ಪೊಲೀಸ್​ ಠಾಣೆಗಳು ಹೆಚ್ಚಾದರೆ ಅಪರಾಧ ಕೃತ್ಯಗಳು ಕಡಿಮೆ ಆಗುವುದೇ..?

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಕಳೆದೊಂಡು ವರ್ಷದ ಅಂಕಿ ಅಂಶಗಳನ್ನು ಗಮನಿಸಿದಾಗ ಈ ಮಾಹಿತಿ ಗೊತ್ತಾಗ್ತಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ವ್ಯಾಪ್ತಿಯಲ್ಲಿ ನೂತನವಾಗಿ ಸರಸ್ವತಿನಗರದಲ್ಲಿ ಪೊಲೀಸ್​ ಠಾಣೆ ನಿರ್ಮಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಆದರೆ ಅಪರಾಧ ನಿಯಂತ್ರಣ ಮಾಡುವುದಕ್ಕೆ ಕೇವಲ ಪೊಲೀಸ್​ ಠಾಣೆಗಳ ಸ್ಥಾಪನೆ ಸಾಕಾ ಎನ್ನುವುದು ಬಹುಮುಖ್ಯವಾದ ಪ್ರಶ್ನೆಯಾಗಿದೆ.

ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ಒಪ್ಪಿಗೆ..!

ಬೆಂಗಳೂರಿನ ಪಶ್ಚಿಮ ವಿಭಾಗದ ವಿಜಯನ ಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಗೋವಿಂದರಾಜ ನಗರದ ಸರಸ್ವತಿ ನಗರಕ್ಕೆ ನೂತನ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ. ವಿಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಅಪಹರಣ, ಚೈನ್ ಸ್ನ್ಯಾಚಿಗ್, ವಾಹನ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅಪರಾಧ ಕೃತ್ಯಗಳನ್ನ ಎಸಗಲು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯೇ ಹೆಚ್ಚು ಹಾಟ್ ಸ್ಪಾಟ್ ಎನ್ನುವಂತಾಗಿದೆ. ಹಾಗಾಗಿ ಅಪರಾಧಿಗಳನ್ನು ಮಟ್ಟ ಹಾಕಲು ಸರಸ್ವತಿ ನಗರದಲ್ಲಿ ನೂತನವಾಗಿ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ.

ಇದನ್ನೂ ಓದಿ:

ರೌಡಿಗಳ ಅಪರಾಧ ಕೃತ್ಯಗಳ ಮೇಲೆ A,B ಎಂದು ವರ್ಗೀಕರಣ ಮಾಡಿದ್ದು, ವಿಜಯನಗರದಲ್ಲಿ A ಪಟ್ಟಿ ರೌಡಿಶೀಟರ್​ಗಳು 42 ಜನ, B ಪಟ್ಟಿ ರೌಡಿಶೀಟರ್​ಗಳು 51 ಜನರಿದ್ದಾರೆ. ಒಟ್ಟು 93 ರೌಡಿಶೀಟರ್​ಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ವಿಜಯನಗರ ಠಾಣೆಯನ್ನ ವಿಭಜಿಸಿ ನೂತನ ಪೊಲೀಸ್ ಠಾಣೆ ತೆರೆಯಲು ಮನವಿ ಮಾಡಲಾಗಿತ್ತು. ಇದೀಗ ಸರ್ಕಾರ ನೂತನ ಪೊಲೀಸ್​ ಠಾಣೆಗೆ ಮಂಜೂರಾತಿ ನೀಡಿದೆ.

ಕೊಲೆ, ದರೋಡೆ ಎಗ್ಗಿಲ್ಲದೆ ಸಾಗಿದೆ..!

