“ನನ್ನಮ್ಮ ಸೂಪರ್ ಸ್ಟಾರ್” ಕಂದಮ್ಮ ಸಮನ್ವಿ ದುರಂತ ಅಂತ್ಯ..!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ​ ನನ್ನಮ್ಮ ಸೂಪರ್ ಸ್ಟಾರ್ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಳೆದ ವಾರವಷ್ಟೇ ಎಲಿಮಿನೇಷನ್ ಆಗಿದ್ದ 6 ವರ್ಷದ ಪುಟ್ಟ ಕಂದಮ್ಮ ಸಮನ್ವಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ಅಮ್ಮನ ಜೊತೆಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದಾಗ ಗುರುವಾರ ಸಂಜೆ 4.30ರ ವೇಳೆ ಅಪಘಾತ ನಡೆದಿದೆ. ಅತಿ ವೇಗವಾಗಿ ಬಂದ ಟಿಪ್ಪರ್​ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಕೆಳಕ್ಕೆ ಬಿದ್ದ ಅಮ್ಮ ಹಾಗೂ ಮಗಳು ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ರವಾನೆ ಮಾಡಿದರೂ ತೀವ್ರ ರಕ್ತಸ್ರಾವದಿಂದ ಪುಟಾಣಿ ಸಮನ್ವಿ ಇಹಲೋಕ ತ್ಯಜಿಸಿದ್ದು, ತಾಯಿ ಅಮೃತ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಖ್ಯಾತ ಹರಿಕಥೆ ಗಾಯಕ ಗುರುರಾಜುಲು ನಾಯ್ಡು 3ನೇ ಕುಡಿ ದುರಂತ..!

ಕರ್ನಾಟಕ ಕಂಡಂತ ಖ್ಯಾತ ಹರಿಕಥೆ ಗಾಯಕರಾದ ಗುರುರಾಜುಲು ನಾಯ್ಡು ಅವರ ಮೊಮ್ಮಗಳು ಅಮೃತ ನಾಯ್ಡು ಅವರ ಪುತ್ರಿ ಈ ಸಮನ್ವಿ ನಾಯ್ಡು. ಗುರುರಾಜುಲು ನಾಯ್ಡು ಅವರ ಪುತ್ರಿ ಶೋಭಾ ನಾಯ್ಡು ಅವರ ಪುತ್ರಿ ಅಮೃತ ನಾಯ್ಡು. ಅಮೃತ ನಾಯ್ಡು ಅವರ ಏಕೈಕ ಮಗಳು ಸಮನ್ವಿ ಅಪಘಾತದಲ್ಲಿ ಬಲಿಯಾಗಿದ್ದಾಳೆ. ಸಂಕ್ರಾಂತಿ ಹಬ್ಬದ ಶಾಪಿಂಗ್​ ಮಾಡಲು ಹೋಗಿದ್ದಾಗ ತಾಯಿ ಜೊತೆ ಸ್ಕೂಟರ್​​ನ ಹಿಂಬದಿ ಕುಳಿತಿದ್ದ ಆರು ವರ್ಷದ ಪುಟಾಣಿ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಾಯಿ ಹಾಗೂ ಅಜ್ಜಿಯಂತೆ ಸಮನ್ವಿ ಕೂಡ ಹರಿಕಥೆ ಅಭ್ಯಾಸ ಮಾಡುತ್ತಿದ್ದಳು ಎನ್ನುವುದು ಕರುಳು ಚುರ್​ ಎನ್ನುವಂತೆ ಮಾಡುತ್ತದೆ.

ದುರಂತಗಳ ಸರಮಾಲೆಯನ್ನು ಕಾಣುತ್ತಿರುವ ಅಮೃತಾ..!

ಖ್ಯಾತ ಹರಿಕಥೆ ಗಾಯಕ ಗುರುರಾಜುಲು ನಾಯ್ಡು ಅವರ ಮೊಮ್ಮಗಳು ಅಮೃತಾ ನಾಯ್ಡು ಧಾರಾವಾಹಿಗಳಲ್ಲಿ ನಟಿಸುತ್ತಾ, ತಮ್ಮ ಹಿರಿಯರಿಂದ ಬಂದಿರುವ ಹರಿಕಥೆಯನ್ನು ಪಠಿಸುತ್ತಾ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಕಲರ್ಸ್​ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪರ್​ ಸ್ಟಾರ್​​ ಕಾರ್ಯಕ್ರಮದಲ್ಲಿ ಮಗಳ ಜೊತೆಗೆ ಭಾಗಿಯಾಗಿದ್ದರು. ಆದರೆ ಕಳೆದ ಒಂದು ವಾರದ ಹಿಂದಷ್ಟೇ ಕಾರ್ಯಕ್ರಮದಿಂದ ಎಲಿಮಿನೇಟ್​ ಆಗಿದ್ದರು. ಮೊದಲ ಮಗು ಕೂಡ ಸೂಕ್ತ ಬೆಳವಣಿಗೆ ಕಾಣದ ಕಾರಣಕ್ಕೆ ಕೆಲವೇ ದಿನಗಳಲ್ಲಿ ಸಾವನ್ನಪ್ಪಿತ್ತು. ಆ ಬಳಿಕ ಜನಿಸಿದ ಸಮನ್ವಿ, ಕುಟುಂಬದಲ್ಲಿ ನಗೆ ಬುಗ್ಗೆ ತಂದಿದ್ದಳು. ತನ್ನ ಮುತ್ತಜ್ಜ ಹಾಗೂ ಅಜ್ಜಿಯಂತೆ ಪಟಪಟನೆ ಹರುಳು ಉರಿದಂತೆ ಮಾತನಾಡುತ್ತಿದ್ದ ಸಮನ್ವಿ, ಇಂದು ಕೆಂಪೇಗೌಡ ಆಸ್ಪತ್ರೆಯ ಶವಗಾರದಲ್ಲಿ ಶವವಾಗಿ ಮಲಗಿದ್ದಾಳೆ.

