ಸಂಚಾರಿ ವಿಜಯ್​ ಸ್ಥಿತಿ ಗಂಭೀರ..! ಹೆಲ್ತ್ ಬುಲೆಟಿನ್ ಮಾಹಿತಿ..

ಚಿತ್ರರಂಗಕ್ಕೆ ಕಾಲಿಡುವ ವೇಳೆಯೇ ಗಾಂಧಿನಗರ ಮಾತ್ರವಲ್ಲ ಇಡೀ ದೇಶವೇ ತಿರುಗಿ ನೋಡುವಂತೆ ಮೊದಲ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್​ ಅಪಘಾತವಾಗಿದೆ. ತೀವ್ರವಾಗಿ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಆಸ್ಪತ್ರೆ ಸೇರಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದ್ದ ಬೈಕ್ ಅಪಘಾತದ ವೇಳೆ ಮೆದುಳಿನ ಭಾಗ ಹಾಗೂ ಬಲ ತೊಡೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವೈದ್ಯರು ನಟ ಸಂಚಾರಿ ವಿಜಯ್​​ಗೆ ಆಪರೇಷನ್ ಮಾಡಿದ್ದು ಇನ್ನೂ ಐಸಿಯುವಿನಲ್ಲಿ ಕೋಮಾದಲ್ಲೇ ಇದ್ದಾರೆ. ವೈದ್ಯರು 48 ಗಂಟೆಗಳ ಕಾಲ ಏನನ್ನೂ ಹೇಳಲಾಗದು‌ ಎಂದಿರುವುದು ಆತಂಕದ ವಿಚಾರವಾಗಿದೆ.

ನಟ ಸಂಚಾರಿ ವಿಜಯ್ ಹಾಗೂ ಅವರ ಸ್ನೇಹಿತ ನವೀನ್ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಜೆ.ಪಿ ನಗರದ 7th ಬ್ಲಾಕ್‌ನಲ್ಲಿ ಬೈಕ್ ಅಪಘಾತ ನಡೆದಿದ್ದು, ಸಂಚಾರಿ ವಿಜಯ್ ಹಾಗೂ ನವೀನ್ ಇಬ್ಬರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ನವೀನ್ ಎಂಬಾತ ಬೈಕ್ ಓಡಿಸುತ್ತಿದ್ದ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್ ತೀವ್ರ ಗಾಯಗಳಾಗಿದೆ. ಭಾನುವಾರ ಬೆಳಗ್ಗೆ ಆಸ್ಪತ್ರೆಯಿಂದ MLC ಮೆಮೋ ಬಂದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.ಕೂಡಲೇ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆಹಾಕಿರೋ ಜಯನಗರ ಸಂಚಾರಿ ಪೊಲೀಸರು ಅಪಘಾತ ನಡೆದ ಸ್ಥಳದ ಮಹಜರು ಮಾಡಿದ್ದು, ಅಪಘಾತವಾದ ಬೈಕ್ ವಶಕ್ಕೆ ಪಡೆದಿರೋ ಪೊಲೀಸರು ಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚಾಲಕನ ಮೇಲೆ‌ ವಿಜಯ್ ಸಹೋದರನಿಂದ ದೂರು..!

LNT South City ಬಳಿ ಬೈಕ್ ಅಪಘಾತ ನಡೆದಿದೆ. ಸ್ಕಿಡ್ ಆಗಿ ಬಿದ್ದಿರೋದಾಗಿ ಬೈಕ್ ಚಾಲಕ ನವೀನ್ ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್, ಬೈಕ್ ಓಡಿಸುತ್ತಿದ್ದ ನವೀನ್ ಮೇಲೆ ದೂರು ನೀಡಿದ್ದಾರೆ. ವಿಜಯ್ ನಮ್ಮ ಕುಟುಂಬದ ಆಧಾರಸ್ತಂಭ, ಆತ ಸುಮ್ಮನೆ ಕೂರುವ ವ್ಯಕ್ತಿ ಅಲ್ಲ. ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ. ನಿನ್ನೆಯೂ ಅಂತಹದ್ದೇ ಕೆಲಸ ಮುಗಿಸಿ ಬರುವಾಗ ಅವಘಡವಾಗಿದೆ. ನನ್ನ ಸಹೋದರನಿಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಂಚಾರಿ ವಿಜಯ್ ಸಹೋದರ ಸಿದ್ಧೇಶ್ ಕುಮಾರ್.

