ಹಂಸಲೇಖ ಹೇಳಿಕೆ ಹಾಗೂ ಬಹಿರಂಗ ಕ್ಷಮೆಯಾಚನೆ ಸರಿ – ತಪ್ಪು ದೃಷ್ಟಿಕೋನ..!

ಖ್ಯಾತ ಚಿತ್ರ ಸಾಹಿತಿ, ನಾದಬ್ರಹ್ಮ ಗಂಗರಾಜು ಅಲಿಯಾಸ್ ಹಂಸಲೇಖ ರಾಜ್ಯದ ಜನರ ಎದುರು ಬಹಿರಂಗ ಕ್ಷಮೆಯಾಚಿಸಿದ್ದಾರೆ. ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಕೆಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹಂಸಲೇಖ ತಪ್ಪಿನ ಅರಿವಾದಂತೆ ಕ್ಷಮೆ ಕೇಳಿದ್ದಾರೆ. ಅಂದರೆ ಹಂಸಲೇಖ ನೀಡಿದ್ದ ಹೇಳಿಕೆ ತಪ್ಪಾಗಿತ್ತು ಎಂಬುದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದಾರೆ ಎಂಬರ್ಥ ಬಂದಂತಾಯ್ತು. ಹಾಗಿದ್ರೆ ನುಡಿದರೆ ಎಲ್ಲರೂ ಹೌದೌದು ಎನ್ನುವಂತೆ ಅಣಿಮುತ್ತುಗಳನ್ನು ಜೋಡಿಸಿದಂತೆ ಮಾತನಾಡುವ ನಾದ ಬ್ರಹ್ಮ ಮಾಡಿದ ಅಚಾತುರ್ಯ ಏನು..? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪೇಜಾವರ ಶ್ರೀಗಳ ದಲಿತ ಕೇರಿ ವಾಸ್ತವ್ಯ..!

ಉಡುಪಿಯ ಪೇಜಾವರ ಶ್ರೀಗಳು ಅಸ್ಪೃಶ್ಯತೆ ತೊಡೆದು ಹಾಕುವ ಉದ್ದೇಶದಿಂದ ಮೈಸೂರಿನ ದಲಿತ ಕೇರಿಗಳಿಗೆ ಭೇಟಿ ನೀಡಿದ್ದರು. ನಾವೆಲ್ಲರೂ ಒಂದೇ ಎಂಬ ಭಾವನೆ ಬಿತ್ತುವ ಉದ್ದೇಶ ಅವರದ್ದಾಗಿತ್ತು. ಆದರೆ ಅಸ್ಪೃಶ್ಯತೆ ತೊಡೆದು ಹಾಕುವ ಉದ್ದೇಶದಿಂದ ಹೋದವರು ಕೇವಲ ಕುಳಿತು ಮಾತನಾಡಿ ವಾಪಸ್ ಆದರು, ಅವರ ಮನೆಯ ಊಟ ಮಾಡಲಿಲ್ಲ ಎನ್ನುವುದು ಕೆಲವರ ಆರೋಪ. ಅದನ್ನೇ ಹೇಳಲು ಹೋಗಿದ್ದ ಚಿತ್ರಸಾಹಿತಿ ಹಂಸಲೇಖ ಎಡವಟ್ಟು ಮಾಡಿಕೊಂಡರು. ಯಾವುದೇ ಆಹಾರ ಪದ್ಧತಿಯನ್ನು ಯಾರ ಮೇಲೂ ಹೇರುವಿಕೆ ಮಾಡಬಾರದು. ಆಂದ ಮೇಲೆ ದಲಿತರ ಮನೆಯಲ್ಲಿ ಕೋಳಿ ತಿಂದರಾ..? ಎನ್ನುವುದು ಅಕ್ಷ್ಯಮ್ಯವೇ ಸರಿ. ಆಹಾರ ಕ್ರಮದ ಆಯ್ಕೆ ಅವರವರ ವಿವೇಚನೆಗೆ ಬಿಟ್ಟ ಮೇಲೆ ಬ್ರಾಹ್ಮಣರು ಬಂದು ದಲಿತರ ಮನೆಯಲ್ಲಿ ಕೋಳಿ ಮಾಂಸ ತಿನ್ನಲಾಗದು. ಕೋಳಿ ಮಾಂಸ ಸೇವನೆ ಮಾಡಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ ಎನ್ನುವುದೂ ಕೂಡ ಮೂರ್ಖತನ ಆದೀತು.

ಹಂಸಲೇಖ ಹೇಳಿದ್ದ ಮತ್ತೊಂದು ಮಾತು ಸತ್ಯ..!

