ಜನರು ಮೆಚ್ಚದ ಆಡಳಿತ ಸಿಂಧೂರಿ ದುರಂತ..!

ಮೈಸೂರು ಜಿಲ್ಲಾಧಿಕಾರಿ ಹೆಜ್ಜೆ ಹೆಜ್ಜೆಗೂ ವಿರೋಧ ಎದುರಿಸಿಯೇ ಆಡಳಿತ ನಡೆಸುತ್ತಿದ್ದಾರೆ. ಮೊದಲಿಗೆ ರಾಜಕಾರಣಿಗಳ ಸಾಲು ಸಾಲು. ಇದೀಗ ತಮ್ಮದೇ ಐಎಎಸ್ ಅಧಿಕಾರಿಗಳಿಂದ ನೇರ ಆರೋಪ. ಮೈಸೂರು ಜಿಲ್ಲಾಧಿಕಾರಿ ಕೆಲಸ ಮಾಡಲು ಬಿಡುವುದಿಲ್ಲ. ಕೆಲಸ ಮಾಡಿದ್ರೆ ನಮ್ಮನ್ನೇ ಟಾರ್ಗೆಟ್ ಮಾಡ್ತಾರೆ ಎಂದು ಐಎಎಸ್ ಅಧಿಕಾರಿ‌ ಒಬ್ಬರು‌ ನೇರವಾಗಿ ಆರೋಪ ಮಾಡುತ್ತಾರೆ ಎಂದರೆ ತಮ್ಮಲ್ಲೇನೋ ಲೋಪ ಇದೆ ಎಂದೇ ಅರ್ಥವಲ್ಲವೇ..? ಇಡೀ ಜನ ಸಮುದಾಯವನ್ನು ಒಪ್ಪಿಸಿ‌ ಕೆಲಸ ಮಾಡಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಆದರೆ ಇದ್ದ ನಾಲ್ವರಲ್ಲಿ ಒಬ್ಬರಾದರೂ ನಿಮ್ಮ ಕಾರ್ಯವೈಖರಿಯನ್ನು ಮೆಚ್ಚಬೇಕಲ್ಲವೇ..? ಯಾರೂ ಮೆಚ್ಚುವುದು ಬೇಡ, ನಾನು ಮಾಡಿದ್ದೇ ಸರಿ ಎನ್ನುವುದಾದರೆ ನಿಮ್ಮ ಸೇವೆ ಯಾವ ಪುರುಷಾರ್ಥಕ್ಕೆ ಅಲ್ಲವೇ..?

ರೋಹಿಣಿ ಸಿಂಧೂರಿ ವಿರುದ್ಧ ಘರ್ಜನೆ..!

ಮೈಸೂರು ಮಹಾನಗರ ಪಾಲಿಕೆ‌ ಆಯುಕ್ತರಾಗಿದ್ದ ಶಿಲ್ವಾ ನಾಗ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮೊದಲು ಮಾಧ್ಯಮಗೋಷ್ಠಿ ನಡೆಸಿ ಮೈಸೂರು‌ ಜಿಲ್ಲಾಧಿಕಾರಿ‌ ರೋಹಿಣಿ ಸಿಂಧೂರಿ ವಿರುದ್ಧ ನೇರಾನೇರ ಆರೋಪ ಮಾಡಿದ್ದಾರೆ. ಸೂಕ್ತ ರೀತಿಯಲ್ಲಿ ಕೊರೊನಾ ನಿರ್ವಹಣೆ ಮಾಡಿದ್ರೂ, ಪಾಲಿಕೆ ಕೆಲಸ ಮಾಡ್ತಿಲ್ಲ ಎಂದು ಬಿಂಬಿಸಲಾಗ್ತಿದೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳೇ ಹೇಳುತ್ತಿದ್ದಾರೆ. ಏನು ಕೆಲಸ ಮಾಡಿಲ್ಲ ಎಂಬ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು‌ ದೂರಿದ್ದಾರೆ.

ಮೈಸೂರು ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು  ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ..? ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ಹೀಗೋಯಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗ್ತಿಲ್ಲ ಎಂದು ನೇರವಾಗಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದಾರೆ ಶಿಲ್ಪಾ ನಾಗ್. ಮಾಧ್ಯಮಗಳಲ್ಲಿ ಮೈಸೂರು ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಬಳಿಕ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ ಹಾಗಾಗಿ‌ ನಾನು ರಾಜೀನಾಮೆ ನಿರ್ಧಾರಕ್ಕೆ‌ ಬಂದಿದ್ದೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.

ಬಿಜೆಪಿ ಶಾಸಕ ರಾಮದಾಸ್ ಬೆಂಬಲ..!

ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜಿನಾಮೆ ವಿಚಾರದ ಬಗ್ಗೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ರಾಜೀನಾಮೆ ನಿಜಕ್ಕೂ ಆಶ್ಚರ್ಯ  ತರಿಸಿದೆ. ಮೈಸೂರಿನಲ್ಲಿ ಕೋವಿಡ್ ಮಿತ್ರ, ಮನೆ ಮನೆ ಸರ್ವೆ, ಟೆಲಿ ಮೆಡಿಸಿನ್‌ನಂತಹ ಎಲ್ಲಾ ಮಹತ್ತರವಾದ ಯೋಜನೆಗಳನ್ನು  ತಂದವರು. ಜನಪ್ರತಿನಿಧಿಗಳೊಡನೆ, ಅಧಿಕಾರಿಗಳೊಡನೆ ಚರ್ಚಿಸಿ ನಿರ್ಧಾರಗಳನ್ನು, ಯೋಜನೆಗಳನ್ನು ರೂಪಿಸುತ್ತಿದ್ದರು. ಅವರಿಗೆ ಕೆಲವು ವಿಷಯಗಳಲ್ಲಿ ಬೇಸರವಾಗಿದ್ದರಿಂದ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿರುವುದು ನಿಜಕ್ಕೂ ದುಃಖಕರ. ಯಾವುದೇ ಕಾರಣಕ್ಕೂ ಇವರ ರಾಜಿನಾಮೆ ಅಂಗೀಕಾರ ಮಾಡಬಾರದು. ಇಂತಹ ದಕ್ಷ ಅಧಿಕಾರಿಗಳ ಸೇವೆ ಜನರಿಗೆ ನಿಜಕ್ಕೂ ಬೇಕಾಗಿದೆ ಎಂದಿದ್ದಾರೆ.

ಪಾಲಿಕೆ ಸದಸ್ಯರ ಪಕ್ಷತೀತ ಬೆಂಬಲ..!

ಪಾಲಿಕೆ‌ ಸದಸ್ಯರು ತುರ್ತುಸಭೆ‌ ನಡೆಸಿ ಆಯುಕ್ತೆ ಶಿಲ್ಪ ನಾಗ್ ಉಳಿಸಿಕೊಳ್ಳೊ ಸಂಬಂಧ ರೂಪುರೇಷೆ ಚರ್ಚೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ. ಪಾಲಿಕೆ ಆಯುಕ್ತೆ ಶಿಲ್ಪನಾಗ್ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು‌. ಪಾಲಿಕೆಯ 65 ಸದಸ್ಯರು ಅವರ ಜೊತೆಗೆ ಇರ್ತೇವೆ‌. ಇಷ್ಟೂ ಕಿರುಕುಳ ನೀಡಿದ್ದಾರೆ ಅಂತಾ ನಮಗೇ ಗೊತ್ತಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿಯೇ ನಮಗೆ ಮಾಹಿತಿ ಬಂದಿದ್ದು. ಮೈಸೂರು ಪಾಲಿಕೆಗಷ್ಟೇ ಅಲ್ಲ, ದೇಶಕ್ಕೆ ಈ ರೀತಿಯ ಅಧಿಕಾರಿ ಬೇಕು‌ ಎಂದು
ಪಾಲಿಕೆ ಪ್ರಭಾರ ಮೇಯರ್ ಅನ್ವರ್ ಬೇಗ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲೂ ಬೆಂಬಲ..!

ಮೈಸೂರು ಪಾಲಿಕೆ ಆಯುಕ್ತೆ ರಾಜಿನಾಮೆ ವಿಚಾರ ಮಾಧ್ಯಮಗಳಲ್ಲಿ ಬರ್ತಿದ್ದ ಹಾಗೆ ಶಿಲ್ಪಾನಾಗ್ ಪರ ನಿಂತ ಮೈಸೂರಿಗರು ಜಾಲತಾಣಗಳಲ್ಲಿ  ಬೆಂಬಲ ಸೂಚಿಸಿದ್ದಾರೆ. ಟ್ವಿಟ್ಟರ್, ವಾಟ್ಸಪ್, ಫೇಸ್ ಬುಕ್ ಸೇರಿ ಸೋಶಿಯಲ್ ಮೀಡಿಯಾಗಳಲ್ಲಿ ಬೆಂಬಲ ನೀಡುತ್ತಿದ್ದು, ಐ ಸ್ಟ್ಯಾಂಡ್ ವಿಫ್ ಅವರ್ ಕಮಿಷನರ್ ಎಂಬ ಟೈಟಲ್ ಮೂಲಕ ಶಿಲ್ಪಾನಾಗ್ ಉಳಿಸಿಕೊಳ್ಳಲು ಹೋರಾಟ ಶುರುವಾಗಿದೆ.


