ನೂತನ ಸಚಿವರಿಗೆ ಖಾತೆ ಹಂಚಿಕೆ, ರಾಜಭವನದಿಂದ ಪಟ್ಟಿ ರಿಲೀಸ್​..!

ರಾಜ್ಯ ಸಚಿವ ಸಂಪುಟದಲ್ಲಿ ಸಾಕಷ್ಟು ಸರ್ಕಸ್​ ಮಾಡಿದ ಬಳಿಕ ಅಂತಿಮವಾಗಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕೆಲಸ ಮುಕ್ತಾಯವಾಗಿದೆ. ಸಚಿವರು ತಮ್ಮಿಷ್ಟದ ಖಾತೆಗಾಗಿ ಪಟ್ಟು ಹಿಡಿದಿದ್ದ ಕಾರಣ ಹೈಕಮಾಂಡ್​ ಮಧ್ಯಪ್ರವೇಶ ಮಾಡಿ ಪಟ್ಟಿ ಅಂತಿಮ ಮಾಡಿದೆ ಎನ್ನಲಾಗ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ DPAR, ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಸಂಸದೀಯ ವ್ಯವಹಾರ ಖಾತೆಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಗೋವಿಂದ ಕಾರಜೋಳಗೆ ಜಲಸಂಪನ್ಮೂಲ ಖಾತೆ, ಕೆ.ಎಸ್​ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ, ಆರ್​ ಅಶೋಕ್​ಗೆ ಕಂದಾಯ, ಶ್ರೀರಾಮುಲು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ, ವಿ ಸೋಮಣ್ಣ ವಸತಿ, ಮೂಲಸೌಕರ್ಯ, ಉಮೇಶ್​ ಕತ್ತಿ ಆಹಾರ ಮತ್ತು ನಾಗರಿಕ ಖಾತೆ ಹಾಗೂ ಅರಣ್ಯ, ಎಸ್​ ಅಂಗಾರ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ, ಜೆ.ಸಿ ಮಾಧುಸ್ವಾಮಿ ಸಣ್ಣ ನೀರಾವರಿ, ಕಾನೂನು ಖಾತೆ, ಅರಗ ಜ್ಞಾನೇಂದ್ರ ಗೃಹ ಖಾತೆ, ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ, IT & BT, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ, ಸಿ.ಸಿ ಪಾಟೀಲ್​ ಲೋಕೋಪಯೋಗಿ, ಆನಂದ್​ ಸಿಂಗ್​ಗೆ ಪರಿಸರ ಮತ್ತು ಪ್ರವಾಸೋದ್ಯಮ, ಕೋಟಾ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಅಭಿವೃದ್ಧಿ, ಸಮಾಜ ಕಲ್ಯಾಣ ಖಾತೆ, ಪ್ರಭು ಚೌವ್ಹಾಣ್​ ಪಶುಸಂಗೋಪನೆ ಖಾತೆ ನೀಡಲಾಗಿದೆ.

ಮುರುಗೇಶ್​ ನಿರಾಣಿ ಅವರಿಗೆ ಬೃಹತ್​, ಮಧ್ಯಮ ಕೈಗಾರಿಕೆ, ಶಿವರಾಮ್​ ಹೆಬ್ಬಾರ್​ ಕಾರ್ಮಿಕ ಖಾತೆ, ಎಸ್​. ಸೋಮಶೇಖರ್​ ಸಹಕಾರ, ಬಿ.ಸಿ ಪಾಟೀಲ್​ ಕೃಷಿ, ಬೈರತಿ ಬಸವರಾಜು ನಗರಾಭಿವೃದ್ಧಿ, ಡಾ ಕೆ ಸುಧಾಕರ್​ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಕೆ ಗೋಪಾಲಯ್ಯ ಅಬಕಾರಿ ಖಾತೆ, ಶಶಿಕಲಾ ಜೊಲ್ಲೆಗೆ ಮುಜಾರಾಯಿ, ವಕ್ಫ್​ ಮತ್ತು ಹಜ್​ ಖಾತೆ, ಎಂಟಿಬಿ ನಾಗರಾಜು ಪೌರಾಡಳಿತ, ನಾರಾಯಣಗೌಡ ಯುವಜನ ಸಬಲೀಕರಣ, ರೇಷ್ಮೆ ಇಲಾಖೆ, ಬಿ.ಸಿ ನಾಗೇಶ್​ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ವಿ ಸುನಿಲ್​ ಕುಮಾರ್​ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಹಾಲಪ್ಪ ಆಚಾರ್​ಗೆ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಂಕರ್​ ಪಾಟೀಲ್​ ಮುನೇನಕೊಪ್ಪ ಜವಳಿ, ಸಕ್ಕರೆ, ಮುನಿರತ್ನ ಅವರಿಗೆ ತೋಟಗಾರಿಕೆ ಇಲಾಖೆ ನೀಡಲಾಗಿದೆ.

ಅನುಭವ ಆಧಾರದಲ್ಲಿ ಹಂಚಿಕೆಯಾಗಿಲ್ಲ ಖಾತೆ..!

ಬಿ.ಎಸ್​ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕ ಸಚಿವರು ತಮ್ಮ ಹಳೇ ಖಾತೆಯನ್ನೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹೊಸದಾಗಿ ಚೊಚ್ಚಲ ಸಂಪುಟದಲ್ಲೇ ಮಹತ್ವದ ಖಾತೆಗಳನ್ನು ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ವಿ ಸುನಿಲ್​ ಕುಮಾರ್​ ಅವರಿಗೆ ಇಂಧನ ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ, ಬಿ.ಸಿ ನಾಗೇಶ್​ ಅವರಿಗೆ ಶಿಕ್ಷಣ ಇಲಾಖೆ ನೀಡಿರುವುದು ಹಲವು ಸಚಿವರಲ್ಲೇ ಅಚ್ಚರಿ ಮೂಡಿಸಿದೆ. ಪಕ್ಷನಿಷ್ಠರು ಹಾಗೂ ಹೊರಗಿನಿಂದ ಬಂದವರು ಎನ್ನುವ ಮಾನದಂಡದ ಆಧಾರದಲ್ಲಿ ಪ್ರಮುಖ ಖಾತೆಗಳನ್ನು ಪಕ್ಷ ನಿಷ್ಠರಿಗೆ ನೀಡಲಾಗಿದೆ ಎನ್ನಲಾಗ್ತಿದೆ. ಜನತಾ ಪರಿವಾರದ ನಾಯಕ ಮುಖ್ಯಮಂತ್ರಿ ಆಗಿರುವ ಕಾರಣ ಬಿಜೆಪಿಯ ಕಟ್ಟಾಳುಗಳಿಗೆ ಪ್ರಮುಖ ಖಾತೆ ಸಿಗುವಂತೆ ನೋಡಿಕೊಳ್ಳಲಾಗಿದೆ ಎನ್ನಲಾಗ್ತಿದೆ.

Related Posts

Don't Miss it !