ಸುಂದರ ಸಂಸಾರವನ್ನು ಸುಟ್ಟು ಹಾಕಿತೇ ಐಶಾರಾಮಿ ಬದುಕಿನ ಕನಸು..!?

ಬದುಕಿನಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯ ಕನಸುಗಳನ್ನು ಕಟ್ಟಿಕೊಂಡು ಬದುಕು ರೂಪಿಸಿಕೊಳ್ತಾರೆ. ನಮ್ಮ ಬದುಕು ನೀರಿನ ಮೇಲಿನ ಗುಳ್ಳೆಯ ರೀತಿ ಯಾವಾಗ ಬೇಕಾದರೂ ನಾಶ ಆಗಬಹುದು ಎನ್ನುವುದು ಗೊತ್ತಿದ್ದರೂ ಆಸೆಯನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ. ಸಣ್ಣ ಆಸೆ ಪೂರೈಸಿದರೆ, ಮತ್ತೊಂದು ಆಸೆ ದೊಪ್ಪನೆ ಎದ್ದು ನಿಲ್ಲುತ್ತದೆ. ಅದೇ ರೀತಿ ಆಸೆ ಎಂಬ ಕಾಡು ಕುದುರೆಯನ್ನೇರಿದ ಯುವ ದಂಪತಿ ಆತ್ಮಹತ್ಯೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ್ದಾರೆ. ಮದುವೆ ಆಗಿ ಕೇವಲ 2 ವರ್ಷ 2 ತಿಂಗಳು ಮಾತ್ರ ಆಗಿತ್ತು. ಸುಂದರ ಜೀವನವನ್ನು ಕಟ್ಟಿಕೊಳ್ಳುವ ಕನಸು ಕಾಣಲು ಮುಂದಾಗಿದ್ದ ಈ ದಂಪತಿ ಕನಸಿನ ಮೆಟ್ಟಿಲುಗಲನ್ನು ಕಟ್ಟುವಲ್ಲಿ ವಿಫಲರಾಗಿ ಸಾವಿನ ಮನೆ ಸೇರಿದ್ದಾರೆ.

ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದೇ ಅಚ್ಚರಿ..!!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ಕಟ್ಟಿಕೊಂಡು ವಿಶ್ರಾಂತ ಜೀವನ ಕಳೆಯಬೇಕು ಎನ್ನುವುದು ಸಾಕಷ್ಟು ಜನರ ಕನಸು ಆಗಿರುತ್ತದೆ. ಅದೇ ರೀತಿ ಮೈಸೂರಿನ ಉದಯಗಿರಿಯ ಸಾತಗಳ್ಳಿ ಲೇಔಟ್​ನಲ್ಲಿ ವಾಸವಾಗಿದ್ದ 26 ವರ್ಷದ ಸಂತೋಷ್, ಹಾಗೂ 22 ವರ್ಷದ ಭವ್ಯಾ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್​ಕುಮಾರ್ ರಸ್ತೆಯ ನಿವಾಸದಲ್ಲಿ ವಾಸವಾಗಿದ್ದ ಸಂತೋಷ್​​ 2 ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಚಿನ್ನ – ಬೆಳ್ಳಿ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ ಸಂತೋಷ್, ಕಳೆದ ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟು ಸ್ವಂತವಾಗಿ ಕೆಲಸ ಆರಂಭ ಮಾಡಿದ್ದರು. ಈ ನಡುವೆ ಕೊರೊನಾ ಸೋಂಕು ಹೆಚ್ಚಾಗಿ ಲಾಕ್​ಡೌನ್​ ಆಗಿದ್ದರಿಂದ ವ್ಯಾಪಾರದಲ್ಲಿ ಲಾಭ ಬಂದಿರಲಿಲ್ಲ.

ಇದನ್ನೂ ಓದಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಸರ್ಕಾರದಿಂದಲೇ ಅಗೌರವ, ಪ್ರತಿಭಟನೆ..!

ಆತ್ಮಹತ್ಯೆ ಹೇಗೆ ಮಾಡಿಕೊಂಡರು ಎನ್ನುವುದೇ ಡೌಟ್..!?

