ಮೈಸೂರು: ಗ್ಯಾಂಗ್​ ರೇಪ್​ ಕಾಮುಕರು ಅಂದರ್​ ಆಗಿದ್ದು ಹೇಗೆ..?

ಮೈಸೂರಿನ ಗ್ಯಾಂಗ್​ ರೇಪ್​ ಪ್ರಕರಣದಲ್ಲಿ ಮಹತ್ವದ ಕೆಲಸ ಆಗಿದೆ. ಅತ್ಯಾಚಾರಿಗಳ ಪತ್ತೆಗೆ ರಚಿಸಲಾಗಿದ್ದ ಪೊಲೀಸರ ತಂಡ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರ ಆರೋಪಿಯ ಸ್ನೇಹಿತ ನೀಡಿದ್ದ ಸುಳಿವಿನ ಆಧಾರದ ಮೇಲೆ ಕೇರಳ ಹಾಗೂ ತಮಿಳುನಾಡಿನಲ್ಲಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು, ತಮಿಳುನಾಡಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಶುಕ್ರವಾರ ತಡರಾತ್ರಿಯೇ ಕರೆತಂದಿದ್ದಾರೆ ಎನ್ನುವ ಮಾಹಿತಿ ಪೊಲೀಸ್​ ಮೂಲಗಳಿಂದ ದೊರಕಿದ್ದು, ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಬಹಿರಂಗ ಮಾಡಲಿದ್ದಾರೆ ಎನ್ನಲಾಗಿದೆ.

ಕಾಮುಕರ ಬಂಧನದ ಬಗ್ಗೆ ಸಿಎಂಗೆ ಮಾಹಿತಿ..!

ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ನಿರ್ವಹಿಸುವಲ್ಲಿ ವಿಫಲರಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಪಿಗಳ ಬಂಧನದಿಂದ ನಿರಾಳರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಸಿಎಂಗೆ ಮಾಹಿತಿ ನೀಡಿದ್ದಾರೆ. ಲಲಿತಾದ್ರಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಇಡೀ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಇದೀಗ ಡಿಜಿಪಿ ಪ್ರವೀಣ್​ ಸೂದ್​ ಮೈಸೂರಿಗೆ ಹೊರಟಿದ್ದು, ಮಧ್ಯಾಹ್ನ ಸುದ್ದಿಗೋಷ್ಟಿ ನಡೆಸಿ ಕಾಮುಕರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ;

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿಸಿಕೊಂಡು ಹೋದ ಸಂತ್ರಸ್ಥೆ..!

ಸಂತ್ರಸ್ತ ಯುವತಿ ತನಿಖೆಗೆ ಸಹಕಾರ ನೀಡ್ತಿಲ್ಲ ಎಂದು ಶುಕ್ರವಾರವಷ್ಟೇ ಸಚಿವರು ಬಹಿರಂಗ ಮಾಡಿದ್ದರು. ನಿನ್ನೆ ಸಂಜೆ ಆಸ್ಪತ್ರೆಯಿಂದ ಮಗಳನ್ನು ಡಿಸ್ಚಾರ್ಜ್​ ಮಾಡಿಸಿರುವ ಪೋಷಕರು ತಮ್ಮ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅತ್ಯಾಚಾರ ಪ್ರಕರಣದಿಂದ ಖಿನ್ನತೆಗೆ ಒಳಗಾಗಿರುವ ಯುವತಿ, ಯಾವುದೇ ಹೇಳಿಕೆ ನೀಡಲು ಸಿದ್ಧಳಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲವು ದಿನಗಳ ನಂತರ ಮಗಳಿಂದ ಹೇಳಿಕೆ ಕೊಡಿಸುವುದಾಗಿ ಪೋಷಕರು ತಿಳಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಮುಂದಿನ ವಾರದ ನಂತರ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಸದ್ಯ ಸಂತ್ರಸ್ತ ಯುವತಿ ಚೇತರಿಸಿಕೊಳ್ಳಲಿ, ಪರಿಸ್ಥಿತಿ ಸುಧಾರಿಸಿದ ಬಳಿಕ ವಿಚಾರಣೆ ಮಾಡೋಣ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾದೆ.

