ಆಸಾನಿ ಎಫೆಕ್ಟ್: ಮುಂದಿನ ಮೂರು ದಿನಗಳ ಕಾಲ ಆರೋಗ್ಯಕ್ಕೆ ಎದುರಾಗಿದೆ ಆತಂಕ..!

ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಜನರ ಆರೋಗ್ಯದಲ್ಲಿ ಈಗಾಗಲೇ ಏರುಪೇರು ಸೃಷ್ಟಿಯಾಗಿದೆ. ಇನ್ನು ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಹೆಚ್ಚಾಗುವ ಸಂಭವವಿದೆ. ಇದನ್ನು ಸ್ವತಃ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಶುರುವಾಗಿರುವ ಅಸಾನಿ ಚಂಡಮಾರುತದ ಪರಿಣಾಮ ವಾತಾವರಣದಲ್ಲಿ ವಿಷಮ ಗಾಳಿ ಬೀಸುತ್ತಿದೆ. ಶೀತ, ಕೆಮ್ಮಿನಿಂದ ಜನರು ಬಳಲುತ್ತಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಅಸಾನಿ ಚಂಡಮಾರುತ ತನ್ನ ಪ್ರಭಾವ ಹೆಚ್ಚಳ ಮಾಡಲಿದ್ದು, ಮತ್ತಷ್ಟು ಮಳೆಯಾಗುವ ಸಂಭವ ಇದೆ.

ಇಂದು ಸಂಜೆ 4.30 ರ ವೇಳೆಗೆ ಅಪ್ಪಳಿಸಲಿದೆ ಅಸಾನಿ..!

ಇಂದು ಮಂಗಳವಾರ ಸಂಜೆ 4.30 ರ ವೇಳೆಗೆ ಅಸಾನಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮಯನ್ಮಾರ್ ಹಾಗೂ ಬಾಂಗ್ಲಾದೇಶದ ಕಡೆಗೆ ಮುನ್ನುಗ್ಗುತ್ತಿರುವ ಅಸಾನಿ ಚಂಡಮಾರುತ ತನ್ನ ಪರಾಕ್ರಮ ನಡೆಸುವ ಬಗ್ಗೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಂದೇಶ ಕಳುಹಿಸಲಾಗಿದೆ. ಇನ್ನೂ ಸರಕು ಸಾಗಣೆ ಮಾಡುವ ವ್ಯಾಪಾರಿ ಹಡಗುಗಳಿಗೆ ಈಗಾಗಲೇ ಸಂದೇಶ ರವಾನೆ ಮಾಡಿದ್ದು, ಮಾರ್ಗ ಬದಲಾವಣೆ ಮಾಡುವಂತೆ ಅಧಿಕಾರಿಗಳು ಮುನ್ಸುಚನೆ ನೀಡಿದ್ದರು. ಮುಂದಿನ 24 ಗಂಟೆಗಳ ಕಾಲ ಯಾವುದೇ ಅಪಾಯಕಾರಿ ಸುಳಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ; ಬೆಂಗಳೂರಿನ ಬಾಲಕಿ ಸಾವಿಗೆ ಸರ್ಕಾರ ಮೂರು ಎಡವಟ್ಟುಗಳು ಕಾರಣ..!?

ಚಂಡಮಾರುತ ಎದುರಿಸಲು ಸರ್ಕಾರದ ಕಟ್ಟೆಚ್ಚರ..!

ಪೋರ್ಟ್ ಬ್ಲೇರ್ ಸೇರಿದಂತೆ ಅಂಡಮಾನ್ ನಿಕೋಬಾರ್‌ನಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಈಗಾಗಲೇ ಕರಾವಳಿ ತೀರ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಈಗಾಗಲೇ NDRF ಟೀಂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಯಾವುದೇ ಪರಿಸ್ಥಿತಿ‌ ಬಂದರೂ ಎದುರಿಸಲು ಸಿದ್ದವಾಗಿ ಇರುವಂತೆ ಸೂಚನೆ ಕೊಡಲಾಗಿದೆ. ನೌಕಾದಳ, ಕೋಸ್ಟಲ್ ಗಾರ್ಡ್, ವಾಯುಸೇನೆ ಸಿಬ್ಬಂದಿ ಕೂಡ ಅಸಾನಿ ಚಂಡಮಾರುತದ ಬಗ್ಗೆ ಅಲರ್ಟ್ ಆಗಿದ್ದು, ಯಾವುದೇ ಕ್ಷಣದಲ್ಲಿ ಪರಸ್ಪರ ಸಹಕಾರ ನೀಡಲು ಸಿದ್ಧರಿರಬೇಕು ಎಂದು ಸೂಚನೆ ಕೊಡಲಾಗಿದೆ‌ ಎನ್ನಲಾಗಿದೆ.

ಮಳೆ ಬಂದರೆ ಅನಾರೋಗ್ಯ ಆಗಲು ಕಾರಣವೇನು..!?

ಮೊದಲ ಮಳೆ ಭೂಮಿಗೆ ಬಿದ್ದರೆ ಸಾಕಷ್ಟು ಕ್ರಿಮಿ ಕೀಟಗಳು ಭೂಮಿಯಲ್ಲಿ ಜೀವ ಪಡೆಯುತ್ತವೆ. ಅಷ್ಟು ಮಾತ್ರವಲ್ಲದೆ ಮಳೆಯ ನೀರು ಹರಿದು ಹೋಗದೆ, ಸಣ್ಣಪುಟ್ಟ ಪ್ರಮಾಣದಲ್ಲಿ ಶೇಖರಣೆ ಆದಾಗ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೇಂಘೀ, ಮಲೇರಿಯಾ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಗೆ ಕಾರಣ ಆಗುತ್ತದೆ. ಜೊತೆಗೆ ವಾತಾವರಣದಲ್ಲಿ ಗಾಳಿ ವಿಷಮವಾಗುವ ಮೂಲಕ ಆರೋಗ್ಯವಂತ ವ್ಯಕ್ತಿಗಳೂ ಶೀತ, ಕೆಮ್ಮು ಸೇರಿದಂತೆ ಹಲವು ತೊಂದರೆಗಳಿಗೆ ಸಿಲುಕುವುದು ಸಹಜ. ಒಂದು ವೇಳೆ ಮಳೆಯಲ್ಲಿ ಸಿಲುಕಿ ಒದ್ದೆಯಾದರೆ ಚಳಿಜ್ವರ ಗ್ಯಾರಂಟಿ. ಹಾಗಾಗಿ ಮುಂದಿನ 24 ಗಂಟೆಗಳ ಕಾಲ ಅಸಾನಿ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು ತೊಂದರೆಗೆ ಸಿಲುಕದಿರುವುದು ಕ್ಷೇಮ.

Related Posts

Don't Miss it !