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂತೋಷ್​, ಹೊಸದಾಗಿ ಮದುವೆ ಆಗಿದ್ದ ಪತ್ನಿ ಜೊತೆಗೆ ಸಂಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮನೆಯವರ ಜೊತೆಗೂ ಯಾವುದೇ ಸಂಕಷ್ಟ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಗಣರಾಜ್ಯೋತ್ಸವದ ದಿನ ಮಧ್ಯಾಹ್ನದ ಬಳಿಕ ಮನೆಗೆ ಬಂದಿದ್ದ ಸಂತೋಷ್​​, ತಾಯಿ ಹಾಗೂ ಪತ್ನಿ ಜೊತೆಗೆ ಕುಳಿತು ಒಟ್ಟಿಗೆ ಊಟ ಮಾಡಿದ್ದರು. ಆ ಬಳಿಕ ಸಂತೋಷ್​ ಹಾಗೂ ಭವ್ಯಾ ರೂಮಿಗೆ ಹೋಗಿದ್ದರು. ಕೆಲವು ಸಮಯದ ಬಳಿಕ ಪತಿ ಪತ್ನಿ ಇಬ್ಬರೂ ಹಾಸಿಗೆ ಮೇಲೆ ಬಿದ್ದು ಒದ್ದಾಡುತ್ತಿದ್ದ ಕಾರಣ ಬಾಗಿಲು ತೆಗೆದು ನೋಡಿದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು ಎನ್ನಲಾಗಿದೆ. ವಿಷ ಸೇವಿಸಿದ್ದಾರೋ ಅಥವಾ ಆತ್ಮಹತ್ಯೆಗೆ ಬೇರೆ ಮಾರ್ಗ ಅನುಸರಿಸಿದ್ದಾರಾ..? ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಆಡಳಿತ ಪಕ್ಷ BJP ಎದುರು ಕಾಂಗ್ರೆಸ್​​ ಕಾಲು ಜಾರಿ ಬಿದ್ದಿದ್ದು ಯಾಕೆ..?

ಐಶಾರಾಮಿ ಜೀವನವೋ..! ಆರ್ಥಿಕ ಲೆಕ್ಕಾಚಾರ ಹಾದಿ ತಪ್ಪಿತೋ..?

ಸಂತೋಷ್​ ಹಾಗೂ ಭವ್ಯಾ ಸಾವಿನ ಬಳಿಕ ಮಾಧ್ಯಮಗಳಿಗೆ ಕುಟುಂಬಸ್ಥರು ಹೇಳಿಕೆ ನೀಡಿದ್ದು, ಕೊರೊನಾ ಕಾರಣದಿಂದ ವ್ಯಾಪಾರ ಅಷ್ಟೊಂದು ಲಾಭದಾಯಕವಾಗಿರಲಿಲ್ಲ. ಆದರೆ ಸಾಯುವ ಪರಿಸ್ಥಿತಿ ಇರಲಿಲ್ಲ ಎಂದಿದ್ದಾರೆ. ಆದರೆ ಇತ್ತೀಚಿಗೆ ದಂಪತಿ ಸೈಟ್ ಖರೀದಿ ಮಾಡಿದ್ದರು. ಹೊಸದಾಗಿ ಅಂಗಡಿ ಮಾಡಿದ್ದರು. ಅದಕ್ಕಾಗಿ ಕೈ ಸಾಲಗಳನ್ನು ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಇದೆ. ಆದರೆ ಸೈಟ್​ ಖರೀದಿ ಮಾಡಿದ್ದರೆ, ಅದನ್ನೇ ಮಾರಾಟ ಮಾಡಿ ಸಾಲ ವಾಪಸ್​ ಕೊಡಬಹುದಿತ್ತು. ಸಾಯುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ಇತ್ತೀಚಿಗೆ ಆಸ್ಪತ್ರೆಗೆ ಭೇಟಿ ನೀಡಿದ್ರಾ..? ಮಕ್ಕಳಾಗದಿರುವ ಬಗ್ಗೆ ವೈದ್ಯರು ಏನಾದರೂ ಹೇಳಿದ್ರಾ..? ಅಥವಾ ಅಂಗಡಿ ಬಳಿಗೆ ಬಂದು ಯಾರಾದರೂ ಗಲಾಟೆ ಮಾಡಿದ್ರಾ..? ಎನ್ನುವ ಬಗ್ಗೆಯೂ ಉದಯಗಿರಿ ಪೊಲೀಸರು tನಿಖೆ ನಡೆಸುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಸಂತೋಷ್​​ ಹಾಗೂ ಭವ್ಯಾ ಬದುಕನ್ನು ಕಟ್ಟಿಕೊಳ್ಳುವುದರಲ್ಲಿ ಎಡವಿದ್ದು, ಚಿಕ್ಕ ವಯಸ್ಸಿನಲ್ಲೇ ಬದುಕು ಮುಗಿಸಿದ್ದಾರೆ ಎನ್ನುವುದು ಮಾತ್ರ ಸತ್ಯ.

ನೀತಿ: ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಸುಖ ಜೀವನಕ್ಕೆ ಅನುಕೂಲ

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !