ದಕ್ಷಿಣ ಭಾರತದ ಮೇಲೆ ಬಿಜೆಪಿ ಕಣ್ಣು, ರಾಜ್ಯಸಭೆ ನಾಮನಿರ್ದೇಶದಲ್ಲಿ ಚತುರತೆ..!!

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಸಾಕಷ್ಟು ವರ್ಷಗಳಿಂದ ಯತ್ನಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಒಪ್ಪಿಕೊಂಡ ಜನತೆ, ಉಳಿದ ಯಾವುದೇ ರಾಜ್ಯದ ಜನರು ಭಾರತೀಯ ಜನತಾ ಪಾರ್ಟಿಯನ್ನು ಒಪ್ಪಿಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕವೂ ಸಾಕಷ್ಟು ಶ್ರಮ ಹಾಕಿದರೂ, ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಸಾಧ್ಯವಾಗಿದೆ. ಹಿಂದಿ ಭಾಷೆಯ ಎದುರು ಸೆಟೆದು ನಿಲ್ಲುತ್ತಿರುವ ದಕ್ಷಿಣ ಭಾರತದ ಜನರ ಮನಸೆಳೆಯುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಇದೀಗ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಲ್ಲಿ ಬಿಜೆಪಿ ಜಾಣ್ಮೆ ಪ್ರದರ್ಶನ ಮಾಡಿದ್ದು, ಕೇವಲ ದಕ್ಷಿಣ ಭಾರತದ ರಾಜ್ಯಗಳ ಪ್ರಮುಖರನ್ನು ಆಯ್ಕೆ ಮಾಡಿ, ಗಮನ ಸೆಳೆದಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಸೇರಿ ನಾಲ್ವರು ನೇಮಕ..!

ಕೇಂದ್ರ ಸರ್ಕಾರ ನೇಮಕ ಮಾಡುವ ವಿವಿಧ ವಲಯಗಳ ರಾಜ್ಯಸಭಾ ಪ್ರಾತಿನಿಧ್ಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾಣ್ಮೆ ಪ್ರದರ್ಶನ ಮಾಡಿದೆ. ಕರ್ನಾಟಕದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಸೇರಿದಂತೆ ಕೇವಲ ದಕ್ಷಿಣ ಭಾರತದ ರಾಜ್ಯಗಳಿಂದಲೇ ಆಯ್ಕೆ ಮಾಡಿದೆ. ತಮಿಳುನಾಡಿನಿಂದ ಸಂಗೀತ ಮಾಂತ್ರಿಕ ಇಳಯರಾಜ, ಕೇರಳದಿಂದ ಖ್ಯಾತ ಕ್ರೀಡಾಪಟು ಪಿ.ಟಿ ಉಷಾ, ಆಂಧ್ರ ಹಾಗೂ ತೆಲಂಗಾಣದಿಂದ ಖ್ಯಾತ ಚಿತ್ರಕಥೆ ಬರಹಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ (ನಿರ್ದೇಶಕ ರಾಜಮೌಳಿ ತಂದೆ) ಅವರನ್ನು ಆಯ್ಕೆ ಮಾಡಲಾಗಿದೆ. ಹಿಂದಿ ಭಾಷಿಕರ ರಾಜ್ಯಗಳಿಗೆ ಪ್ರಾಮುಖ್ಯತೆ ನೀಡುವ ಬಿಜೆಪಿ ದಕ್ಷಿಣ ಭಾರತವನ್ನು ಕಡೆಗಣಿಸುತ್ತದೆ ಎನ್ನುವ ಆರೋಪವನ್ನು ತೊಡೆದು ಹಾಕಲು ಈ ನಿರ್ಧಾರ ಮಾಡಲಾಗಿದೆ ಎನ್ನಲಾಗ್ತಿದೆ.

ರಾಜ್ಯಸಭೆಗೆ ನಾಮನಿರ್ದೇಶನಕ್ಕೆ ಆಯ್ಕೆಯಾದ ಸಾಧಕರು..!

