ವೀಲ್ಹಿಂಗ್‌ಗೆ ಅಡ್ಡಿ ಮಾಡಿದ್ದಕ್ಕೆ ಹಲ್ಲೆಯೋ..? ಕೋಮು ಸಂಘರ್ಷವೋ..?

ತುಮಕೂರು ಜಿಲ್ಲೆ ಗುಬ್ಬಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಬೈಕ್ ಸವಾರರು ಹಾಗೂ ಕಾರು ಮಾಲೀಕನ ನಡುವೆ ಮಾರಾಮಾರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡ್ತಿದ್ದ ಆರೇಳು ಮಂದಿ ಮುಸ್ಲಿಂ ಯುವಕರು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಶಾಸಕ ಜ್ಯೋತಿ ಗಣೇಶ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಕೋಮು ದ್ವೇಷದಿಂದ ಹಲ್ಲೆ ಮಾಡಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಪೊಲೀಸರು ಆರೋಪಿಗಳ ಮಾಹಿತಿ ಸಂಗ್ರಹಿಸಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹಲ್ಲೆಗೆ ಒಳಗಾದ ಯುವಕ ಭಜರಂಗದಳ ಸದಸ್ಯ..!

ಮಂಜು ಭಾರ್ಗವ ಹಾಗೂ ಕಿರಣ್ ಎಂಬುವರ ಮೇಲೆ ಹಲ್ಲೆಯಾಗಿದೆ. ಇದರಲ್ಲಿ ಮಂಜು ಭಾರ್ಗವ ಭಜರಂಗದಳದ ಕಾರ್ಯಕರ್ತನಾಗಿದ್ದು, ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಿಸುವ ಗೋವುಗಳ ರಕ್ಷಣೆಗೆ ಕಟಿಬದ್ಧರಾಗಿದ್ದರು. ಇದೇ ಕಾರಣಕ್ಕೆ ಹಲ್ಲೆ ಆಗಿರಬಹುದು ಎಂದು ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಆರೋಪ ಮಾಡಿದ್ದಾರೆ. ಇದೀಗ ಕೋಮು ಸಂಘರ್ಷದ ತಿರುವು ಸಿಕ್ಕಿದೆ. ಕೋಮುದ್ವೇಷದ ಬಗ್ಗೆ ಶಾಸಕರು ಆರೋಪ ಮಾಡುತ್ತಿದ್ದ ಹಾಗೆ ಮಧ್ಯರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪರಿಶೀಲನೆ ನಡೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Read this;

ಇಬ್ಬರು ಆರೋಪಿಗಳ ವಶ, ಉಳಿದವರಿಗೆ ಹುಡುಕಾಟ..!

ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳ ಮಾಹಿತಿ. ಅಷ್ಟಕ್ಕೂ ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯಲ್ಲಿ ಇರುವ ಕಾರಣ ಎಲ್ಲಾ ಕಡೆಗಳಲ್ಲೂ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಗುಬ್ಬಿ ಗೇಟ್‌ನಲ್ಲೂ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆಯಿದ್ದು, ಗಲಾಟೆಯ ಸಂಪೂರ್ಣ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ಸಾಕಷ್ಟು ಕ್ಲೂಗಳು ಸಿಕ್ಕಿವೆ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತೆ ಎಂದಿದ್ದರು ಕೇಂದ್ರ ವಲಯ ಐಜಿಪಿ‌ ಚಂದ್ರಶೇಖರ್.

ಕೋಮುದ್ವೇಷವಲ್ಲ, ಅಚಾನಕ್ ಆಗಿರುವ ಗಲಾಟೆ..!