ದಲಿತರ ಮನೆಯಲ್ಲಿ ಮಡಿವಂತಿಕೆಯಿಂದ ಮಾಡಿದ ಆಹಾರ ಸೇವನೆ ಅಸ್ಪೃಶ್ಯತೆ ತೊಡೆಯುವ ಮೊದಲ ಹೆಜ್ಜೆ ಎನ್ನಬಹುದು. ಅದೇ ರೀತಿ ಮೇಲ್ವರ್ಗದ ಜನರ ಮನೆಯಲ್ಲಿ ಅಡುಗೆ ಮಾಡಿ ದಲಿತ ಕೇರಿಯ ಜನರನ್ನು ಕರೆದು ಊಟ ಹಾಕಿದಾಗ ಅಸ್ಪೃಶ್ಯತೆ ನಿವಾರಣೆ ಆಗಿದೆ ಎನ್ನಬಹುದು. ಈ ಸಮಾನತೆ ಕೆಲವೇ ವರ್ಷಗಳಲ್ಲಿ ಬರಬಹುದು. ಈಗಾಗಲೇ ನಗರ ಪ್ರದೇಶಗಳಲ್ಲಿ ಜಾತಿಯನ್ನು ಕೇವಲ ರಾಜಕಾರಣಿಗಳು ಗುರುತಿಸುತ್ತಿದ್ದಾರೆ. ಮತ ಪಡೆಯುವ ಉದ್ದೇಶದಿಂದ ಜಾತಿಯನ್ನು ಜೀವಂತವಾಗಿ ಇಡುವಂತಹ ಕೆಲಸಗಳಾಗುತ್ತಿವೆ. ದಾಖಲೆಗಳನ್ನು ನೋಡಿ ಜಾತಿಯನ್ನು ಗುರುತಿಸಬೇಕಾದ ಸ್ಥಿತಿ ಒದಗಿ ಬಂದಿದೆ. ಅಂದರೆ ಅಸ್ಪೃಶ್ಯತೆ ಮಾಯವಾಗಿದೆ ಎಂದೇ ಅರ್ಥ.

ಹಂಸಲೇಖ ಪರ ಹಾಗೂ ವಿರುದ್ಧ ಹೇಳಿಕೆ..!

ಚಿತ್ರಸಾಹಿತಿ ಹಂಸಲೇಖ ಪೇಜಾವರ ಶ್ರೀಗಳ ವಿರುದ್ಧ ನೀಡಿದ್ದ ಹೇಳಿಕೆ ಬಗ್ಗೆ ಕ್ಷಮಾಪಣೆಯನ್ನೂ ಕೇಳಿದ್ದಾರೆ. ಆದರೆ ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೃಷ್ಣ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಸವನಗುಡಿ ಪೊಲೀಸ್​ ಠಾಣೆಯಲ್ಲಿ ದೂರು ಸಹ ಸಲ್ಲಿಕೆಯಾಗಿದೆ. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಟೀಕಿಸಿದ್ದಕ್ಕೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ, ಆಗ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ಈಗಲೂ ನಾವು ಪ್ರತಿಭಟಿಸುವುದಿಲ್ಲ. ಕೃಷ್ಣನೇ ತಕ್ಕಶಾಸ್ತಿ ಮಾಡಲಿ ಎಂದಿದ್ದಾರೆ. ಇದೀಗ ಹಂಸಲೇಖ ಪರವಾಗಿ ಹೇಳಿಕೆಗಳು ಹೊರ ಬೀಳುತ್ತಿವೆ. ಹಂಸಲೇಖ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ರಾಜ್ಯ ಛಲವಾದಿ ಮಹಾಸಭಾ ನಿರ್ದೇಶಕ ಅಣಗಳ್ಳಿ ಬಸವರಾಜು ಚಾಮರಾಜನಗರದಲ್ಲಿ ಹೇಳಿದ್ದರು. ಚಿತ್ರದುರ್ಗದಲ್ಲಿ ಹಂಸಲೇಖ ಪರವಾಗಿ ದಲಿತ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿವೆ.

ರಾಜಕಾರಣಕ್ಕಾಗಿ ಮಾತ್ರ ಜಾತಿಯತೆ ಉಳಿದುಕೊಂಡಿದೆ ಎನ್ನುವುದು ಅಕ್ಷರಶಃ ಸತ್ಯ. ಜಾತಿ ವ್ಯವಸ್ಥೆ ನಿರ್ನಾಮ ಆಗದಂತೆ ತಡೆಯುವುದೇ ರಾಜಕಾರಣಿಗಳು ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ಜಾತಿ ವ್ಯವಸ್ಥೆ ಇದೆ ಎನ್ನುವುದಕ್ಕಿಂತಲೂ ಜಾತಿ ವ್ಯವಸ್ಥೆಯನ್ನ ನಾವು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಜಾತಿ ವ್ಯವಸ್ಥೆ ಬೇಡ ಎನ್ನುವುದಾದರೆ ಜಾತಿ ಲೆಕ್ಕಾಚಾರದಲ್ಲಿ ಯಾವುದೇ ಸೌಲತ್ತುಗಳನ್ನು ತೆಗೆದುಕೊಳ್ಳದೆ ನಾವೂ ಸರ್ವ ಸಮಾನರು ಎನ್ನುವುದನ್ನ ಜಗತ್ತಿಗೆ ಸಾರಬೇಕಿದೆ. ಆರ್ಥಿಕ ಅಸಮಾನತೆ ಮೇರೆಗೆ ಮೀಸಲಾತಿ ಜಾರಿಗೆ ಬಂದ ದಿನ ಜಾತಿ ಎಂಬ ಪದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದನ್ನ ಅರ್ಥ ಮಾಡಿಕೊಳ್ಳಬೇಕಿದೆ.

Related Posts

Don't Miss it !