ಸೋಮವಾರ ಭಾರತ್​ ಬಂದ್,​ ಬೆಂಬಲ, ನೈತಿಕ ಬೆಂಬಲ..! ಮತ್ತು ಪರಿಣಾಮ..?

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ಮುಂದಾಗಿರುವ 3 ಕೃಷಿ ಕಾಯ್ದೆಗಳನ್ನು ಲಕ್ಷಾಂತರ ರೈತರು ವರ್ಷದಿಂದಲೂ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕರೆದಿದ್ದ ಸಂಧಾನ ಸಭೆ ಹತ್ತಾರು ಬಾರಿ ವಿಫಲವಾಗಿದೆ. ಈ ನಡುವೆ ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಹತ್ತಾರು ಪ್ರಯತ್ನಗಳನ್ನು ಮಾಡಿತ್ತು. ಪ್ರತಿಭಟನಾ ಸ್ಥಳದಲ್ಲಿ ನೂರಾರು ರೈತರು ಸಾವನ್ನಪ್ಪಿದ್ದಾರೆ. ಇಡೀ ಕೇಂದ್ರ ಸರ್ಕಾರ ಹೋರಾಟ ಮಾಡುತ್ತಿರುವ ಜನ ರೈತರೇ ಅಲ್ಲ ಎನ್ನುವ ವಾದವನ್ನು ಮುಂದಿಟ್ಟಿದ್ದು, ಅನ್ನದಾತರ ಆಕ್ರೋಶ ಇಮ್ಮಡಿಯಾಗುವಂತೆ ಮಾಡಿತ್ತು. ಕೊರೊನಾ ಆರ್ಭಟದ ಕಾರಣಕ್ಕೆ ಸಾಕಷ್ಟು ದಿನಗಳ ಕಾಲ ಬಚ್ಚಿಟ್ಟಿದ್ದ ಆಕ್ರೋಶ ಸೋಮವಾರ ಪ್ರದರ್ಶನ ಆಗಲಿದೆ. ಆದರೆ ರಾಜಕೀಯ ಕಾರಣಗಳಿಂದ ಕೆಲವು ರಾಜ್ಯಗಳಲ್ಲಿ ಬಂದ್​ಗೆ ಬೆಂಬಲ ಸಿಗುವುದು ಬಹುತೇಕ ಅನುಮಾನ. ಅದರ ಜೊತೆಗೆ ಜನರೂ ಸಹ, ಕೊರೊನಾ ಸೋಂಕಿನ ನೋವಲ್ಲಿ ಈಗಷ್ಟೇ ಹಣ ನೋಡುತ್ತಿದ್ದು ಬಂದ್​ಗೆ ಬೆಂಬಲ ನೀಡದೆ ನೈತಿಕ ಬೆಂಬಲ ಎನ್ನುವ ಮಾತನ್ನಾಡುತ್ತಿದ್ದಾರೆ.

ಭಾರತ್​ ಬಂದ್​ಗೆ ತಲ್ಲಣಿಸುತ್ತಾ ಕರ್ನಾಟಕ..!?

ಸಂಯುಕ್ತ ಕಿಶಾನ್ ಮೋರ್ಚಾ ಸೋಮವಾರ ಕರೆ ನೀಡಿರುವ ಭಾರತ್ ಬಂದ್​ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಹೆಚ್ಚಿನ ಸಂಘಟನೆಗಳು ನೈತಿಕ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಂದ್​ ಆಗುವುದು ಕಷ್ಟ ಎನ್ನಲಾಗ್ತಿದೆ. ಬಿಜೆಪಿ ಹೊರತುಪಡಿಸಿದ ರಾಜ್ಯಗಳಲ್ಲಿ ಬಂದ್​ ಆಗಲಿದೆ ಎನ್ನವ ಮಾತುಗಳು ಕೇಳಿ ಬರುತ್ತಿವೆ. ಆದರೆ ಸಾಕಷ್ಟು ರೈತ ಸಂಘಟನೆಗಳು ಭಾರತ್ ಬಂದ್​ಗೆ ಬೆಂಬಲಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ, ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ರಾಜ್ಯ ಪ್ರಾಂತ ರೈತ ಸಂಘ, ರೈತ ಕಾರ್ಮಿಕರ ಸಂಘ, ಅಖಿಲ ಭಾರತ್ ಕಿಸಾನ್ ಸಭಾ, ಕರವೇ ಪ್ರವೀಣ್ ಶೆಟ್ಟಿ ಬಣ ಕೂಡ ಬೆಂಬಲಿಸಲಿದೆ. ಬಂದ್​ ಮಾಡುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿರುವ ರೈತರು ನಾಳೆ ಒಂದು ದಿನ ಹೊರಗಡೆ ಬಾರದೆ ಮನಯಲ್ಲೇ ಇರುವಂತೆ ರಾಜ್ಯದ ಜನರಲ್ಲಿ ಕೇಳಿಕೊಂಡಿದ್ದಾರೆ.

