ಸಚಿವ ಆನಂದ್​ಸಿಂಗ್​ ಒತ್ತಡಕ್ಕೆ ಸೊಪ್ಪು ಹಾಕಲಿಲ್ಲ ಬಿಜೆಪಿ..! ಮಾತುಕತೆಯಲ್ಲಿ ನಡೆದಿದ್ದೇನು..?

ವಿಜಯನಗರ ಜಿಲ್ಲೆ ಹೊಸಪೇಟೆ ಶಾಸಕ, ಹಾಲಿ ಸಚಿವ ಆನಂದ್​ ಸಿಂಗ್​ ಖಾತೆ ವಿಚಾರದಲ್ಲಿ ಕ್ಯಾತೆ ತೆಗೆದಿದ್ದರು. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ನನಗೆ ಬೇಕಿಲ್ಲ ಎಂದು ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಇದರ ಭಾಗವಾಗಿ ಇಂದು ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜಕೀಯ ಅಂತ್ಯವೋ ಅಥವಾ ರಾಜಕೀಯ ಪ್ರಾರಂಭವೋ ಎನ್ನುವ ಮಾತನ್ನಾಡುವ ಮೂಲಕ ಉತ್ತಮ ಖಾತೆ ಸಿಗದಿದ್ದರೆ ನಾನು ಎಲ್ಲದ್ದಕ್ಕೂ ಸಿದ್ಧ ಎನ್ನುವ ಸಂದೇಶ ರವಾನೆ ಮಾಡಿದ್ದರು. ಆ ಬಳಿಕ ಹೊಸಪೇಟೆಯಿಂದ ಬಿಜೆಪಿ ಶಾಸಕ ರಾಜೂಗೌಡ ಮೂಲಕ ಆನಂದ್​ ಸಿಂಗ್​ನನ್ನು ಸಂಪರ್ಕಿಸಿ ಬೆಂಗಳೂರಿಗೆ ಕರೆಸಿಕೊಳ್ಳಲಾಯ್ತು. ಬಳಿಕ ಯಡಿಯೂರಪ್ಪ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಯಾವುದೇ ಭರವಸೆ ಸಿಗಲಿಲ್ಲ. ಯಡಿಯೂರಪ್ಪ ಕೇವಲ ಬುದ್ಧಿವಾದ ಹೇಳಿ ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದ್ದರು.

ಆನಂದ್​ ಸಿಂಗ್​ ಒತ್ತಡಕ್ಕೆ ಮಣಿಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮನೆಯಿಂದ ಹೊರಟ ಆನಂದ್​ ಸಿಂಗ್ ಅವರಿಗೆ ಸಂಜೆ ಭೇಟಿ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ರು. ಯಡಿಯೂರಪ್ಪ ಬಳಿ ನೇರವಾಗಿ ಮಾತನಾಡಿದ್ದ ಆನಂದ್​ ಸಿಂಗ್​, ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿದ್ದೇನೆ. ನೀವು ಕೊಟ್ಟ ಮಾತಿನಂತೆ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದೀರಿ. ಆಗಲೂ ಉತ್ತಮ ಖಾತೆ ಸಿಗದಿದ್ದರೂ ನಾನು ಯಾವುದೇ ಚಕಾರ ಎತ್ತದೆ ಸುಮ್ಮನಿದ್ದೆ. ಈಗಲಾದರೂ ನನಗೆ ಉತ್ತಮ ಖಾತೆ ಸಿಗುವ ಭರವಸೆ ಇತ್ತು. ಆದರೆ ಈಗ ಅನ್ಯಾಯವಾಗಿದೆ. ನಾನು ಬೇರೆ ಪಕ್ಷಕ್ಕೆ ಹೋಗಲಾರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ರು ಎನ್ನಲಾಗಿದೆ. ಸಂಜೆ ಬೆಂಗಾವಲು ಪಡೆಯನ್ನು ಬಿಟ್ಟು ಆಪ್ತರೊಬ್ಬರ ಅಪಾರ್ಟ್​ಮೆಂಟ್​ಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್​ ಸಿಂಗ್​ ಮನವೊಲಿಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ರು. ಆರ್​. ಅಶೋಕ್​ ಕೂಡ ಈ ವೇಳೆ ಸಾಥ್​ ನೀಡಿದ್ರು.

