಸಂಸಾರ. ಗಂಡ ಕುಡುಕ. ಅದರಲ್ಲಿ ಅಂಜಲಿ ಕೂಡ ಒಬ್ಬಳು. 22 ವರ್ಷಗಳ ಹಿಂದೆ ಕಾಫಿ ಎಸ್ಟೇಟ್​ನಲ್ಲಿ ಮರದ ದಿಮ್ಮಿಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸಾಕು ಆನೆಗಳ ತಂಡ ಬಿಡಾರ ಹೂಡಿತ್ತು. ಅಂದು ತಾಯಿ ಜೊತೆಗೆ ಕಾಫಿ ಕೊಯ್ಲಿಗೆ ಹೋಗಿದ್ದ ಅಂಜಲಿ, ಮನೆಗೆ ಬಂದ ಬಳಿಕ ಮುಖಕ್ಕೆ ಸಿಂಗಾರ ಮಾಡಿಕೊಳ್ಳುತ್ತಿದ್ದಳಂತೆ. ಅಂದು ತಾಯಿ ಅಂಜಲಿಗೆ ಗದರಿದ್ದರಿಂದ ಎದ್ದು ಹೊರಕ್ಕೆ ಹೋದವಳು ಸಿಕ್ಕಿರಲಿಲ್ಲ. ಕಾಫಿ ಎಸ್ಟೇಟ್​ನಲ್ಲಿ ಹುಡುಕುತ್ತಿದ್ದಾಗ, ಆನೆ ಮಾವುತರ ಜೊತೆಗೆ ಹೋದಲು ಎನ್ನುವ ಸುದ್ದಿ ಗೊತ್ತಾಗಿತ್ತು. ಮೊದಲೇ ಮಕ್ಕಳು ಹೆಚ್ಚಿದ್ದವು ಹಾಗೂ ಮಾವುತರನ್ನು ಹುಡುಕುವಷ್ಟು ಶಕ್ತವಾಗಿಲ್ಲದ ಕಾರಣಕ್ಕೆ ಚೈತ್ರಾ ಹಾಗೂ ಆಕೆಯ ಗಂಡ ಸುಮ್ಮನಾಗಿದ್ದರು. ಕಳೆದ 4 ವರ್ಷದ ಹಿಂದೆ ಗಂಡನೂ ಸತ್ತಿದ್ದು, ಇದೀಗ 22 ವರ್ಷಗಳ ಹಿಂದೆ ಹೋಗಿದ್ದ ಅಂಜಲಿ ವಾಪಸ್​ ತಾಯಿ ಹುಡುಕುತ್ತಾ ಕಾಫಿ ನಾಡಿಗೆ ಬಂದಿದ್ದಾಳೆ.

Read This;

9 ವರ್ಷದ ಬಾಲೆಗೆ ವಿಳಾಸ ಮತ್ತೆ ಸಿಕ್ಕಿದ್ದು ಹೇಗೆ..?

9 ವರ್ಷದ ವಯಸ್ಸಿನಲ್ಲಿ ಆನೆ ಮಾವುತರ ಜೊತೆಗೆ ಕೇರಳದ ಕಡೆಗೆ ಪ್ರಯಾಣ ಬೆಳೆಸಿದ್ದ ಅಂಜಲಿಯನ್ನು ಮಾವುತನೇ ಪೋಷಕನಾಗಿದ್ದ. ತನ್ನ ಜೀವನದಲ್ಲಿ ಸಿಕ್ಕ ಅಂಜಲಿಯನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ್ದ. ಮನೆಗೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಅಂಜಲಿಗೆ ಕೇರಳದ ನೆಲ್ಲಮಣಿ ಗ್ರಾಮದ ಸಾಜಿ ಎಂಬಾತನ ಜೊತೆಗೆ ಮದುವೆಯನ್ನೂ ಮಾಡಲಾಗಿತ್ತು. 3 ಮಕ್ಕಳ ತಾಯಿಯಾಗಿ ಸಂಸಾರ ನೌಕೆ ಸಾಗಿಸುತ್ತಿದ್ದ ಅಂಜಲಿಗೆ ತನ್ನ ತಾಯಿಯನ್ನು ನೋಡುವ ಮನಸ್ಸಾಗಿತ್ತು. ಈ ಬಗ್ಗೆ ತನ್ನ ಗಂಡನ ಬಳಿಕ ಹೇಳಿಕೊಂಡ ಅಂಜಲಿಯ ಆಸೆಯನ್ನು ಈಡೇರಿಸುವಲ್ಲಿ ಸಾಜಿ ಪ್ರಯತ್ನ ನಡೆಸಿದ್ದ. ಕಳೆದ 3 ವರ್ಷಗಳಿಂದ ಹುಡುಕಾಡಿದ ಬಳಿಕ ಮುದ್ರೆಮನೆಯ ಎಸ್ಟೇಟ್​ನಲ್ಲಿ ಒಬ್ಬಂಟಿ ಜೀವನ ನಡೆಸುತ್ತಿದ್ದ ಚೈತ್ರಾರನ್ನು ಪತ್ತೆ ಮಾಡುವಲ್ಲಿ ಯಶಸ್ಸು ಸಾಧಿಸಲಾಗಿತ್ತು. ಮೀನು ಮಾರಾಟಗಾರ ಫಿಶ್​ ಮೊನು, ಮುಸ್ತಾಫ ಅವರ ಶ್ರಮವೂ ಈ ಸಂತಸಕ್ಕೆ ಕಾರಣವಾಗಿದೆ.