ನನ್ನಮ್ಮ ಸೂಪರ್​ ಸ್ಟಾರ್​ ಕಾರ್ಯಕ್ರಮದಿಂದ ಔಟ್​ ಆಗಿದ್ಯಾಕೆ..?

ಚಟಪಟನೆ ಮಾತನಾಡುತ್ತಿದ್ದ ಸಮನ್ವಿ ಇಷ್ಟು ಬೇಗ ಕಾರ್ಯಕ್ರಮದಿಂದ ಹೊರಕ್ಕೆ ಬೀಳುವ ಸ್ಪರ್ಧಿಯಲ್ಲ. ಸಾಕಷ್ಟು ಪ್ರತಿಭಾವಂತ ತಾಯಿ ಮಗಳು ಇನ್ನಷ್ಟು ದಿನಗಳ ಕಾಲ ಕಾರ್ಯಕ್ರಮದಲ್ಲಿ ಉಳಿಯಬಹುದಿತ್ತು. ಆದರೆ ಅಮೃತಾ ನಾಯ್ಡು ಗರ್ಭಿಣಿ ಆಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿ ಕೆಲವೊಂದು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆ ಆಗುತ್ತಿತ್ತು ಎನ್ನುವ ಕಾರಣಕ್ಕೇ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಆದರೆ ಇದೀಗ ಸಮನ್ವಿ ಕೂಡ ತಾಯಿ ಅಮೃತಾ ನಾಯ್ಡು ಅವರಿಂದ ದೂರವಾಗಿದ್ದು, ಇಡೀ ಕುಟುಂಬದಲ್ಲಿ ದುಃಖ ಆವರಿಸುವಂತೆ ಮಾಡಿದೆ.

ಅಜಾಗರೂಕತೆಗೆ ಪ್ರಾಣವನ್ನೇ ಬಲಿ ಕೊಟ್ಟ ಸಮನ್ವಿ..!

ಅಪಘಾತ ಮಾಡಿದ ಟಿಪ್ಪರ್​​ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ಬಂಧಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಸ್ಕೂಟರ್​ಗೂ ಲಾರಿಗೂ ಟಚ್​ ಆಗಿದೆ. ಲಾರಿ ಚಾಲಕ ಸ್ವಲ್ಪ ನಿಧಾನವಾಗಿ ಬಂದಿದ್ದರೂ ಈ ಪುಟ್ಟ ಜೀವ ಉಳಿಯುತ್ತಿತ್ತು. ಮರಣೋತ್ತರ ಪರೀಕ್ಷೆಗಾಗಿ ಸಮನ್ವಿ ಮೃತದೇಹವನ್ನು ಕಿಮ್ಸ್​ಗೆ ರವಾನೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸುತ್ತಿದ್ದ ಸಮನ್ವಿ ಸಂಕ್ರಾಂತಿಯಂದೇ ಹೆಣವಾಗಿದ್ದಾಳೆ ಎನ್ನುವುದು ದುರಂತ ಅಧ್ಯಾಯ ಎನ್ನಬಹುದು. ತಾಯಿ ಅಮೃತಾ ನಾಯ್ಡು ಅವರನ್ನು ಭದ್ರವಾಗಿ ಹಿಡಿದುಕೊಂಡು ಕುಳಿತಿದ್ದರೂ ಬಾಲಕಿ ಸಮನ್ವಿ ಸಾಯದೆ ಬದುಕುಳಿಯುತ್ತಿದ್ದಳು. ಮಾಡಿದ ಪುಟ್ಟ ಅಜಾಗರೂಕತೆ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ ಎನ್ನುತ್ತಿದೆ ಪೊಲೀಸ್​ ಮೂಲಗಳು.

ಕೃಪೆ: ಕಲಾ ಮಾಧ್ಯಮ

Related Posts

Don't Miss it !