ಇದನ್ನೂ ಓದಿ;

ಗಡಿಯಿಂದ ಬಂದಿದ್ದ ಕಾಮುಕರಿಂದ ಗ್ಯಾಂಗ್​ ರೇಪ್​..!

ತಮಿಳುನಾಡು ಗಡಿ ಭಾಗದ ಹಳ್ಳಿಗಳಿಂದ ಮೈಸೂರಿಗೆ ಬಾಳೆ ಮಾರಾಟ ಮಾಡಲು ಆರೋಪಿಗಳು ಬಂದಿದ್ದರು ಎನ್ನುವುದು ಪ್ರಾಥಮಿಕ ಮೂಲಗಳಿಗಳಿಂದ ತಿಳಿದು ಬಂದಿರುವ ಮಾಹಿತಿ. ಬಾಳೆ ಮಾರಾಟ ಮಾಡಿದ ನಂತರ ಮದ್ಯ ಸೇವನೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿ ಗೂಡ್ಸ್​ ವಾಹನದಲ್ಲಿ ಪರಾರಿಯಾಗಿದ್ದರು ಎನ್ನಲಾಗಿದೆ. ಯುವತಿ ಸ್ನೇಹಿತ ಕೂಲಿ ಕಾರ್ಮಿಕರಂತೆ ಕಾಣಿಸುತ್ತಿದ್ದರು ಹಾಗೂ ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನುವ ಪ್ರಮುಖ ಸುಳಿವು ನೀಡಿದ್ದರು. ಇದೇ ಆಧಾರದಲ್ಲಿ ತನಿಖೆಗೆ ಇಳಿದಿದ್ದ ಪೊಲೀಸರು ನಾಲ್ವರು ತಮಿಳುನಾಡಿನವರು ಹಾಗೂ ಓರ್ವ ಚಾಮರಾಜನಗರದ ಗಡಿಭಾಗದ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಂಕಿತರು ಆರೋಪಿಗಳಾಗಿ ಅಪರಾಧಿಗಳು ಆಗುವುದು ಹೇಗೆ..?

ಯಾವುದೇ ಪ್ರಕರಣದಲ್ಲೂ ಪೊಲೀಸರು ಶಂಕಿತ ಆಧಾರದ ಮೇಲೆಯೇ ವಶಕ್ಕೆ ಪಡೆಯುತ್ತಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾದರೆ ಪ್ರಕರಣದಲ್ಲಿ ಸೇರಿಸಿ ಆರೋಪಿಗಳನ್ನಾಗಿ ಮಾಡಲಾಗುತ್ತದೆ. ಈ ಹಂತದಲ್ಲಿ ಸಾಕ್ಷಿಗಳು ಹಾಗೂ ಪ್ರತ್ಯಕ್ಷದರ್ಶಿಗಳನ್ನು ಕರೆತಂದು ಆರೋಪಿಗಳ ಗುರುತು ಪತ್ತೆ ಮಾಡುವ ಕೆಲಸ ಮಾಡಲಾಗುತ್ತದೆ. ಆರೋಪಿಗಳನ್ನು ಕೋರ್ಟ್​ ಎದುರು ಹಾಜರು ಪಡಿಸಿ ಪೊಲೀಸ್​ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ನಂತರ ಸ್ಥಳ ಮಹಜರು ಮಾಡಿ ಸಾಕ್ಷಿಗಳು ಹಾಗೂ ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಆರೋಪಿಗಳ ವಿಚಾರಣೆ ಮಾಡಿ ಒಂದಕ್ಕೆ ಒಂದು ಲಿಂಕ್​ ಸಿಗುವಂತೆ ಮಾಡಲಾಗುತ್ತದೆ. ಆ ಬಳಿಕ ಆರೋಪಿಗಳ ಮೇಲೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿ ಅಪರಾಧಿಗಳನ್ನಾಗಿ ಮಾಡಿ ಕೋರ್ಟ್​ನಿಂದ ಶಿಕ್ಷೆಯಾಗುವಂತೆ ಮಾಡುವ ಪ್ರಕ್ರಿಯೆ ನಡೆಯಲಿದೆ.

Related Posts

Don't Miss it !