ಬೆಂಗಳೂರಿನಲ್ಲಿ ಹಾಡಹಗಲೇ ನಡುರಸ್ತೆಯಲ್ಲೇ ಕೊಲೆಗಳು ಆಗುತ್ತಿವೆ. ಒಂಟಿ ಮಹಿಳೆಯರು, ವಯೋವೃದ್ಧರ ಮನೆಗಳ ಮೇಲೆ ಪಾತಕ ಲೋಕ ಕಣ್ಣಿಟ್ಟಿದ್ದು ಕೊಲೆ ಸುಲಿಗೆ ಮಾಡುತ್ತಿದೆ. ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾದರೂ ಅಂತಿಮ ಘಟ್ಟ ತಲುಪುವುದು ಕಷ್ಟವಾಗಿದೆ. ದೂರು ಬಂದಾಗ ಎನ್​ಸಿಆರ್​ ಮಾಡುವುದು ಒತ್ತಡ ಹೆಚ್ಚಾದರೆ ಎಫ್​ಐಆರ್​ ದಾಖಲಿಸಿ ಕೈ ಬಿಡುವುದು ಸಾದಾಸೀದಾ ಆಗಿದೆ. ಶ್ರಮಂತರ ಪ್ರಕಗಳು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಿ ಅಂತಿಮ ಘಟ್ಟ ತಲುಪಿಸುವ ಕೆಲಸ ಕಡಿಮೆ ಆಗಿದೆ. ಯಾವುದೇ ಪ್ರದೇಶದಲ್ಲಿ ಅಪರಾಧ ಪ್ರಕರಣ ನಡೆದರೂ ಪೊಲೀಸರಿಗೆ ಸಣ್ಣ ಮಾಹಿತಿ ಆದರೂ ಸಿಗುತ್ತದೆ. ಅದರ ಆಧಾರದ ಮೇಲೆ ಆರೋಪಿಗಳಿಗೆ ಕೋಳ ಹಾಕುವ ಕೆಲಸ ಮಾಡಬಹುದು. ಆದರೆ ಪೊಲೀಸರಿಗೆ ಇಚ್ಛಾ ಶಕ್ತಿಯ ಕೊರತೆ ಎನ್ನುತ್ತಾರೆ ನಿವೃತ್ತ ಪೊಲೀಸ್​ ಅಧಿಕಾರಿ.

ಇದನ್ನೂ ಓದಿ:

ಪೊಲೀಸ್​ ವ್ಯವಸ್ಥೆಯಲ್ಲೇ ಬೇಕಿದೆ ಬದಲಾವಣೆ..!

ಯಾವುದೇ ಒಂದು ಠಾಣೆಯಲ್ಲಿ ದೂರು ದಾಖಲಾದ ಬಳಿಕ ಆ ಪ್ರಕರಣ ಏನಾಯ್ತು..? ಎನ್ನುವ ಪರಾಮರ್ಶೆ ಕೆಲಸ ನಡೆಯುತ್ತಿಲ್ಲ. ಎಫ್​ಐಆರ್​ ದಾಖಲಿಸಿದ ಬಳಿಕ ಸುಮ್ಮನಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸ್ವಲ್ಪ ಕಾಲ ಕೆಲಸ ಮಾಡಿದ ಬಳಿಕ ಬೇರೆ ಠಾಣೆಗೆ ವರ್ಗಾವಣೆ ಆಗುವುದು ಸಾಮಾನ್ಯ. ಆ ಬಳಿಕ ಹೊಸದಾಗಿ ಬಂದ ಅಧಿಕಾರಿ ಹಳೆಯ ಕೇಸ್​ಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸದೆ ಇರುವುದು ಅಪರಾಧಿಗಳಿಗೆ ಅನುಕೂಲ ಆದಂತಾಗಿದೆ. ಈಗ ಒಂದೊಂದು ಸರ್ಕಲ್​ಗಳಲ್ಲೂ ಸಿಸಿ ಕ್ಯಾಮರಾ ಇರುವ ಕಾರಣ ಆರೋಪಿಗಳನ್ನು ಪತ್ತೆ ಮಾಡುವುದು ಮತ್ತಷ್ಟು ಸರಳವಾಗಿದೆ. ಇರುವ ಪೊಲೀಸ್​ ಸಿಬ್ಬಂದಿಗಳಿಗೆ ವೈಜ್ಞಾನಿಕ ಹಾಗೂ ತಾಂತ್ರಿಕ ತರಬೇತಿ ಅವಶ್ಯಕತೆ ಇದೆ. ಅಷ್ಟೇ ಅಲ್ಲದೆ ರಾಜಕಾರಣಿಗಳು ಅಧಿಕಾರಿಗಳ ಬೆನ್ನು ಕಾಯುವುದನ್ನು ಮೊದಲು ತಪ್ಪಿಸಬೇಕಿದೆ. ತನಿಖೆ ಮಾಡುವುದಕ್ಕೆ ಸೂಕ್ತ ಕಾಲಾವಕಾಶ ಸಿಗುವಂತೆ ಮಾಡಬೇಕಿದೆ. ಕೇವಲ ಪೊಲೀಸ್​ ಠಾಣೆಗಳು ಹೆಚ್ಚಾದ ಮಾತ್ರಕ್ಕೆ ಅಪರಾಧಗಳು ಸ್ಥಗಿತ ಆಗುವುದು ಸುಳ್ಳು.

Related Posts

Don't Miss it !