ಅನ್ಯ ಕೋಮಿನ ಯುವಕರು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಜ್ಯೋತಿ ಗಣೇಶ್ ಮತ್ತು ಹಿಂದು ಸಂಘಟನೆಗಳ ಮುಖ್ಯಸ್ಥ ಬಸವರಾಜು ಆರೋಪ ಮಾಡಿದ್ದಾರೆ. ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಜೊತೆಗೆ ಸ್ಥಳ ಪರಿಶೀಲನೆ ವೇಳೆ ಭಜರಂಗದಳದ ಕಾರ್ಯಕರ್ತರ ಜೊತೆಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಚರ್ಚೆ ನಡೆಸಿದ್ದಾರೆ. ಆ ಬಳಿಕ ಎಸ್‌ಪಿ ಕಚೇರಿಯಲ್ಲಿ ಹಿರಿಯ ಪೊಲೀಸರೊಂದಿಗೆ ಚರ್ಚೆ ನಡೆಸಿದ್ದಾರೆ. ಆರೋಪಿಗಳ ಬಂಧನವೂ ಆಗಲಿದೆ. ಆದರೆ ಗುಬ್ಬಿ ಗೇಟ್‌ನಲ್ಲಿ ನಡೆದ ಗಲಾಟೆ ಅಚಾನಕ್ ಆಗಿ ನಡೆದಿರುವುದೇ ವಿನಃ ಕೋಮು ಸಂಘರ್ಷವಲ್ಲ, ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗ್ತಿದೆ ಎನ್ನುತ್ತಾರೆ ಸ್ಥಳೀಯರು.

Read this;

ಆರೋಪಗಳಿಗೆ ಸ್ಪಷ್ಟನೆ ಪೊಲೀಸರೇ ಕೊಡಬೇಕಿದೆ..!

ವೀಲ್ಹಿಂಗ್ ಮಾಡುತ್ತಾ ಪುಂಡಾಟ ನಡೆಸಿರುವ ಕಿಡಿಗೇಡಿಗಳನ್ನು ಎಡೆಮುರಿ ಕಟ್ಟಿ ಕಾನೂನಿನ ಪಾಠ ಹೇಳಬೇಕಿದೆ. ಆದರೆ ಶಾಂತವಾಗಿರುವ ತುಮಕೂರಿನಲ್ಲಿ ಕೋಮು ವಿಷಬೀಜ ಬಿತ್ತಿ ಶಾಂತಿ ಕದಡದೆ ಇರಲಿ ಎನ್ನುವುದು ಹಿರಿಯರ ಮಾತಾಗಿದೆ. ಆದರೆ ಗಲಾಟೆ ನಡೆದಾಗ ಸ್ಥಳದಲ್ಲೇ ಇದ್ದ ಕಿರಣ್ ಹೇಳಿಕೆ ನೀಡಿರುವ ಪ್ರಕಾರ ಬೈಕ್ ವೀಲ್ಹಿಂಗ್ ಮಾಡುತ್ತಾ ಹಿಂದೆ ಮುಂದೆ ಬಂದು ಕಿರಿಕಿರಿ‌ ಮಾಡಿದ್ರು. ಆ ನಂತರ ಗಲಾಟೆ ಮಾಡಿ ರಾಡ್‌ಗಳಲ್ಲಿ ಹಲ್ಲೆ ನಡೆಸಿದ್ರು. ಈ ವೇಳೆ ಇವನೇ ಇವನೇ ಎನ್ನುತ್ತಿದ್ದರು ಎಂದಿದ್ದಾರೆ. ಆದರೆ ಬೈಕ್ ವೀಲ್ಹಿಂಗ್ ಮಾಡ್ತಿದ್ದವರ ಕೈಗೆ ರಾಡ್ ಸಿಕ್ಕಿದ್ದು ಎಲ್ಲಿಂದ ಎನ್ನುವ ಅನುಮಾನ ಮೂಡುತ್ತಿದೆ. ಗುಬ್ಬಿ ಗೇಟ್‌ನ ಸಿಸಿಟಿವಿಯಲ್ಲಿ ಗಲಾಟೆ ನಡೆದಿರುವ ಎಲ್ಲಾ ದೃಶ್ಯಗಳು ಸೆರೆಯಾಗಿವೆ ಎನ್ನಲಾಗಿದ್ದು, ಪೊಲೀಸರು ಪರಿಶೀಲಿಸಿದ ಬಳಿಕ ಕೋಮು ಸಂಘರ್ಷವೋ..? ಅಥವಾ ಅಚಾನಕ್ ಆಗಿ ನಡೆದಿರುವ ಘಟನೆಯೋ ಎನ್ನುವ ಸತ್ಯ ಹೊರಬೀಳಬೇಕಿದೆ.

Related Posts

Don't Miss it !