ಮೋದಿ ಮಾತಿಗೂ ಬೆಲೆ ಇಲ್ಲ.. ಉದಯವಾಯ್ತು ‘ಗ್ರಾಮ ಭಾರತ’..!

ಬಿಜೆಪಿಗರೇ ಕೇಳಲಿಲ್ಲ ಮೋದಿ ಮಾತು..!? - ಏನಿದು ಮೊಗ್ರ ಸೇತುವೆ ಘಟನೆ ..? - ಪಕ್ಷಗಳ ವಿರುದ್ಧವೇ ಜನ ಸಂಘಟನೆ..! - ‘ಗ್ರಾಮ ಭಾರತ’ದ ಗಟ್ಟಿ ಕೆಲಸ..!

ಕವಿ ಶಿವರಾಮ ಕಾರಂತ ಅವರು ಬರೆದಿರುವ ಬೆಟ್ಟದ ಜೀವ ಕಾದಂಬರಿ ಓದಿದ್ದವರಿಗೆ ಗುತ್ತಿಗಾರು ಅನ್ನೋ ಹೆಸರು ಚಿರಪರಿಚಿತ. ಗುತ್ತಿಗಾರು ಪಂಚಾಯ್ತಿ ಸುಳ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಮೀಪ ಇರುವ ಒಂದು ಗ್ರಾಮ. ಗುತ್ತಿಗಾರು ಪರಿಸರದ ಬಗ್ಗೆ ಕವಿ ಶಿವರಾಮ ಕಾರಂತ ಸಮಗ್ರವಾಗಿ ಸೊಗಸಾಗಿ ವರ್ಣಿಸಿದ್ದಾರೆ. ಕಾದಂಬರಿ ಅಚ್ಚರಿಗಳ ನಡುವೆ ದಟ್ಟಾರಣ್ಯಕ್ಕೆ ಕರೆದೊಯ್ಯುತ್ತದೆ. ಈಗ ನಾವು ಹೇಳಲು ಹೊರಟಿರುವ ಮಾಹಿತಿಯೂ ಅದೇ ರೀತಿ ಇದ್ದು, ಅಚ್ಚರಿ ಹಾಗೂ ಅಸಹ್ಯ ಹುಟ್ಟಿಸುವಂತಿದೆ. ನಮ್ಮ ಜನಪ್ರತಿನಿಧಿಗಳು ಎನಿಸಿಕೊಂಡವರು ನಡೆದುಕೊಳ್ಳುವ ರೀತಿ ಬದಲಾವಣೆಯ ದಿಕ್ಕನ್ನು ತೋರಿಸುತ್ತಿದೆ ಈ ಗುತ್ತಿಗಾರು ಪಂಚಾಯ್ತಿ.

ಸೇತುವೆ ಕಾಮಗಾರಿ

ಬಿಜೆಪಿಗರೇ ಕೇಳಲಿಲ್ಲ ಮೋದಿ ಮಾತು..!?


ದಕ್ಷಿಣ ಕನ್ನಡ ಎಂದರೆ ಬಿಜೆಪಿ ಹಾಗೂ ಹಿಂದುತ್ವದ ಭದ್ರಕೋಟೆ ಎಂಬುದು ಇಡೀ ರಾಜ್ಯಕ್ಕೇ ಗೊತ್ತಿರುವ ಸಂಗತಿ. ಇದೇ ಕಾರಣದಿಂದ ಎಸ್​. ಅಂಗಾರ ಸತತ 6 ಬಾರಿ ಸೋಲಿಲ್ಲದ ಸರದಾರ ಎಂಬಂತೆ ಗೆಲುವಿನ ಏಣಿ ಮೇಲೆ ಏರಿ ಹೋಗುತ್ತಲೇ ಇದ್ದಾರೆ. ಇದೀಗ ಶಾಸಕ ಮಾತ್ರವಲ್ಲ, ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವನಾಗಿದ್ದಾರೆ. ಆದರೂ ತಾವು ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೊಗ್ರ ಹೊಳೆಗೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರೂ ಕೆಲಸ ಮಾತ್ರ ಆಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಸಂಪಾದಿಸಿದ ಹಣ ಹೊಂದಿಸಿಕೊಂಡು ಹೊಳೆ ದಾಟಲು ಸೇತುವೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಪತ್ರಕರ್ತ ಮಹೇಶ್​ ಪುಚ್ಚಪಾಡಿ

ಏನಿದು ಮೊಗ್ರ ಸೇತುವೆ ಘಟನೆ ..?

