ಚಾಮುಂಡಿ ಬೆಟ್ಟಕ್ಕೆ ತೆರಳುವ ಮುನ್ನ ಈ ರೂಲ್ಸ್ ನೋಡಿ..!

ಕೆಲವೇ ದಿನಗಳಲ್ಲಿ ಹಿಂದೂ ಕ್ಯಾಲೆಂಡರ್​ ಪ್ರಕಾರ ಆಶಾಢ ಮಾಸ ಶುರುವಾಗುತ್ತಿದೆ. ಆಶಾಢ ಎಂದರೆ ಮೈಸೂರಿಗರಿಗೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಮೈಸೂರಿನ ಚಾಮುಂಡಿ ಬೆಟ್ಟದ ಭಾಗದ ವ್ಯಾಪಾರಿಗಳಿಗೆ ಹಬ್ಬವೋ ಹಬ್ಬ. ದಿನನಿತ್ಯ ಸಾವಿರಾರು ಜನರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯಲ್ಲಿ ಸಾಕಷ್ಟು ಬೇಡಿಕೆಗಳನ್ನು ಸಲ್ಲಿಸುವುದು ವಾಡಿಕೆ. ಅದರಲ್ಲೂ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಜನ ಜೇನುಹುಳುಗಳ ರೀತಿಯಲ್ಲಿ ತುಂಬಿಕೊಂಡು ಇರುತ್ತಾರೆ. ಕಳೆದ 2 ವರ್ಷದಿಂದ ಕೊರೊನಾ ಕಾರಣಕ್ಕೆ ಆಶಾಢ ಪೂಜೆಯನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತ ಮಾಡಲಾಗಿತ್ತು. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಮತ್ತೆ ಆಶಾಢ ಪೂಜೆ ಸಂಭ್ರಮ ಮನೆ ಮಾಡಿದೆ.

ಮೈಸೂರು ಜಿಲ್ಲಾಡಳಿತದಿಂದ ಸಕಲ ತಯಾರಿ..!

ಆಷಾಢ ಶುಕ್ರವಾರದ ವಿಶೇಷ ಪೂಜೆ ಹಿನ್ನಲೆಯಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ. ಇದೇ ಕಾರಣಕ್ಕಾಗಿ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೈಸೂರು ಕೋವಿಡ್ 19 ಆತಂಕದ ನಡುವೆ ಈ ವರ್ಷ ವಿಶೇಷ ಪೂಜೆಗೆ ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಪೂಜಾ ಕೈಂಕರ್ಯಗಳಿಗೆ ಮುಂಜಾನೆ 4 ಗಂಟೆಯಿಂದಲೇ ಅವಕಾಶ ಕೊಡಲಾಗಿದೆ. ಆದರೆ ಕೆಲವೊಂದು ನಿಯಮಗಳನ್ನು ಅಧಿಕಾರಿಗಳು ವಿಧಿಸಿದ್ದು, ಕಡ್ಡಾಯ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರ ನಿಮ್ಮ ಜೊತೆಯಲ್ಲಿ ಇದ್ದರೆ ಮಾತ್ರ ಅವಕಾಶ. ಇಲ್ಲದಿದ್ದರೆ ಭೇಟಿಗೂ ಮುನ್ನ 72 ಗಂಟೆಗಳ ಒಳಗೆ ತಪಾಸಣೆ ಮಾಡಿಸಿರುವ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕಿದೆ. ಆದರೆ ಖಾಸಗಿ ವಾಹನಗಳಿಗೆ ಈ ಬಾರಿಯೂ ನಿಷೇಧ.

ಚಾಮುಂಡಿ ಬೆಟ್ಟದ ಮೇಲೆ ನಿಮ್ಮ ಕಾರಿಗೆ ಅವಕಾಶವಿಲ್ಲ..!