ಉಸ್ತುವಾರಿ ಸಚಿವರಿಂದಲೂ ಶಹಬ್ಬಾಸ್‌ಗಿರಿ..!

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು,
ಶಿಲ್ಪ ನಾಗ್ ಅವರು ಅತ್ಯಂತ ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಮೈಸೂರಿನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ.  ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಯವರಿಗೂ ಮಾತನಾಡುತ್ತೇನೆ. ಶಿಲ್ಪಾ ನಾಗ್ ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನವೊಲಿಸಲಾಗುವುದು.
ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಶುಕ್ರವಾರ ನಾನು ಮೈಸೂರು ಪ್ರವಾಸ ಕೈಗೊಂಡಿದ್ದು, ಆ ವೇಳೆ ಖುದ್ದು ಭೇಟಿಯಾಗಿ ಮಾತನಾಡುತ್ತೇನೆ ಎಂದಿದ್ದಾರೆ.

ಪೌರ ಕಾರ್ಮಿಕರ ಪ್ರತಿಭಟನೆ..!

ಶಿಲ್ಪಾನಾಗ್ ಅವರ ರಾಜೀನಾಮೆ ತಿರಸ್ಕಾರ ಆಗಬೇಕು ಅಲ್ಲೀವರೆಗೂ  ಪೌರಕಾರ್ಮಿಕರು ಕೆಲಸ ಮಾಡಲ್ಲ. ಪಾಲಿಕೆಯಿಂದ ಕೋವಿಡ್ ಡ್ಯೂಟಿಗೆ ಹಾಕಿದವರು ಸಹ ಕೆಲಸ ಮಾಡಲ್ಲ.
ಮುಖ್ಯ ಕಾರ್ಯದರ್ಶಿ  ಮೈಸೂರಿಗೆ ಬರ್ತಿದ್ದಾರೆ. ಕೋವಿಡ್ ಪರಿಶೀಲನೆಗೆ ಬಂದ್ರೆ ಓಕೆ. ಅವರೇನಾದ್ರು ಶಿಲ್ಪಾನಾಗ್ ಅವರ ಕುರಿತು ತನಿಖೆಗೆ ಬಂದ್ರೆ ಸಿಎಸ್‌ಗೆ ಗೋಬ್ಯಾಕ್ ಪ್ರತಿಭಟನೆ ಮಾಡ್ತಿವಿ. ಜಿಲ್ಲಾಧಿಕಾರಿಯನ್ನ ವರ್ಗಾವಣೆ ಮಾಡ್ಬೇಕು. ವರ್ಗಾವಣೆ ಮಾಡಿದ ಬಳಿಕವೇ ತನಿಖೆ ಆಗಬೇಕು. ರಾಜೀನಾಮೆ ವಾಪಸ್ ಪಡೆಯುವವರೆಗೂ ನಾವುಗಳು ಸಹ ಕೆಲಸ ಮಾಡಲ್ಲ ಎಂದು ಗುಡುಗಿದ್ದಾರೆ.

ಜಿಲ್ಲಾಧಿಕಾರಿ ಆಡಳಿತ ನಾಲ್ಕು ಗೋಡೆ ನಡುವೆ ಇದೆ. ಅವರು ರಸ್ತೆಗೆ ಇಳಿದರೆ ಗೊತ್ತಾಗುತ್ತದೆ. ಇದೊಂದು ದೊಡ್ಡ ದುರಂತ. ಪಾಲಿಕೆ ಆಯಕ್ತರು ರಾಜೀನಾಮೆ ನೀಡ್ತಾರೆ ಅಂದ್ರೆ ಏನರ್ಥ ಎಂದು ಮಾಜಿ ಮೇಯರ್ ಅಯೂಬ್ ಖಾನ್ ಪ್ರಶ್ನಿಸಿದ್ದಾರೆ. ಎಲ್ಲರೂ ರೋಹಿಣಿ ಸಿಂಧೂರಿ ಬಗ್ಗೆ ಕಂಪ್ಲೆಟ್ ಮಾಡ್ತಿದ್ದಾರೆ. ಆದ್ರೂ ಯಾಕೇ‌ ಆಯಮ್ಮನನ್ನ ಬದಲಾಯಿಸ್ತಿಲ್ಲ.
ಎಸ್‌ಟಿ.ಸೋಮಶೇಖರ್ ಅವರಿಗೆ ಅನುಭವ ಕಡಿಮೆ ಇರಬಹುದು. ಆದ್ರೆ ಹಿರಿಯ ರಾಜಕಾರಣಿಗಳು ಇದ್ದಾರೆ. ಅವರ ಸಲಹೆ ಪಡೆದು ಆಯಮ್ಮನನ್ನ‌ ಕಳುಹಿಸಿ. ಡಿಸಿ ಮೇಡಂ ಅವರೇ ನೀವು ಸಾಕಷ್ಟು ಕೆಲಸ ಮಾಡಿದ್ದೀನಿ. ನಿಮ್ಮ ಸೇವೆ ಜಾಸ್ತಿಯಾಗಿದೆ ನೀವು ಹೊರಡಿ ಎಂದು ಹ್ಯಾರಿಫ್ ಹೂಸೆನ್ ಕಿಡಿಕಾರಿದ್ದಾರೆ.