ಕುಕ್ಕೆ ಸುಬ್ರಹ್ಮಣ್ಯ, ಕುಮಾರಪರ್ವತ, ಮಡಿಕೇರಿ ಹೀಗೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಹಬ್ಬಿದೆ. ಈ ಪಶ್ಚಿಮ ಘಟ್ಟದಿಂದ ಹರಿದು ಬರುವ ತೊರೆಗಳು ಮುಂದೆ ಹೊಳೆಗಳಾಗಿ ನದಿಗಳಾಗಿ ಸಾಗರ ಸೇರುತ್ತವೆ. ಗುತ್ತಿಗಾರು ಪಂಚಾಯ್ತಿಯ ಮೊಗ್ರ-ಏರಣಗುಡ್ಡೆ – ಕಮಿಲ‌ ಜನವಸತಿ ಪ್ರದೇಶ ಹಾಗೂ ಬಳ್ಪ ಗ್ರಾಮದ ಜನರು ಮಳೆಗಾಲದಲ್ಲಿ ಗುತ್ತಿಗಾರು ಪಂಚಾಯ್ತಿಗೆ ಬರಲು ಸುಮಾರು 10 ಕಿಲೋ ಮೀಟರ್​ ಸುತ್ತಾಡಿಕೊಂಡು ಬರುವ ಅನಿವಾರ್ಯತೆ ಇತ್ತು. ಮಳೆಗಾಲ ಅಲ್ಲದಿದ್ದರೆ ಕನಿಷ್ಠ 2 ಕಿಲೋ ಮೀಟರ್​ ಸುತ್ತಿಕೊಂಡು ಬರಬೇಕಾದ ಸನ್ನಿವೇಶವಿತ್ತು. ಸಾಕಷ್ಟು ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ. ಇದನ್ನು ಮನಗಂಡ ಪತ್ರಕರ್ತ ಮಹೇಶ್​ ಪುಚ್ಚಪ್ಪಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯಕ್ಕೆ ತನ್ನೂರಿನ ಸ್ಥಿತಿಗತಿ ಬಗ್ಗೆ ಸಾಕ್ಷ್ಯಚಿತ್ರವನ್ನೇ ರವಾನೆ ಮಾಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ಉತ್ತರವೂ ಬಂತು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆಯೂ ಬಂತು. ಕೆಲಸ ಮಾತ್ರ ಆಗಲಿಲ್ಲ.

ಸೇತುವೆ ಉದ್ಘಾಟನೆ ದಿನ ಜನರ ಸಂಭ್ರಮ

ಪಕ್ಷಗಳ ವಿರುದ್ಧವೇ ಜನ ಸಂಘಟನೆ..!

