ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಕೊಲೆ, ರಾಜ್ಯದಲ್ಲಿ ಆತಂಕದ ಪರಿಸ್ಥಿತಿ..

ಕರ್ನಾಟಕದ ಕರಾವಳಿ ಧಾರ್ಮಿಕ ಸೂಕ್ಮ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖವಾದ ಸ್ಥಳ. ಕಳೆದ 10 ದಿನಗಳಲ್ಲಿ ಮೂವರ ಕೊಲೆ ನಡೆದಿದೆ. ಜುಲೈ 19ರಂದು ಸುಳ್ಯ ತಾಲೂಕಿನ ಕಳಂಜೆ ಎಂಬಲ್ಲಿ ಮಸೂದ್​ ಎಂಬ ಯುವಕನ ಹತ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಪ್ರವೀಣ್​ ನೆಟ್ಟಾರು ಎಂಬ ಯುವ ನಾಯಕನ ಕೊಲೆ ಪ್ರತೀಕಾರ ತೆಗೆದುಕೊಳ್ಳಲಾಗಿತ್ತು. ಆನಂತರ ಇದೀಗ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮಂಗಳೂರಿನ ಸುರತ್ಕಲ್​ನಲ್ಲಿ ಫಾಜಿಲ್​ ಎಂಬು 23 ವರ್ಷದ ಯುವಕನನ್ನು ಕೊಂದಿರುವ ಕಿಡಿಗೇಡಿಗಳು ಪ್ರವೀಣ್​ ಹತ್ಯೆಗೆ ಪ್ರತೀಕಾರ ಎಂಬ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಮಾತ್ರ ಇದು ಪ್ರತೀಕಾರದ ಕೃತ್ಯ ಅಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದನ್ನು ನಾವು ತನಿಖೆ ನಡೆಸುತ್ತೇವೆ ಎನ್ನುವ ಮೂಲಕ ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ.

ಗ್ಯಾಸ್​ ಸಿಲಿಂಡರ್​ ಲೋಡ್ ಮಾಡುವ ಯುವಕನ ಭೀಕರ ಹತ್ಯೆ..!

ಗ್ಯಾಸ್​ ಸಿಲಿಂಡರ್​ ಲೋಡ್​ ಮಾಡುವ ಕೆಲಸ ಮಾಡ್ತಿದ್ದ ಯುವಕ ಫಾಜಿಲ್​, ಸಂಜೆ ಬಳಿಕ ಬಟ್ಟೆ ಅಂಗಡಿ ಕಡೆಗೆ ಬಂದಿದ್ದ. ತನ್ನ ಸ್ನೇಹಿತನ ಜೊತೆಗೆ ಮಾತನಾಡಿದ ಬಳಿಕ ಅಲ್ಲಿಂದ ತೆರಳುತ್ತಿದ್ದಂತೆ ಎಂಟ್ರಿಯಾದ ಆಗಂತುಕರು, ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ರೂ ಸಾಧ್ಯವಾಗಿಲ್ಲ. ಆ ಬಳಿಕ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತಾದ್ರೂ ಅಷ್ಟರಲ್ಲಿ ಉಸಿರು ನಿಂತು ಹೋಗಿತ್ತು. ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳು ಕೊಲೆಯ ಭೀಕರತೆಯನ್ನು ಸಾರಿ ಹೇಳುತ್ತಿವೆ. ಜೊತೆಗೆ ಸ್ಥಳದಲ್ಲಿ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಪ್ರವೀಣ್​ ಹತ್ಯೆಗೆ ಇದು ಪ್ರತೀಕಾರ, ಕೊಲೆಗೆ ಕೊಲೆಯೇ ಉತ್ತರ ಎಂದು ಹೇಳಿ ಹಂತಕರು ತೆರಳಿದ್ದಾರೆ ಎನ್ನಲಾಗ್ತಿದೆ. ಯುವಕ ಫಾಜಿಲ್​ ಕೊಲೆ ಆಗಿರುವ ಹಿನ್ನೆಲೆಯಲ್ಲಿ ಬಜ್ಪೆ, ಪಣಂಬೂರು, ಸುರತ್ಕಲ್​​, ಮುಲ್ಕಿಯಲ್ಲಿ ನಿಷೇಧಾಜ್ಞೆ ಜಾರಿ ಮಂಗಳೂರು ಪೊಲೀಸ್​ ಕಮಿಷನರ್​ ಆದೇಶ ಹೊರಡಿಸಿದ್ದಾರೆ.

ಬಿಜೆಪಿಗೆ ಇದು ಚುನಾವಣೆ ಗೆಲ್ಲುವ ಅಸ್ತ್ರ ಎಂದು ಟೀಕೆ..!