Read this also;

ನೈತಿಕ ಬೆಂಬಲ ನೀಡುವ ಸಂಘಟನೆಗಳು..!

ರೈತ ಹೋರಾಟಕ್ಕೆ ಬೆಂಬಲಿಸಿ ರಸ್ತೆಗಿಳಿದು ಹೋರಾಟ ಮಾಡೋದಿಲ್ಲ. ಆದರೆ ರೈತರ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎನ್ನುತ್ತಿದ್ದಾರೆ ಆಟೋ ಮಾಲೀಕರ ಸಂಘ, ಕ್ಯಾಬ್ ಚಾಲಕರ ಸಂಘ, ಬ್ಯಾಂಕ್ ಒಕ್ಕೂಟ, ಕೆಎಸ್​​ಆರ್​​ಟಿಸಿ, ಬಿಎಂಟಿಸಿ, ಕರವೇ ನಾರಾಯಣ ಬಣ. ರಾಜ್ಯ ಸರ್ಕಾರ ಕೂಡ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಂದ್​ ಮಾಡಿ ಎನ್ನುವ ಸಂದೇಶ ನೀಡಿದೆ. ಬಂದ್​ ವೇಳೆ ಅನಾಹುತಗಳು ನಡೆದರೆ ಕಠಿಣ ಕ್ರಮ ಎಂದು ಪೊಲೀಸ್​ ಆಯುಕ್ತರೂ ಕೂಡ ಎಚ್ಚರಿಸಿದ್ದಾರೆ. ಇದೀಗ ಬಂದ್​ ಆಗುತ್ತಾ ಇಲ್ವಾ ಎನ್ನುವ ಅನುಮಾನ ದಟ್ಟವಾಗಿದೆ. ಆದರೆ ಸೋಮವಾರ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ರೈತ ಮುಖಂಡರು ನಿರ್ಧಾರ ಮಾಡಿರುವ ಕಾರಣ ದೂರದೂರಿಗೆ ಪ್ರಯಾಣ ಮಾಡುವ ಜನರಿಗೆ ತೊಂದರೆ ಆಗುವುದು ಬಹುತೇಕ ಖಚಿತ. ಆದರೆ ನೈತಿಕ ಬೆಂಬಲ ಎನ್ನುತ್ತ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುವ ಜನರಿಗೆ ಇದರ ಪರಿಣಾಮ ಬೀರುವ ಎಲ್ಲಾ ಸಾಧ್ಯಗಳಿವೆ.

Read this also;

ಕೃಷಿ ಕಾಯ್ದೆಗಳಿಂದ ಕಂಟಕ ಎನ್ನುವ ಭಯ..!

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲ ಆಗಲಿದೆ ಎನ್ನುವ ಮಾತನ್ನು ಹೇಳುತ್ತಲೇ ಇದೆ. ಕೆಲವು ರೈತರು ರಾಜಕೀಯ ಉದ್ದೇಶದಿಂದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಕೂಡ ಮಾಡಿದ್ದಾರೆ. ಆದರೆ ಹೋರಾಟಕ್ಕೆ ಕರೆ ನೀಡಿರುವ ರೈತ ಮುಖಂಡರು ಅವಿದ್ಯಾವಂತರಲ್ಲ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದರೆ ಅಲ್ಲೇನೋ ಸಮಸ್ಯೆ ಗಟ್ಟಿಯಾಗಿದೇ ಎಂದೇ ಅರ್ಥ. ಪ್ರತಿಭಟನೆಗೆ ನೈತಿಕ ಬೆಂಬಲ ಘೋಷಣೆ ಮಾಡಿರುವ ಜನ ಮಾರುಕಟ್ಟೆಯಲ್ಲಿ ಕಡಿಮೆ ಹಣಕ್ಕೆ ಸಿಗುವ ವಸ್ತು ಕೊಳ್ಳಲು ಇನ್ಮುಂದೆ ಮಾರ್ಟ್​ ಒಳಕ್ಕೆ ಹೋಗುವ ಸಮಯ ಬಂದಾಗ ಈ ನೈತಿಕ ಬೆಂಬಲ ನೆನಪಾಗುತ್ತದೆ ಎನ್ನುತ್ತಾರೆ ರೈತ ಮುಖಂಡರು. ಅನ್ನದಾತ ತಾನೂ ಕೂಡ ತನಗೆ ಬೇಕಾದಷ್ಟು ಬೆಳೆದುಕೊಂಡು ಉಳಿದದ್ದನ್ನು ನೈತಿಕವಾಗಿ ಮಾರುಕಟ್ಟೆಗೆ ತಲುಪಿಸುತ್ತೇವೆ ಎನ್ನುವ ತೀರ್ಮಾನಕ್ಕೆ ಬಂದರೆ ದೇಶ ತಲ್ಲಣಿಸಲಿದೆ ಎನ್ನುವುದನ್ನು ಮರೆಯಬಾರದು ಎಂದು ಎಚ್ಚರಿಸುತ್ತಾರೆ.

Related Posts

Don't Miss it !