ಅಪಘಾತ ಆದ ಕೂಡಲೇ ಕಿಚ್ಚನ ನೆರವು..!

ನಟ ಸಂಚಾರಿ ವಿಜಯ್‌ಗೆ ಅಪಘಾತವಾಗಿದೆ ಎನ್ನುವ ಮಾಹಿತಿ ಕಿಚ್ಚ ಸುದೀಪ್ ಅವರಿಗೆ ತಿಳಿದ ತಕ್ಷಣವೇ ತಮ್ಮ ತಂಡಕ್ಕೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ನಟಸಂಚಾರಿ ವಿಜಯ್ ಮತ್ತು ನವೀನ್‌ರನ್ನು ಶನಿವಾರ ರಾತ್ರಿ 11.30 ರ ಸುಮಾರಿಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಡಾ. ಅರುಣ್ ನಾಯಕ್ ಅವರ ಜತೆ ಮಾತನಾಡಿ ತಕ್ಷಣವೇ ಚಿಕಿತ್ಸೆ ಕೊಡಿಸಲಾಗಿದೆ.

ರಸ್ತೆ ಅಪಘಾತ ಆಗಿದ್ದು ಹೇಗೆ..?

ಪೊಲೀಸ್ ಮೂಲಗಳ ಪ್ರಕಾರ ಯಮಹ R15 ಬೈಕ್ ಎಂದು ಗುರುತಿಸಲಾಗಿದೆ. ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ 2 ಸುತ್ತು ತಿರುಗಿದೆ. ಈ ವೇಳೆ ಬೈಕ್​ನಿಂದ ಹಾರಿ ಬಿದ್ದಿದ್ದಾರೆ ನಟ ವಿಜಯ್. ಬೈಕ್​ನ ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್
ಹಾಗಯು ನವೀನ್ ಹೆಲ್ಮೆಟ್​ ಧರಿಸಿರಲಿಲ್ಲ ಎನ್ನಲಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಆಗುವುದಕ್ಕೆ ಇದೇ ಪ್ರಮುಖ ಕಾರಣ ಎನ್ನಲಾಗಿದೆ.

ಬದುಕಿ ಬರಬೇಕು ಮಾನವಿಯತೆ ಮೂರ್ತಿ..!

ನಟ ಸಂಚಾರಿ ವಿಜಯ್ ಕೇವಲ ನಟನೆಗೆ ಮಾತ್ರ ಸೀಮಿತ ಆಗಿರಲಿಲ್ಲ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ, ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲೂ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ‌ ಬಂದಿದ್ದಾರೆ. ಮೆದುಳಿನಲ್ಲಿ ರಕ್ತಸ್ರಾವ ನಿಲ್ಲಿಸಲು ವೈದ್ಯರ‌‌ ತಂಡ ಸಾಕಷ್ಟು ಯತ್ನ ನಡೆಸಬಹುದು. ಆದರೆ ಮಿದುಳಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ನಿಲ್ಲಿಸುವುದಕೂ ಸಂಕಷ್ಟ ಎದುರಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೀರಿಯಸ್ ಇದ್ದಾರೆ ಎನ್ನುವುದನ್ನಷ್ಟೇ ಹೇಳಿದ್ದಾರೆ. ಆದರೂ ಮಾನವೀಯ ಸಾಕಾರ ಮೂರ್ತಿ‌ ಸಂಚಾರಿ‌ ವಿಜಯ್ ಬದುಕಿ ಬರಲಿ ಅನ್ನೋದು ಸಾವಿರಾರು ಜನರ ಪ್ರಾರ್ಥನೆಯಾಗಿದೆ. thepublicspot.com ಕೂಡ ಸಂಚಾರಿ ವಿಜಯ್ ಬದುಕಿ ಬರಲಿ ಎಂದು ಆಶಯ ವ್ಯಕ್ತಪಡಿಸುತ್ತಿದೆ.

Related Posts

Don't Miss it !