ಕಲಬುರಗಿ ಮೇಯರ್​ ಪಟ್ಟಕ್ಕೆ JDS ಪಟ್ಟು..! ಸಿದ್ದರಾಮಯ್ಯ ಅಡ್ಡಗಾಲು..!!

ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಕಸರತ್ತು ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ. ಕಲಬುರಗಿ ಜನರ ಅಭಿಪ್ರಾಯವೇ ಹಾಗಿದೆ. ಒಟ್ಟು ಕಲಬುರಗಿ ಪಾಲಿಕೆಯಲ್ಲಿ 55 ವಾರ್ಡ್​ಗಳಿದ್ದು, ಶಾಸಕರು, ಸಂಸದರು ಹಾಗೂ ಪರಿಷತ್​ ಸದಸ್ಯರ ಮತಗಳೂ ಸೇರಿ 62 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಕಲಬುರಗಿ ಪಾಲಿಕೆ ಮೇಯರ್​ ಆಗಲು ಕನಿಷ್ಠ 32 ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್​ 27 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಗ್ತಿಲ್ಲ. ಜೆಡಿಎಸ್​ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರವೇ ಅಧಿಕಾರದ ಕನಸು ಜೀವಂತವಾಗಿರುತ್ತದೆ. ಇನ್ನು ಬಿಜೆಪಿ ಕೇವಲ 23 ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಕನಸು ಕಾಣ್ತಿದೆ. ಬಿಜೆಪಿಯ ಅಧಿಕಾರದ ಹಂಬಲಕ್ಕೂ ಜೆಡಿಎಸ್​ ಪಕ್ಷವೇ ಬೇಕಾಗಿದೆ. ಇದೇ ಕಾರಣದಿಂದ ಜೆಡಿಎಸ್​ ಹಠ ಸಾಧನೆಗೆ ಮುಂದಾಗಿದೆ.

ಮ್ಯಾಜಿಕ್​ ನಂಬರ್​ ಲೆಕ್ಕಾಚಾರ ಹೇಗಿದೆ..?

ಕಲಬುರಗಿ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು, ಶಾಸಕ, ಪರಿಷತ್​ ಸದಸ್ಯರು, ಸಂಸದರೂ ಸೇರಿದಾಗ ಒಟ್ಟು 62 ಮಂದಿ ಮತದಾನ ಮಾಡುತ್ತಾರೆ. 32 ಮತದಾನ ಯಾರಿಗೆ ಬರುತ್ತದೆಯೋ ಅವರು ಪಾಲಿಕೆಯ ಮೇಯರ್​ ಆಗುತ್ತಾರೆ. ಕಾಂಗ್ರೆಸ್​ನಲ್ಲಿ 27 ಪಾಲಿಕೆ ಸದಸ್ಯರಿದ್ದು, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕಿ ಕನೀಝ್​ ಫಾತಿಮಾ ಮತಗಳು ಸೇರಿ ಒಟ್ಟು ಕಾಂಗ್ರೆಸ್​ ಬಲ 29 ಆಗುತ್ತದೆ. ಇನ್ನೂ ಬಿಜೆಪಿ ಪಕ್ಷದ 23 ಪಾಲಿಕೆ ಸದಸ್ಯರಿದ್ದು ಸಂಸದ ಉಮೇಶ್ ಜಾಧವ್​, ಶಾಸಕ ದತ್ತಾತ್ರೇತ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಎಂಎಲ್​ಸಿ ಶಶಿಲ್ ನಮೋಶಿ, ಬಿ ಜಿ ಪಾಟೀಲ್, ಸುನಿಲ್​ ವಲ್ಯಾಪುರ ಸೇರಿ 6 ಮತಗಳಿವೆ. ಅಲ್ಲಿಗೂ 29 ಮತಗಳಾಗುತ್ತವೆ. ಒಬ್ಬರೇ ಪಕ್ಷೇತರ ಸದಸ್ಯ ಇರುವ ಕಾರಣಕ್ಕೆ ಅವರ ಬೆಂಬಲ ಪಡೆದರೂ 32 ಆಗುವುದಿಲ್ಲ. ಜೆಡಿಎಸ್​ನ ನಾಲ್ವರ ಸದಸ್ಯರ ಬೆಂಬಲ ಇಲ್ಲದೆ ಅಧಿಕಾರ ಗದ್ದುಗೆ ಏರುವುದು ಸಾಧ್ಯವೇ ಇಲ್ಲ. ಅದೇ ಕಾರಣದಿಂದ ಕಾಂಗ್ರೆಸ್​ ಹಾಗೂ ಬಿಜೆಪಿ ಪಕ್ಷಗಳು ಜೆಡಿಎಸ್​ ಬೆನ್ನು ಬಿದ್ದಿವೆ.

Read this also;

ಮೊದಲ ಹಾಗೂ 3ನೇ ಅವಧಿ ಮೇಯರ್​ ಸ್ಥಾನಕ್ಕೆ ಬೇಡಿಕೆ..!