ಧರ್ಮಸ್ಥಳದ ಧರ್ಮಾಧಿಕಾರಿ ಆಗಿ ಕ್ಷೇತ್ರದ ಹೆಸರು ಉತ್ತುಂಗದ ಕಡೆಗೆ ಸಾಗುವಂತೆ ಮಾಡಿರುವ ಡಾ ವೀರೇಂದ್ರ ಹೆಗ್ಗಡೆ ಅವರಿಗೆ ಕರ್ನಾಟಕದಲ್ಲಿ ಉತ್ತಮ ಹೆಸರಿದೆ. ಅವರನ್ನೇ ನಾಮ ನಿರ್ದೇಶನ ಮಾಡಿದಾಗ ಜನರ ಮನಸ್ಸು ಬಿಜೆಪಿಯತ್ತ ಆಕರ್ಷಣೆ ಮಾಡುತ್ತದೆ. ಇನ್ನೂ ತಮಿಳುನಾಡಿನ ಸಂಗೀತ ಮಾಂತ್ರಿಕ ಇಳಯರಾಜ ಯಾವುದೇ ರಾಜಕೀಯ ಚಟುವಟಿಕೆಯೂ ಇಲ್ಲದೆ ದೂರದಲ್ಲಿ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾಮ ನಿರ್ದೇಶನ ಮಾಡಿದರೆ ದ್ರಾವಿಡ ನಾಡು ತಮಿಳುನಾಡಿನಲ್ಲಿ ಮತ ಕೇಳುವುದಕ್ಕಾದರೂ ಸಾಧ್ಯವಾಗುತ್ತದೆ. ಇನ್ನೂ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ಚಿತ್ರಕಥೆಯಲ್ಲಿ ಭಾರೀ ಹೆಸರು. ತೆಲುಗು ಚಿತ್ರರಸಿಕರ ಎದೆಯಲ್ಲಿ ವಿಜಯೇಂದ್ರ ಪ್ರಸಾದ್ ಅಚ್ಚಳಿಯದೆ ಉಳಿದಿದೆ. ಹೀಗಿರುವಾಗ ಆಯ್ಕೆ ಜನರ ಮನಸ್ಸನ್ನು ಕಲಕುತ್ತದೆ. ಅದೇ ರೀತಿ ಖ್ಯಾತ ಓಟಗಾರ್ತಿ ಪಿ.ಟಿ ಉಷಾ ಆಯ್ಕೆಯೂ ಕೇರಳದಲ್ಲಿ ಮ್ಯಾಜಿಕ್​ ಮಾಡುವ ಇರಾದೆ ಇದೆ ಎನ್ನಲಾಗಿದೆ.

ಬಿಜೆಪಿಗೆ ಇದರಿಂದ ಲಾಭ ಆಗುತ್ತಾ..? ಇಲ್ವಾ..?

ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟು ಬಿಜೆಪಿ ಹೈಕಮಾಂಡ್​ ಈ ನಿರ್ಧಾರ ತೆಗೆದುಕೊಂಡಿದೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ ನಿಜವಾಗಿಯೂ ಈ ಸಾಧಕರು ಈ ಆಯ್ಕೆಗೆ ಅರ್ಹರಿದ್ದರು ಎನ್ನುವುದು ನಮ್ಮ ಅಭಿಮತ. ಆದರೂ ಇವರ ನಾಮನಿರ್ದೇಶನ ಮಾಡಿರುವುದರಿಂದ ಬಿಜೆಪಿಯ ಆಯ್ಕೆಯನ್ನು ಮೆಚ್ಚಲೇ ಬೇಕಿದೆ. ಈ ಹಿಂದೆ ಇದೀ ರೀತಿ ಹಲವಾರು ಆಯ್ಕೆಯನ್ನು ಮಾಡಲಾಗಿದೆ. ರಂಗಭೂಮಿ ಕಲಾವಿದೆ ಬಿ. ಜಯಶ್ರೀ. ಖ್ಯಾತ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಸೇರಿದಂತೆ ಹಲವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಆದರೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇಲ್ಲದ ಅವರಿಂದ ನಿರೀಕ್ಷೆ ಮಾಡಿದಂತೆ ರಾಜಕೀಯ ಲಾಭ ಆಗುವುದು ಕಡಿಮೆ. ಆದರೆ ಕೆಲವೊಂದಿಷ್ಟು ಜನರ ಮನಸನ್ನು ಗೆಲ್ಲುವುದು ಮಾತ್ರ ಶತಸಿದ್ಧ. ಆಯ್ಕೆಯಾಗಿರುವ ಎಲ್ಲಾ ಸಾಧಕರಿಗೂ The Public Spot ಕಡೆಯಿಂದ ಅಭಿನಂದನೆಗಳು.

Related Posts

Don't Miss it !