ಇದನ್ನೂ ಓದಿ;

ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್​ ಸಿಂಗ್​ ಖಾತೆ ಬದಲಾವಣೆ ಬಗ್ಗೆ ಕೇಳಿದ್ದು ಸತ್ಯ. ಆದರೆ ನಾವು ಯಾವ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇವೆ ಎನ್ನುವುದನ್ನು ವಿವರಿಸಿದ್ದೇನೆ. ದೊಡ್ಡ ಉದ್ದೇಶ ಈಡೇರಿಸಲು ನಾವೆಲ್ಲರೂ ಒಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ. ಅವರೂ ಕೂಡ ಒಂದಾಗಿ ಹೋಗುವ ತೀರ್ಮಾನ ಒಪ್ಪಿಕೊಂಡಿದ್ದಾರೆ. ಪಕ್ಷದ ಅಂತಿಮ ನಿರ್ಧಾರವನ್ನು ಆನಂದ್​ ಸಿಂಗ್​ ಒಪ್ಪಿಕೊಂಡಿದ್ದಾರೆ ಎಂದರು. ಆನಂದ್​ ಸಿಂಗ್​ ಅವರ ಭಾವನೆಯಲ್ಲಿ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತೇವೆ ಎಂದಿದ್ದರು ಆ ಬಳಿಕ ಮಾತನಾಡಿದ ಆನಂದ್​ ಸಿಂಗ್​, ನಾನು ರಾಜೀನಾಮೆ ಕೊಡುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ನನ್ನ ಮನವಿಯನ್ನು ಒಪ್ಪಿಕೊಂಡಿದ್ದು, ವರಿಷ್ಠರ ಜೊತೆಗೆ ಮಾತನಾಡುವ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ;

ಇಂಧನ ಖಾತೆ ಮೇಲೆ ಆನಂದ್​ ಸಿಂಗ್​ ಕಣ್ಣು..!

ಆನಂದ್​ ಸಿಂಗ್​ ಇಂಧನ ಖಾತೆ ಕೊಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ ಚೊಚ್ಚಲ ಬಾರಿಗೆ ಸಚಿವರಾಗಿರುವ ವಿ ಸುನಿಲ್​ ಕುಮಾರ್​ ಅವರಿಗೆ ಇಂಧನ ಖಾತೆ ಕೊಟ್ಟಿದ್ದು ಹೈಕಮಾಂಡ್​. ರಾಜಭವನಕ್ಕೆ ಪಟ್ಟಿ ಕಳುಹಿಸಿದ ಬಳಿಕ ಮಧ್ಯಪ್ರವೇಶ ಮಾಡಿದ್ದ ಹೈಕಮಾಂಡ್​ ಸುನಿಲ್​ಕುಮಾರ್​ ಅವರಿಗೆ ಇಂಧನ ಖಾತೆ ನೀಡಿದೆ. ಹಾಗಾಗಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಆನಂದ್​ ಸಿಂಗ್​ ರಾಜೀನಾಮೆ ನೀಡಿದರೂ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ರಾಜಕೀಯ ಜೀವನಕ್ಕೆ ಸ್ವಯಂ ಮಸಿ ಬಳಿಯುವುದು ಬೇಡ ಎನ್ನುವುದನ್ನು ತಿಳಿ ಹೇಳುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಟೀಂ ಸಂಪೂರ್ಣವಾಗಿ ಹೇಳಿದೆ. ಬಿಜೆಪಿಯಲ್ಲಿ ಈಗಿನ ಪರಿಸ್ಥಿತಿ ಹೇಗಿದೆ. ನಮ್ಮ ನಿರ್ಧಾರದಲ್ಲಿ ಹೈಕಮಾಂಡ್​ ಹೇಗೆ ಮೂಗು ತೂರಿಸುತ್ತಿದೆ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಹೈಕಮಾಂಡ್​ ಅಡ್ಡಿ ಮಾಡುತ್ತದೆ. ಸ್ವಲ್ಪ ದಿನ ಕಾಯಿರಿ ಎಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಆನಂದ್​ ಸಿಂಗ್​ ಒಪ್ಪಿಕೊಂಡು ನಿರ್ಧಾರ ಬದಲಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

Related Posts

Don't Miss it !