ಆಶಾಢ ಮಾಸದಲ್ಲಿ ಜನರು ಹೆಚ್ಚಾಗಿ ಶಕ್ತಿಪೀಠದ ಕಡೆಗೆ ತೆರಳುವುದು ಸಾಮಾನ್ಯ. ಶಕ್ತಿ ದೇವತೆಗಳ ಶಕ್ತಿ ಹೆಚ್ಚಾಗಿದ್ದು, ಭಕ್ತಿಯಿಂದ ಯಾವುದೇ ಅಪೇಕ್ಷೆಯನ್ನು ಕೇಳಿಕೊಂಡರೂ ಈಡೇರಿಸುತ್ತಾರೆ ಎನ್ನುವುದು ನಂಬಿಕೆ. ಚಾಮುಂಡಿ ಬೆಟ್ಟದ ಮೇಲೆ ಸಾವಿರಾರು ಜನರು ಬರುವ ಕಾರಣಕ್ಕೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಾರುಗಳನ್ನು ಬೆಟ್ಟದ ಕೆಳಗೆ ನಿಲ್ಲಿಸಿ, ಅಲ್ಲಿಂದ ಮೈಸೂರು ಸಾರಿಗೆಯಲ್ಲಿ ಪ್ರಯಾಣ ಬೆಳೆಸಬೇಕಿದೆ. ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಉಚಿತ ಬಸ್ ಸೇವೆ ನೀಡಲು ತಿರ್ಮಾ‌ನ ಕೈಗೊಳ್ಳಲಾಗಿದೆ. ಆದರೆ ಈ ಸೇವೆ ಪ್ರತಿ ಶುಕ್ರವಾರ ಮಾತ್ರ ವಿಶೇಷ ಬಸ್ ವ್ಯವಸ್ಥೆ. ಇದಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚುವರಿ 50 ಬಸ್​ಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಹೆಲಿಪ್ಯಾಡ್​ ಬಳಿಯ 18 ಎಕರೆ ಜಾಗದಲ್ಲಿ ಪಾರ್ಕಿಂಗ್ ಮಾಡಲಿದ್ದು, ಅಲ್ಲಿಂದಲೇ ಬಸ್​ಗಳು ಚಾಮುಂಡಿ ಬೆಟ್ಟಕ್ಕೆ ಹೊರಡಲಿವೆ.

ಇದನ್ನೂ ಓದಿ: ಕರ್ನಾಟಕದಿಂದ ಪ್ರಧಾನಿ ನರೇಂದ್ರ ಮೋದಿಗೆ ಸುಳ್ಳು ಮಾಹಿತಿ..!

ಬೆಟ್ಟ ಪ್ರವೇಶಕ್ಕೂ ಮುನ್ನ ಮೂರು ಸುತ್ತಿನ ಕೋಟೆ..!

ರಾಜ್ಯದಲ್ಲೂ ಸೇರಿದಂತೆ ದೇಶಾದ್ಯಂತ ಕೊರೊನಾ ಸೋಂಕು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ಆತಂಕಗೊಂಡಿರುವ ಅಧಿಕಾರಿಗಳು ಮತ್ತೆ ಮಾಸ್ಕ್​ ದಂಡ ವಿಧಿಸುವ ಸಲಹೆ ನೀಡಿದ್ದಾರೆ. ಹೀಗಾಗಿ ಮೈಸೂರಿನಲ್ಲೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದು, ಲಸಿಕೆ ಆಗಿದ್ಯಾ ಅಥವಾ ನೆಗಟಿವ್​ ರಿಪೋರ್ಟ್​ ಇದ್ಯಾ ಎನ್ನುವುದನ್ನು ಮೂರು ಬಾರಿ ತಪಾಸಣೆ ಮಾಡಲಿದ್ದಾರೆ. ಬಸ್ ನಿಲ್ದಾಣ, ಬೆಟ್ಟದ ಪಾದ, ಮೆಟ್ಟಿಲು ಬಳಿ ಪ್ರಮಾಣ ಪತ್ರ ತಪಾಸಣೆ ಮಾಡಲಾಗುತ್ತದೆ. ಮೂರು ರೀತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದ್ದು, ಉಚಿತ ದರ್ಶನ, 50 ರೂಪಾಯಿ ಟಿಕೆಟ್ ಪಡೆದು ದರ್ಶನ ಹಾಗು 300 ರೂಪಾಯಿ ವಿಶೇಷ ದರ್ಶನಕ್ಕೂ ಅವಕಾಶ ಇದೆ. ಬಸ್ ನಿಲ್ದಾಣದಲ್ಲಿಯೇ ಟಿಕೆಟ್ ನೀಡುವ ಕೌಂಟರ್​ ತೆರೆಯಲಾಗ್ತಿದೆ. ಸಂಪೂರ್ಣ ಚಾಮುಂಡಿ ಬೆಟ್ಟಕ್ಕೆ ಸಿಸಿಟಿವಿ ಅಳವಡಿಸಿದ್ದು, ಅಹಿತಕರ ಘಟನೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

Related Posts

Don't Miss it !