Also Read;

ತುಂಬು ಕುಟುಂಬದ ತಾಯಿ, ಇಂದು ಒಂಟಿ ಜೀವ..!

ಮಗಳು ಅಂಜಲಿ ಮನೆ ಬಿಟ್ಟು ಹೋದಾಗ ಚೈತ್ರಾ ಕುಟುಂಬದಲ್ಲಿ ಆಳಿಗೊಂದು ಕಾಲಿಗೊಂದು ಮಕ್ಕಳು. 4 ಗಂಡು ಮಕ್ಕಳು ಹಾಗೂ 7 ಮಂದಿ ಹೆಣ್ಣು ಮಕ್ಕಳನ್ನು ಅಡೆದಿದ್ದರೂ ಇಂದು ಅದೇ ಚೈತ್ರಾ ಒಂಟಿ ಜೀವ. ವಯಸ್ಸಾದ ಈ ಸಮಯದಲ್ಲಿ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಎಲ್ಲರೂ ದೊಡ್ಡವರಾದ ಬಳಿಕ ತಮ್ಮ ತಮ್ಮ ಸಂಸಾರ ಸಾಗಿಸಿಕೊಂಡು ನನ್ನಿಂದ ದೂರವಾದರು. ನಾನು ಕೈಲಾದ ಕೆಲಸ ಮಾಡಿಕೊಂಡು ಇಲ್ಲೇ ಜೀವನ ನಡೆಸುತ್ತಿದ್ದೇನೆ. ಕೊನೆಯ ಮಗಳಿಗೆ ಹೆರಿಗೆಯಾಗಿದ್ದು, ಬಾಣಂತನ ಕೂಡ ನಾನೇ ಮಾಡುತ್ತಿದ್ದೇನೆ ಎನ್ನುತ್ತಿದ್ದ ಚೈತ್ರಾಳಿಗೆ ಅಂಜಲಿ ಆಶಾಕಿರಣವಾಗಿ ಕಂಡಿದ್ದಾಳೆ. ಕನ್ನಡ ಮಾತನಾಡುತ್ತಿದ್ದ 9 ವರ್ಷದ ಬಾಲಕಿ ಇಂದು ಕನ್ನಡವನ್ನು ಸಂಪೂರ್ಣ ಮರೆತಿಲ್ಲ, ನನ್ನ ಜೊತೆ ಹೋಗೋಣ ಬಾ ಎಂದು ತಾಯಿಯನ್ನು ಕರೆಯುತ್ತಿದ್ದ ದೃಶ್ಯ ಕಣ್ಣೀರು ತರಿಸುವಂತಿತ್ತು. ಅದೇನೇ ಆಗಲಿ ಅಂದು ಹೆಚ್ಚು ಮಕ್ಕಳಿದ್ದವು ಎನ್ನುವ ಕಾರಣಕ್ಕೋ ಅಥವಾ ಹುಡುಕುವ ಸಾಮರ್ಥ್ಯವಿಲ್ಲದೆಯೋ ತನ್ನ ಮಗಳು ಎಲ್ಲೇ ಇರಲಿ ಚೆನ್ನಾಗಿರಲಿ ಎಂದುಕೊಂಡಿದ್ದ ಜೀವಕ್ಕೆ ಇಂದು ಆಕೆಯೇ ಆಶ್ರಯ ನೀಡುವಂತಾಗಿದೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವುದಕ್ಕೆ ಇದೊಂದು ಸಾಕ್ಷಿ.

Related Posts

Don't Miss it !