ಚುನಾವಣೆ ಸಮಯದಲ್ಲಿ ಆಶ್ವಾಸನೆ ನೀಡುವುದು, ಆ ಬಳಿಕ ತಿರುಗಿಯೂ ನೋಡದ ಜನಪ್ರತಿನಿಧಿಗಳ ಅಸಡ್ಡೆಯಿಂದ ಬೇಸತ್ತ ಮಹೇಶ್​ ಪುಚ್ಚಪ್ಪಾಡಿ, ‘ಗ್ರಾಮ ಭಾರತ’ ಎನ್ನುವ ಯುವಕರ ಗುಂಪನ್ನು ಕಟ್ಟಿಕೊಂಡು ಕಳೆದ ಪಂಚಾಯ್ತಿ ಚುನಾವಣೆಯಲ್ಲಿ 1 ವಾರ್ಡ್​ನ 4 ಜನರನ್ನು ಪಕ್ಷೇತರವಾಗಿ ಗೆಲ್ಲಿಸಿಕೊಂಡು ಪಕ್ಷ ರಾಜಕಾರಣಕ್ಕೆ ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯನ್ನೂ ಪಾಲಿಸದ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದು, ಜನರಿಂದಲೇ ಹಣ ಸಂಗ್ರಹ ಮಾಡಿ ಜನರಿಗಾಗಿಯೇ ಸೇತುವೆ ನಿರ್ಮಿಸಿದ್ದಾರೆ. 10 ಅಡಿ ಎತ್ತರ 20 ಮೀಟರ್​ ಉದ್ದದ ಸೇತುವೆ ನಿರ್ಮಾಣ ಮಾಡಿದ್ದು, ಈ ಸೇತುವೆಯಿಂದ ಹೊಳೆ ತುಂಬಿ ಹರಿಯುವಾಗಲು ಶಾಲಾ ಮಕ್ಕಳಿಗೆ ಸಮಸ್ಯೆಯಿಲ್ಲ. ಗುತ್ತಿಗಾರು ಪಚಾಯ್ತಿಗೆ ಬರುವ ಮೊಗ್ರ, ಬಳ್ಪದ ಜನರಿಗೂ ಸಂಕಷ್ಟವಿಲ್ಲ. ಸುಬ್ರಹ್ಮಣ್ಯ, ಮಂಜೇಶ್ವರ, ಜಾಲ್ಸೂರು – ಬೆಂಗಳೂರು ಹೆದ್ದಾರಿ ತಲುವ ಜನರಿಗೂ ಸಮಸ್ಯೆಯಿಲ್ಲ.

ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರಿಂದಲೇ ಶ್ರಮಧಾನ

‘ಗ್ರಾಮ ಭಾರತ’ದ ಗಟ್ಟಿ ಕೆಲಸ..!

ಹಳ್ಳಿಯ ಪಂಚಾಯ್ತಿಯಿಂದ ದಿಲ್ಲಿಯ ಕೇಂದ್ರ ಸರ್ಕಾರದ ತನಕ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೇತುವೆ ನಿರ್ಮಾಣಕ್ಕೆ ಹೇಳಿದರೂ ಕೆಲಸ ಆಗದ ಕಾರಣಕ್ಕೆ ‘ಗ್ರಾಮ ಭಾರತ’ ಉದಯವಾಗಿದೆ. ಭಾರತ.. ಭಾರತ.. ಎಂದು ಬೀಗುವುದು ಪ್ರಯೋಜನವಿಲ್ಲ. ಗ್ರಾಮದಲ್ಲೇ ಜನಸೇವೆ ಮಾಡುತ್ತೇವೆ. ಇಲ್ಲಿನ ಜನರಿಗೇ ತನ್ನೂರೇ ಭಾರತ ಎಂಬುದನ್ನು ‘ಗ್ರಾಮ ಭಾರತ’ದ ಸದಸ್ಯರು ಸಾಧಿಸಿ ತೋರಿಸಿದ್ದಾರೆ. ನಾವು ಕಟ್ಟಿರುವ ಸೇತುವೆ ಮೇಲೆಯೇ ಮುಂದಿನ ಬಾರಿ ಅಂಗಾರ ಮತ ಕೇಳಲು ಬರಬಹುದು ಎನ್ನುವುದು ಜನರ ನಿರೀಕ್ಷೆ. ಆದರೆ ಸೇತುವೆ ಮೇಲೆ ಮನುಷ್ಯರು ಹಾಗೂ ಬೈಕ್​ಗಳ ಸಂಚಾರ ಮಾತ್ರ ಸಾಧ್ಯವಿದೆ. ಕಾರುಗಳು, ದೊಡ್ಡ ವಾಹನಗಳಿಗೆ ಅವಕಾಶ ಇಲ್ಲ. ಭಾರತ ಬದಲಾಗ್ತಿದೆ.

ಗಾಡಿ ಓಡಿಸಿಕೊಂಡು ಬರುತ್ತಿರುವ ಮಹಿಳೆ

Related Posts

Don't Miss it !