ಕಲಬುರಗಿ ಪಾಲಿಕೆಯ ನಾಲ್ವರು ಜೆಡಿಎಸ್​ ಸದಸ್ಯರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಜೊತೆಗೂ ಚರ್ಚೆ ನಡೆಸಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಚೌಕಾಸಿ ನಡೆಸಲು ಮುಂದಾಗಿರುವ ಜೆಡಿಎಸ್​, ಮೊದಲ ಹಾಗೂ 3ನೇ ಅವಧಿಯ ಪಾಲಿಕೆ ಮೇಯರ್​ ಸ್ಥಾನ ಕೊಡಬೇಕು ಹಾಗೂ ಸ್ಥಾಯಿ ಸಮಿತಿಯಲ್ಲಿ ನಿರಂತರವಾಗಿ ಸಿಗಬೇಕು, ಇನ್ನೂ ನಾಲ್ವರು ಸದಸ್ಯರ ವಾರ್ಡ್​ಗಳ ಅಭಿವೃದ್ಧಿಗೆ ಪೂರಕವಾದ ಅನುದಾನ ಬಿಡುಗಡೆ ಮಾಡಬೇಕು. ಈ ಷರತ್ತುಗಳಿಗೆ ಯಾರು ಒಪ್ಪಿಕೊಳ್ತಾರೋ ಅವರಿಗೆ ಜೆಡಿಎಸ್​ ಸದಸ್ಯರ ಬೆಂಬಲ ಎಂದು ಸಾರಿ ಹೇಳಿದ್ದಾರೆ. ಇದು ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರಿಗೆ ತಲುಪಿದ್ದು, ಯಾವ ಪಕ್ಷದ ನಾಯಕರು ಈ ಷರತ್ತುಗಳಿಗೆ ಒಪ್ಪಿಕೊಳ್ತಾರೋ ಅವರ ಜೊತೆಗೆ ಅಧಿಕಾರ ನಡೆಸುವುದು ನಿಶ್ಚಿತವಾಗಿದೆ. ಜೆಡಿಎಸ್​ ನಾಯಕರು ಸಿದ್ಧಾಂತದ ಅಧಿಕಾರಕ್ಕಿಂತ ಅಭಿವೃದ್ಧಿಯ ಚಿಂತನೆ ಮಾಡುವ ಮೂಲಕ ಸಾಗುವುದಕ್ಕೆ ಮುಂದಾಗಿದ್ದಾರೆ. ಇದೇ ಕಾರಣದಿಂದ ಜೆಡಿಎಸ್​ ಸದ್ಯಸ್ಯರು ಗೆದ್ದಿರುವ ನಾಲ್ಕು ಕ್ಷೇತ್ರಗಳ ಅಭಿವೃದ್ಧಿಗೆ ಏನೇನು ಮಾಡಬೇಕೋ ಅದನ್ನು ಸಾಧಿಸಲು ಮುಂದಾಗಿದ್ದಾರೆ.

Read this also;

ಜೆಡಿಎಸ್ ನಿಲುವಿಗೆ ಅಡ್ಡಿ ಆಗುತ್ತಾ ಕಾಂಗ್ರೆಸ್..!?

ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಮೇಯರ್, ಉಪ ಮೇಯರ್ ದಿನಾಂಕ ನಿಗದಿ ಮಾಡಲು ಮುಂದಾಗಿದ್ದರು. ಆದರೆ ಜೆಡಿಎಸ್​ ನಿರ್ಧಾರ ಅಂತಿಮವಾಗಿಲ್ಲ. ಜೆಡಿಎಸ್​ ಅಂಗಳದಿಂದ ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರ ಅಂಗಳಕ್ಕೆ ಚೆಂಡು ಬಿದ್ದಿದೆ. ಈಗ ಯಾವ ಪಕ್ಷ ಅಧಿಕಾರ ತ್ಯಾಗಕ್ಕೆ ಮುಂದಾಗುತ್ತಾರೋ ಆ ಪಕ್ಷಕ್ಕೆ ಮೂರು ಬಾರಿ ಪಾಲಿಕೆ ಮೇಯರ್​ ಪಟ್ಟ ಸಿಗಲಿದೆ. ಜೆಡಿಎಸ್​ ಕೂಡ 2 ವರ್ಷಗಳ ಕಾಲ ಮೇಯರ್​ ಆಗಿ ಅಭಿವೃದ್ಧಿ ಮಾಡುವ ಕನಸು ಕಾಣುತ್ತಿದೆ. ಆದ್ರೆ ಕಾಂಗ್ರೆಸ್​ ಪರೋಕ್ಷವಾಗಿ ಬಿಜೆಪಿಯನ್ನೇ ಬೆಂಬಲಿಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಇದೇ ಲೆಕ್ಕಾಚಾರ ಸಾಧ್ಯವಾದರೆ ಜೆಡಿಎಸ್​ ಆಸೆಗೆ ತಣ್ಣೀರು ಬೀಳಲಿದೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಸಿದ್ದರಾಮಯ್ಯನ ಕೃಪೆಯಿಂದ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜ್ಯ ಸರ್ಕಾರದ ಮಟ್ಟದಲ್ಲಿ ಮಾಡಿದ ತಂತ್ರಗಾರಿಕೆಯನ್ನೇ ಕಲಬುರಗಿ ಮಟ್ಟದಲ್ಲೂ ಸಿದ್ದರಾಮಯ್ಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ರಾಷ್ಟ್ರೀಯ ಪಕ್ಷವೊಂದು ಈ ರೀತಿ ಅಧಿಕಾರಕ್ಕಾಗಿ ಚೌಕಾಸಿ ಮಾಡುವುದು ಕಾರ್ಯಕರ್ತರನ್ನು ನಿರಾಶರನ್ನಾಗಿ ಮಾಡುತ್ತದೆ ಎನ್ನುವುದನ್ನು ಸ್ವತಃ ಸಿದ್ದರಾಮಯ್ಯನವರೇ ಮರೆತಂತಿದೆ.

Related Posts

Don't Miss it !