ಫಾಜಿಲ್​ನ ಕೊಲೆ ಮಾಡಿದ ಬಳಿಕ ತುಳುವಿನಲ್ಲಿ ಎಚ್ಚೆರಿಕೆ ಮಾತುಗಳನ್ನು ಆಡಿರುವ ಆಗಂತುಕರು, ಯಾರನ್ನೂ ಬಿಡುವುದಿಲ್ಲ, ಇದು ಪ್ರವೀಣ್​ ಹತ್ಯೆಗೆ ಪ್ರತೀಕಾರ ಎಂದು ಸ್ಥಳದಲ್ಲಿದ್ದ ಜನರಿಗೆ ಮಚ್ಚು ತೋರಿಸಿ ಜನರಿಗೂ ವಾರ್ನಿಂಗ್​ ಕೊಟ್ಟು ತೆರಳಿದ್ದಾರೆ ಎನ್ನಲಾಗಿದೆ. ಸುರತ್ಕಲ್​ , ಕೃಷ್ಣಾಪುರ, ಕಾಟಿಪಳ್ಳಮ, ಕಾನ, ಕೈಕಂಬ, ಬೈಕಂಪಾಡಿ, ಪಾವಂಜೆ, ಹಳೆಯಂಗಡಿ, ಕಿನ್ನಿಗೋಳಿ, ಸೂರಿಂಜೆ, ಮುಲ್ಕಿ, ಕಟೀಲ್​, ಪಣಂಬೂರು ಸೇರಿದಂತೆ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಬಿಗುವಿನ ವಾತಾವತಣ ಸೃಷ್ಟಿಯಾಗಿದ್ದು, ಪೊಲೀಸರು ಗಸ್ತು ತಿರುವಂತೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಇನ್ನೂ ಕಳೆದ 5 ವರ್ಷಗಳ ಹಿಂದೆ ಚುನಾವಣೆ ವರ್ಷದಲ್ಲೂ ಇದೇ ರೀತಿ ಕರಾವಳಿಯಲ್ಲಿ ಹಿಂದೂ ಮುಸಲ್ಮಾನ ಸಮುದಾಯದ ಯುವಕರ ಹತ್ಯೆ ಮಾಡಲಾಗಿತ್ತು. ಈಗಲೂ ಚುನಾವಣಾ ವರ್ಷ ಆಗಿರುವುದರಿಂದ ಕೊಲೆಗಳ ಸರಣಿ ಆರಂಭವಾಗಿದೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಬೇಕಿದ್ದರೆ ಈ ರೀತಿ ಕೊಲೆಗಳ ಅಗತ್ಯವಿದೆ. ಅದೇ ಕಾರಣಕ್ಕೆ ಪ್ರಮುಖ ನಾಯಕರೇ ಮುಂದೆ ನಿಂತು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಾರೆ ಎಂದು ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್​ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಮಂಗಳೂರಲ್ಲಿ ಇದ್ದಾಗಲೇ ನಡೀತು ಮರ್ಡರ್​..!

ಪ್ರವೀಣ್​ ನೆಟ್ಟಾರು ಕೊಲೆ ನಡೆದ ಬಳಿಕ ಹಿಂದೂ ಸಮುದಾಯದ ಜನತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಾರಣಕ್ಕೆ ಗುರುವಾರ ನಿಗದಿಯಾಗಿದ್ದ ಒಂದು ವರ್ಷದ ಸಂಭ್ರಮಾಚರಣೆಯನ್ನು ರದ್ದು ಮಾಡಿ ಪುತ್ತೂರಿನ ನೆಟ್ಟಾರುಗೆ ಭೇಟಿ ನೀಡಿದ್ದರು. ಕುಟುಂಬಸ್ಥರಿಗೆ ಸಾಂತ್ವನವನ್ನೂ ಹೇಳಿ 25 ಲಕ್ಷ ರೂಪಾಯಿ ಸರ್ಕಾರದ ಬೊಕ್ಕಸದಿಂದ ಹಾಗು ಪಕ್ಷದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್​ ಕೂಡ ವಿತರಣೆ ಮಾಡಿದರು. ಆ ಬಳಿಕ ಬೆಂಗಳೂರಿಗೆ ವಾಪಸ್​ ಆಗಲು ವಿಮಾನ ನಿಲ್ದಾಣದ ಕಡೆಗೆ ಬಸವರಾಜ ಬೊಮ್ಮಾಯಿ ತೆರಳುತ್ತಿರುವಾಗ ಫಾಜಿಲ್​ ಹತ್ಯೆ ನಡೆದಿದೆ. ಅಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ನಿಯಂತ್ರಣ ಮಾಡಲಾಗ್ತಿದೆ ಎನ್ನುವುದನ್ನು ಸಾರ್ವಜನಿಕರೇ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಸಿಎಂ ಹಾಗು ಗೃಹ ಸಚಿವರ ನಿಯಂತ್ರಣ ಮೀರಿ ಘಟನೆಗಳು ಸಂಭವಿಸುತ್ತಿದ್ದು, ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಕರಾವಳಿ ಅಷ್ಟೇ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಎಲ್ಲಿ ಏನಾಗುತ್ತೋ ಎನ್ನುವ ಆತಂಕ ಜನರ ಮನಸ್ಸಲ್ಲಿ ಮನೆ ಮಾಡಿದೆ.

Related Posts

Don't Miss it !