ಮೊಂಡಾಟದ ಡಿಸಿಗೆ ತಿರುಗಿಬಿತ್ತಾ ವೈರತ್ವ..?

ಮೈಸೂರು ಡಿಸಿ ಆಗಿರುವ ರೋಹಿಣಿ ಸಿಂಧೂರಿ ಮೈಸೂರಿಗೆ ವರ್ಗಾವಣೆ ಆಗಿದ್ದಾಗಲೇ ವಿವಾದ ಹುಟ್ಟಿತ್ತು. ಕಲಬುರಗಿಯಿಂದ ಮೈಸೂರಿಗೆ ವರ್ಗವಾಗಿದ್ದ ಡಿಸಿ ಶರತ್ ಅವರನ್ನು ತಿಂಗಳು ತುಂಬುವ ಮೊದಲೇ ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಕೆ.ಆರ್ ನಗರ ಶಾಸಕ ಸಾರಾ ಮಹೇಶ್ ಹಾಗೂ ಹುಣಸೂರು ಶಾಸಕ ಮಂಜುನಾಥ್ ಡಿಸಿ ವಿರುದ್ಧ ವಾಗ್ದಾಳಿ‌ ಮಾಡಿದ್ದರು. ಇತ್ತೀಚಿಗಷ್ಟೇ ಸಂಸದ ಪ್ರತಾಪ್ ಸಿಂಹ ಡಿಸಿ ವಿರುದ್ಧ ಕೆಂಡಾಮಂಡಲರಾಗಿದ್ದರು. ಸುಳ್ಳು ಮಾಹಿತಿ ಕೊಡ್ತಿದ್ದಾರೆ ಎಂದು ಟೀಕಿಸಿದ್ರು. ಇದೇ ವೇಳೆ ತಾಕತ್ ಇದ್ರೆ ಡಿಸಿ ಬದಲಾವಣೆ ಮಾಡಿಸು ಎಂದು ಪ್ರತಾಪ್ ಸಿಂಹ ಅವರಿಗೆ ಜಿ.ಟಿ ದೇವೇಗೌಡ ಸವಾಲು ಹಾಕಿದ್ದರು.

ಡಿಸಿ ರೋಹಿಣಿ ಸಿಂಧೂರಿ ನಾನು ಯಾವುದೇ ಕಿರುಕುಳ ಕೊಟ್ಟಿಲ್ಲ. ಕೇವಲ ಲೆಕ್ಕ ಕೇಳಿದ್ದೆ ಎಂದು ಸ್ಪಷ್ಟನೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಡಿಸಿ ಸಾಮಾನ್ಯ ಜನತ ಹಿತ ಕಾಯುವ ಕೆಲಸ ಮಾಡಬೇಕೇ ಹೊರತು ಜನರನ್ನು ಎದುರು ಹಾಕಿಕೊಂಡು ಕೆಲಸ ಮಾಡಲು‌ ಸಾಧ್ಯವೇ ಇಲ್ಲ. ಶಿಲ್ಪಾ ನಾಗ್ ಅವರು ಕಚೇರಿಯಿಂದ ಹೊರಬರುತ್ತಿದ್ದ ಹಾಗೆ ಸೆಕ್ಯೂರಿಟಿ ಗಾರ್ಡ್ ಒಬ್ಬರು ಕಾಲಿಗೆ ನಮಸ್ಕರಿಸಿ ರಾಜೀನಾಮೆ‌ ನೀಡಬೇಡಿ ಎನ್ನುವ ದೃಶ್ಯ ಸೆರೆಯಾಗಿದೆ. ಆದರೆ ನೀವು ಮೈಸೂರಿನಿಂದ ಹೊರಡಿ ಎನ್ನುತ್ತಿದ್ದಾರೆ ಜನ. ಯಾರು ಸರಿ ಯಾರು ತಪ್ಪು‌ಅನ್ನೋದು ಮುಂದೆ ಗೊತ್ತಾಗಲಿದೆ. ಆದರೆ ಭಾವನೆಗಳ ಕಟಕಟೆಯಲ್ಲಿ ರೋಹಿಣಿ ಸಿಂಧೂರಿ ಸೋತಂತಾಗಿದೆ.

Related Posts

Don't Miss it !